ಶೇ.3 ರೈತರಿಗಷ್ಟೇ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ: ಕರ್ನಾಟಕದಲ್ಲಿ ಕುಂಟುತ್ತಿರುವ ಪಿಎಂ-ಕಿಸಾನ್

Promotion

ಬೆಂಗಳೂರು:ಜೂ-24: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ’ (ಪಿಎಂ-ಕಿಸಾನ್) ರಾಜ್ಯದಲ್ಲಿ ಆಮೆವೇಗದಲ್ಲಿ ಸಾಗುತ್ತಿದ್ದು, ಅರ್ಹ ರೈತರ ಪೈಕಿ ಶೇ.2.71 ಜನರಿಗಷ್ಟೇ ಇದುವರೆಗೆ ಹಣ ಲಭಿಸಿದೆ.

2015-16ರ ಗಣತಿ ಪ್ರಕಾರವೇ ರಾಜ್ಯದಲ್ಲಿ 86.8 ಲಕ್ಷ ರೈತರಿದ್ದು, 2018ರ ಡಿ.1ರಿಂದ ಪ್ರಾರಂಭಗೊಂಡ ಪಿಎಂ-ಕಿಸಾನ್ ಯೋಜನೆಯಿಂದ ಇದುವರೆಗೆ ಕೇವಲ 2.35 ಲಕ್ಷ ರೈತರು ಮಾತ್ರ ಪ್ರಯೋಜನ ಪಡೆದಿದ್ದಾರೆ. ನೋಂದಣಿ ಮಾಡಿಕೊಂಡ ರೈತರ ಸಂಖ್ಯೆಯೂ ಕೇವಲ ಶೇ.13ರಷ್ಟಿದೆ.

ಯೋಜನೆ ಕುರಿತು ರಾಜ್ಯದ ರೈತರಲ್ಲಿ ಜಾಗೃತಿ ಮೂಡಿಸಲು ವಿಫಲವಾಗುವುದರ ಜತೆಗೆ ಈಗಾಗಲೇ ಅರ್ಜಿ ಸಲ್ಲಿಸಿರುವ ರೈತರ ಅರ್ಜಿ ವಿಲೇವಾರಿಯಲ್ಲೂ ರಾಜ್ಯ ಸರ್ಕಾರ ಹಿಂದೆ ಬಿದ್ದಿದ್ದು, ಕೇಂದ್ರ ಕೃಷಿ ಸಚಿವರ ಜತೆಗಿನ ವಿಡಿಯೋ ಕಾನ್ಪರೆನ್ಸ್​ನಲ್ಲಿ ಸ್ವತಃ ಈ ವಿಚಾರ ಒಪ್ಪಿಕೊಂಡಿದೆ.

ವರ್ಷಕ್ಕೆ 6 ಸಾವಿರ ರೂ.: ಎರಡು ಹೆಕ್ಟೇರ್ ಕೃಷಿ ಭೂಮಿ ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರ ಖಾತೆಗೆ ನೇರವಾಗಿ 6 ಸಾವಿರ ರೂ. ವರ್ಗಾವಣೆ ಮಾಡುವ ಉದ್ದೇಶ ಪಿಎಂ-ಕಿಸಾನ್ ಪ್ರಾರಂಭದಲ್ಲಿತ್ತಾದರೂ, ಸದ್ಯ ಇದನ್ನು ಎಲ್ಲ ರೈತರಿಗೂ ವಿಸ್ತರಿಸಲಾಗಿದೆ. ಯೋಜನೆಯಂತೆ ಸಿಗುವ 6 ಸಾವಿರ ರೂ.ಗಳನ್ನು 3 ಕಂತುಗಳಲ್ಲಿ ತಲಾ 2 ಸಾವಿರ ರೂ.ನಂತೆ ರೈತರ ಖಾತೆಗೆ ಜಮೆ ಮಾಡಲಾಗುತ್ತದೆ. 2019ರ ಫೆ.24ರಂದು ಉತ್ತರ ಪ್ರದೇಶದ ಗೋರಖ್​ಪುರದಲ್ಲಿ ರೈತರನ್ನುದ್ದೇಶಿಸಿ ‘ಇದು ನಿಮ್ಮ ಹಣ. ಇದನ್ನು ಕಸಿಯಲು ಯಾರಿಂದಲೂ ಸಾಧ್ಯವಿಲ್ಲ’ ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಡಿಜಿಟಲ್ ಬ್ಯಾಂಕಿಂಗ್ ಮೂಲಕ ರೈತರ ಖಾತೆಗಳಿಗೆ ಮೊದಲ ಕಂತಿನ ಹಣ ವರ್ಗಾವಣೆ ಮಾಡಿದ್ದರು. ಅದರಂತೆ ರಾಜ್ಯದ 2,35,512 ರೈತರು ಮೊದಲ ಕಂತಿನಲ್ಲಿ ಹಣ ಪಡೆದರು. ನಂತರ ಎರಡನೇ ಕಂತಿನಲ್ಲಿ 2,31,847 ರೈತರ ಖಾತೆಗೆ ತಲಾ 2 ಸಾವಿರ ರೂ. ಜಮೆ ಮಾಡಲಾಗಿದೆ.

ಹಲವು ಕಾರಣಗಳು: ಪಿಎಂ-ಕಿಸಾನ್​ಗೆ ರಾಜ್ಯದಲ್ಲಿ ಸೂಕ್ತ ಪ್ರೋತ್ಸಾಹ ಸಿಗುತ್ತಿಲ್ಲ. ರಾಜ್ಯದಲ್ಲಿ ಯೋಜನೆಯ ಪ್ರಯೋಜನ ಪಡೆಯಲು 11,53,219 ರೈತರು ಹೆಸರು ನೋಂದಾಯಿಸಿಕೊಂಡಿದ್ದು, ಇನ್ನೂ 5,28,817 ರೈತರ ಅರ್ಜಿಗಳ ಪರಿಶೀಲನೆಯನ್ನೇ ನಡೆಸಿಲ್ಲ. ಕಡಿಮೆ ನೋಂದಣಿ, ತ್ವರಿತಗತಿಯಲ್ಲಿ ಸಾಗದ ಅರ್ಜಿ ಪರಿಶೀಲನೆಗೆ ಚುನಾವಣೆ ಕರ್ತವ್ಯ, ಕೆಲವಡೆ ರೈತರು ಸೂಕ್ತ ದಾಖಲಾತಿ ಸಲ್ಲಿಸಿಲ್ಲ, ಯೋಜನೆಯ ಪೋರ್ಟಲ್​ನಲ್ಲಿ ಅಪ್​ಲೋಡ್ ನಡೆಯುತ್ತಿದೆ ಎಂಬ ಉತ್ತರಗಳನ್ನು ಅಧಿಕಾರಿಗಳು ನೀಡುತ್ತಿದ್ದಾರೆ.

ಮತ್ತೊಂದೆಡೆ ರೈತರು ಮತ್ತು ಕೆಲವು ರೈತ ಸಂಘಟನೆಗಳು ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಪಡಿಸಬೇಕೇ ಹೊರತು ಈ ರೀತಿಯ ಪ್ರೋತ್ಸಾಹ ನಮಗೆ ಬೇಡ ಎಂಬ ಅಭಿಪ್ರಾಯದೊಂದಿಗೆ ರೈತರು ನಿರಾಸಕ್ತಿ ತೋರಿದ್ದಾರೆ. ಮುಖ್ಯವಾಗಿ ಗ್ರಾ.ಪಂ. ಮಟ್ಟದಲ್ಲಿ ಯೋಜನೆ ಕುರಿತು ಅರಿವು ಮೂಡಿಸುತ್ತಿಲ್ಲ ಎನ್ನಲಾಗುತ್ತಿದೆ.

ಫಲಾನುಭವಿಗಳ ಪ್ರಮಾಣ

ಪಿಎಂ-ಕಿಸಾನ್ ಯೋಜನೆಯಡಿ ಬಾಗಲಕೋಟೆ (ಮೊದಲ ಕಂತು- 21084, ಎರಡನೇ ಕಂತು – 20,900), ತುಮಕೂರು (20341, 20058), ವಿಜಯಪುರ (14450, 17309), ಉತ್ತರ ಕನ್ನಡ (14450, 14411), ಧಾರವಾಡ (14104, 14010), ಚಿಕ್ಕಮಗಳೂರು(10577, 10556), ರಾಯಚೂರು (ಮೊದಲ ಕಂತು-15577) ರೈತರು ಯೋಜನೆ ಫಲ ಪಡೆದಿದ್ದಾರೆ. ಉಳಿದಂತೆ ಬೆಂಗಳೂರು ನಗರ(954, 947), ಕಲಬುರಗಿ (1322, 1115), ಕೊಡಗು (ಒಟ್ಟು 2 ಕಂತು-873) ರೈತರು ಪ್ರಯೋಜನ ಪಡೆದಿದ್ದಾರೆ.

ಕೇಂದ್ರ ಸಚಿವರ ವಿಡಿಯೋ ಕಾನ್ಪರೆನ್ಸ್

ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಜೂ.13ರಂದು ಎಲ್ಲ ರಾಜ್ಯಗಳ ಕೃಷಿ ಸಚಿವರ ಜತೆ ವಿಡಿಯೋ ಕಾನ್ಪರೆನ್ಸ್ ನಡೆಸಿ ಪಿಎಂ-ಕಿಸಾನ್ ಯೋಜನೆ ಎಲ್ಲ ರೈತರಿಗೂ ವಿಸ್ತರಿಸಲಾಗಿದ್ದು, ಇದರ ಕುರಿತು ಜಾಗೃತಿ ಮೂಡಿಸಿ, ರೈತರ ನೋಂದಣಿ ಪ್ರಕ್ರಿಯೆ ಚುರುಕುಗೊಳಿಸಿ, ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕೆಂದು ತಿಳಿಸಿದ್ದಾರೆ. ಪಿಎಂ-ಕಿಸಾನ್ ಪೋರ್ಟಲ್​ನಲ್ಲಿ ಸರಿಪಡಿಸಿದ ಡೇಟಾವನ್ನು ಸಮಯೋಚಿತವಾಗಿ ಅಪ್​ಲೋಡ್ ಮಾಡಿ ರೈತರು ಯೋಜನೆಯ ಪ್ರಯೋಜನ ಪಡೆಯುವಂತೆ ಮಾಡಿ ಎಂದಿದ್ದಾರೆ.

ಅರ್ಜಿಗೆ ನಾಳೆವರೆಗೆ ಅವಕಾಶ

ಯೋಜನೆಯಲ್ಲಿ ರೈತರು ನೋಂದಾಯಿಸಿಕೊಳ್ಳಲು ಅರ್ಜಿ ಪಡೆಯಲು ಜೂ.25ರವರೆಗೆ ಅವಕಾಶವಿದೆ. ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ ಇಲಾಖೆ, ಗ್ರಾಮಲೆಕ್ಕಾಧಿಕಾರಿಗಳ ಕಚೇರಿ, ಗ್ರಾಮ ಪಂಚಾಯತ್ ಕಚೇರಿಗಳಲ್ಲಿ ರೈತರ ಸ್ವಯಂಘೋಷಣಾ ಪತ್ರ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಸಂಖ್ಯೆಗಳ ಜೆರಾಕ್ಸ್ ಪ್ರತಿ ಹಾಗೂ ಆರ್​ಟಿಸಿ ಜತೆ ನೋಂದಣಿ ಮಾಡಿಕೊಳ್ಳಬಹುದು.

ರಾಜ್ಯದಲ್ಲಿ ಪಿಎಂ-ಕಿಸಾನ್ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸುವುದರಲ್ಲಿ ನಾವು ಹಿಂದುಳಿದಿದ್ದೇವೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಸೂಚನೆಯಂತೆ ಈಗಾಗಲೇ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿಲಾಗಿದ್ದು, ಶೀಘ್ರದಲ್ಲೇ ಯೋಜನೆ ಪ್ರತಿ ರೈತನನ್ನು ತಲುಪಬೇಕೆಂದು ತಿಳಿಸಿದ್ದೇನೆ.

| ಎನ್.ಎಚ್.ಶಿವಶಂಕರ್ ರೆಡ್ಡಿ, ಕೃಷಿ ಸಚಿವ.

ರೈತರಿಗೆ ಕನಿಷ್ಠ ಆದಾಯ ಖಾತ್ರಿ ನೀಡಲು ಅವಕಾಶವಿದ್ದರೂ ಕೇಂದ್ರ ಸರ್ಕಾರ ಪಿಎಂ-ಕಿಸಾನ್ ಯೋಜನೆಯ ಮೂಲಕ 6 ಸಾವಿರ ರೂ. ಭಿಕ್ಷೆ ನೀಡುತ್ತಿದೆ. ಹೀಗಾಗಿ ಸ್ವಾಭಿಮಾನಿ ರೈತರು ಹೆಸರು ನೋಂದಾಯಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.

| ಬಡಗಲಪುರ ನಾಗೇಂದ್ರ, ಅಧ್ಯಕ್ಷ, ರಾಜ್ಯ ರೈತ ಸಂಘ
ಕೃಪೆ:ವಿಜಯವಾಣಿ

ಶೇ.3 ರೈತರಿಗಷ್ಟೇ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ: ಕರ್ನಾಟಕದಲ್ಲಿ ಕುಂಟುತ್ತಿರುವ ಪಿಎಂ-ಕಿಸಾನ್
only-3-farmers-got-pradhan-mantri-kisan-samman-nidhi-benefit-in-karnataka