ಈಗ ನಿಮ್ಮ ಬೆರಳ ತುದಿಯಲ್ಲಿ ಸ್ಥಳೀಯ ವಾತಾವರಣದ ವಿವರಗಳು…!

ಬೆಂಗಳೂರು, ಆಗಸ್ಟ್ 18, 2021 (www.justkannada.in): ಬೆಂಗಳೂರಿನ ಯಾವುದೇ ನಿವಾಸಿಯನ್ನ ನಗರದ ಇಂದಿನ ವಾತಾವರಣದ ಬಗ್ಗೆ ಕೇಳಿ, ಯಾರಿಗೂ ಸಹ ಇಂದು ಮಳೆಯಾಗುತ್ತದೋ, ಇಲ್ಲವೋ?, ಬಿಸಿಲಿರುತ್ತದೋ, ಇಲ್ಲವೋ? ಚಳಿ ಇರುತ್ತದೋ ಇಲ್ಲವೋ? ಎಂದು ನಿಖರವಾಗಿ ಹೇಳುವುದು ಸಾಧ್ಯವಾಗುವುದಿಲ್ಲ. ಬೆಂಗಳೂರು ನಗರದ ವಾತಾವರಣ ಇತ್ತೀಚಿನ ದಿನಗಳಲ್ಲಂತೂ ಬಹಳ ವ್ಯತ್ಯಯವಾಗುತ್ತಿದೆ. ಯಾವ ಕ್ಷಣದಲ್ಲಿ ಮಳೆಯಾಗುತ್ತೋ, ಯಾವ ಕ್ಷಣದಲ್ಲಿ ಬಿಸಿಲು ಬರುತ್ತೋ ಹೇಳುವುದು ಅಸಾಧ್ಯವಾಗಿದೆ. ಆದರೆ ಇನ್ನು ಮುಂದೆ ನಗರದ ವಾತಾವರಣದ ಬಗ್ಗೆ ತಿಳಿದುಕೊಳ್ಳುವುದು ಸುಲಭವಾಗಲಿದೆ. ಹೇಗೆ ಅಂದಿರಾ? ನಗರದಲ್ಲಿ ಇಂಜಿನಿಯರಿಂಗ್ ಕಲಿಯುತ್ತಿರುವ ಕೆಲವು ವಿದ್ಯಾರ್ಥಿಗಳು ಈ ರೀತಿ ಹೈಪರ್-ಲೋಕಲ್ ವೆದರ್ ಪ್ರಿಡಿಕ್ಷನ್ (ಸ್ಥಳೀಯ ಹವಾಮಾನ ಗ್ರಹಿಸುವ) ಒಂದು ಅಪರೂಪದ ಸಾಧನವನ್ನು ಅಭಿವೃದ್ಧಿಪಡಿಸಿದ್ದು, ಇದು ಹವಾಮಾನ ಇಲಾಖೆ ಅಥವಾ ಏಜೆನ್ಸಿಗಳು ನಮಗೆ ಒದಗಿಸುವ ಮಾಹಿತಿಗಿಂತ ಆರು ಪಟ್ಟು ನಿಖರವಾದ ಮಾಹಿತಿಯನ್ನು ಒದಗಿಸುತ್ತಂತೆ..!

ಈ ರಿಯಲ್-ಟೈಂ ಹವಾಮಾನ ಗ್ರಹಿಸುವ ಸಾಧನವನ್ನು ‘ಫ್ರಿಜಲ್’ ಎಂದು ಹೆಸರಿಸಿದ್ದು, ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿರುವ ನಾಲ್ವರು ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ. ಈ ನಾಲ್ವರು ವಿದ್ಯಾರ್ಥಿಗಳ ತಂಡದಲ್ಲಿ ಅನಂತಕೃಷ್ಣ ಹಾಗೂ ಅಭಿಲಾಷ್ ವಿ. ಎಂಬ ವಿದ್ಯಾರ್ಥಿಗಳು ಈ ಸ್ಟಾರ್ಟ್-ಅಪ್‌ ನ ಸ್ಥಾಪಕರಾಗಿದ್ದು ರಿಶಿತ್ ಭೌಮಿಕ್, ಸಿಟಿಒ ಹಾಗೂ ವನ್ಯಾ ಆರ್ತಿಕುಥರಂ, ಸಿಐಒ, ಇವರನ್ನು ಜೊತೆಗೂಡಿದ್ದಾರೆ. ಈ ನಾಲ್ವರು ಸ್ನೇಹಿತರಿಗೆ ಈ ಪರಿಕಲ್ಪನೆ ಕಳೆದ ವರ್ಷ ಹೊಳೆಯಿತಂತೆ. ಕಳೆದ ಒಂಬತ್ತು ತಿಂಗಳುಗಳಿಂದ ತಮ್ಮ ಪ್ರಯತ್ನದಲ್ಲಿ ತೊಡಗಿದ್ದರಂತೆ. ‘ಫ್ರಿಜಲ್’ ಒಂದು ಸಣ್ಣ, ಅಗ್ಗವಾದ ಸಾಧನವಾಗಿದ್ದು, ಯಾವುದೇ ಸ್ಥಳದಲ್ಲಿ ಬೇಕಾದರೂ ಅಳವಡಿಸಬಹುದು, ಮತ್ತು ಪ್ರಯಾಣಿಸುವಾಗಲೂ ಜೊತೆಗೆ ತೆಗೆದುಕೊಂಡು ಹೋಗಬಹುದು. ಈ ಸಾಧನವು 300 ಮೀಟರುಗಳ ಸುತ್ತಳತೆಯಲ್ಲಿ ನಿಖರವಾದ ಸ್ಥಳೀಯ ಹವಾಮಾನವನ್ನು ತೋರಿಸುತ್ತದೆ.

ಈ ಕುರಿತು ಮಾತನಾಡಿದ ತಂಡದ ಅನಂತ ಕೃಷ್ಣ, “ನಾವು ಸ್ಥಳೀಯ ಹವಾಮಾನವನ್ನು ನಿಖರವಾಗಿ ತೋರಿಸಬಲ್ಲಂತಹ ಸಾಧನವನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿದೆವು. ಆರಂಭದಲ್ಲಿ ಒಂದು ಪ್ರೊಟೋಟೈಪ್ (ಮೂಲಮಾದರಿ) ಅನ್ನು ಅಭಿವೃದ್ಧಿಪಡಿಸಿದೆವು. ಅದನ್ನು ಪಿಇಎಸ್ ವಿಶ್ವವಿದ್ಯಾಲಯದ ‘ಪಿಇಎಸ್ ವೆಂಚ್ಯೂರ್ ಲ್ಯಾಬ್ಸ್’ ಒಪ್ಪಿಕೊಂಡು, ಈ ಸಾಧನವನ್ನು ಅಭಿವೃದ್ಧಿಪಡಿಸಲು ವೇದಿಕೆಯನ್ನು ಕಲ್ಪಿಸಿತು. ಜನರಿಗೆ, ವಿಶೇಷವಾಗಿ ರೈತರಿಗೆ ತಮ್ಮ ಜಮೀನಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಎಷ್ಟು ಪ್ರಮಾಣದಲ್ಲಿ ಮಳೆಯಾಗುತ್ತದೆ ಎಂಬ ಕುರಿತು ನಿಖರವಾದ ಮಾಹಿತಿ ಒದಗಿಸುವಂತಹ ಒಂದು ಅಪ್ಲಿಕೇಷನ್ ಅನ್ನು ಸಿದ್ಧಪಡಿಸಿದ್ದೇವೆ. ರೈತರಿಗೆ ಐಎಂಡಿ ಮೂಲಕ ಹವಮಾನದ ದತ್ತಾಂಶ ಲಭಿಸುತ್ತದೆ ಹಾಗೂ ಬೆಂಗಳೂರಿನಲ್ಲಿ ಕೇವಲ ಎರಡು ಹವಾಮಾನ ಕೇಂದ್ರಗಳಿವೆ. ಅವುಗಳು ರೈತರಿಗೆ ಅತ್ಯಂತ ಅಗತ್ಯವಿರುವಂತಹ ಬೆಳೆ ಹಾಗೂ ಸರಬರಾಜು ಸರಪಳಿಯ ನಿರ್ಧಾರಗಳಿಗೆ ಸಂಬಂಧಪಟ್ಟಂತೆ ಅಗತ್ಯವಿರುವ ನಿಖರವಾದ ಮಾಹಿತಿ ಒದಗಿಸುವುದಿಲ್ಲ. ಅಂತಿಮ ಸಾಧನವನ್ನು ಅಭಿವೃದ್ಧಿಪಡಿಸುವುದಕ್ಕೆ ಮುಂಚೆ ನಾವು ಆರಂಭದಿಂದ ಕನಿಷ್ಠ ನಾಲ್ಕೈದು ಬಾರಿ ಇಡೀ ಸಾಧನವನ್ನು ಮರುನಿರ್ಮಾಣ ಮಾಡಬೇಕಾಯಿತು,” ಎಂದರು.

ರಿಷಿತ್ ಹಾಗೂ ವನ್ಯಾ ಅವರು ವಿವರಿಸಿದಂತೆ, “ನಮ್ಮ ಸಮಗ್ರ ವಾತಾವರಣ ನೋಡ್ ನೆಟ್‌ವರ್ಕ್ ನಿಂದ ನಿರಂತರವಾಗಿ ಹವಾಮಾನಕ್ಕೆ ಸಂಬಂಧಪಟ್ಟ ದತ್ತಾಂಶವನ್ನು ಸಂಗ್ರಹಿಸಿ, ಅದನ್ನು ರಿಯಲ್-ಟೈಂನಲ್ಲಿ ಡ್ಯಾಷ್‌ಬೋರ್ಡ್ ಮೇಲೆ ಅಪ್‌ಡೇಟ್ ಮಾಡಲಾಗುತ್ತದೆ. ವ್ಯಾಪಕ ಭೂಪ್ರದೇಶದ ವ್ಯಾಪ್ತಿಯಲ್ಲಿ ನಮ್ಮ ಈ ಹವಾಮಾನದ ನೋಡ್‌ ಗಳನ್ನು ಅಳವಡಿಸಿ, 1 ಕಿ.ಮೀ. ಸುತ್ತಳತೆ ಪ್ರದೇಶದಲ್ಲಿನ ಹವಾಮಾನದ ಒಳನೋಟಗಳನ್ನು ಪಡೆದುಕೊಳ್ಳುತ್ತೇವೆ. ಸ್ಮಾರ್ಟ್ ಸೆನ್ಸಾರ್‌ಗಳು ಗಾಳಿಯ ದತ್ತಾಂಶವನ್ನು ಸಂಗ್ರಹಿಸಿ, ಹವಾಮಾನದ ನಿಖರವಾದ ಮಾಹಿತಿಯನ್ನು ಒದಗಿಸುವುದರ ಜೊತೆಗೆ ಆಕಾಶದ ಚಿತ್ರಗಳನ್ನು ತೆಗೆಯುತ್ತದೆ. ಈ ಸಾಧನವನ್ನು ಇತ್ತೀಚೆಗೆ ಚೆನ್ನೈನಲ್ಲಿರುವ ಎಂಎ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ಬಳಸಲಾಗಿದ್ದು, ಸಕಾರಾತ್ಮಕ ಹಿಮ್ಮಾಹಿತಿ ಲಭಿಸಿದೆ. ಜೊತೆಗೆ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ವಿಧಾನಸೌಧದ ಬಳಿಯೂ ಈ ಸಾಧನವನ್ನು ಬಳಸಲಾಯಿತು,” ಎಂದರು.

‘ಕೋಕ್ರಿಯೇಟ್ ವೆಂಚ್ಯರ್ಸ್”‘ ಹಾಗೂ ಪಿಇಎಸ್ ವೆಂಚ್ಯೂರ್ ಲ್ಯಾಬ್ಸ್ ನ ವ್ಯವಸ್ಥಾಪಕ ಪಾಲುದಾರರಾದ ಸುರೇಶ್ ನರಸಿಂಹ ಅವರು, “ಉದ್ಯಮಿಗಳಾಗುವ ಆಕಾಂಕ್ಷೆಯುಳ್ಳ ವಿದ್ಯಾರ್ಥಿಗಳಿಗೆ ನಾವು ಅಗತ್ಯ ಬೆಂಬಲವನ್ನು ಒದಗಿಸುತ್ತೇವೆ ಹಾಗೂ ತಮ್ಮ ಗುರಿಯನ್ನು ಸಾಧಿಸಲು ಅಗತ್ಯ ಸಂಪನ್ಮೂಲಗಳೊಂದಿಗೆ ಅವರಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸುತ್ತೇವೆ. ಈ ನಾಲ್ವರು ವಿದ್ಯಾರ್ಥಿಗಳು ಕುತೂಹಲವಾದ ಪರಿಕಲ್ಪನೆಯನ್ನು ಹೊಂದಿದ್ದರು. ಹಾಗಾಗಿ ನಾವು ಇತರೆ ವಿದ್ಯಾರ್ಥಿಗಳ ಆರು ಇತರೆ ಸ್ಟಾರ್ಟ್ ಅಪ್‌ಗಳೊಂದಿಗೆ (ನವೋದ್ಯಮ) ಇವರ ಪರಿಕಲ್ಪನೆಯನ್ನೂ ಸಹ ಪ್ರೋತ್ಸಾಹಿಸಲು ನಿರ್ಧರಿಸಿದೆವು,” ಎಂದು ವಿವರಿಸಿದರು.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: Now – details – local- atmosphere –rain- fingertips-Frizzle