ಜಾತಿ ಜನಗಣತಿ ದೊಡ್ಡ ಹಗರಣ ಎಂಬುದರಲ್ಲಿ ಅನುಮಾನವೇ ಇಲ್ಲ- ಮಾಜಿ ಸಚಿವ ಸುನೀಲ್ ಕುಮಾರ್.

Promotion

ಬೆಂಗಳೂರು,ನವೆಂಬರ್, 23,2023(www.justkannada.in):  ರಾಜ್ಯದಲ್ಲಿ ಜಾತಿಜನಗಣತಿ ವರದಿ ವಿಚಾರ ಚರ್ಚೆಗೆ ಗುರಿಯಾಗಿದ್ದು ಜಾತಿ ಜನಗಣತಿ ದೊಡ್ಡ ಹಗರಣ ಎಂಬುದರಲ್ಲಿ ಅನುಮಾನವೇ ಇಲ್ಲ ಎಂದು ಮಾಜಿ ಸಚಿವ ಸುನೀಲ್ ಕುಮಾರ್ ಟೀಕಿಸಿದ್ದಾರೆ.

ಈ ಕುರಿತು ಟ್ವಿಟ್ ಮಾಡಿರುವ ಮಾಜಿ ಸಚಿವ ಸುನೀಲ್ ಕುಮಾರ್,  ಜಾತಿ ಗಣತಿ ವರದಿಯಲ್ಲಿನ ಗೋಜಲುಗಳನ್ನು ಗಮನಿಸಿದರೆ ಇದೊಂದು ದೊಡ್ಡ ಹಗರಣ ಎಂಬುದರಲ್ಲಿ ಅನುಮಾನವೇ ಇಲ್ಲ. 162 ಕೋಟಿ ರೂ.ವೆಚ್ಚದಲ್ಲಿ ತಯಾರಿಸಿದ ವರದಿಯ ಉದ್ದೇಶವೇ ಈಡೇರುತ್ತಿಲ್ಲ ಎಂದರೆ ಅರ್ಥವೇನು ? ವರದಿ ಬಗ್ಗೆ ಇಷ್ಟೆಲ್ಲ ಚರ್ಚೆ ನಡೆಯುತ್ತಿದ್ದರೂ ಆಯೋಗದ ಹಿಂದಿನ ಅಧ್ಯಕ್ಷ ಕಾಂತರಾಜ್ ನಾಪತ್ತೆಯಾಗಿದ್ದಾರೆ.

ವರದಿಗೆ ಏಕೆ ಸಹಿ ಹಾಕಿಲ್ಲ ಎಂಬ ಬಗ್ಗೆ ಸದಸ್ಯ ಕಾರ್ಯದರ್ಶಿ ಮಗುಮ್ಮಾಗಿದ್ದಾರೆ. ಆಯೋಗದ ವರದಿಗೆ ಅವರು ಅಂದು ಸಹಿ ಹಾಕಿಲ್ಲ ಎಂದರೆ ತಾವು ಈ ವರದಿಯ ಭಾಗವಾಗಲು ತಯಾರಿಲ್ಲ ಎಂದರ್ಥವಲ್ಲವೇ ? ಅಂದರೆ ವರದಿ ತಯಾರಿ ಹಂತದಲ್ಲೇ ಭಾರಿ ಲೋಪ ಹಾಗೂ ಅವ್ಯವಹಾರ ನಡೆದಿದೆ ಎಂಬುದು ಸ್ಪಷ್ಟವಾಗುತ್ತದೆ.

ಮೂಲ ಪ್ರತಿಯೇ ಇಲ್ಲದ, ಕಾರ್ಯದರ್ಶಿಯ ಸಹಿಯೇ ಇಲ್ಲದ ಜಾತಿ ಗಣತಿ ವರದಿ ಎಂದರೆ ” ಮದುವೆ ಗಂಡಿಗೆ ಬಾಶಿಂಗವೇ ಇಲ್ಲ”ದಂತೆ. ಸಿದ್ದರಾಮಯ್ಯನವರೇ ಹಿಂದುಳಿದ ವರ್ಗ ಹಾಗೂ ದಲಿತ ಸಮುದಾಯಕ್ಕೆ ಎಂಥ ದ್ರೋಹ ಮಾಡಿ ಬಿಟ್ಟಿರಿ ! ನೀವೆಸಗಿದ ಈ ತಪ್ಪನ್ನು ಇತಿಹಾಸ ಕ್ಷಮಿಸದು ಎಂದು ಕಿಡಿಕಾರಿದ್ದಾರೆ.

ಬರೋಬ್ಬರಿ 162 ಕೋಟಿ ರೂ. ವೆಚ್ಚ ಮಾಡಿ ತಯಾರಿಸಿದ ಜಾತಿ ಗಣತಿಯ ವರದಿಯೇ ಲಭ್ಯವಿಲ್ಲ ಎಂದರೆ ಇದಕ್ಕೆ ಹೊಣೆ ಯಾರು ? ಪೋರ್ಜರಿ ವರದಿ ತಯಾರಿಸಿ ರಾಹುಲ್ ಗಾಂಧಿಯವರನ್ನು‌ ಮೆಚ್ಚಿಸಲು ಹೊರಟಿದ್ದೀರಾ ? ಎಂದು ಸುನೀಲ್ ಕುಮಾರ್ ವಾಗ್ದಾಳಿ ನಡೆಸಿದರು.

Key words: no doubt – caste census – big scam – former minister -Sunil Kumar