ನರೇಂದ್ರ ಮೋದಿ ನಾಯಕತ್ವ ಭಾರತೀಯರ ಪುಣ್ಯ: ಡಾ.ಕೆ.ಸುಧಾಕರ್

ಚಿಕ್ಕಬಳ್ಳಾಪುರ, ಜೂನ್ 06, 2020 (www.justkannada.in): ಕರೋನಾ ತಂದೊಡ್ಡಿರುವ ಈ ಸಂಕಷ್ಟ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ದೊರೆತಿರುವುದು ಭಾರತೀಯರ ಪುಣ್ಯ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಬಣ್ಣಿಸಿದ್ದಾರೆ.

ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲರನ್ನೂ ಒಗ್ಗಟ್ಟಿನಿಂದ ಕರೆದೊಯ್ಯುವ ಸಮರ್ಥ ನಾಯಕತ್ವವನ್ನು ಮೋದಿ ದೇಶಕ್ಕೆ ನೀಡಿದ್ದಾರೆ ಎಂದು ನಗರದ ಒಕ್ಕಲಿಗರ ಭವನದಲ್ಲಿ ನಡೆದ ಕರೋನಾ ಯೋಧರ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಶನಿವಾರ ಮಾತನಾಡಿದರು.

ನಮ್ಮಲ್ಲಿ ಒಗ್ಗಟ್ಟು ಇದ್ದರೆ ಎಂತಹ ವೈರಾಣು ಬಂದರೂ ಅದನ್ನು ಹಿಮ್ಮೆಟ್ಟಿಸಬಹುದು ಅಂತಹ ಒಗ್ಗಟ್ಟನ್ನು ದೇಶ ಪ್ರದರ್ಶಿಸಿದೆ . ಅದಕ್ಕೆ ಮೋದಿಯವರ ಸಮರ್ಥ ನಾಯಕತ್ವ ಕಾರಣ ಎಂದರು. ಸತತವಾಗಿ ಎಲ್ಲ ರಾಜ್ಯಗಳ ಜೊತೆ ವಿಡಿಯೊ ಸಂವಾದದ ಮೂಲಕ ಮಾಹಿತಿ ತಿಳಿದುಕೊಂಡು ಸೂಕ್ತ ಮಾರ್ಗಸೂಚಿಗಳನ್ನು ನೀಡಿದರು . ನಾನು ಸಹ ನಾಲ್ಕು ಸಂವಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದೆ ಅವರ ತಾಳ್ಮೆ ಮತ್ತು ಜಾಣ್ಮೆಯ ನಡೆ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದರು.

ಸರ್ಕಾರದ ಜೊತೆಗೆ ಆಡಳಿತ ಶಾಹಿ ಕೈಜೋಡಿಸಿದಾಗ ಮಾತ್ರ ಯಾವುದೇ ನಿರ್ಧಾರಗಳ ಯಶಸ್ವಿ ಅನುಷ್ಠಾನ ಸಾಧ್ಯವಿದೆ . ಕರೋನಾ ವಿರುದ್ಧದ ಹೋರಾಟದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ಶ್ಲಾಘಿಸಿದರು. ಜಿಲ್ಲಾಡಳಿತದ ಪರಿಶ್ರಮದಿಂದಲೇ ಕರೋನಾ ನಿಯಂತ್ರಣ ಸಾಧ್ಯವಾಗಿದೆ ಇದಕ್ಕಾಗಿ ಶ್ರಮಿಸಿದ ಎಲ್ಲರನ್ನೂ ನಾನು ಅಭಿನಂದಿಸುತ್ತೇನೆ ಎಂದರು . ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಶ್ರಮವನ್ನು ಮೆಚ್ಚಿ ಸಾರ್ವಜನಿಕರು ಅವರನ್ನು ಸನ್ಮಾನಿಸುತ್ತಿರುವುದು ವಿನೂತನವಾದ ಕಾರ್ಯಕ್ರಮ ಇದು ನನ್ನಲ್ಲಿ ಹೆಮ್ಮೆ ಮೂಡಿಸಿದೆ ಎಂದರು.

ಕಣ್ಣಿಗೆ ಕಾಣದ ವೈರಾಣು ಇಡೀ ಜಗತ್ತನ್ನು ಆವರಿಸಿ ಆತಂಕ ಮೂಡಿಸಿದೆ ದೊಡ್ಡ ದೊಡ್ಡ ರಾಷ್ಟ್ರಗಳೇ ಇದನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗದೆ ಪರಿತಪಿಸುತ್ತಿವೆ ಇಂತಹ ಸಂದರ್ಭದಲ್ಲಿ ಕೇಂದ್ರದಲ್ಲಿ ಮೋದಿ ಅವರ ನಾಯಕತ್ವ ಮತ್ತು ರಾಜ್ಯದಲ್ಲಿ ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಯಶಸ್ವಿಯಾಗಿ ನಿಭಾಯಿಸಿದ್ದೇವೆ ಎಂದರು .
ವಿದೇಶಗಳಲ್ಲಿ ರೋಗ ಕಾಣಿಸಿಕೊಂಡ ಬೆನ್ನಲ್ಲೇ ಮೊದಲು ಎಚ್ಚೆತ್ತುಕೊಂಡ ರಾಜ್ಯ ನಮ್ಮದು . ಜನದಟ್ಟಣೆ ಪ್ರದೇಶಗಳಲ್ಲಿ ಲಾಕ್ ಡೌನ್ ಜಾರಿಗೊಳಿಸಿದ ಮೊದಲ ರಾಜ್ಯ ಕರ್ನಾಟಕ ಹೀಗಾಗಿ ಸೋಂಕು ಹೆಚ್ಚು ಹರಡದಂತೆ ನೋಡಿಕೊಳ್ಳಲು ಸಾಧ್ಯವಾಯಿತು ಎಂದರು .

ಜಿಲ್ಲೆಯ ನಾಗರಿಕರ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಕರೋನಾ ಯೋಧರನ್ನು ಸನ್ಮಾನಿಸಲಾಯಿತು . ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಚಿಕ್ಕ ನರಸಿಂಹಯ್ಯ ,ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಇತರೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಚಾಲನೆ: ಇದಕ್ಕೂ ಮೊದಲು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಸ್ವಚ್ಛ ಭಾರತ್ ಮಿಷನ್ ಕಾರ್ಯಕ್ರಮದಡಿ ಗ್ರಾಮ ಪಂಚಾಯಿತಿಗಳಿಗೆ ತ್ಯಾಜ್ಯ ಸಾಗಾಣಿಕೆ ವಾಹನಗಳ ವಿತರಣೆ ಕಾರ್ಯಕ್ರಮವನ್ನು ಸಚಿವರು ಉದ್ಘಾಟಿಸಿದರು.

ಪ್ರಥಮ ಹಂತದಲ್ಲಿ ಜಿಲ್ಲೆಯ ಮೂವತ್ತು ಆರು ಗ್ರಾಮ ಪಂಚಾಯಿತಿಗಳಿಗೆ ತ್ಯಾಜ್ಯ ವಿಲೇವಾರಿ ವಾಹನಗಳನ್ನು ವಿತರಿಸಲಾಯಿತು . ಮುಂದಿನ ಹಂತದಲ್ಲಿ ಜಿಲ್ಲೆಯ ಎಲ್ಲ ನೂರ ಐವತ್ತು ಏಳು ಗ್ರಾಮ ಪಂಚಾಯಿತಿಗಳಿಗೆ ಇದನ್ನು ವಿತರಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.

ಪ್ರತಿ ಗ್ರಾಮ ಪಂಚಾಯಿತಿಗೆ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಇಪ್ಪತ್ತು ಲಕ್ಷ ರೂಗಳ ಅನುದಾನ ನಿಗದಿಪಡಿಸಲಾಗಿದೆ. ಅದು ಲಕ್ಷಗಳ ವೆಚ್ಚದಲ್ಲಿ ತ್ಯಾಜ್ಯ ವಿಲೇವಾರಿ ವಾಹನಗಳನ್ನು ವಿತರಿಸಲಾಗುತ್ತಿದೆ. ಜಿಲ್ಲೆಯ ಎಲ್ಲಾ ಪಂಚಾಯಿತಿಗಳಲ್ಲಿ ವೈಜ್ಞಾನಿಕ ರೀತಿಯಲ್ಲಿ ಘನತ್ಯಾಜ್ಯ ವಿಲೇವಾರಿಗೆ ತ್ಯಾಜ್ಯ ಘಟಕಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.