ನೆರೆ ಸಂತ್ರಸ್ತರ ನೆರವಿಗೆ ನರೇಗಾ ಕೆಲಸ

ಬೆಂಗಳೂರು:ಆ-20: ಬರ ಸಂದರ್ಭ ಗ್ರಾಮೀಣ ಭಾಗದಲ್ಲಿ ಗುಳೆ ತಪ್ಪಿಸಲು ಮತ್ತು ಜೀವನೋಪಾಯಕ್ಕೆ ಜನರಿಗೆ ಕೆಲಸ ಕೊಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಯನ್ನು ಪ್ರವಾಹ ಸಂದರ್ಭದಲ್ಲೂ ಪರಿಣಾಮಕಾರಿಯಾಗಿ ಬಳಸಲು ಸರ್ಕಾರ ನಿರ್ಧರಿಸಿದೆ. ರಾಜ್ಯದ 22 ಜಿಲ್ಲೆಗಳಲ್ಲಿ ಪ್ರವಾಹದಿಂದ ಕೃಷಿಕರಿಗೆ ಕೆಲಸವಿಲ್ಲ, ಬೆಳೆಗಳು ನಾಶವಾಗಿವೆ. ಹೈನುಗಾರಿಕೆಯೂ ಕಷ್ಟವಾಗಿದೆ. ಸಣ್ಣಪುಟ್ಟ ವ್ಯಾಪಾರಿಗಳ ಬದುಕು ಮೂರಾಬಟ್ಟೆಯಾಗಿದೆ. ಮನೆ ಇಲ್ಲ, ಜೀವನ ಸಾಗಿಸಲು ಕೆಲಸವೂ ಇಲ್ಲ ಎಂಬಂತಾಗಿದೆ. ಈ ವೇಳೆ ಜನರು ಅತಂತ್ರರಾಗಬಾರದು ಎಂದು ಸರ್ಕಾರ ನರೇಗಾ ಸದ್ಬಳಕೆಗೆ ತೀರ್ವನಿಸಿದೆ. ಪ್ರಮುಖವಾಗಿ ನರೇಗಾದಲ್ಲಿ ಆಸ್ತಿ ಸೃಷ್ಟಿಗೆ ಪ್ರಾಮುಖ್ಯತೆ ಕೊಡಲಾಗುತ್ತದೆ. ಈಗ ಪ್ರವಾಹದಿಂದ ಆಸ್ತಿಪಾಸ್ತಿ ಹಾನಿಯಾಗಿರುವ ಸಂದರ್ಭ ಹೇಗೆ ಯೋಜನೆ ಬಳಸಿಕೊಳ್ಳಬೇಕೆಂಬ ಬಗ್ಗೆ ಇಲಾಖೆ ಅಧಿಕಾರಿಗಳು ರ್ಚಚಿಸಿದ್ದು, ನಿಯಮಗಳಲ್ಲಿ ಸಣ್ಣ ರಿಯಾಯಿತಿಗೆ ಮತ್ತು ನೆರೆಯಿಂದ ಹಾನಿ ಆದ ಸರ್ಕಾರಿ ಆಸ್ತಿಪಾಸ್ತಿ ದುರಸ್ತಿ, ಮರು ನಿರ್ವಣಕ್ಕೆ ಮೊದಲ ಆದ್ಯತೆ ಮತ್ತು ಹೆಚ್ಚಿನ ಕೆಲಸ ಮಾಡಿಸುವ ಬಗ್ಗೆ ಸುತ್ತೋಲೆ ಕಳಿಸಲು ನಿರ್ಧರಿಸಿದ್ದಾರೆ. ವಿಜಯವಾಣಿ ಜತೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್, ಪ್ರತಿಯೊಬ್ಬರ ಕೆಲಸದ ದಿನಗಳನ್ನು 100ರಿಂದ 150ಕ್ಕೆ ಹೆಚ್ಚಿಸುವ ಜತೆಗೆ, ಪರಿಷ್ಕೃತ ವರ್ಕ್ ಪ್ಲಾ್ಯನ್ ಕಳಿಸಿಕೊಡಲು ಜಿಲ್ಲಾಪಂಚಾಯಿತಿಗಳಿಗೆ ಸೂಚನೆ ಕೊಡಲಾಗುತ್ತಿದೆ ಎಂದರು. ರಸ್ತೆ ಮರು ನಿರ್ವಣ, ಒಡೆದ ಕೆರೆಗಳ ದುರಸ್ತಿ, ಸರ್ಕಾರಿ ಕಟ್ಟಡಗಳ ರಿಪೇರಿಯಂಥ ಕೆಲಸಗಳನ್ನು ಪ್ರಾಮುಖ್ಯತೆ ನೀಡಿದಾಗ ಸರ್ಕಾರಕ್ಕೂ ಉಪಯೋಗ, ಕೆಲಸವೂ ನೀಡಿದಂತಾಗುತ್ತದೆ ಎಂದರು. ಸಾಮಾನ್ಯವಾಗಿ ನರೇಗಾ ಯೋಜನೆಯ ಮಾನದಂಡಗಳನ್ನು ಮೀರಿ ಅಥವಾ ಪೂರ್ವ ನಿಯೋಜಿತ ಕಾಮಗಾರಿ ಬಿಟ್ಟು ಬೇರೆ ಕೆಲಸ ಮಾಡಿಸಿಕೊಳ್ಳಲು ಕೆಳ ಹಂತದಲ್ಲಿ ಹಿಂಜರಿಯುತ್ತಾರೆ. ಹೀಗಾಗಿ ತಕ್ಷಣವೇ ಸುತ್ತೋಲೆ ಕಳುಹಿಸಲಾಗುತ್ತದೆ. ವಸತಿ ಯೋಜನೆ ಅನುಷ್ಠಾನವಾದರೆ 29 ಸಾವಿರ ರೂ.ವರೆಗೆ ನರೇಗಾದಿಂದ ಕೆಲಸ ಕೊಡಲು ಅವಕಾಶವಿದೆ. ಒಟ್ಟಾರೆ ಗ್ರಾಮೀಣ ಜನರಿಗೆ ಕೆಲಸ ನೀಡಿ ಅವರನ್ನು ರಕ್ಷಿಸಲು ಸರ್ಕಾರ ಎಲ್ಲ ರೀತಿ ಪ್ರಯತ್ನಿಸಲಿದೆ ಎಂದು ಅತೀಕ್ ವಿವರಿಸಿದ್ದಾರೆ.

ನರೇಗಾದಿಂದ ಚೇತರಿಕೆ: ಅತಿವೃಷ್ಟಿಯಿಂದ ಅಂದಾಜು 7 ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ಹಾನಿಯಾಗಿದೆ. 75 ಸಾವಿರ ಮನೆಗಳು ವಾಸಯೋಗ್ಯವಿಲ್ಲ, ಹೀಗಾಗಿ ಸಂತ್ರಸ್ತರು ಕಂಗಾಲಾಗಿದ್ದಾರೆ. ನರೇಗಾ ಈ ಹಂತದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನವಾದರೆ ಅವರು ತಕ್ಷಣಕ್ಕೆ ಚೇತರಿಸಿಕೊಳ್ಳಲು ಸಹಕಾರಿ ಎನ್ನಲಾಗಿದೆ.

195 ಕೋಟಿ ರೂ. ಬಿಡುಗಡೆ

ಬೆಂಗಳೂರು: ಪ್ರವಾಹ ಕುರಿತ ಪರಿಹಾರ ಕಾರ್ಯಗಳಿಗೆ ಹಾಗೂ ನೆರೆ ಸಂತ್ರಸ್ತರಿಗೆ ಬಟ್ಟೆಬರೆ ಮತ್ತಿತರ ಸೌಲಭ್ಯ ಒದಗಿಸಲು ರಾಜ್ಯ ಸರ್ಕಾರ ಒಟ್ಟು 195 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಪ್ರವಾಹ ಪೀಡಿತ ತಾಲೂಕುಗಳಲ್ಲಿ ಸಂತ್ರಸ್ತರಿಗೆ ಬಟ್ಟೆಬರೆ ಹಾಗೂ ದಿನಬಳಕೆಯ ವಸ್ತುಗಳಿಗಾಗಿ ಪ್ರತಿ ಕುಟುಂಬಕ್ಕೆ 10 ಸಾವಿರ ರೂ. ವಿತರಿಸಲು, ರಾಜ್ಯ ವಿಪತ್ತು ನಿರ್ವಹಣಾ ನಿಧಿಯಡಿ ರಾಜ್ಯ ಸರ್ಕಾರದ ಹೆಚ್ಚುವರಿ ಪಾಲಿನ ಅನುದಾನದಿಂದ 80 ಕೋಟಿ ರೂ. ಮಂಜೂರು ಮಾಡಲಾಗಿದೆ. ಅಲ್ಲದೆ, ಪ್ರವಾಹಪೀಡಿತ ಪ್ರದೇಶಗಳಲ್ಲಿ ಉಂಟಾಗಿರುವ ನೆರೆ ಪರಿಸ್ಥಿತಿ ನಿರ್ವಹಣೆ ಮತ್ತು ಪರಿಹಾರ ಕಾರ್ಯಗಳಿಗಾಗಿ ಸರ್ಕಾರ 115 ಕೋಟಿ ರೂ. ಅನುದಾನ ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ಸಿಎಂ ಕಚೇರಿ ಪ್ರಕಟಣೆ ತಿಳಿಸಿದೆ.

ನೆರವಿನ ಮಹಾಪೂರ

ಸಂತ್ರಸ್ತರಿಗೆ ನೆರವಾಗುವಂತೆ ಸಿಎಂ ಮನವಿಗೆ ವ್ಯಾಪಕ ಸ್ಪಂದನೆ ವ್ಯಕ್ತವಾಗಿದ್ದು, ಪರಿಹಾರ ನಿಧಿಗೆ ಸೋಮವಾರವೂ ನೆರವು ಹರಿದು ಬಂತು. ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ ಸಿಎಂ ಪರಿಹಾರ ನಿಧಿಗೆ 5 ಕೋಟಿ ರೂ. ನೆರವು ನೀಡಿತು. ನಿಗಮದ ಎಂಡಿ ವೆಂಕಟೇಶ್ ಮತ್ತಿತರರು ಚೆಕ್ ನೀಡಿದರು. ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಸಿಎಂ ನಿಧಿಗೆ 28 ಲಕ್ಷ ರೂ. ಚೆಕ್ ಅರ್ಪಿಸಿದರು. ರಾಜ್ಯ ಸರ್ಕಾರದ ನಿವೃತ್ತ ನೌಕರರ ಸಂಘವೂ ಒಂದು ದಿನದ ವೇತನ ಪರಿಹಾರ ನಿಧಿಗೆ ನೀಡಲು ಒಪ್ಪಿದೆ. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸಿಎಂ ಭೇಟಿ ಮಾಡಿ 25 ಲಕ್ಷ ರೂ. ನೆರವಿನ ಚೆಕ್ ಅರ್ಪಿಸಿದರು. ದಾವಣಗೆರೆ ಶಾಸಕ ಹಾಗೂ ಬಾಪೂಜಿ ವಿದ್ಯಾಸಂಸ್ಥೆಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ಮುಖ್ಯಮಂತ್ರಿ ಪರಿಹಾರ ನಿಧಿಗೆ ವೈಯಕ್ತಿಕವಾಗಿ 25 ಲಕ್ಷ ಹಾಗೂ ವಿದ್ಯಾಸಂಸ್ಥೆಯಿಂದ 44 ಲಕ್ಷ ರೂ. ಚೆಕ್​ಅನ್ನು ಸಿಎಂಗೆ ಹಸ್ತಾಂತರಿಸಿದರು.

ಇಂದು, ನಾಳೆ ಭಾರಿ ಮಳೆ

ದಕ್ಷಿಣ ಒಳನಾಡಿನಲ್ಲಿ ಮಳೆ ಮುಂದುವರಿಯಲಿದ್ದು, ಆ.20 ಮತ್ತು 21ರಂದು ಭಾರಿ ಮಳೆಯಾಗುವ ಸಾಧ್ಯತೆ ಇದೆ. ತುಮಕೂರು, ಶಿವಮೊಗ್ಗ, ರಾಮನಗರ, ಮೈಸೂರು, ಮಂಡ್ಯ, ಕೋಲಾರ, ಕೊಡಗು, ಹಾಸನ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಬೆಂಗಳೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳ ಕಾಲ ವ್ಯಾಪಕವಾಗಿ ಮಳೆ ಸುರಿಯಲಿದೆ. ಉತ್ತರ ಕರ್ನಾಟಕದ ಕೆಲವು ಭಾಗದಲ್ಲಿ ಸಾಧಾರಣ ಹಾಗೂ ಕರಾವಳಿ ಭಾಗದಲ್ಲಿ ಮಳೆ ಮುಂದುವರಿದಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕೆಎಂಎಫ್​ನಿಂದ 1 ಕೋಟಿ ರೂ.

ಪ್ರವಾಹ ಸಂತ್ರಸ್ತರ ನೆರವಿಗೆ ಕರ್ನಾಟಕ ಸಹಕಾರಿ ಹಾಲು ಮಹಾಮಂಡಳಿ (ಕೆಎಂಎಫ್) ಮುಖ್ಯಮಂತ್ರಿ ಪರಿಹಾರ ನಿಧಿಗೆ 1 ಕೋಟಿ ರೂ. ಚೆಕ್ ನೀಡಿದೆ. ಜತೆಗೆ ಕೆಎಂಎಫ್ ನೌಕರರ ವರ್ಗವೂ ಒಂದು ದಿನದ ವೇತನವನ್ನು ನೆರೆ ಸಂತ್ರಸ್ತರ ಪರಿಹಾರ ಕಾರ್ಯಗಳಿಗೆ ನೀಡಿದೆ. ಅಲ್ಲದೆ ಕೆಎಂಎಫ್​ನ ವಿವಿಧ ಒಕ್ಕೂಟಗಳು ಸೇರಿ 50 ಟನ್ ನಂದಿನಿ ಪಶು ಆಹಾರ, 35000 ಲೀಟರ್ ನಂದಿನಿ ಹಾಲು, 2000 ಲೀಟರ್ ಹಾಲಿನ ಉತ್ಪನ್ನಗಳು, 15000 ಲೀಟರ್ ಕುಡಿಯುವ ನೀರು, 1200 ಕೆಜಿ ಸಿಹಿ ತಿನಿಸುಗಳು, 650 ಹೊದಿಕೆಗಳನ್ನು ಒಳಗೊಂಡಂತೆ 1.21 ಕೋಟಿ ಮೊತ್ತದ ಉತ್ಪನ್ನಗಳನ್ನು ನೀಡಿವೆ. ಚೆಕ್ ಹಸ್ತಾಂತರ ಸಂದರ್ಭ ನಂದಿನಿಯ ನೂತನ ಉತ್ಪನ್ನಗಳಾದ ಸಿರಿಧಾನ್ಯ ಲಡ್ಡು, ಸಿರಿಧಾನ್ಯ ಹಾಲಿನ ಪುಡಿ ಮತ್ತು 100 ಗ್ರಾಂ ನೂತನ ಪ್ಯಾಕ್​ನಲ್ಲಿ ನಂದಿನಿ ಜಾಮೂನ್ ಮತ್ತು ರಸಗುಲ್ಲ ಉತ್ಪನ್ನಗಳನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಿಡುಗಡೆ ಮಾಡಿದರು.

ಸಾಲಕ್ಕೆ ಹೆದರಿ ದಂಪತಿ ಆತ್ಮಹತ್ಯೆ

ಬಾದಾಮಿ ತಾಲೂಕಿನ ಬಾಚಿನಗುಡ್ಡ ಗ್ರಾಮದಲ್ಲಿ ಪ್ರವಾಹಕ್ಕೆ ಸಿಕ್ಕಿ ಬೆಳೆ ನೀರು ಪಾಲಾದ್ದರಿಂದ ಹಾಗೂ ಸಾಲಕ್ಕೆ ಹೆದರಿ ಯುವ ದಂಪತಿ ರಮೇಶ ಬೆಳ್ಳಿ (28) ಹಾಗೂ ಶಿವಲೀಲಾ ಬೆಳ್ಳಿ (21) ಭಾನುವಾರ ತಡರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ರಮೇಶ ನೇಣು ಹಾಕಿಕೊಂಡು, ಶಿವಲೀಲಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರವಾಹದಿಂದಾಗಿ 6 ಎಕರೆಯಲ್ಲಿ ಬೆಳೆದಿದ್ದ ಸೂರ್ಯಕಾಂತಿ, ಈರುಳ್ಳಿ ಹಾಗೂ ಗೋವಿನಜೋಳ ಸಂಪೂರ್ಣ ನಾಶವಾಗಿತ್ತು. ಅಲ್ಲದೆ ಟ್ರಾಕ್ಟರ್ ಸಾಲ 1,98,262 ರೂ., ಬೆಳೆ ಸಾಲ 50 ಸಾವಿರ, ನೀರಾವರಿ ಹಾಗೂ ಹೊಲಕ್ಕೆ ಒಡ್ಡು ಹಾಕಲು ಸಾಲ 4.5 ಲಕ್ಷ, ಹೊಸೂರ ಐಡಿಎಫ್​ಸಿ ಬ್ಯಾಂಕ್​ನಲ್ಲಿ 30,775 ಸಾಲ ಸೇರಿ ಒಟ್ಟು 7.29 ಲಕ್ಷ ಸಾಲವಿತ್ತು ಎಂದು ಹೇಳಲಾಗಿದೆ. ಬಾದಾಮಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಹೆಸ್ಕಾಂ ವ್ಯಾಪ್ತಿ ಬೆಸ್ಕಾಂ ನೆರವು

ಭಾರಿ ಮಳೆಯಿಂದಾಗಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಸಂಸ್ಥೆ (ಹೆಸ್ಕಾಂ) ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ತುರ್ತಾಗಿ ದುರಸ್ತಿ ಕಾರ್ಯ ನಡೆಸಲು ನಾಲ್ವರು ಇಂಜಿನಿಯರ್ ಮತ್ತು 50 ಪವರ್​ವೆುನ್​ಗಳನ್ನು ಬೆಸ್ಕಾಂ ಕಳುಹಿಸಿದೆ. ಇವರು ಮುಂದಿನ 2 ವಾರ ಹೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಮೂಲ ಸೌಲಭ್ಯವನ್ನು ಸರಿಪಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯ ಕೈಗೊಳ್ಳಲಿದ್ದಾರೆ.

ಪ್ರಧಾನ ಮಂತ್ರಿ ಬೆಳೆ ವಿಮೆ ನೆರವೇಕಿಲ್ಲ?

ರಾಜ್ಯದಲ್ಲಿ ಪ್ರವಾಹದಿಂದ 30 ಲಕ್ಷ ಎಕರೆ ಪ್ರದೇಶ ಹಾನಿಗೆ ಈಡಾಗಿದ್ದು, 2 ಕೋಟಿ ಜನರ ಜೀವನ ಅಸ್ತವ್ಯಸ್ತವಾಗಿದೆ. ರಾಜ್ಯ, ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಬೆಳೆ ವಿಮೆ ಯೋಜನೆಯಡಿ ರೈತರಿಗೆ ತಕ್ಷಣ ಪರಿಹಾರ ಕೊಡಿಸಬೇಕೆಂದು ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆಗ್ರಹಿಸಿದ್ದಾರೆ. ನಿಯಮ ಪ್ರಕಾರ ಬೆಳೆ ಹಾನಿ ಬಗ್ಗೆ ಜಿಲ್ಲಾಡಳಿತ ಸಮಿತಿ ರಚಿಸಿ, ವಿಮಾ ಕಂಪನಿಗಳಿಗೆ ವರದಿ ಸಲ್ಲಿಸಬೇಕು. ಕಂಪನಿಗಳು 15 ದಿನಗಳ ಒಳಗೆ ಶೇ.25 ಪರಿಹಾರ ರೈತರಿಗೆ ನೀಡಬೇಕು. ಆದರೆ ವಿಮಾ ಕಂಪನಿಗಳು ಇನ್ನೂ ರೈತರ ನೆರವಿಗೆ ಬಂದಿಲ್ಲ, ಸರ್ಕಾರ ಆಸಕ್ತಿ ತಳೆದಿಲ್ಲ. ಇದೆಲ್ಲ ಗಮನಿಸಿದರೆ ಕಂಪನಿಗಳ ಜತೆ ಸರ್ಕಾರ ಹೊಂದಾಣಿಕೆ ಮಾಡಿಕೊಂಡಂತಿದೆ ಎಂದು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದರು.

ದ್ವಿಪ್ರತಿ ಅಂಕಪಟ್ಟಿ ವಿತರಣೆ

ನೆರೆಪೀಡಿತ ಪ್ರದೇಶದ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ದ್ವಿಪ್ರತಿ ಅಂಕಪಟ್ಟಿ ಹಾಗೂ ಇತರ ಶೈಕ್ಷಣಿಕ ದಾಖಲೆಗಳನ್ನು ಕಾಲೇಜು ಹಾಗೂ ಜಿಲ್ಲಾ ಉಪ ನಿರ್ದೇಶಕರುಗಳ ಮೂಲಕ ಸದ್ಯದಲ್ಲೇ ಉಚಿತವಾಗಿ ವಿತರಿಸಲಾಗುವುದು ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ. ಡಿಡಿಪಿಯು ಮೂಲಕ ಅರ್ಜಿ ಸಲ್ಲಿಸಿದರೆ ದಾಖಲೆಗಳನ್ನು ಕಾಲೇಜುಗಳಿಗೆ ತಲುಪಿಸಲಾಗುತ್ತದೆ. ಅಂಕಪಟ್ಟಿ, ದಾಖಲೆಗಳಿಗಾಗಿ ವಿದ್ಯಾರ್ಥಿಗಳು-ಪಾಲಕರು ಪಿಯು ಇಲಾಖೆಯ ಕೇಂದ್ರ ಕಚೇರಿಗೆ ಭೇಟಿ ನೀಡುವ ಅಗತ್ಯವಿಲ್ಲ. ಪ್ರವಾಹಪೀಡಿತ 22 ಜಿಲ್ಲೆಗಳಲ್ಲಿ 2019-20ನೇ ಸಾಲಿನ ಪ್ರಥಮ ಪಿಯುಸಿ ದಾಖಲಾತಿಗೆ ಆ.23ರ ವರೆಗೂ ಅವಕಾಶ ನೀಡಲಾಗಿದೆ ಎಂದು ಇಲಾಖೆ ತಿಳಿಸಿದೆ. ಪ್ರವಾಹಪೀಡಿತ ಪಿಯು ಕಾಲೇಜುಗಳ ಮೂಲಸೌಕರ್ಯ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಸುಧಾರಣೆಗೆ ಕೈಗೊಂಡಿರುವ ಕ್ರಮಗಳ ಪರಿಶೀಲನೆಗಾಗಿ ಡಿಡಿಪಿಯು ಅಧ್ಯಕ್ಷತೆಯಲ್ಲಿ ಸರ್ಕಾರಿಖಾಸಗಿ ಪಿಯು ಕಾಲೇಜುಗಳ 5 ಪ್ರಾಂಶುಪಾಲರನ್ನು ಒಳಗೊಂಡ ಸಮಿತಿ ರಚಿಸಲು ಸೂಚಿಸಲಾಗಿದೆ.

ದಾಖಲೆ ಇಲ್ಲದಿದ್ರೂ ಶಾಲೆಗೆ ಪ್ರವೇಶ

ಪ್ರವಾಹ ಪೀಡಿತ ಪ್ರದೇಶಗಳಿಂದ ವಲಸೆ ಬರುವ ಮಕ್ಕಳಿಗೆ ಅಗತ್ಯ ದಾಖಲಾತಿ ಇಲ್ಲದಿದ್ದರೂ ಬೇರೆ ಶಾಲೆಗಳಲ್ಲಿ ಪ್ರವೇಶ ಕಲ್ಪಿಸಲು ಶಿಕ್ಷಣ ಇಲಾಖೆ ತೀರ್ವನಿಸಿದೆ. ವಲಸೆ ಬಂದವರು ಸ್ಥಳೀಯ ಶಾಲೆಗೆ ಸೇರಿಸುವಾಗ ವರ್ಗಾವಣೆ ಪತ್ರ, ಜಾತಿ ಮತ್ತು ಆದಾಯ ಪತ್ರ, ಆಧಾರ್, ಜನನ ಪ್ರಮಾಣಪತ್ರ ಇಲ್ಲದಿದ್ದರೂ ಪ್ರವೇಶ ಕಲ್ಪಿಸಬೇಕು. ಪ್ರವೇಶಕ್ಕೆ ನಿಗದಿ ಪಡಿಸಿದ್ದ ದಿನಾಂಕ ಮುಗಿದಿದೆ ಎನ್ನುವಂತಿಲ್ಲವೆಂದು ಇಲಾಖೆ ಸೂಚಿಸಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಡಕಾಗದಂತೆ ನೋಡಿಕೊಳ್ಳುತ್ತೇವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ. ಕೆ.ಜಿ. ಜಗದೀಶ್ ತಿಳಿಸಿದ್ದಾರೆ. ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ(ಕ್ಯಾಮ್್ಸ) ನೆರೆ ಪೀಡಿತ ಮಕ್ಕಳ ಆರ್ಥಿಕ ಪರಿಸ್ಥಿತಿ ಪರಿಶೀಲಿಸಿ ಉಚಿತ ಶಿಕ್ಷಣ ನೀಡಲು ನಿರ್ಧರಿಸಿದೆ.

ಕೆಸರೆರಚಾಟ ನಿಲ್ಲಿಸಿ ನೆರೆಯತ್ತ ಗಮನಹರಿಸಿ

ಕೆಸರೆರಚಾಟ ನಿಲ್ಲಿಸಿ, ನೆರೆ ಕಡೆ ಗಮನ ಹರಿಸಬೇಕಿದೆ. ರಾಜ್ಯದ ಸಂಕಷ್ಟಗಳ ಬಗ್ಗೆ ಗಮನ ಕೊಡಿ, ನಾನು ಯಾರ ಪರವೂ ಇಲ್ಲ, ವಿರೋಧವೂ ಇಲ್ಲ. ಯಡಿಯೂರಪ್ಪ ಅಧಿಕಾರ ಸ್ವೀಕರಿಸಿ ಸಂಪುಟ ಸಭೆ ಮಾಡಿದರು. ಆದರೆ ಒಬ್ಬರಿಂದ ಸಂಪುಟ ಆಗಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವ್ಯಂಗ್ಯವಾಡಿದರು. ಮಹಾಲಕ್ಷಿ್ಮ ಲೇಔಟ್ ಕಾರ್ಯಕರ್ತರ ಸಭೆ ಮಾಡಿ ತುರ್ತು ಕಾರ್ಯದ ನಿಮಿತ್ತ ಮನೆಗೆ ಹೋದೆ. ಆದರೆ, ಫೋನ್ ಕದ್ದಾಲಿಕೆ ಬಗ್ಗೆ ಮಾತನಾಡದೆ ಹೋಗಿದ್ದಾರೆ ಎಂದು ಮಾಧ್ಯಮದವರು ಹೇಳಿದ್ದಾರೆ. ಜೀವನದಲ್ಲಿ ನಿರ್ಭಯವಾಗಿ ಹೋರಾಡಿದ್ದೇನೆ. ಯಾರ ಒತ್ತಡದಿಂದಲೂ ಹೋರಾಟ ಮಾಡಲ್ಲ. ಶಾಸಕರ ಅನರ್ಹತೆ ಸಂಬಂಧ ಸುಪ್ರೀಂ ಕೋರ್ಟ್ ಏನು ತೀರ್ಪು ಕೊಡುತ್ತೋ ನೋಡೋಣ ಎಂದರು.

ಕಾಂಗ್ರೆಸ್ ಜನಾಭಿಪ್ರಾಯ

ನೆರೆ ಪರಿಹಾರ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿಧಾನಗತಿ ಧೋರಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್, ಸರ್ಕಾರದ ವಿರುದ್ಧ ಜನಾಭಿಪ್ರಾಯ ಮೂಡಿಸಲು ತೀರ್ವನಿಸಿದೆ. ಪರಿಹಾರ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಪದೇಪದೆ ಕೋರಿದರೂ ಸ್ಪಂದಿಸದ್ದನ್ನು ಕೆಪಿಸಿಸಿ ಎಐಸಿಸಿ ಗಮನಕ್ಕೆ ತಂದಿದೆ. ಬಳಿಕ ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆದಿದೆ. ಕೇಂದ್ರದ ಸಚಿವರಿಬ್ಬರು ರಾಜ್ಯಕ್ಕೆ ಬಂದು ವೀಕ್ಷಿಸಿದ್ದರು. ಈಗ ಮತ್ತೆ ತಂಡ ಕಳಿಸುತ್ತೇವೆ, ನಂತರ ಪರಿಹಾರ ಬಿಡುಗಡೆ ಎಂಬುದು ಕರ್ನಾಟಕಕ್ಕೆ ಮಾಡುವ ಅನ್ಯಾಯ ಎಂದಿದ್ದಾರೆ.

ಪ್ರವಾಹ ಪರಿಹಾರಕ್ಕೆ ನಯಾಪೈಸೆ ಬಿಡುಗಡೆ ಮಾಡದೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಅವಮಾನ ಮಾಡಿದೆ. ಅನುದಾನ ನೀಡದಿದ್ದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ವಿಶ್ವಾಸವಾದರೂ ಹೇಗೆ ಬರುತ್ತದೆ?

| ಟಿ.ಬಿ.ಜಯಚಂದ್ರ, ಮಾಜಿ ಸಚಿವ
ಕೃಪೆ:ವಿಜಯವಾಣಿ

ನೆರೆ ಸಂತ್ರಸ್ತರ ನೆರವಿಗೆ ನರೇಗಾ ಕೆಲಸ
narega-work-will-help-flood-victims-to-lead-normal-life