NAMMA METRO : ಬೆಂಗಳೂರಿಂದ ಹೊಸೂರಿಗೂ ವಿಸ್ತಾರ..?

ಬೆಂಗಳೂರು, ಜೂನ್.9, 2022 (www.justkannada.in): ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತದ (ಬಿಎಂಆರ್‌ಸಿಎಲ್) ನಮ್ಮ ಮೆಟ್ರೊ ರೈಲು ಸೇವೆಗಳನ್ನು ಬೊಮ್ಮಸಂದ್ರಿಂದ ತಮಿಳುನಾಡಿನ ಹೊಸೂರಿನವರೆಗೂ ವಿಸ್ತರಿಸುವ ಕುರಿತು ಕಾರ್ಯಸಾಧ್ಯತೆಯ ಪರಿಶೋಧನೆಯನ್ನು ಪರಿಶೀಲಿಸಲಿದೆ.

ತಮಿಳುನಾಡಿನ ಕೃಷ್ಣಗಿರಿಯ ಲೋಕಸಭಾ ಸದಸ್ಯರಾದ ಡಾ. ಎ. ಚೆಲ್ಲಾಕುಮಾರ್ ಅವರು ಕಳೆದ ತಿಂಗಳು ನಡೆದಂತಹ ಲೋಕಸಭಾ ಅಧಿವೇಶನದಲ್ಲಿ ನಮ್ಮ ಮೆಟ್ರೋ ಸೇವೆಗಳನ್ನು ಬೆಂಗಳೂರಿನ ಬೊಮ್ಮಸಂದ್ರದಿಂದ ತಮಿಳುನಾಡಿನ ಹೊಸೂರುವರೆಗೂ ವಿಸ್ತರಿಸುವ ಕುರಿತು ಪ್ರಶ್ನೆಯೊಂದನ್ನು ಕೇಳಿದರು. 22.01.2021ರಲ್ಲಿ ಪುಣೆಯಲ್ಲಿ ನಡೆದಂತಹ ಮೆಟ್ರೋ ರೈಲು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರುಗಳ ಸಭೆಯಲ್ಲಿ ಕೇಂದ್ರ ನಗರಾಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿಯವರು ‘ಮೆಟ್ರೊ ನಿಯೊ’ ಸಂಪರ್ಕದ ಕುರಿತು ಕಾರ್ಯಸಾಧ್ಯತೆಯ ಪರಿಶೋಧನೆಯನ್ನು ನಡೆಸುವಂತೆ ಬಿಎಂಆರ್‌ ಸಿಎಲ್‌ ನ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದ್ದರು. ಈ ಸಂಬಂಧ ಬಿಎಂಆರ್‌ ಸಿಎಲ್‌ ನ ವ್ಯವಸ್ಥಾಪಕ ನಿರ್ದೇಶಕರು ಈ ಕೆಳಕಂಡ ವಿವರಗಳನ್ನು ಕೇಂದ್ರ ನಗರಾಭಿವೃದ್ಧಿ ಸಚಿವಾಲಯಕ್ಕೆ ಒದಗಿಸಿದ್ದಾರೆ.

ಬಿಎಂಆರ್‌ ಸಿಎಲ್‌ ನ 2ನೇ ಹಂತದ ಕಾಮಗಾರಿಗಳಡಿ ರೀಚ್-೫ ಮೆಟ್ರೊ ಕಾರಿಡಾರ್ ಕಾಮಗಾರಿಗಳನ್ನು ಈಗಿರುವ ೧ನೇ ಹಂತದಡಿ ಬರುವ ಆರ್.ವಿ. ರಸ್ತೆ ಮೆಟ್ರೋ ಸ್ಟೇಷನ್‌ ನಿಂದ ಬೊಮ್ಮಸಂದ್ರದವರೆಗೂ ಅನುಷ್ಠಾನಗೊಳಿಸಲಾಗುತ್ತಿದ್ದು, ಇದರ ಉದ್ದ ೧೯ ಕಿ.ಮೀ.ಗಳಾಗಿದೆ. ತಮಿಳುನಾಡಿ ಹೊಸೂರು, ಬೆಂಗಳೂರಿನ ಬೊಮ್ಮಸಂದ್ರ ಮೆಟ್ರೋ ಟರ್ಮಿನಲ್‌ ನಿಂದ ೨೦.೫ ಕಿ.ಮೀ.ದೂರದಲ್ಲಿದೆ. ಈ ಒಟ್ಟು ಮಾರ್ಗದ ಪೈಕಿ ೧೧.೭ ಕಿ.ಮೀ.ಗಳು ಕರ್ನಾಟಕ ರಾಜ್ಯ ವ್ಯಾಪ್ತಿಯಡಿ ಹಾಗೂ ಉಳಿದ ೮.೮ ಕಿ.ಮೀ.ಗಳಷ್ಟು ಮಾರ್ಗ ತಮಿಳುನಾಡು ರಾಜ್ಯದ ವ್ಯಾಪ್ತಿಯಡಿಗೆ ಬರುತ್ತದೆ.

ಈ ರಸ್ತೆ ಎರಡೂ ರಾಜ್ಯಗಳ ವ್ಯಾಪ್ತಿಗಳಡಿ ಬರುತ್ತದೆ. ಹಾಗಾಗಿ ಮೆಟ್ರೋ ರೈಲು ಸಂಪರ್ಕ ಸಾಧ್ಯವಾಗಬೇಕಾದರೆ ಎರಡೂ ರಾಜ್ಯಗಳ ನಡುವೆ ತೀವ್ರ ಸಂಯೋಜನೆಯೊಂದಿಗೆ, ಯೋಜನೆ ವೆಚ್ಚ ಹಂಚಿಕೆಯ ಅಗತ್ಯವಿರುತ್ತದೆ. ಮೆಟ್ರೋ ರೈಲು ಸೇವೆಗಳು ಎರಡೂ ರಾಜ್ಯಗಳ ವ್ಯಾಪ್ತಿಯಡಿಗೆ ಬರುವಂತಿದ್ದರೆ ಎರಡೂ ರಾಜ್ಯಗಳು ಒಪ್ಪಂದವನ್ನು ಮಾಡಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದೆ.

Key words: NAMMA METRO-Expansion-Bangalore- Hosur