ಯಶ್ ಟೆಲ್ ಇಂಪ್ಯಾಕ್ಟ್ : ರೈತನ ಪಾಲಿಗೆ ದೇವರಾಗಿ ಬಂದ್ರು ಈ ನರ್ಸಮ್ಮ..

Mysore-yashtel-nurse-donate

Promotion

 

ಮೈಸೂರು, ಫೆ.04, 2022 : (www.justkannada.in news ) ಮತ್ತೊಬ್ಬರ ಕಷ್ಟ ಕಂಡು ನಮ್ಮ ಮನಸು ಕರಗಿದರೆ ಆಗ ನಮ್ಮಲ್ಲಿ ಮಾನವೀಯತೆ ಜೀವಂತವಾಗಿದೆ, ನಾವೂ ಮನುಷ್ಯರು ಎಂದೇ ಅರ್ಥ. ಎಲ್ಲವನ್ನೂ ದುಡ್ಡಿನಿಂದಲೇ ಅಳೆಯುವ ಕಾಲದಲ್ಲಿ ನಮ್ಮ ಕಷ್ಟಗಳ ಮಧ್ಯೆ ಮತ್ತೊಬ್ಬರ ಕಷ್ಟಕ್ಕೆ ಸ್ಪಂದಿಸುವ ಕೆಲವೇ ಕೆಲವು ಜೀವಗಳು ನಮ್ಮ ಮಧ್ಯೆ ಇವೆ.

ಇದನ್ನೆಲ್ಲಾ ಹೇಳಬೇಕು ಎನಿಸಿದ್ದು ನೆನ್ನೆ ಗಾಯತ್ರಿ ಎಂಬ ಮೈಸೂರಿನ ದಾದಿಯೊಬ್ಬರನ್ನು ನೋಡಿದಾಗ, ಬುಧವಾರ ಬೆಳಗ್ಗೆ ‘ ಯಶ್‌ಟೆಲ್ ‘ ವಾಹಿನಿ ಹುಲಿ ದಾಳಿಗೆ ಹಸು ಕಳೆದುಕೊಂಡ ರೈತ ಕುಟುಂಬವೊಂದರ ಕುರಿತ ಸುದ್ದಿ ಪ್ರಸಾರ ಮಾಡಿತ್ತು.

ನಂಜನಗೂಡಿನ ಮಹದೇವನಗರದಲ್ಲಿ ವ್ಯಾಘ್ರವೊಂದು ರೈತ ಪಾಪಣ್ಣಗೆ ಸೇರಿದ ಎರಡು ಹಸುಗಳನ್ನು ಕೊಂದು ಹಾಕಿತ್ತು. ದುಡಿಮೆ ಮಾಡಲು ಜಮೀನಿಲ್ಲ, ಬೇರೆ ಕೆಲಸಕ್ಕೆ ಹೋಗಲು ಅನಾರೋಗ್ಯ ಬೇರೆ. ಸಾಲ ಸೋಲ ಮಾಡಿ ಎರಡು ಹಸು ಖರೀದಿ ಮಾಡಿದ್ದ ರೈತ, ಹಾಲು ಮಾರಿ ಜೀವನ ನಡೆಸುತ್ತಿದ್ದ. ತನ್ನ ಜೀವನಕ್ಕೆ ದಾರಿಯಾಗಿದ್ದ ಎರಡು ಹಸುಗಳು ಕಣ್ಣೆದುರಿಗೆ ಅಸುನೀಗಿದ್ದನ್ನು ಕಂಡ ರೈತ ಕುಟುಂಬಕ್ಕೆ ಜಂಘಾಬಲವೇ ಉಡುಗಿ ಹೋಗಿತ್ತು. ಕಾಡಂಚಿನ ಊರುಗಳಲ್ಲಿ ವಾಸಿಸುವ ರೈತರ ಹಣೆಬರಹವೇ ಅಷ್ಟು, ಆಹಾರ ಅರಸಿ ಬರುವ ವನ್ಯಜೀವಿಗಳಿಗೆ ಮೊದಲು ಬಲಿಯಾಗೋದೇ ರೈತರ ಜಮೀನು, ಪ್ರಾಣ ಮತ್ತು ಸಾಕು ಪ್ರಾಣಿಗಳು,

ಸಂಬಂಧಪಟ್ಟ ಅಧಿಕಾರಿಗಳನ್ನು ಅಂಗಲಾಚಿದ್ರೂ ಪಾಪಣ್ಣ ಕುಟುಂಬಕ್ಕೆ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿತು. ಈ ಕುರಿತು ‘ ಯಶ್ ಟೆಲ್ ‘ ವಾಹಿನಿಯಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಚಾನೆಲ್‌ಗೆ ಕರೆಮಾಡಿದ ಹೆಬ್ಬಾಳ ನಿವಾಸಿ ಗಾಯತ್ರಿ, ರೈತ ಕುಟುಂಬಕ್ಕೆ ನಾನು ಕೈಲಾದ ಸಹಾಯ ಮಾಡುತ್ತೇನೆ ಅವರನ್ನು ಕರೆಸಿ ಎಂದರು.

ಮರುದಿನ ಬೆಳಗ್ಗೆ ಚಾನೆಲ್ ಆಫೀಸ್‌ಗೆ ಬಂದ ಗಾಯತ್ರಿ, ರೈತಕುಟುಂಬದ ಜೊತೆ ಕೆಲಕಾಲ ಮಾತನಾಡಿ, ಅವರ ಸಂಕಷ್ಟ ಆಲಿಸಿದ್ದು, ರೈತ ಪಾಪಣ್ಣ ಕುಟುಂಬಕ್ಕೆ ಧೈರ್ಯ ಹೇಳಿ ಮೂವತ್ತು ಸಾವಿರ ರೂ.ಚೆಕ್ ನೀಡಿ ಇಂದೇ ಹಸು ಕೊಳ್ಳುವಂತೆ ಮನವಿ ಮಾಡಿದ್ದು, ನೀರಿನಲ್ಲಿ ಮುಳುಗುವವನಿಗೆ ಹುಲುಕಡ್ಡಿಯೂ ಆಸರೆಯೆಂಬಂತೆ ಹಸುಗಳನ್ನು ಕಳೆದುಕೊಂಡು ಕಂಗಾಲಾಗಿದ್ದ ರೈತನ ಪಾಲಿಗೆ ನರ್ಸ್ ಗಾಯತ್ರಿ ದೇವರಾಗಿ ಬಂದರು.

ಎಷ್ಟೇ ಹಣ.ಆಸ್ತಿ ಇದ್ದರೂ ಎಲ್ಲವೂ ನನಗೇ ಇರಲಿ,ಮತ್ತಷ್ಟು ಸಿಗಲಿ ಎಂದು ಬಯಸುವವರೇ ಹೆಚ್ಚಿರುವ ಜನರ ಮಧ್ಯೆ ಗಾಯತ್ರಿ ವಿಭಿನ್ನವಾಗಿ ಕಾಣುತ್ತಾರೆ. ನಮ್ಮ ಬಳಿ ಇದ್ದುದರಲ್ಲಿಯೇ ತೃಪ್ತಿಪಟ್ಟುಕೊಂಡು ಮತ್ತೊಬ್ಬರ ಸಂಕಷ್ಟಕ್ಕೆ ಮಿಡಿಯುವ ಮೂಲಕ ಗಾಯತ್ರಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಹೃದಯವಂತೆ ಗಾಯತ್ರಿಗೆ ನನ್ನದೊಂದು ಸಲಾಂ.

– ಸಾಹಿತ್ಯ ಯಜಮಾನ್,

ಸುದ್ದಿ ಸಂಪಾದಕರು, ಯಶ್ ಟೆಲ್, ಮೈಸೂರು.

key words : Mysore-yashtel-nurse-donate