ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳನ್ನು ಯಶಸ್ವಿಗೊಳಿಸಲು ಮೈಸೂರು ವಿವಿ ಸಿದ್ಧ ; ಪ್ರೊ.ಜಿ.ಹೇಮಂತ್ ಕುಮಾರ್

ಮೈಸೂರು, ಆಗಸ್ಟ್,31, 2020(www.justkannada.in) ; ಮೈಸೂರು ವಿವಿಯು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉನ್ನತ ಹುದ್ದೆಗಳನ್ನು ಪಡೆದುಕೊಳ್ಳುವಂತೆ ಶ್ರಮಿಸಲಾಗುವುದು ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.

jk-logo-justkannada-logo

ಮೈಸೂರು ವಿಶ್ವವಿದ್ಯಾನಿಲಯ  ಪ್ರಾಣಿಶಾಸ್ತ್ರ ವಿಭಾಗವು ಸೋಮವಾರ ಆಯೋಜಿಸಿದ್ದ  ವೆಬಿನಾರ್ ಚಾಲನೆ ನೀಡಿ ಅವರು ಮಾತನಾಡಿದರು.

ಮೈಸೂರು ವಿವಿ ವ್ಯಾಪ್ತಿಯ ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಸಂಬಂಧಿಸಿದಂತೆ ಅಗತ್ಯ ಮಾಹಿತಿಯನ್ನು ಒದಗಿಸುವ ಮೂಲಕ ಪ್ರತಿಭಾವಂತರನ್ನು ಉನ್ನತ ಹುದ್ದೆ ಪಡೆದುಕೊಳ್ಳುವಂತೆ ಪ್ರೋತ್ಸಾಹಿಸಲಾಗುವುದು ಎಂದರು.

ಸ್ಪರ್ಧಾತ್ಮಕ ಕೇಂದ್ರದಿಂದ ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ

ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ವಿಶೇಷ ಪ್ರತಿಭೆಯಿರುತ್ತದೆ. ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕಾಗಿ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮೈಸೂರು ವಿವಿ ಮುಂದಾಗಲಿದೆ. ವಿವಿಯಿಂದ ಇದುವರೆಗೆ ಎಷ್ಟು ಮಂದಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಿದ್ದಾರೆ ಮಾಹಿತಿಯಿಲ್ಲ. ಆದರೆ, ಇನ್ನೂ ಮುಂದೆ ವಿವಿಯ ಸ್ಪರ್ಧಾತ್ಮಕ ಕೇಂದ್ರದ ಮೂಲಕ ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿಯನ್ನು ನೀಡಲಾಗುವುದು. ಪ್ರತಿಭಾವಂತರಿಗೆ ಅಗತ್ಯ ಮಾಹಿತಿಯನ್ನು ಒದಗಿಸಿ ಯಶಸ್ವಿಯಾಗಿಸುವ ನಿಟ್ಟಿನಲ್ಲಿ ಕಾರ್ಯಮಾಡಲಾಗುವುದು ಎಂದು ಹೇಳಿದರು.

9 ತಿಂಗಳಲ್ಲಿ ಯಶಸ್ವಿಯಾಗಬಹುದು

ಕ್ರೆಡೆನ್ಸ್ ಐಎಎಸ್ ಸಂಸ್ಥೆಯ ಸಂಸ್ಥಾಪಕ ಮತ್ತು ನಿರ್ದೇಶಕ ಅನಿಲ್ ಕುಮಾರ್ ಬುಳ್ಳಾ ಅವರು ಮಾತನಾಡಿ, ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕಠಿಣ ಪರಿಶ್ರಮ ಹಾಗೂ ಸತತ ಪ್ರಯತ್ನದಿಂದ ಕೇವಲ 9 ತಿಂಗಳಲ್ಲಿ ಯಶಸ್ವಿಯಾಗಬಹುದು ಎಂದರು.

ಶ್ರಮಕ್ಕೆ ತಕ್ಕಂತೆ ಫಲ ದೊರೆಯುತ್ತದೆ. ಸ್ಪರ್ಧಾತ್ಮಕ ಪರೀಕ್ಷೆ ಎಸ್ ಎಸ್ ಎಲ್ ಸಿ, ಪಿಯುಸಿ, ಪದವಿ ಮಟ್ಟದಲ್ಲಿಯೇ ಸಿದ್ಧರಾಗಿರಬೇಕು ಎಂಬುದಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವಾಗ ಯಾವ ಪರೀಕ್ಷೆ ಆಯ್ಕೆಮಾಡಿಕೊಳ್ಳಲಾಗಿದೆ, ಹೇಗೆ ಅಧ್ಯಯನ ಮಾಡುತ್ತಿದ್ದೀರಿ ಎಂಬುದು ಬಹಳ ಮುಖ್ಯವಾಗುತ್ತದೆ ಎಂದರು.

ಯಾವುದೇ ಪರೀಕ್ಷೆಯನ್ನು ಎದುರಿಸುವುದಕ್ಕೆ  ಮೊದಲು ಸಿದ್ಧತೆ ಬಹಳ ಮುಖ್ಯ. ತದನಂತರ ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಿದರೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನೀವು ಯಶಸ್ಸು ಕಾಣಬಹುದು. ಸೂಕ್ತ ಮಾರ್ಗದರ್ಶನವು ಬಹಳ ಮುಖ್ಯವಾಗಿದ್ದು, ಆ ಕುರಿತು ನೀವು ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಕೇಳಿದ ಹಲವು ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಯಾವ ರೀತಿಯಾಗಿ ಅಧ್ಯಯನ ಮಾಡಬೇಕು, ಮಾಹಿತಿಯನ್ನು ಹೇಗೆ ಸಂಗ್ರಹಿಸಬೇಕು ಎಂಬಿತ್ಯಾದಿಯಾಗಿ ಮಾಹಿತಿ ಹಂಚಿಕೊಂಡರು.

ನಿಮ್ಮದೆ ದಾರಿಯಲ್ಲಿ ಸಾಗಿ ಸಾಧಿಸಿ

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ಅವರು ಮಾತನಾಡಿ, ನಿಮಗೆ ಇಷ್ಟವಾದ ವಿಷಯವನ್ನು ಆಯ್ಕೆಮಾಡಿಕೊಳ್ಳಿ. ಶ್ರಮಪಟ್ಟು ಅಧ್ಯಯನ ಮಾಡಿ. ಯಾರನ್ನೋ ಮಾದರಿಯಾಗಿ ತೆಗೆದುಕೊಂಡು ಹೋಗಬೇಡಿ. ಪ್ರತಿಯೊಬ್ಬರದು ಯಶಸ್ವಿ ಕಥೆ ಬೇರೆ, ಬೇರೆಯಿರುತ್ತದೆ. ನಿಮ್ಮದೆ ದಾರಿಯಲ್ಲಿ ಸಾಗಿ ಸಾಧಿಸಿ ಎಂದರು.

ವಿದ್ಯಾರ್ಥಿಗಳು ಹಲವು ಪ್ರಶ್ನೆಗಳನ್ನು ಕೇಳುವ ಮೂಲಕ ಗೊಂದಲ ನಿವಾರಿಸಿಕೊಂಡರು. ನಾಗರಿಕರು ಸಮವಸ್ತ್ರ ಧರಿಸದೆ ಪೊಲೀಸರಂತೆ ಕೆಲಸ ಮಾಡುತ್ತಾರೆ. ನಮ್ಮಲ್ಲಿಯೂ ಒಳ್ಳೆಯ ಅಧಿಕಾರಿಗಳು ಇದ್ದಾರೆ. ಸಿನಿಮಾದಲ್ಲಿ ತೋರಿಸುವ ಹಾಗೇ ನಮಗೆ ವಿಶೇಷ ಶಕ್ತಿಯಿರುವುದಿಲ್ಲ. ನಮಗೂ ನಮ್ಮದೇಯಾದ ಮಿತಿಗಳಿದೆ ಎಂದು ಹೇಳಿದರು.

ವಿದ್ಯಾರ್ಥಿಗಳು ಸೇರಿದಂತೆ ಪ್ರಾಣಿಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ವೆಬಿನಾರ್ ನಲ್ಲಿ ಭಾಗವಹಿಸಿದ್ದರು.

key words ; Mysore-VV-ready-students-successful-competitive-exams-Prof. G.Hemant Kumar