ಮೈಸೂರು ವಿವಿ: ನಾಲ್ಕು ಹೊಸ ಪ್ರಥಮ ದರ್ಜೆ ಕಾಲೇಜು ಆರಂಭಿಸಲು ಅನುಮೋದನೆ..

Promotion

ಮೈಸೂರು,ಜೂನ್,18,2022(www.justkannada.in):  ನಾಲ್ಕು ಹೊಸ ಪ್ರಥಮ ದರ್ಜೆ ಕಾಲೇಜು ಆರಂಭಿಸಲು ಮೈಸೂರು ವಿಶ್ವವಿದ್ಯಾನಿಲಯ ಶಿಕ್ಷಣ ಮಂಡಳಿ ವಿಶೇಷ ಸಭೆ ಅನುಮೋದನೆ ನೀಡಿದೆ.

ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತ್‌ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೈಸೂರಿನ ಎಂಐಟಿ ಪ್ರಥಮ ದರ್ಜೆ ಕಾಲೇಜು, ವಿಕ್ಟರಿ ಪ್ರಥಮ ದರ್ಜೆ ಕಾಲೇಜು, ನೃಪತುಂಗ ಗಣಕ ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜು, ವಿದ್ಯಾಸೌಧ ಅಕಾಡೆಮಿ ಆಫ್ ಮ್ಯಾನೇಜ್‌ ಮೆಂಟ್ ಸೈನ್ಸ್ ಸೇರಿದಂತೆ ಒಟ್ಟು 4 ಹೊಸ ಕಾಲೇಜುಗಳ ಆರಂಭಿಸಲು ಅನಮೋದನೆ ನೀಡುವ ಪ್ರಸ್ತಾವವನ್ನು ಮಾನ್ಯ ಮಾಡಿ ಸರಕಾರಕ್ಕೆ ಸಲ್ಲಿಸಲಾಯಿತು.

ಇದಲ್ಲದೇ 173 ಸಂಯೋಜಿತ ಪ್ರಥಮ ದರ್ಜೆ ಕಾಲೇಜುಗಳ ಸಂಯೋಜನೆ ಮುಂದುವರಿಸಲು, ಆನ್‌ ಲೈನ್ ಸಂಯೋಜನೆ ನೀಡಿರುವ 37 ಬಿಇಡಿ  ಕಾಲೇಜುಗಳಿಗೆ ಸಂಯೋಜನೆ ಮುಂದುವರಿಸುವಂತೆ ಶಿಫಾರಸು ಮಾಡಲಾಯಿತು. ಶಾಸಕ ಎಲ್. ನಾಗೇಂದ್ರ ಮಾತನಾಡಿ, ವಿಶ್ವವಿದ್ಯಾನಿಲಯದ ಪರಿಶೀಲನಾ ಸಮಿತಿ ಕಾಲೇಜಿಗೆ ಭೇಟಿ ನೀಡಿದ ವೇಳೆ ಹಿಂದಿನ ವರ್ಷ ನೀಡಲಾಗಿದ್ದ ಷರತ್ತುಗಳನ್ನು ಕಾಲೇಜಿನವರು ಪೂರ್ಣಗೊಳಿದ್ದಾರೆಯೇ ಎಂದು ಪರಿಶೀಲಿಸಿ ಕ್ರಮವಹಿಸಬೇಕೆಂದು ಸೂಚಿಸಿದರು. ಶಾಸಕ ನಿರಂಜನ್ ಮಾತನಾಡಿ, ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಕಾಲೇಜಿನಲ್ಲಿ ಬಿಕಾಂ, ಎಂಕಾಂ ಕಾಲೇಜು ಆರಂಭಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ಬೆಳಗೊಳದ ಡಿ.ಪೌಲ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಂ.ಕಾಂ ಹಾಗೂ ಮೈಸೂರಿನ ಟೆರಿಷಿಯನ್ ಕಾಲೇಜಿನಲ್ಲಿ ಎಂಎಸ್ಸಿ ಸಸ್ಯಶಾಸ್ತ್ರ ಕೋರ್ಸ್ ಆರಂಭಿಸಲು ಹಾಗೂ ಮೈಸೂರಿನ ಆರು ಕಾಲೇಜುಗಳಲ್ಲಿ ಬಿಸಿಎ, ಬಿಬಿಎ, ಬಿಕಾಂ ಕೋರ್ಸ್‌ಗಳ ಹಾಲಿ ಪ್ರವೇಶಾತಿ ಸಂಖ್ಯೆಯನ್ನು ಹೆಚ್ಚಿಸಲು ಸಭೆಯಲ್ಲಿ ಅನುಮೋದನೆ ದೊರೆಯಿತು.

ಕುಲಸಚಿವ ಆರ್. ಶಿವಪ್ಪ, ಪರಿಕ್ಷಾಂಗ ಕುಲಸಚಿವ ಎ.ಪಿ. ಜ್ಞಾನಪ್ರಕಾಶ್, ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಲೋಕನಾಥ್, ಹಣಕಾಸು ಅಧಿಕಾರಿ ಡಾ.ಸಂಗೀತ ಗಜಾನನ ಭಟ್ ಹಾಗೂ ಇತರರು ಇದ್ದರು.

Key words: Mysore university-Approved -start -four -new -first-grade- colleges.