ಮೈಸೂರು: ಡ್ರೈವಿಂಗ್ ಸ್ಕೂಲ್ ಹೊಗೆ ಪರೀಕ್ಷಾ ಕೇಂದ್ರದಲ್ಲಿ ಕೇಂದ್ರದ ಮೊಹರು ಮುದ್ರಿಸದೆ ಕಾಟಾಚಾರಕ್ಕೆ ವಾಹನ ತಪಾಸಣೆ…

ಮೈಸೂರು,ಸೆ,14,2019(www.justkannada.in): ಮೈಸೂರಿನ ಮಾಡರ್ನ್ ಡ್ರೈವಿಂಗ್ ಸ್ಕೂಲ್ ಹೊಗೆ ಪರೀಕ್ಷಾ ಕೇಂದ್ರದಲ್ಲಿ ಕಾಟಾಚಾರಕ್ಕೆ ವಾಹನಗಳ ತಪಾಸಣೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಮೋಟಾರು ವಾಹನ ಕಾಯ್ದೆಯ ತಿದ್ದುಪಡಿ ಅನ್ವಯ ವಾಹನ ಸವಾರ/ಚಾಲಕರು ಮಾಲಿನ್ಯ ತಪಾಸಣಾ ಪತ್ರ ಹೊಂದಿರದಿದ್ದರೆ ರೂ.1000 ದಂಡ ವಿಧಿಸಲಾಗುವುದು.ಇದು ಪುನರಾವರ್ತನೆಯಾದರೆ ರೂ. 2000 ದಂಡ ತೆರಬೇಕಾಗುವುದು. ಹಾಗಾಗಿ ನಗರದಾಧ್ಯಂತ ಸಂಚರಿಸುವ ಲಕ್ಷಾಂತರ ದ್ವಿಚಕ್ರ ವಾಹನ ಸವಾರರು ಬೆರಳೆಣಿಕೆಯಷ್ಟಿರುವ ಮಾಲಿನ್ಯ ತಪಾಸಣಾ ಕೇಂದ್ರದ ಬಳಿ ಕೆಲಸ ಕಾರ್ಯಬಿಟ್ಟು ಸರದಿಯಲ್ಲಿ ನಿಂತಿರುವುದನ್ನು ನೋಡುತ್ತಿದ್ದರೆ ಕರುಳು ಕಿತ್ತು ಬರುತ್ತದೆ. ಕಾರಣ ಇವರೆಲ್ಲರೂ ನಿಯಮಗಳನ್ನು ಪಾಲಿಸುವ ಜವಾಬ್ದಾರಿಯುತ ನಾಗರಿಕರು.

ದಿನಾಂಕ 13.09.2019 ರ ಶುಕ್ರವಾರ ಬೆಳಿಗ್ಗೆ 10:00 ಗಂಟೆಗೆ ಮೈಸೂರಿನ ವಾಣೀವಿಲಾಸ ರಸ್ತೆಯಲ್ಲಿರುವ ಮಾಡರ್ನ್ ಡ್ರೈವಿಂಗ್ ಸ್ಕೂಲ್ ಎಂಬ ಹೊಗೆ ಪರೀಕ್ಷಾ ಕೇಂದ್ರದ ಬಳಿ ದ್ವಿಚಕ್ರವಾಹನಗಳು ಸಾಲಾಗಿ ನಿಂತಿದ್ದವು. ಕಾಟಾಚಾರಕ್ಕೆಂದು ಕೆಲವು ವಾಹನಗಳನ್ನು ಮಾತ್ರ ತಪಾಸಣೆ ಮಾಡಿ ಮತ್ತೆ ಕೆಲವು ವಾಹನಗಳ ತಪಾಸಣೆಯನ್ನೇ ಮಾಡದೆ ಫೋಟೋ ಕ್ಲಿಕ್ಕಿಸಿ  60 ರೂಪಾಯಿ ಪಡೆದು ಹೊಗೆ ಪರೀಕ್ಷೆಯ ಸರ್ಟಿಫಿಕೇಟ್ ನೀಡಿ ಕಳಿಸುತ್ತಿದ್ದ ದೃಶ್ಯ ಕಂಡು ಬಂತು.

ಅಂತಹ ಸರ್ಟಿಫಿಕೇಟಿಗೆ ಭಾರತ ಸರ್ಕಾರದ ಹಾಲೋಗ್ರಾಂ ಸ್ಟಿಕ್ಕರ್ ಅಂಟಿಸುವುದರ ಜೊತೆಗೆ ಹೊಗೆ ಪರೀಕ್ಷಾ ಕೇಂದ್ರದ ಮೊಹರನ್ನು ಮುದ್ರಿಸದಿದ್ದರೆ ಆ ಸರ್ಟಿಫಿಕೇಟಿಗೆ ಮಾನ್ಯತೆ ನೀಡಲಾಗುವುದಿಲ್ಲವೆಂದು ಅದರಲ್ಲಿಯೇ ನಮೂದಾಗಿದೆ. ಆದರೆ ಮಾಡರ್ನ್ ಡ್ರೈವಿಂಗ್ ಸ್ಕೂಲ್ ಹೊಗೆ ಪರೀಕ್ಷಾ ಕೇಂದ್ರದಲ್ಲಿ ತಪಾಸಣೆ ಮಾಡಿಸಿದವರಿಗೆ ನೀಡಲಾದ ಸರ್ಟಿಫಿಕೇಟಿಗೆ ಹಾಲೋಗ್ರಾಂ ಸ್ಟಿಕ್ಕರ್ ಮತ್ತು ಕೇಂದ್ರದ ಮೊಹರನ್ನು ಮುದ್ರಿಸಿಲ್ಲ .ಹಾಗಾಗಿ ಅಂತಹ ಸರ್ಟಿಫಿಕೇಟಿಗೆ ಮಾನ್ಯತೆಯಿಲ್ಲ.

ಈ ಹೊಗೆ ಪರೀಕ್ಷೆ ಕೇಂದ್ರದಲ್ಲಿ ತಪಾಸಣೆ ಮಾಡಿಸಿರುವ ವಾಹನ ಸವಾರರು ಹಾಗೂ ಚಾಲಕರು ಹಾಗೂ ಇನ್ನು ಮುಂದೆ ತಪಾಸಣೆ ಮಾಡಿಸುವವರು ಈ ವಿಚಾರವಾಗಿ ಎಚ್ಚರಿಕೆ ವಹಿಸಿ ತಾವು ಪಡೆದ ಸರ್ಟಿಫಿಕೇಟಿಗೆ ಹಾಲೋಗ್ರಾಂ ಸ್ಟಿಕ್ಕರ್ ಹಾಗೂ ಕೇಂದ್ರದ ಮೊಹರನ್ನು ಹಾಕಿಕೊಡುವಂತೆ ಒತ್ತಾಯಿಸುವುದರ ಮೂಲಕ ಎಚ್ಚರಿಕೆ ವಹಿಸಬೇಕಾಗಿದೆ.

 

-ಪಿ.ಜೆ.ರಾಘವೇಂದ್ರ ನ್ಯಾಯವಾದಿ ಮೈಸೂರು…

Key words: mysore-Smoke- Testing Center- Modern -Driving –School-  certificate – not valid.