ಹಲವು ವರ್ಷಗಳಿಂದ ಕಗ್ಗತಲಿನಲ್ಲಿದ್ದ ಮೈಸೂರು ನಗರದ ವರ್ತುಲ ರಸ್ತೆಗೆ ಇಂದಿನಿಂದ ಬೆಳಕು: ಸಭೆಯಲ್ಲಿ ನಿರ್ಧಾರ.

ಮೈಸೂರು,ಡಿಸೆಂಬರ್,1,2022(www.justkannada.in): ಹಲವಾರು ವರ್ಷಗಳಿಂದ ಕಗ್ಗತಲಿನಲ್ಲಿದ್ದ ಮೈಸೂರು ನಗರದ ವರ್ತುಲ ರಸ್ತೆಯಲ್ಲಿ ವಿದ್ಯುತ್ ದೀಪಗಳು ಬೆಳಗಲಿವೆ.

ಮಹಾನಗರಪಾಲಿಕೆ ಜಯಚಾಮರಾಜೇಂದ್ರ ಒಡೆಯರ್ ಸಭಾಂಗಣದಲ್ಲಿ ಸಂಸದ ಪ್ರತಾಪ್ ಸಿಂಹ ನೇತೃತ್ವದಲ್ಲಿ  ನಡೆದ ಸಭೆಯಲ್ಲಿ ಈ ಸಂಬಂಧ ನಿರ್ಧಾರ ಕೈಗೊಳ್ಳಲಾಗಿದೆ.

ಸಭೆ ಬಳಿಕ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಕಳೆದ ಹಲವಾರು ವರ್ಷಗಳಿಂದ ವರ್ತುಲ ರಸ್ತೆಯಲ್ಲಿ ವಿದ್ಯುತ್ ದೀಪಗಳು ಇರಲಿಲ್ಲ. ಇದರಿಂದ ರಾತ್ರಿ ವೇಳೆ ಸಂಚರಿಸುವ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು. ಈ ಹಿಂದೆ ವಿದ್ಯುತ್ ದೀಪದ ಬಿಲ್ ಕೂಡ 1.19 ಕೋಟಿ ಬಾಕಿ ಇತ್ತು. ಇದರಿಂದ ಕೂಡ ಬೀದಿ ದೀಪಗಳನ್ನು ಬೆಳಗಿಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿಂದ ಮುಡಾ ಹಾಗೂ ನಗರಪಾಲಿಕೆ ಅಧಿಕಾರಿಗಳ ಸತತ ಸಭೆಗಳನ್ನು ನಡೆಸಿ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗಿತ್ತು. ಅದರಂತೆ ಚೆಸ್ಕಾಂ ಗೆ ಬಾಕಿ ಪಾವತಿಸಬೇಕಿದ್ದ 1.19 ಕೋಟಿ ರೂ.ಗಳನ್ನು ಮುಡಾ ವತಿಯಿಂದ ನೀಡಲಾಗಿದೆ.  ಬೀದಿ ದೀಪಗಳ ದುರಸ್ತಿಗಾಗಿ 12 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುತ್ತಿದ್ದು, ಈ ಹಣವನ್ನು ಮುಡಾ ಭರಿಸಲಿದೆ ಎಂದರು.

ಬೀದಿ ದೀಪಗಳ ನಿರ್ವಹಣೆಗೆ ಒಂದು ವರ್ಷದವರೆಗೆ ಗುತ್ತಿಗೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ವಿದ್ಯುತ್ ಬಿಲ್ ಪಾವತಿ ಹಾಗೂ ನಿರ್ವಹಣೆ ಯನ್ನು ನಗರಪಾಲಿಕೆ ಮಾಡಲಿದೆ ಎಂದರು.

ನಗರಪಾಲಿಕೆ ಆಯುಕ್ತ ಲಕ್ಷ್ಮಿಕಾಂತ್ ರೆಡ್ಡಿ ಮಾತನಾಡಿ,  ವರ್ತುಲ ರಸ್ತೆಯು 45 ಕಿ.ಮೀ. ಸುತ್ತಳತೆ ಹೊಂದಿದ್ದು, ಎರಡು ಬದಿಯಲ್ಲಿ ವಿದ್ಯುತ್ ದೀಪ ಅಳವಡಿಸುವ ಕಾರಣ 86 ಕಿ.ಮೀ. ಕೇಬಲ್ ಅಳವಡಿಸಲಾಗಿದೆ. ಮೊದಲ ಹಂತದಲ್ಲಿ ಮಣಿಪಾಲ್ ಆಸ್ಪತ್ರೆ ವೃತ್ತದಿಂದ ನಂಜನಗೂಡು ಜಂಕ್ಷನ್ ವರೆಗೆ ಇಂದಿನಿಂದ ವಿದ್ಯುತ್ ದೀಪಗಳು ಬೆಳಗಲಿವೆ. ವರ್ತುಲ ರಸ್ತೆಯ ಸುತ್ತಾ ಒಟ್ಟು 4550 ಎಲ್ ಇಡಿ ಬಲ್ಬ್ ಗಳನ್ನು ಅಳವಡಿಸಬೇಕಾಗಿದ್ದು, ಈಗಾಗಲೇ 3550 ಬಲ್ಬ್ ಗಳನ್ನು ಅಳವಡಿಸಲಾಗಿದೆ.  ಮುಂದಿನ 10 ದಿನಗಳಲ್ಲಿ ಬಲ್ಬ್ ಹಾಗೂ ಕೇಬಲ್ ಅಳವಡಿಕೆ ಕಾರ್ಯ ಪೂರ್ಣಗೊಳ್ಳಲಿದೆ. ಇದರಲ್ಲಿ ವಿವಿಧ ಸ್ಥಳಗಳಲ್ಲಿ 20 ಹೈ ಮಾಸ್ಕ್ ದೀಪಗಳನ್ನು  ಅಳವಡಿಸಲಾಗಿದೆ.  80 ವಿದ್ಯುತ್ ಕಂಬಗಳನ್ನು ಬದಲಿಸಲಾಗಿದೆ ಎಂದು ಮಾಹಿತಿ ನೀಡಿದರು.

Key words:  Mysore  ring road-power- decision – meeting.