ವರುಣಾ ಸೆಸ್ಕ್ ಅಧಿಕಾರಿ ವಿರುದ್ಧ ಕ್ರಮಕ್ಕೆ ಪೊಲೀಸ್ ಬಡಾವಣೆ ನಿವಾಸಿಗಳ ಆಗ್ರಹ.

Promotion

ಮೈಸೂರು, ಜುಲೈ,8,2021(www.justkannada.in):  ಪೊಲೀಸ್ ಬಡಾವಣೆ ಮೂರನೇ ಹಂತದಲ್ಲಿ ವಿದ್ಯುತ್ ಸಮಸ್ಯೆ ನಿವಾರಿಸುವಲ್ಲಿ ವಿಫಲವಾಗಿರುವ ಹಾಗೂ ಕರ್ತವ್ಯದಲ್ಲಿ ಅಸಡ್ಡೆ ತೋರುತ್ತಿರುವ ವರುಣಾ ವಿಭಾಗದ ಸಹಾಯಕ ಇಂಜಿನಿಯರ್ ವಿರುದ್ಧ ಕ್ರಮಕ್ಕೆ ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.

ಈ ಕುರಿತು ಗುರುವಾರ ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಕಾರ್ಯಪಾಲಕ ಅಭಿಯಂತರರಿಗೆ ಖುದ್ದು ಭೇಟಿ ಮಾಡಿ ಮನವಿ ಸಲ್ಲಿಸಿರುವ ನಿವಾಸಿಗಳು, ತಮ್ಮ ಅಧೀನದ ಸಿಬ್ಬಂದಿ ತೋರುತ್ತಿರುವ ಈ ನಡವಳಿಕೆಯಿಂದ ಪೊಲೀಸ್ ಬಡಾವಣೆಯ ೩ನೇ ಹಂತದ ನಿವಾಸಿಗಳು ನಿತ್ಯ ಸಂಕಷ್ಟ ಅನುಭವಿಸುವಂತಾಗಿದೆ. ಆದಕಾರಣ, ಈ ಬೇಜವಾಬ್ದಾರಿ ಅಧಿಕಾರಿ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ತೆಗದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಪೊಲೀಸ್ ಬಡಾವಣೆಯ ಮೂರನೇ ಹಂತದ ವಿದ್ಯುತ್ ಸರಬರಾಜಿನ ಮೇಲುಸ್ತುವಾರಿ ವರುಣಾ ವ್ಯಾಪ್ತಿಗೆ ಬರಲಿದ್ದು, ಇಲ್ಲಿನ ಸಿಬ್ಬಂದಿ ವರ್ಗದ ಅಸಡ್ಡೆ ಹಾಗೂ ಬೇಜವಾಬ್ದಾರಿತನಕ್ಕೆ ಮಿತಿಯೇ ಇಲ್ಲವಾಗಿದೆ. ಈ ಬಗ್ಗೆ ಹಲವು ಬಾರಿ ಸೆಸ್ಕ್ ನ ಹಿರಿಯ ಅಧಿಕಾರಿಗಳ ಗಮನಕ್ಕೆ ಈ ವಿಚಾರ ತಂದಾಗ್ಯೂ ಕೂಡ ಈ ಕ್ಷಣದವರೆಗೆ ಸಮಸ್ಯೆ ಮತ್ತಷ್ಟು ಕಗ್ಗಂಟಾಗಿಯೇ ಉಳಿದಿದೆ.

ಕಳೆದ ನಾಲ್ಕು (ಜುಲೈ ೪, ೫, ೬ ಹಾಗೂ ೭ನೇ ತಾರೀಖು) ದಿನಗಳಿಂದ ಬಡಾವಣೆಗೆ ಸರಬರಾಜಾಗುತ್ತಿರುವ ವಿದ್ಯುತ್ ಸರಬರಾಜಿನಲ್ಲಿ ನಿರಂತರ ವ್ಯತ್ಯಯ ಉಂಟಾಗಿದ್ದು, ಎರಡು ರಾತ್ರಿ ಸಂಪೂರ್ಣವಾಗಿ ಹಾಗೂ ನಾಲ್ಕು ದಿನಗಳ ಕಾಲ ಹಗಲು ಹೊತ್ತು  ಭಾಗಶಃ ವಿದ್ಯುತ್ ಸರಬರಾಜು ಸ್ಥಗಿತಗೊಂಡು ಇಡೀ ಬಡಾವಣೆಯ ಸಾವಿರಾರು ಕುಟುಂಬಗಳು ಇದರಿಂದಾಗಿ ಪರಿತಪಿಸುವಂತಾಯಿತು. ಇದು ಇತ್ತೀಚಿನ ಸಮಸ್ಯೆ ಮಾತ್ರವಲ್ಲದೆ, ಪ್ರತಿನಿತ್ಯದ ಸಮಸ್ಯೆಯಾಗಿದ್ದು, ನಿತ್ಯ ಕನಿಷ್ಠ ನಾಲ್ಕಾರು ಬಾರಿ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಲಾಗುತ್ತಿದೆ.

ಈ ಬಗ್ಗೆ ವಿಚಾರಣೆ ಮಾಡುವ ಸಲುವಾಗಿ ಅಥವಾ ದೂರು ನೀಡುವ ಸಲುವಾಗಿ ವರುಣಾ ವಿಭಾಗದ ಸಹಾಯಕ ಇಂಜಿನಿಯರ್ ಅವರಿಗೆ ಕರೆ ಮಾಡಿದರೆ ಕರೆಯನ್ನು ಸ್ವೀಕರಿಸದಿರುವುದು ಒಂದೆಡೆಯದರೆ, ಒಂದೊಮ್ಮೆ ಕರೆ ಸ್ವೀಕರಿಸಿದರೂ ಉಡಾಫೆಯ, ಬೇಜವಾಬ್ದಾರಿತನದ ಉತ್ತರ ನೀಡುವ ಪ್ರವೃತ್ತಿ ತೋರುತ್ತಿದ್ದಾರೆ ಎಂದು ದೂರಿದ್ದಾರೆ.
ಬಡಾವಣೆಗೆ ಸರಬರಾಜಾಗುವ ವಿದ್ಯುತ್ ಮಾರ್ಗವನ್ನು ಗ್ರಾಮಾಂತರ ವಿಭಾಗದಿಂದ(ವರುಣಾ ಫೀಡರ್) ತೆಗೆದು ನಗರ (ಸಿದ್ಧಾರ್ಥನಗರ ಫೀಡರ್) ವಿಭಾಗಕ್ಕೆ ತಕ್ಷಣ ವರ್ಗಾಯಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ.

ಮನವಿ ಸಲ್ಲಿಸಿದ ನಿಯೋಗದಲ್ಲಿ ರವಿಕುಮಾರ್, ಚಂದನ್, ಪ್ರಕಾಶ್, ಸಿದ್ದೇಶ್, ಶಿವರಾಂ, ರಾಜಶೇಖರ್, ಲತಾ, ರವಿಕಿರಣ್, ಲಾವಣ್ಯ, ಕುಮಾರ್, ಸೋಮಶೇಖರ್, ಅಸ್ಗರ್ ಖಾನ್, ಹೀನಾ ಕೌಸರ್, ಮೇಘನಾ, ಜೀವನ್‌ಕುಮಾರ್, ಗ್ರೇಸ್ ಪ್ರಮಿಳಾ, ರೂಪಾ ಸೇರಿದಂತೆ ಹಲವರು ಇದ್ದರು.

Key words: mysore-Residents – demand –action- against –Varuna- cesk- officer