ಮನೆಯಲ್ಲೇ ಮಕ್ಕಳಿಗೆ ಜೀವನ ಮೌಲ್ಯಗಳ ಬೆಳವಣಿಗೆಗೆ ಸಹಕಾರಿಯಾಗುವ ವಾತಾವರಣ ಕಲ್ಪಿಸಿ – ರೈನ್ ಬೋ ಶಾಲಾ ಕಾರ್ಯಕ್ರಮದಲ್ಲಿ ಇನ್ಸ್ ಪೆಕ್ಟರ್, ಗಂಗಾಧರ್ ಕಿವಿಮಾತು

Promotion

ಮೈಸೂರು,ಡಿ,12,2019(www.justkannada.in): “ಮಕ್ಕಳ ಕಲಿಕೆ ಮನೆಯಿಂದಲೇ ಆಗಬೇಕು, ತಂದೆ-ತಾಯಂದಿರು ಮಕ್ಕಳಿಗೆ ಮನೆಯಲ್ಲಿ  ಜೀವನ ಮೌಲ್ಯಗಳಾದ ಪರಸ್ಪರ ಪ್ರೀತಿ,ವಿಶ್ವಾಸ, ಸಹಕಾರ,ಭಾಂದವ್ಯವನ್ನು ಬೆಳೆಸುವಂತಹ ವಾತಾವರಣವನ್ನು ಕಲ್ಪಿಸಿ ಕೊಡಬೇಕು ಎಂದು ಇನ್ಸ್ ಪೆಕ್ಟರ್  ಗಂಗಾಧರ್ ಎನ್. ಎಂ ಕಿವಿಮಾತು ಹೇಳಿದರು.

ಮೈಸೂರಿನ ರೈನ್ ಬೋ ಶಾಲೆಯಲ್ಲಿ  ರೈನ್ ಬೋ ಸ್ಪೆಕ್ಟ್ರಮ್-2019  -ಒನ್ ಸ್ಟೇಟ್ ಮೆನಿ ವರ್ಲ್ಡ್ ಎಂಬ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದ ಇನ್ಸ್ ಪೆಕ್ಟರ್, ಗಂಗಾಧರ್,ಎನ್. ಎಂ, ತಂದೆ-ತಾಯಂದಿರು ಮಕ್ಕಳಿಗೆ ಮನೆಯಲ್ಲಿ  ಜೀವನ ಮೌಲ್ಯಗಳನ್ನ ಬೆಳೆಸುವಂತಹ ವಾತಾವರಣವನ್ನು ಕಲ್ಪಿಸಿ ಕೊಡಬೇಕು. ಮುಂದೆ ಶಾಲೆಯಲ್ಲಿನ ಕಲಿಕೆ ಆ ಮಗುವಿನ ಮುಂದಿನ ಭವಿಷ್ಯವನ್ನು ರೂಪಿಸುವಲ್ಲಿ ಒಂದು ಉತ್ತಮ ನೆಲೆಗಟ್ಟಾಗಿ ಆ ಮಗು ಸಮಾಜದಲ್ಲಿ ಸತ್ಪ್ರಜೆಯಾಗಿ ಬೆಳೆಯಲು ಸಾಧ್ಯ ಹೇಳಿದರು.

ಬಳಿಕ ಮಾತನಾಡಿದ ಶಾಲೆಯ ಪ್ರಾಂಶುಪಾಲರಾದ  ಗೀತಾ, ಹೆಚ್ “ ಮಕ್ಕಳೇ ಮಾಡಿದ ಈ ಪ್ರಾತ್ಯಕ್ಷಿಕೆಗಳು ಮಕ್ಕಳಲ್ಲಿ ‘ಮಾಡಿಕಲಿ ನೋಡಿತಿಳಿ’ ಎಂಬ ಮನೋಭಾವವನ್ನು ಬೆಳೆಸುವುದು. ಜೊತೆಗೆ ಒಂದು ಗುಂಪಾಗಿ ಕೆಲಸ ಮಾಡುವಾಗ ಮಕ್ಕಳು ಸಹಕಾರ ಮತ್ತು ಹೊಂದಾಣಿಕೆ ಯಿಂದ ಬಾಳುವುದನ್ನು ಕಲಿಯುತ್ತಾರೆ, ಅವರಿಗೆ ಕೆಲಸದ ಮತ್ತು ಸಮಯದ ಮಹತ್ವ ಅರಿವಾಗುತ್ತದೆ. ಈ ಅರಿವು ಅವರಲ್ಲಿ ಕೊನೆತನಕ ಉಳಿಯುತ್ತದೆ” ಎಂದು ಹೇಳಿ ಕಾರ್ಯಕ್ರಮದ ಧ್ಯೇಯೋದ್ದೇಶಗಳನ್ನು ವಿವರಿಸಿದರು.

ಮಕ್ಕಳಲ್ಲಿ ಕನ್ನಡ ಭಾಷಾ ಬೆಳವಣಿಗೆಯಾಗಬೇಕಾದರೆ, ಚಿಕ್ಕಂದಿನಲ್ಲಿಯೇ ಪತ್ರಿಕೆಗಳನ್ನ ಓದುವ ಹವ್ಯಾಸವನ್ನು ಬೆಳೆಸಬೇಕು.” ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮತ್ತೊಬ್ಬ ಅತಿಥಿಗಳಾದ ದಿನ ಪತ್ರಿಕೆಯೊಂದರ ಮುಖ್ಯ ಉಪ ಸಂಪಾದಕರು ಪೋಷಕರಿಗೆ ಮತ್ತು ಶಿಕ್ಷಕರಿಗೆ ಕಿವಿಮಾತು ಹೇಳಿದರು.

ಮಕ್ಕಳು ಕರ್ನಾಟಕದ ವಿವಿಧ ಬಗೆಯ ಊಟೋಪಚಾರ, ಉಡುಗೆ-ತೊಡುಗೆ,ಹಬ್ಬ-ಹರಿದಿನಗಳು, ಶಿಲ್ಪಕಲೆ, ಜಾನಪದ ಕಲಾವೈಭವ, ಕನ್ನಡದ ಜಾನಪೀಠ ಪ್ರಶಸ್ತಿಗೆ ಭಾಜನರಾದ ಕವಿಗಳು ಮತ್ತು ಅವರ ಕೊಡುಗೆ, ಅನುಭವ ಮಂಟಪ, ಕವಿಶೈಲ, ಶಾಸನಗಳು,ಇಂಗ್ಲಿಷ್ ಸಾಹಿತ್ಯಕ್ಕೆ ಕನ್ನಡ ಕವಿಗಳ ಕೊಡುಗೆ,ಇಂಗ್ಲಿಷ್ ವ್ಯಾಕರಣ, ಕನ್ನಡದ ಕ್ರಿಕೆಟ್ ಕಲಿಗಳು, , ಗಣಿತಕ್ಕೆ ಕರ್ನಾಟಕದವರ ಕೊಡುಗೆ, ವಿಜ್ಞಾನಕ್ಕೆ ಕನ್ನಡಿಗರ ಕೊಡುಗೆ,ದಾರೋಜಿ ಕರಡಿ ಸಂಗ್ರಹಾಲಯ, ಗಣಿಗಾರಿಕೆ,ಮೈಸೂರು ಪ್ರಾಣಿ ಸಂಗ್ರಹಾಲಯ, ಔಷದೀಯ ಗಿಡ ಮೂಲಿಕೆಗಳು ಇತ್ಯಾದಿಗಳ ಬಗ್ಗೆ ಮಕ್ಕಳೇ ಸ್ವತಃ ಮಾದರಿಗಳನ್ನು ತಯಾರಿಸಿ ವಿವರಿಸುತ್ತಿದ್ದುದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷರಾದ  ಕಾರ್ಯಪ್ಪ ಸಿ.ಇ. ಒ. ಸುಜನಿ ಕಾರ್ಯಪ್ಪ, ಸಂಪನ್ಮೂಲವ್ಯಕ್ತಿಯಾಗಿ ಮಕ್ಕಳಿಗೆ ಮಾರ್ಗದರ್ಶನ ನೀಡಿದ ವಿಶ್ರಾಂತ ವಿಜ್ಞಾನ ಶಿಕ್ಷಕ  ಶಂಕರ್, ಪ್ರಾಂಶುಪಾಲರಾದ ಗೀತಾ ಹೆಚ್, ಉಪ ಪ್ರಾಂಶುಪಾಲರಾದ ಆಂಟೋನಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ  ಪೋಷಕರ ಆಗಮನ ಮಕ್ಕಳ ಉತ್ಸಾಹ ಗರಿಗೆದರುವಂತೆ ಮಾಡಿ, ಕಾರ್ಯಕ್ರಮದ ಮೆರುಗನ್ನು ಇಮ್ಮಡಿಗೊಳಿಸಿತು.

Key words: mysore-Rain Bow Spectrum – One State -Many World -Rain Bow School-Mysore