ಕಬ್ಬು ಎಫ್ ಆರ್ ಪಿ ದರ ವಿರೋಧಿಸಿ ಡಿಸಿ ಕಚೇರಿಗೆ ಮುತ್ತಿಗೆ ಹಾಕಿ ರೈತರಿಂದ ಪ್ರತಿಭಟನೆ.

Promotion

ಮೈಸೂರು,ಸೆಪ್ಟಂಬರ್,6,2021(www.justkannada.in): ಕಬ್ಬು ಎಫ್ ಆರ್ ಪಿ ದರ ವಿರೋಧಿಸಿ ಮೈಸೂರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ರೈತರು ಪ್ರತಿಭಟನೆ ನಡೆಸಿದರು.

ಕೇಂದ್ರ ಸರ್ಕಾರ ನಿಗದಿ ಮಾಡಿರುವ ಕಬ್ಬಿನ ಎಫ್ ಆರ್ ಪಿ ದರ ಏರಿಕೆ ಕೇವಲ ಐವತ್ತು ರೂಪಾಯಿ. ಹೀಗಾಗಿ  ಕೂಡಲೇ ಪುನರ್ ಪರಿಶೀಲಿಸಬೇಕು ಬಣ್ಣಾರಿ ಕಾರ್ಖಾನೆಯಿಂದ ಕಬ್ಬಿನ ಹಣದ ಜೊತೆಗೆ ವಿಳಂಬದ ಅವಧಿಗೆ ಬಡ್ಡಿ ಕೊಡಿಸಬೇಕು. ಬ್ಯಾಂಕ್ ಅಧಿಕಾರಿಗಳ ಕಿರುಕುಳ ತಪ್ಪಿಸಬೇಕು ಎಂದು ಒತ್ತಾಯಿಸಿ ರಾಜ್ಯ ಕಬ್ಬುಬೆಳೆಗಾರರ ಸಂಘದ ನೂರಾರು ರೈತರು ಗನ್ ಹೌಸ ವೃತ್ತದಿಂದ ಮೋಟಾರ್ ಬೈಕ್ ಮೂಲಕ ರ್ಯಾಲಿಯಲ್ಲಿ  ತೆರಳಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಬ್ಬುಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್,  ಕೇಂದ್ರ ಸರ್ಕಾರ ವರ್ಷಕ್ಕೆ ನಾಲ್ಕೈದು ಬಾರಿ ಡೀಸೆಲ್ ಗ್ಯಾಸ್ ರಸಗೊಬ್ಬರ ಬೆಲೆ ಏರಿಸುತ್ತದೆ, ಆದರೆ ರೈತರ ಕಬ್ಬಿಗೆ ಮೂರು ವರ್ಷಕ್ಕೊಮ್ಮೆ ಬಿಕ್ಷಾ ರೂಪದ ಬೆಲೆ ನಿಗದಿ ಮಾಡುತ್ತದೆ. ಸಕ್ಕರೆ ಕಂಪನಿಗಳ ಒತ್ತಡದಿಂದ ಬೆಲೆ ನಿಗದಿಯಲ್ಲಿ ರೈತರಿಗೆ ಮೋಸವಾಗುತ್ತಿದೆ ಕಬ್ಬು ಬೆಳೆದ ರೈತ ತೂಕದಲ್ಲಿ ಮೋಸ, ಇಳುವರಿಯಲ್ಲಿ ಮೋಸ, ಕಬ್ಬು ದರದಲ್ಲಿ ಮೋಸ ಅನುಭವಿಸುವಂತಾಗಿದೆ. ಕಾನೂನುಗಳನ್ನು ಯಾವುದೇ ಸಕ್ಕರೆ ಕಾರ್ಖಾನೆಗಳು ಪಾಲನೆ ಮಾಡುತ್ತಿಲ್ಲ ಇದು ಕೂಡ ರೈತರಿಗೆ ಮತ್ತಷ್ಟು ಸಂಕಷ್ಟವನ್ನು ಉಂಟು ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬಣ್ಣಾರಿ ಕಾರ್ಖಾನೆಯವರು ಕಬ್ಬಿನ ಹಣ ಎರಡು  ತಿಂಗಳಿಂದಲೂ ನೀಡಿಲ್ಲ ಆದ್ದರಿಂದ ಬಡ್ಡಿ ಸೇರಿಸಿ ಕೊಡಿಸಬೇಕು. ಕಬ್ಬಿನ ದರವನ್ನು ಪುನರ್ ಪರಿಶೀಲಿಸಿ ಕೃಷಿ ಇಲಾಖೆ ನೀಡಿರುವ ವರದಿಯಂತೆ 3200 ಹಾಗೂ ಲಾಭ ಸೇರಿಸಿ ನಿಗದಿ ಮಾಡಬೇಕು ಕೇಂದ್ರ ಸರ್ಕಾರ ಪದೇಪದೇ ರೈತರನ್ನು ವಂಚಿಸುತ್ತಿದೆ. 2022ಕ್ಕೆ ರೈತರ ಆದಾಯ ದ್ವಿಗುಣ ಎನ್ನುತ್ತಲೇ ರೈತರ ಕಣ್ಣಿಗೆ  ಮಣೆರಚುತ್ತಿದೆ.  ರೈತನು ಜಾಗೃತರಾಗಿ ಹೋರಾಟಕ್ಕೆ ನಿಲ್ಲಬೇಕು. ಕಬ್ಬಿನ ಬೆಲೆ ಪುನರ್ ಪರಿಶೀಲನೆ ನಡೆಸಿದ್ದರೆ ಮುಂದಿನ ದಿನಗಳಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಸಿದ್ಧರಾಗಬೇಕು,    ಕೃಷಿ ವಿಶ್ವವಿದ್ಯಾನಿಲಯ ನೀಡುವ ಕಬ್ಬು ಉತ್ಪಾದನೆ ವೆಚ್ಚವೇ ಈಗಿನ  ಎಫ್ ಆರ್ ಪಿ  ಬೆಲೆಗಿಂತ ಹೆಚ್ಚು ಇದೆ, ರೈತರು ಸಾಲಸೋಲ ಮಾಡಿ ಕಬ್ಬು ಬೆಳೆದು ನ್ಯಾಯಯುತ ಬೆಲೆ ಇಲ್ಲದೆ ಮತ್ತಷ್ಟು ಸಾಲಗಾರರಾಗುತ್ತಿದ್ದಾರೆ,  ರೈತರ ಕಬ್ಬಿನ ಬೆಲೆಯನ್ನು ಎರಡು ಮೂರು ವರ್ಷಗಳಿಗೆ ಒಮ್ಮೆ ಯಾವುದೇ ಮಾನದಂಡವಿಲ್ಲದೆ ಏರಿಸಲಾಗುತ್ತಿದೆ.  ಇದು  ರೈತ ವಿರೋಧಿ ನೀತಿಯಾಗಿದೆ ಕೂಡಲೇ  ಪುನರ್ ಪರಿಶೀಲನೆ ನಡೆಸಿ ಟನ್ ಕಬ್ಬಿಗೆ ಕನಿಷ್ಠ 3200 ನಿಗದಿಪಡಿಸಬೇಕು  ಎಂದು ಕುರುಬೂರು ಶಾಂತಕುಮಾರ್ ಆಗ್ರಹಿಸಿದರು.

ಬಣ್ಣಾರಿ ಸಕ್ಕರೆ ಕಾರ್ಖಾನೆ ಸಕ್ಕರೆ ನಿಯಂತ್ರಣ ಕಾಯ್ದೆ ನಿಯಮಗಳನ್ನು ಉಲ್ಲಂಘನೆ ಮಾಡಿ ರೈತರಿಗೆ ಸಕಾಲಕ್ಕೆ ಕಬ್ಬು ಕಟಾವು ಮಾಡದೆ ಸರಬರಾಜು ಹಣ ನೀಡದೆ ವಿಳಂಬ ಮಾಡುತ್ತಿರುವುದರಿಂದ ಮತ್ತಷ್ಟು ನಷ್ಟ ಅನುಭವಿಸುವಂತಾಗಿದೆ, ಕಬ್ಬಿನಿಂದ ಬರುವ ಉಪಉತ್ಪನ್ನಗಳ ಲಾಭವನ್ನು ಸಹ ರೈತರಿಗೆ ಹಂಚಿಕೆ ಮಾಡುತ್ತಿಲ್ಲ,  ಕಳೆದ ನಾಲ್ಕೈದು ವರ್ಷಗಳಿಂದ ಸಕ್ಕರೆ ಇಳುವರಿ ಪ್ರಮಾಣವನ್ನು ಕಡಿಮೆ ತೋರಿಸುತ್ತಿದ್ದಾರೆ ಇದರಿಂದಲೂ ರೈತರು ನಷ್ಟ ಅನುಭವಿಸುವಂತಾಗಿದೆ.

ರಾಜ್ಯ ಸರ್ಕಾರ ತಕ್ಷಣವೇ ಕಬ್ಬು ಖರೀದಿ ಮಂಡಳಿ ಸಭೆ ಕರೆದು ಸಮಸ್ಯೆ ಬಗೆಹರಿಸಬೇಕು  ಕಬ್ಬಿನಿಂದ ಬರುವ ಎಥನಾಲ್ ಉತ್ಪಾದನೆಯ ಲಾಭಾಂಶವನ್ನು ರೈತರಿಗೆ  ಹಂಚಿಕೆ ಮಾಡಬೇಕು  ಎಂದು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಗೌತಮ್ ಬಗಾದಿ, ರೈತರ ಎಲ್ಲ ವಿಚಾರಗಳನ್ನು ಆಲಿಸಿ ಬಣ್ಣಾರಿ ಸಕ್ಕರೆ ಕಾರ್ಖಾನೆಯವರು ಈಗ ನಿಗದಿಯಾಗಿರುವ ಕಬ್ಬು ದರದಂತೆ ಟನ್ 2819 ನಾಳೆಯಿಂದಲೇ ರೈತರ ಖಾತೆಗೆ ಜಮಾ ಮಾಡುವುದಾಗಿ ತಿಳಿಸಿದ್ದಾರೆ.  ಕಬ್ಬಿನ  ಎಫ್ ಆರ್ ಪಿ ನಿಗದಿ ಮಾಡಲು ರಾಜ್ಯ ಸರ್ಕಾರಕ್ಕೆ ವರದಿ ನೀಡುವುದಾಗಿ ಹಾಗೂ ಬ್ಯಾಂಕ್ ಸಮಸ್ಯೆಗಳ ಬಗ್ಗೆ 10 ದಿನದಲ್ಲಿ ಎಲ್ಲ ಬ್ಯಾಂಕಿನ ಮುಖ್ಯಸ್ಥರು ಸಭೆ ನಡೆಸಿ ಪರಿಹಾರ ಸೂಚಿಸಲಾಗುವುದು ಎಂದರು.  ಸಕ್ಕರೆ ಕಾರ್ಖಾನೆ ತೂಕ ಹಾಗೂ ಇಳುವರಿಯ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು. ಜಿಲ್ಲಾ ಮಂತ್ರಿಗಳ ಜೊತೆ ಚರ್ಚಿಸಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸುವುದಾಗಿ ಡಿಸಿ ಬಗಾದಿ ಗೌತಮ್  ಭರವಸೆ ನೀಡಿದರು.

ರೈತರ ಉತ್ಪನ್ನಗಳ ನೇರ ಮಾರುಕಟ್ಟೆ ಮಾಡಲು ಮೈಸೂರಿನ ನಗರ ಭಾಗದಲ್ಲಿ ನಿವೇಶನ ನೀಡುವುದಾಗಿ ನಗರಾಭಿವೃದ್ಧಿ ಆಯುಕ್ತ ನಟೇಶ್ ಅವರು ತಿಳಿಸಿದರು. ನಂತರ ರೈತರು ಚರ್ಚಿಸಿ ತಾತ್ಕಾಲಿಕವಾಗಿ ಚಳುವಳಿಯ ಕೈಬಿಟ್ಟರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಪಿ ಸೋಮಶೇಖರ್ ರಾಜ್ಯ ಕಾರ್ಯದರ್ಶಿ ಹತ್ತಳ್ಳಿ ದೇವರಾಜ್,  ಕಾರ್ಯಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ , ಕಿರಗಸೂರು ಶಂಕರ ಕೂಡನಹಳಿ ರಾಜಣ್ಣ ಸಿದ್ದೇಶ್, ಮಾದಪ್ಪ, ರವೀಂದ್ರ , ರವಿ, ಬರದನಪುರ ನಾಗರಾಜ್, ದೇವೇಂದ್ರ ಕುಮಾರ್, ಗೌರಿಶಂಕರ ರಾಜಣ್ಣ, ಮಂಜುನಾಥ್, ವೆಂಕಟೇಶ್, ರಾಜು, ಇನ್ನು ಮುಂತಾದ ನೂರಾರು ಜನರು ಭಾಗವಹಿಸಿದ್ದರು.

Key words: mysore- Protests -farmers -over – DC office -against –sugarcane- FRP -rate