ಬೆಂಗಳೂರು ಬಳಿಕ ಇದೀಗ ಮೈಸೂರಲ್ಲೊಂದು ಬ್ಲೇಡ್ ಕಂಪನಿ ‘ನಿಷ್ಕಾ’…

Promotion

 

ಮೈಸೂರು, ಜೂ.13, 2019 : (www.justkannada.in news ) ಐಎಂಎ ಜ್ಯುವೆಲರ್ಸ್ ವಂಚನೆ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಅಂಥದ್ದೆ ಮತ್ತೊಂದು ವಂಚನೆ ಮಾಡಿದ ಪ್ರಕರಣವೊಂದು ಮೈಸೂರಿನಲ್ಲಿ ಪತ್ತೆಯಾಗಿದೆ. ಪ್ರತಿಭಟನೆ, ಕಾನೂನು ಹೋರಾಟದ ನಡುವೆಯೂ ವಂಚಕ ಕುಟುಂಬದ ವಿರುದ್ಧ ಕ್ರಮ ಆಗಿಲ್ಲ.

ನಿಷ್ಕಾ ಗ್ರೂಪ್ ಆಫ್ ಕಂಪನಿ ಮೈಸೂರಿನಲ್ಲಿ ಮಾತ್ರವಲ್ಲ, ಹುಬ್ಬಳ್ಳಿ-ಧಾರವಾಡ, ಬಳ್ಳಾರಿ, ಬೆಳಗಾವಿ, ಚಿತ್ರದುರ್ಗ, ಮಂಡ್ಯ ಸೇರಿದಂತೆ ರಾಜ್ಯಾದ್ಯಂತ ಲಕ್ಷಾಂತರ ಜನರಿಗೆ ವಂಚನೆ ಮಾಡಿದೆ. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಗರ್ಗೇಶ್ವರಿ ನಿವಾಸಿಯಾದ ಫಣಿರಾಜ್​ಗೌಡ, 2011ರಲ್ಲಿ ನಿಷ್ಕಾ ಗ್ರೂಪ್ ಆಫ್ ಕಂಪನಿ ಸ್ಥಾಪಿಸಿದ. ಕಂಪನಿ ಬೆಳೆಸುವ ನೆಪದಲ್ಲಿ ಕೋಟ್ಯಂತರ ರೂ. ಸಂಗ್ರಹಿಸಿ ನಾಪತ್ತೆಯಾಗಿದ್ದಾನೆ ಎಂದು ಆರೋಪಿಸಲಾಗಿದೆ.

ನಿವೇಶನ, ವಾಹನ ಖರೀದಿ, ಮಕ್ಕಳ ವಿದ್ಯಾಭ್ಯಾಸ ಹೀಗೆ ವಿವಿಧ ಉದ್ದೇಶಗಳಿಗೆ ಹಣ ವಿನಿಯೋಗಿಸಬಹುದು. 10 ರೂ.ಗಳಿಂದ 10 ಲಕ್ಷ ರೂ.ವರೆಗೆ ಹಣ ಹಾಕಲು ಅವಕಾಶವಿದೆ. ನಿಮ್ಮ ಹಣಕ್ಕೆ ಗರಿಷ್ಠ ಮೊತ್ತದ ಬಡ್ಡಿ ಕೊಡುತ್ತೇವೆ. ಕೆಲ ವರ್ಷಗಳಲ್ಲೇ ನಿಮ್ಮ ಹಣ ಡಬಲ್ ಆಗುತ್ತೆ ಅಂತೆಲ್ಲ ನಂಬಿಸಿ ಚೈನ್ ಲಿಂಕ್ ಮಾದರಿಯಲ್ಲಿ ನಿಮ್ಮ ಪರಿಚಯಸ್ಥರಿಂದಲೂ ಕಂಪನಿಯಲ್ಲಿ ಹಣ ತೊಡಗಿಸಿದರೆ ನಿಮಗೆ ಕಮಿಷನ್ ಸಿಗುತ್ತೆ ಎಂದು ವಂಚಿಸಲಾಗಿದೆ.

ಈ ತನಕ 13 ಸಾವಿರ ಜನ ನಿಷ್ಕಾ ಗ್ರೂಪ್ ಆಫ್ ಕಂಪನಿಯಲ್ಲಿ ಏಜೆಂಟ್​ಗಳಾಗಿದ್ದಾರೆ. ಇದೀಗ ಫಣಿರಾಜ್ ಗೌಡ ಪರಾರಿಯಾಗಿದ್ದು, ಏಜೆಂಟ್​ಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಮ್ಮ ಹಣವೂ ಇಲ್ಲ, ಹಣ ಕಟ್ಟಿದ ಗ್ರಾಹಕರ ಒತ್ತಡ ಸಹಿಸಲು ಆಗುತ್ತಿಲ್ಲ. ಪೊಲೀಸರಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ ನಿಷ್ಕಾ ಕಂಪನಿಯಿಂದ ಮೋಸ ಹೋದವರು.

ಫಣಿರಾಜ್ ಹೆಸರಿನಲ್ಲಿ ಸಹಕಾರ ಇಲಾಖೆಯಲ್ಲೇ ಬರೋಬ್ಬರಿ 12 ಕಂಪನಿಗಳು ನೋಂದಣಿಯಾಗಿವೆ. ಈ ಎಲ್ಲಾ ಕಂಪನಿಗಳಿಗೆ ಕುಟುಂಬ ಸದಸ್ಯರೇ ನಿರ್ದೇಶಕರು. ನಿಷ್ಕಾ ಕಂಪನಿ ವಿರುದ್ಧ 3 ವರ್ಷಗಳ ಎರಡು ಹಿಂದೆಯೇ ಎಫ್.ಐ.ಆರ್. ದಾಖಲಾಗಿವೆ. ಆರಂಭದಲ್ಲಿ ನಿಷ್ಕಾ ವಿವಿಧೋದ್ದೇಶ ಸಹಕಾರ ಸಂಘದ ಹೆಸರಿನಲ್ಲಿ ಬೆಂಗಳೂರಿನಲ್ಲಿ ಕಚೇರಿ ಇತ್ತು. ಆ ಕಚೇರಿ, ನಿರ್ದೇಶಕರ ಮನೆಗಳು ಸೇರಿದಂತೆ ಈಗ ಎಲ್ಲವೂ ಖಾಲಿಯಾಗಿವೆ. ದೂರವಾಣಿ ಸಂಪರ್ಕಕ್ಕೂ ಸಿಗದ ಕಾರಣಕ್ಕಾಗಿ ಆರೋಪಿಗಳನ್ನು ಪತ್ತೆ ಹಚ್ಚುವುದೇ ಸವಾಲಾಗಿದೆ.

key words : mysore-police-froud-company-nishka