ನರಸಿಂಹರಾಜ ಕ್ಷೇತ್ರಕ್ಕೆ ನಾನೇ ಶಾಸಕ, ನಾನೇ ಸಚಿವ- ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್…

Promotion

ಮೈಸೂರು,ಜೂ,16,2020(www.justkannada.in):  ನರಸಿಂಹರಾಜ ಕ್ಷೇತ್ರಕ್ಕೆ ಬಿಜೆಪಿ ಶಾಸಕರಿಲ್ಲ ಎಂದು ಭಾವಿಸಬೇಡಿ. ಇಲ್ಲಿ ಉಸ್ತುವಾರಿ ಸಚಿವನಾಗಿಯೂ ಕಾರ್ಯನಿರ್ವಹಣೆ ಮಾಡುತ್ತೇನೆ. ಜೊತೆಗೆ ಇಲ್ಲಿನ ಶಾಸಕನಾಗಿಯೂ ಕೆಲಸ ಮಾಡುತ್ತೇನೆ. ನಿಮ್ಮ ಕೆಲಸವೇನೇ ಇದ್ದರೂ ನನ್ನ ಗಮನಕ್ಕೆ ತನ್ನಿ ಎಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.

ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಮಾರುತಿ ಸರ್ಕಲ್ ಬಳಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸಾಧನೆಯ ಪತ್ರವನ್ನು ಮನೆ ಮನೆಗೆ ತಲುಪಿಸುವ ಕಾರ್ಯಕ್ರಮಕ್ಕೆ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿ ಸಚಿವ ಎಸ್.ಟಿ ಸೋಮಶೇಖರ್ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಇಂದು ಅನೇಕ ಜನಪರ ಯೋಜನೆಗಳನ್ನು ತಂದಿದ್ದಾರೆ. ಕೋವಿಡ್ 19 ಸಂದರ್ಭದಲ್ಲಿ ಅವರು ಕೈಗೊಂಡ ಯೋಜನೆಗಳು ಜನೋಪಯೋಗಿಯಾಗಿವೆ ಎಂದು ಸಚಿವ ಎಸ್.ಟಿ ಸೋಮಶೇಖರ್ ಹೊಗಳಿದರು.

ಸಂಸದರಾಗಿ ಆಯ್ಕೆಯಾದ ಕೆಲವರು 5 ವರ್ಷಗಳ ಬಳಿಕವೇ ಪುನಃ ಕಾಣಿಸಿಕೊಳ್ಳುತ್ತಾರೆ. ಆದರೆ, ಮೈಸೂರು-ಕೊಡಗು ಲೋಕಸಭಾ ಸದಸ್ಯರಾದ ಪ್ರತಾಪ್ ಸಿಂಹ ಅವರು, ಪ್ರತಿ ಕಾರ್ಯಕ್ರಮದಲ್ಲೂ ಭಾಗವಹಿಸುತ್ತ ಕ್ಷೇತ್ರದ ಜನರ ಬಳಿಯೇ ಇರುತ್ತಾರೆ. ಕೇಂದ್ರದಿಂದ ಬರುವ ಯೋಜನೆಗಳನ್ನು ಕ್ಷೇತ್ರಕ್ಕೆ ತರುವಲ್ಲಿ ಯಶಸ್ವಿಯೂ ಆಗಿದ್ದಾರೆ ಎಂದು ಸಚಿವ ಎಸ್.ಟಿ ಸೋಮಶೇಖರ್ ಶ್ಲಾಘಿಸಿದರು.

ಯಶವಂತಪುರ ಕ್ಷೇತ್ರದಲ್ಲೂ ಚವಾನ್ ಪ್ರಾಶ್…

ಶಾಸಕರಾದ ರಾಮದಾಸ್ ಅವರು ಅವರ ಕ್ಷೇತ್ರದ 80 ಸಾವಿರ ಮನೆಗಳಿಗೆ ಚವನ್ ಪ್ರಾಶ್ ವಿತರಣೆ ಮಾಡಿದರು. ಅದು ಎಲ್ಲರಿಗೂ ಅನುಕರಣೀಯ. ಜೊತೆಗೆ ನನಗೂ ಒಂದು ಬಾಟಲಿಯನ್ನು ತಂದು ಕೊಟ್ಟರು. ಅದನ್ನು ಸೇವಿಸಿದ ನಾನು ಈಗ ನನ್ನ ಯಶವಂತಪುರ ಕ್ಷೇತ್ರದಲ್ಲೂ ಕೋವಿಡ್ 19 ಬಾಧಿತರಿಗೆ ಕೊಡಬೇಕು ಎಂಬ ತೀರ್ಮಾನಕ್ಕೆ ಬಂದಿದ್ದೇನೆ  ಎಂದು ಸಚಿವ ಸೋಮಶೇಖರ್ ತಿಳಿಸಿದರು.mysore-narasimharaja-constituency-minister-st-somashekhar

ಅರಣ್ಯ ಸಚಿವ ಆನಂದ್ ಸಿಂಗ್ ಮಾತನಾಡಿ, ಸಚಿವ ಸೋಮಶೇಖರ್ ಅವರಿಂದ ಕಲಿಯುವುದು ಬಹಳಷ್ಟು ಇದೆ. ಪ್ರತಿಯೊಬ್ಬರಿಗೂ ಅವಕಾಶವನ್ನು ಕೊಡುವ ದೊಡ್ಡಗುಣ ಅವರಲ್ಲಿದೆ. ತಮಗಿಂತ ಮುಂಚಿತವಾಗಿ ಪಕ್ಷದ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಬಂದ ಅತಿಥಿಗಳಿಗೆ ಅವಕಾಶವನ್ನು ಕೊಡುತ್ತಾರೆ. ಮೈಸೂರು ಭೇಟಿ ಸೇರಿದಂತೆ ಹಲವು ಕಡೆ ಅವರ ಪ್ರತಿ ನಡೆಯನ್ನು ನಾನು ಗಮನಿಸಿದಾಗ ಈ ವಿಷಯವನ್ನು ಅರಿತೆ. ಅವರ ಈ ಗುಣಗಳನ್ನು ನಾನೂ ಬೆಳೆಸಿಕೊಳ್ಳುವೆ ಎಂದು ತಿಳಿಸಿದರು.

ಸಂಕಲ್ಪ ಪ್ರತಿಜ್ಞಾವಿಧಿ

ಪ್ರಧಾನಿ ನರೇಂದ್ರ ಮೋದಿ ಅವರ ಕರೆಯ ಮೇರೆಗೆ ಆತ್ಮನಿರ್ಭರ ಯೋಜನೆ ಸಂಕಲ್ಪಕ್ಕೆ ನಾನೂ ಕೊಡುಗೆ ನೀಡುತ್ತೇನೆ. ಯಥೇಚ್ಛವಾಗಿ ಸ್ವದೇಶಿ ಉತ್ಪನ್ನವನ್ನು ಖರೀದಿಸುತ್ತೇನೆ, ಕೋವಿಡ್ -19 ಸೋಂಕಿನ ವಿರುದ್ಧ ಹೋರಾಡುತ್ತೇನೆ ಎಂಬಿತ್ಯಾದಿ ಸಂಕಲ್ಪ ಮಾಡಿದ ಜನಪ್ರತಿನಿಧಿಗಳು ಸೇರಿದಂತೆ ಬಿಜೆಪಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಬಳಿಕ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಮೀಪದ ಮನೆ, ಅಂಗಡಿಗಳಿಗೆ ತೆರಳಿ ಕೇಂದ್ರದ ಸಾಧನೆಯ ಕರಪತ್ರಗಳನ್ನು ವಿತರಣೆ ಮಾಡಲಾಯಿತು.

ಶಾಸಕರಾದ ಎಸ್.ಎ.ರಾಮದಾಸ್, ಎನ್. ನಾಗೇಂದ್ರ, ಬಿಜೆಪಿ ನಗರಾಧ್ಯಕ್ಷ ಟಿ.ಎಸ್. ಶ್ರೀವತ್ಸ ಹಾಗೂ  ಮೈಸೂರು ಗ್ರಾಮೀಣ ಜಿಲ್ಲಾಧ್ಯಕ್ಷ ಎಸ್.ಡಿ. ಮಹೇಂದ್ರ, ಮಾಜಿ ಮೇಯರ್ ಸಂದೇಶ್ ಸ್ವಾಮಿ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಡಿ.ಪಿ.ಮಂಜುನಾಥ್ ಇತರರು ಇದ್ದರು.

Key words: mysore- Narasimharaja constituency- Minister -ST Somashekhar