Mysore N.R. Constituency : ಜೆಡಿಎಸ್ ನ ಅಬ್ದುಲ್ಲಾ ‘ಸಂದೇಶ ‘,  ಬಿಜೆಪಿಗೆ ವರವಾಗುವುದೇ..?

Promotion

 

ಮೈಸೂರು, ಏ.04, 2023 : (www.justkannada.in news)  ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಮತದಾರರೇ ಹೆಚ್ಚಿರುವ ನರಸಿಂಹರಾಜ ಯಾನೆ ಎನ್.ಆರ್. ಕ್ಷೇತ್ರದಲ್ಲಿ ಈ ಬಾರಿ ಜಾ.ದಳದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸ್ಪರ್ಧೆ ಮಾಡುತ್ತಾರೆ ಎಂಬ ಮಾತಿದ್ದರು, ಈ ತನಕ ಅಧಿಕೃತವಾಗಿ ಖಚಿತವಾಗಿಲ್ಲ. ಈ ನಡುವೆ ಜೆಡಿಎಸ್ ಟಿಕೆಟ್ ಮೇಲೆ ಕಣ್ಣಿಟ್ಟಿದ್ದ ಪರಾಜಿತ ಅಭ್ಯರ್ಥಿ ಅಬ್ದುಲ್ಲಾ ಅಜೀಜ್ ಪಕ್ಷ ತೊರೆಯುವ ಹಾದಿಯಲ್ಲಿದ್ದಾರೆ.

ನರಸಿಂಹರಾಜ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಸೆಡ್ಡು ಹೊಡೆಯಲು ಮುಂದಾಗಿದ್ದ ಜಾ.ದಳದ ನಾಯಕರಿಗೆ ಅಬ್ದುಲ್ಲಾ ಅಜೀಜ್ ಇಟ್ಟಿರುವ ಹೆಜ್ಜೆ ‘ ಶಾಕ್ ‘  ನೀಡಿದ್ದು, ಆಂತರಿಕವಾಗಿ ಪಕ್ಷದೊಳಗೆ ಬೇಗುದಿ ಶುರುವಾಗಿದೆ. ಈಗಾಗಲೇ ತಮ್ಮ ಆಪ್ತರ ಜತೆ ಸಭೆ ನಡೆಸಿರುವ ಅಬ್ದುಲ್ಲಾ ಅಜೀಜ್ ಪಕ್ಷ ತೊರೆಯಲು ಮುಂದಾಗಿರುವುದನ್ನು ಮನವೊಲಿಸಿ ತಡೆಯೊಡ್ಡದಿದ್ದರೆ ಚುನಾವಣೆ ವೇಳೆ ಜೆಡಿಎಸ್ ಗೆ  ಹಿನ್ನಡೆಯಾಗುವ ಅಪಾಯವಿದೆ. ಅಲ್ಪಸಂಖ್ಯಾತ ವರ್ಗದ ಹಿರಿಯ ನಾಯಕರಾಗಿರುವ ಸಿ.ಎಂ.ಇಬ್ರಾಹಿಂ ಅವರು ಭದ್ರಾವತಿ ಕ್ಷೇತ್ರದಿಂದ ೨೦೧೩ ಮತ್ತು ೨೦೧೮ರಲ್ಲಿ ಕಣಕ್ಕಿಳಿಯಲು ಬಯಸಿದ್ದರೂ , ಕಾಂಗ್ರೆಸ್ ಪಕ್ಷ ಬಿ.ಜಿ.ಸಂಗಮೇಶ್ ಅವರಿಗೆ ಟಿಕೆಟ್ ನೀಡಿತ್ತು. ಇದರಿಂದಾಗಿ ಅಸಮಾಧಾನಗೊಂಡಿದ್ದ ಅವರನ್ನು ಸಿದ್ದರಾಮಯ್ಯ  ಸರ್ಕಾರದಲ್ಲಿ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ನಂತರದ ದಿನಗಳಲ್ಲಿ ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಲಾಗಿತ್ತಾದರೂ ವಿಪಕ್ಷ ನಾಯಕನ ಹುದ್ದೆ ಮೇಲೆ  ಇಬ್ರಾಹಿಂ ಕಣ್ಣಿಟ್ಟಿದ್ದರು. ವಿಧಾನ ಪರಿಷತ್ ವಿಪಕ್ಷ ನಾಯಕ ಸ್ಥಾನಕ್ಕೆ ಪಟ್ಟು ಹಿಡಿದರೂ ಹೈಕಮಾಂಡ್ ಬಿ.ಕೆ.ಹರಿಪ್ರಸಾದ್‌ಗೆ ನೀಡಿದ್ದರಿಂದಾಗಿ ಅತೃಪ್ತಿಗೊಂಡ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟು ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿ ಜಾ.ದಳವನ್ನು ಸೇರಿದ್ದರು.

ನಂತರದಲ್ಲಿ ಜಾ.ದಳದ ರಾಜ್ಯಾಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿರುವ ಸಿ.ಎಂ.ಇಬ್ರಾಹಿಂ ಬೆಂಗಳೂರು ನಗರ ಕ್ಷೇತ್ರಗಳನ್ನು ಹೊರತುಪಡಿಸಿ ನರಸಿಂಹರಾಜ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದರು. ಅದೇ ರೀತಿ ಮೈಸೂರು ನಗರಕ್ಕೆ ಹಲವು ಬಾರಿ ಭೇಟಿ ನೀಡಿ ಪಕ್ಷದ ಮುಖಂಡರ ಸಭೆ ನಡೆಸುವ ಮೂಲಕ ಅಬ್ದುಲ್ಲಾ ಅವರೊಂದಿಗೂ ಚರ್ಚಿಸಿದ್ದರು. ಆದರೆ, ಅಬ್ದುಲ್ಲಾ ಅವರ ಗಮನಕ್ಕೆ ತಾರದೆ ಪಕ್ಷದ ಪದಾಧಿಕಾರಿಗಳ ಬದಲಾವಣೆ ಮಾಡಿದ್ದರಿಂದ ಅಬ್ದುಲ್ಲಾ ಸಿಟ್ಟಿಗೆದ್ದ ಕಾರಣವೇ ಈ ಬೆಳವಣಿಗೆ ನಡೆಯುತ್ತಿದೆ ಎನ್ನಲಾಗಿದೆ.

ಘೋಷಣೆಗೂ ಮುನ್ನವೇ ನಿರಾಸಕ್ತಿ:

ನರಸಿಂಹರಾಜ ಕ್ಷೇತ್ರದಲ್ಲಿ ಸಿ.ಎಂ.ಇಬ್ರಾಹಿಂ ಹೆಸರು ಘೋಷಣೆ ಮಾಡುವ ಮುನ್ನವೇ ಕಣಕ್ಕಿಳಿಯುವ ವಿಚಾರದಲ್ಲಿ ನಿರಾಸಕ್ತಿ ತೋರಿದ್ದಾರೆ. ಕಳೆದ ಬಾರಿ ತಡವಾಗಿ ಪ್ರಕಟಿಸಿದ್ದರಿಂದ ನಿರೀಕ್ಷಿತ ಮತಗಳು ಬಾರದೆ ಹೋದವು. ಈಗ ಮತ್ತೆ ಅದೇ ರೀತಿಯಾದರೆ ಗೆಲುವು ಸಾಧಿಸಲು ಸುಲಭವಲ್ಲ. ಪಕ್ಷ ಟಿಕೆಟ್ ಕೊಟ್ಟರೂ ಸ್ಪರ್ಧೆ ಮಾಡುವುದಿಲ್ಲವೆಂದು ಹೇಳುವ ಮೂಲಕ ಪಕ್ಷದಿಂದ ದೂರ ಉಳಿಯುವ ಸಂದೇಶ ರವಾನಿಸಿದ್ದಾರೆ. ಈ ನಿರ್ಧಾರಕ್ಕೆ ಬೆಂಬಲಿಗರು,ಆಪ್ತರು ಬೆಂಬಲ ನೀಡಿರುವುದರಿಂದ ಮುಂದೆ ಯಾವ ಪಕ್ಷ ಸೇರುತ್ತಾರೋ ಎನ್ನುವ ಕುತೂಹಲ ಮೂಡಿಸಿದೆ.

ಎಸ್.ಸತೀಶ್‌ಗೆ ಕೈ ಕೊಟ್ಟಿದ್ದ ದಳಪತಿಗಳು:

೨೦೧೩ರ ಚುನಾವಣೆಯಲ್ಲಿ ಜಾ.ದಳದಿಂದ ಸ್ಪರ್ಧಿಸಿ ೩೩ಸಾವಿರ ಮತಗಳನ್ನು ಪಡೆದಿದ್ದ ಮಾಜಿ ಮಹಾಪೌರ ಎಸ್.ಸತೀಶ್ ಸ್ವಾಮಿ ೨೦೧೮ರ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಪಕ್ಷದ ಸಂಘಟನೆಯಲ್ಲೂ ತೊಡಗಿಸಿಕೊಂಡು ಕಾಂಗ್ರೆಸ್‌ಗೆ ಪ್ರಬಲ ಪೈಪೋಟಿ ಕೊಡುವಷ್ಟು ಅಲೆ ಎಬ್ಬಿಸಿದ್ದರು. ಆದರೆ, ಜಾ.ದಳ ವಲಯದಲ್ಲಿ ನಡೆದ ಆಂತರಿಕ ಬೆಳವಣಿಗೆಯಿಂದ ಎಸ್.ಸತೀಶ್ ಸ್ವಾಮಿಗೆ ಕೊನೆಯಲ್ಲಿ ಟಿಕೆಟ್ ತಪ್ಪಿಸಿ ಅಬ್ದುಲ್ಲಾ ಅಜೀಜ್ ಅವರಿಗೆ ಮಣೆ ಹಾಕಿತ್ತು. ಈ ಚುನಾವಣೆಯಲ್ಲಿ ಅಬ್ದುಲ್ಲಾ ಅಜೀಜ್ ೧೪ಸಾವಿರ ಮತಗಳನ್ನು ಪಡೆದರೆ, ಬಿಜೆಪಿಯಿಂದ ಕಣಕ್ಕಿಳಿದಿದ್ದ ಎಸ್.ಸತೀಶ್ ಸ್ವಾಮಿ ೪೦ಸಾವಿರ ಮತಗಳನ್ನು ಪಡೆಯುವ ಮೂಲಕ ಗಮನ ಸೆಳೆದಿದ್ದರು.

Key words : Mysore N.R. Constituency-election2023-sandesg.swamy-abdulla-jds-congress