ರಾಜ್ಯ ರಾಜಕಾರಣಕ್ಕೆ ಬರುವ ಕುರಿತು ಸ್ಪಷ್ಟನೆ: ಕ್ರೆಡಿಟ್ ವಾರ್ ಬಗ್ಗೆ ಮತ್ತೆ ಕಿಡಿ ಕಾರಿದ ಸಂಸದೆ ಸುಮಲತಾ ಅಂಬರೀಶ್.

ಮೈಸೂರು,ಮಾರ್ಚ್,9,2022(www.justkannada.in):   ಕಳೆದ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಪಕ್ಷೇತರವಾಗಿ ನಿಂತು ಗೆಲುವು ಸಾಧಿಸಿ ಕೆಲಸ ನಿರ್ವಹಿಸುತ್ತಿರುವ ಸಂಸದೆ ಸುಮಲತಾ ಅಂಬರೀಶ್, ರಾಜ್ಯ ರಾಜಕೀಯ ಬರುವ ವಿಚಾರಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಸಂಸದ ಸುಮಲತಾ ಅಂಬರೀಶ್,  ನಾನು ರಾಜ್ಯ ರಾಜಕಾರಣಕ್ಕೆ ಬರೋದಿಲ್ಲ ಎಂದರು. ಹಾಗೆಯೇ ಮುಂದಿನ ಚುನಾವಣೆ ಪಕ್ಷದ ಚಿಹ್ನೆಯಡಿ ಸ್ಪರ್ಧೆ ವಿಚಾರ ಕುರಿತು ಸ್ಪಷ್ಟನೆ ನೀಡಿದ ಅವರು, ಚುನಾವಣೆ ಇನ್ನು ಎರಡೂವರೆ ವರ್ಷ ಇದೆ. ಆಗ ಅದರ ಬಗ್ಗೆ ಯೋಚನೆ ಮಾಡುವೆ ಎಂದರು.

ಇನ್ನು ಅಭಿಷೇಕ್ ಅಂಬರೀಶ್ ರಾಜಕೀಯ ಎಂಟ್ರಿ ಅವರನ್ನೇ ಕೇಳಿ. ಅದು ಅಭಿಷೇಕ್ ಅವರಗೆ ಬಿಟ್ಟ ವಿಚಾರ. ಅಭಿಷೇಕ್ ನನಗೆ ಏನೂ ಹೇಳುವುದಿಲ್ಲ. ಸಿನಿಮಾ ಬಗ್ಗೆ ಕೂಡ ಆತ ನನ್ನ ಜೊತೆ ಚರ್ಚೆ ಮಾಡುವುದಿಲ್ಲ ಎಂದು ಸುಮಲತಾ ಅಂಬರೀಶ್ ತಿಳಿಸಿದರು.

ಮಂಡ್ಯದಲ್ಲಿ ಕೆಲಸಕ್ಕಿಂತ ಕ್ರೆಡಿಟ್‌ ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

ಇದೇ ವೇಳೆ ಕ್ರೆಡಿಟ್ ವಾರ್ ಬಗ್ಗೆ ಪ್ರತಿಕ್ರಿಯಿಸಿದ ಸಂಸದೆ ಸುಮಲತಾ ಅಂಬರೀಶ್,  ಮಂಡ್ಯದಲ್ಲಿ ಕೆಲಸಕ್ಕಿಂತ ಕ್ರೆಡಿಟ್‌ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ನಾನು ಮಾಡಿರುವುದನ್ನು ಇಲ್ಲ ಅಂದಾಗ ಸುಮ್ಮನಿರಲು ಸಾಧ್ಯವಿಲ್ಲ. ಜನ ವಿಶ್ವಾಸ ಇಟ್ಟು ನನ್ನನ್ನು ಆಯ್ಕೆ ಮಾಡಿದ್ದಾರೆ. ಕ್ರೆಡಿಟ್ ತೆಗೆದುಕೊಳ್ಳಲು ನಾನು ಕೆಲಸ ಮಾಡಲ್ಲ. ನಿಜ ಹೇಳಲು ಭಯ ಏಕೆ.? ಕ್ರೆಡಿಟ್ ವಾರ್ ಯಾರು ಆರಂಭಿಸುತ್ತಾರೋ ಅವರು ಅವರ ಜವಾಬ್ದಾರಿ ಬಗ್ಗೆ ನೋಡಿಕೊಳ್ಳಬೇಕು. ಸಂಸದರ ಕ್ರೆಡಿಟ್ ಪಡೆಯುವುದಕ್ಕೆ ಏಕೆ ಬರುತ್ತಿದ್ದಾರೋ ಗೊತ್ತಿಲ್ಲ ಎಂದು ಮಂಡ್ಯ ಜಿಲ್ಲೆ ಶಾಸಕರಿಗೆ ಪರೋಕ್ಷ ಟಾಂಗ್ ನೀಡಿದರು.

ಶಿಂಷಾ ಸೇತುವೆ ವಿಚಾರ ಸಂಬಂಧ ನಾನು ಪ್ರತಿಭಟನಾ ಸ್ಥಳಕ್ಕೆ ಹೋಗಿದ್ದೇನೆ. ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದೇನೆ. ನಾಲ್ಕು ಬಾರಿ ಅವರನ್ನು ಭೇಟಿ ಮಾಡಿದ್ದೇನೆ. ಆಯಾ ಕ್ಷೇತ್ರದ ಸಂಸದ ಆಯಾ ಕ್ಷೇತ್ರದ ಬಗ್ಗೆ ಕೇಳಿದರೆ ಪ್ರತಿಕ್ರಿಯೆ ಸಿಗುತ್ತದೆ. ಯಾರು ಬೇಕಾದರೂ ಪತ್ರ ಬರೆದಿರಬಹುದು. ಮಾಜಿ ಪ್ರಧಾನಿ ಅಥವಾ ಬೇರೆಯವರು ಬರೆದಿರಬಹುದು. ಅವರು ಏನು ಬರೆದಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ. ನನ್ನ ಕ್ಷೇತ್ರದ ವಿಚಾರವಾಗಿ ನಾನು ಕೆಲಸ ಮಾಡುತ್ತೇನೆ. ನಾನು ಮಾಡಿದ ಕೆಲಸ ಮಾಡಿಲ್ಲ ಅಂತಾ ಹೇಳಿದರೆ ನಾನು ಸುಮ್ಮನಿರಲ್ಲ. ಟಾರ್ಗೆಟ್ ಮಾಡುವುದು ಮೊದಲ ದಿನದಿಂದಲೂ ನಡೆದಿದೆ. ನನ್ನ ಜಿಲ್ಲೆಗೆ ಸಂಬಂಧಪಟ್ಟ ವಿಚಾರ ಮಾತ್ರ ನಾನು ಮಾತನಾಡುತ್ತೇನೆ. ನಾನು ಏನೇ ಮಾಡಿದರು ವಿರೋಧ ಮಾಡಬೇಕೆಂದು ಅವರು ನಿರ್ಧರಿಸಿದ್ದಾರೆ. ಎಲ್ಲದರಲ್ಲೂ ರಾಜಕಾರಣ ಮಾಡುತ್ತಿದ್ದಾರೆ. ಅವರಿಗೆ ನಾನು ಕೆಲಸ ಮಾಡುತ್ತೇನೆ, ಜನ ನನ್ನ ಪರ ಮಾತನಾಡುತ್ತಾರೆ ಅನ್ನೋ ಭಯ ಎಂದು ಕಿಡಿಕಾರಿದರು.

ಇಲ್ಲಿ ಬಟನ್ ಒತ್ತಿದರೆ ಅಲ್ಲಿ ವಿಮಾ‌ನ ಇಳಿಸಲು ಸಾಧ್ಯವಿಲ್ಲ.

ರಷ್ಯಾ ಉಕ್ರೇನ್ ಯುದ್ದ, ಭಾರತೀಯರ ಸ್ಥಳಾಂತರ  ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು,  ಅಲ್ಲಿನ ಪರಿಸ್ಥಿತಿ ಅರ್ಥ ಮಾಡಿಕೊಂಡ ಮಾತನಾಡಬೇಕು. ವಿದೇಶಾಂಗ ಇಲಾಖೆ ಯಾವ ರೀತಿ ಕೆಲಸ ಮಾಡುತ್ತದೆ ಅನ್ನೋದು ಗೊತ್ತಿದೆ. ಕೇಂದ್ರ ಖಂಡಿತಾ ಪ್ರಾಮಾಣಿಕ‌ವಾದ ಪ್ರಯತ್ನ ಮಾಡಿದೆ. ಬಹುತೇಕ ಎಲ್ಲವನ್ನೂ ಸುರಕ್ಷಿತವಾಗಿ ಕರೆ ತರಲಾಗಿದೆ. ಪ್ರತಿ ವಿಷಯವನ್ನು ರಾಜಕೀಯ ಮಾಡಬಾರದು. ಅಲ್ಲಿ ಯುದ್ದ ನಡೆಯುತ್ತಿದೆ. ಅಲ್ಲಿಂದ ಕರೆದುಕೊಂಡು ಬರುವುದು ಸುಲಭದ ಪರಿಸ್ಥಿತಿ ಆಗಿರಲಿಲ್ಲ. ಇಲ್ಲಿ ಬಟನ್ ಒತ್ತಿದರೆ ಅಲ್ಲಿ ವಿಮಾ‌ನ ಇಳಿಸಲು ಸಾಧ್ಯವಿಲ್ಲ. ಎಲ್ಲರನ್ನೂ ಕರೆದುಕೊಂಡು ಬಂದಿದ್ದು ಟ್ರಿಮೆಂಡಸ್ ಜಾಬ್ ಎಂದು ಕೇಂದ್ರಕ್ಕೆ ಫುಲ್ ಕ್ರೆಡಿಟ್ ನೀಡಿದರು.

ರಾಜಕೀಯ ಒತ್ತಡದಲ್ಲಿ ಸಿನಿಮಾರಂಗವನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಆದರೂ ಒತ್ತಡದ ನಡುವೆಯೂ ಈ ವರ್ಷ ಒಂದು ಸಿನಿಮಾದಲ್ಲಿ ನಟನೆ ಮಾಡುತ್ತಿದ್ದೇನೆ. ದರ್ಶನ್ ಅಭಿನಯದ ಕ್ರಾಂತಿ ಸಿನಿಮಾದಲ್ಲಿ ನಟನೆ ಮಾಡುತ್ತಿದ್ದೇನೆ. ಚಿತ್ರರಂಗ ನನ್ನ ಕುಟುಂಬ ಇದ್ದಂತೆ. ಚಿತ್ರರಂಗ ನನಗೆ ಎಲ್ಲವನ್ನೂ‌ ನೀಡಿದೆ. ಅಲ್ಲಿ ಉತ್ತಮ ನೆನಪುಗಳಿವೆ. ಯಾವತ್ತು ನಾನು ಚಿತ್ರರಂಗದ ಜೊತೆ ಇರುತ್ತೇನೆ ಎಂದರು.
key words: mysore-mandya-MP-Sumalatha ambarish