ನ್ಯಾಯಾಂಗದ ಮೇಲೆ ಚುನಾಯಿತ ಪ್ರತಿನಿಧಿಗಳ ಕೈವಾಡ ಶುದ್ದ ತಪ್ಪು-ಭ್ರಷ್ಟಾಚಾರದ ಬಗ್ಗೆ ನಿವೃತ್ತ ನ್ಯಾ. ಸಂತೋಷ್ ಹೆಗ್ಡೆ ಕಳವಳ

Promotion

ಮೈಸೂರು,ಜನವರಿ,24,2023(www.justkannada.in): ನಮ್ಮ ಸಂವಿಧಾನದಲ್ಲಿ ಶಾಸಕಾಂಗ ನ್ಯಾಯಾಂಗ, ಕಾರ್ಯಾಂಗವಿದೆ. ಶಾಸಕಾಂಗದಲ್ಲಿ ಚುನಾಯಿತ ಪ್ರತಿನಿಧಿಗಳು ಇರುತ್ತಾರೆ. ಇವರು ಕಾನೂನ್ನೂ ಮಾಡುತ್ತಾರೆ, ಆಡಳಿತವನ್ನೂ ಮಾಡುತ್ತಾರೆ. ಆದರೆ ನ್ಯಾಯಾಂಗದ ಮೇಲೆ ಚುನಾಯಿತ ಪ್ರತಿನಿಧಿಗಳ ಕೈವಾಡ ಇರುವುದು ಶುದ್ದ ತಪ್ಪು ಎಂದು ನಿವೃತ್ತ ಲೋಕಯುಕ್ತ ನ್ಯಾಯಾಧೀಶ ಸಂತೋಷ್ ಹೆಗ್ಡೆ ಹೇಳಿದರು.

ನಿವೃತ್ತ ಲೋಕಯುಕ್ತ ನ್ಯಾಯಾಧೀಶ ಸಂತೋಷ್ ಹೆಗ್ಡೆ ಅವರ ಜೊತೆ  ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂವಾದದಲ್ಲಿ ಸಂಘದ ಪದಾಧಿಕಾರಿಗಳು, ಸದಸ್ಯ ಸೇರಿದಂತೆ ಮಾಧ್ಯಮ ಪ್ರತಿನಿಧಿಗಳು ಭಾಗಿಯಾಗಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಂತೋಷ್ ಹೆಗ್ಡೆ, ಕರ್ನಾಟಕದ ಲೋಕಯುಕ್ತಕ್ಕೆ ಬರುವ ಮೊದಲು ನಾನು ಕೂಪ ಮಂಡೂಕನಂತಿಂದ್ದೆ. ಅಲ್ಲಿಗೆ ಬಂದ ಮೇಲೆ ಸಮಾಜದಲ್ಲಿ ಎಂಥಾ ಕಠಿಣ ಸಮಸ್ಯೆ ಇವೆ ಅನ್ನೋದು ಗೊತ್ತಾಯ್ತು. ಸಮಾಜದಲ್ಲಿ ಶ್ರೀಮಂತನಾಗಿದ್ದರೆ ಸಾಕು ಅವನಿಗೆ ಸಮಾಜ ಸಲಾಂ ಹೊಡೆಯುತ್ತದೆ. ಜೈಲಿಗೆ ಹೋಗಿ ಬರುವವರಿಗೆ ಇಂದು ಅದ್ದೂರಿ ಸ್ವಾಗತ ಸಿಗುತ್ತದೆ. ಸಮಾಜದಲ್ಲಿ ಇಂದು ಪ್ರಾಮಾಣಿಕತೆಗೆ ಬೆಲೆ ಇಲ್ಲ. ಒಂದು ದುರಾಸೆಯ ರೋಗ, ಮತ್ತಷ್ಟು ಬೇಕು ಎನ್ನುವ ಆಸೆ. 50ರ ದಶಕದಲ್ಲಿ ಜೀಪ್ ಹಗರಣದಲ್ಲಿ ನಮ್ಮ ದೇಶಕ್ಕಾದ ನಷ್ಟ ನೂರಾರು ಕೋಟಿ, ನಂತರ ಕಾಮನ್ ವೆಲ್ತ್ ಹಗರಣ, 2ಜಿ ಹಗರಣ ಬಂತು, ಕಲ್ಲಿದ್ದಲು ಹಗರಣಗಳಂತಹ ಹಗರಣಗಳಿಂದ ಲಕ್ಷಾಂತರ ಕೋಟಿ ರೂ. ನಷ್ಟವಾಯಿತು.

ಈಗ 40 % ಕಮಿಷನ್ ಸರ್ಕಾರ ಅಂತಾರೆ. ಮೊದಲು 10% ಎನ್ನುತ್ತಿದ್ದರು.  ಅಡಿಕೆ ಕದ್ರು ಕಳ್ಳತನ, ಆನೆ ಕದ್ರು ಕಳ್ಳತನ. ಚೈನಾದಲ್ಲಿ ಭ್ರಷ್ಟರಿಗೆ ಗಲ್ಲು ಶಿಕ್ಷೆ ನೀಡಲಾಗುತ್ತದೆ. ನಮ್ಮ ದೇಶದಲ್ಲಿ ಬರಿ 7 ವರ್ಷಗಳ ಶಿಕ್ಷೆ ಮಾತ್ರ. ನಾನು ಯಾವ ರಾಜಕೀಯ ಪಕ್ಷದ ಪರ ಇಲ್ಲ. ನನ್ನ ಗಣಿ ವರದಿಯಲ್ಲಿ ಮೂವರ ಹೆಸರು ಕೊಟ್ಟಿದ್ದೆ ಅದರಲ್ಲಿ ಎಲ್ಲ ಪಕ್ಷದ ನಾಯಕರು ಇದ್ದರು. ಲೋಕಾಯುಕ್ತಕ್ಕೆ ಇದ್ದ ಅಧಿಕಾರ ಭ್ರಷ್ಟಾಚಾರದ ವಿರುದ್ದ ಹೋರಾಟ,ಮತ್ತು ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯಕೊಡಿಸುವ ಕೆಲಸ ಮಾಡುತ್ತಿದ್ದೆವು. ಅದನ್ನ ತೆಗೆದು ಎಸಿಬಿ ಜಾರಿಗೆ ತಂದರು. ಕಾನೂನಿನಲ್ಲಿ ಸರ್ಕಾರಿ ವೇತನ ಪಡೆಯುವ ವ್ಯಕ್ತಿ ಒಬ್ಬ ಪಬ್ಲಿಕ್ ಸರ್ವೆಂಟ್,ಆದರೆ ಈ ಕಾಲದಲ್ಲಿ ಅವರಿಗೆ ಈ ಭಾವನೆ ಇದೆಯಾ.? ಎಂದು ದೇಶದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ  ಸಂತೋಷ್ ಹೆಗ್ಡೆ ಕಳವಳ ವ್ಯಕ್ತಪಡಿಸಿದು.

ಮಾನವೀಯತೆ ಅನ್ನೋದು ನಮ್ಮ ಹಿರಿಯರು ಕಟ್ಟಿದಂತಹ ಒಂದು ಮೌಲ್ಯ. ಹುಟ್ಟಿದಾಗ ಮಾನವನಾಗಿ ಹುಟ್ಟದಿದ್ದರೂ ಪರವಾಗಿಲ್ಲ. ಬೆಳೆಯುವಾಗ ಮಾನವೀಯ ಗುಣಗಳನ್ನು ಅಳವಡಿಸಿಕೊಂಡು ಬದುಕಿ ಸಾಯುವಾಗ ಮನುಷ್ಯನಾಗಿ ಸತ್ತರೆ ಸಾಕು. ಎಲ್ಲಾ ಹುದ್ದೆಯಲ್ಲೂ ಇಂದು ದುರಾಸೆ ಇದೆ. ಮಾನವೀಯ ಅನ್ನೋದು ಇಂದು ಮರೆಯಾಗುತ್ತಿದೆ ಎಂದು ವ್ಯವಸ್ಥೆ ಬಗ್ಗೆ ಸಂತೋಷ್ ಹೆಗ್ಡೆ ಬೇಸರ ವ್ಯಕ್ತಪಡಿಸಿದರು.

ಲೋಕಾಯುಕ್ತ ನಮ್ಮ ಕಾಲದಲ್ಲಿ ಇದ್ದಂತ ಅಧಿಕಾರ ಇವತ್ತು ಇದೆ. ಅಧಿಕಾರಿಗಳ ನೇಮಕದಲ್ಲಿ ಸರ್ಕಾರದ ಪ್ರಭಾವ ಇರುತ್ತದೆ. ನಮಗೆ ಬೇಕಾದ ಅಧಿಕಾರಿಗಳ ನೇಮಕ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕು. ನಮ್ಮ ಸಂವಿಧಾನದಲ್ಲಿ ಶಾಸಕಾಂಗ ನ್ಯಾಯಾಂಗ, ಕಾರ್ಯಾಂಗ ಅಂತ ಇದೆ. ಶಾಸಕಾಂಗದಲ್ಲಿ ಚುನಾಯಿತ ಪ್ರತಿನಿಧಿಗಳು ಇರುತ್ತಾರೆ. ಇವರು ಕಾನೂನ್ನೂ ಮಾಡುತ್ತಾರೆ, ಆಡಳಿತವನ್ನೂ ಮಾಡುತ್ತಾರೆ. ಅವರೇನು ದೇವಲೋಕದಿಂದ ಬಂದವರಲ್ಲ. ನ್ಯಾಯಾಂಗದ ಮೇಲೆ ಚುನಾಯಿತ ಪ್ರತಿನಿಧಿಗಳ ಕೈವಾಡ ಇರುವುದು ಶುದ್ದ ತಪ್ಪು. ಇದಕ್ಕೆ ನಮ್ಮ ಸಮಾಜವೂ ಕೂಡ ಒಂದು ಕಾರಣವಾಗಿದೆ. ಇಂದು ಕೋರ್ಟ್ ಗಳನ್ನ ತಮ್ಮ ಸುಪರ್ದಿಗೆ ತೆಗೆದುಕೊಳ್ಳುವ ಪ್ರಯತ್ನ ನಡೆಯುತ್ತದೆ. ರಾಜಕಾರಣಿಗಳ ಕೈವಾಡ ಎಲ್ಲಾ  ಇರುತ್ತದೆ. ನ್ಯಾಯಾಲಯಗಳಲ್ಲೂ ಖಂಡಿತವಾಗಿ ತಪ್ಪು ನಡೆಯುತ್ತವೆ. ಲೋಕಾಯುಕ್ತವನ್ನ ಮುಚ್ಚಿ ಹಾಕಿ ಎಸಿಬಿ ತಂದರು. ಎಸಿಬಿ ಬಂದ ಮೇಲೆ ಎಷ್ಟು ರಾಜಕಾರಣಿಗಳ ಮೇಲೆ ಕ್ರಮ ಜರುಗಿಸಿದೆ, ಎಷ್ಟು ಜನರಿಗೆ ಶಿಕ್ಷೆ ಕೊಡಿಸಿದೆ. ಈಗ ಅದನ್ನು ಮುಚ್ಚಿ ಮತ್ತೆ ಲೋಕಯುಕ್ತ ತಂದಿದ್ದಾರೆ ಆದರೆ ಅಲ್ಲಿಗೆ ಸರ್ಕಾರ, ಚುನಾಯಿತ ಜನಪ್ರತಿನಿಧಿಗಳ ಹಸ್ತಕ್ಷೇಪ ಇರಬಾರದು ಎಂದು  ಸಂತೋಷ್ ಹೆಗ್ಡೆ ಹೇಳಿದರು.

ನ್ಯಾಯಾಲಯಗಳು ಪ್ರಕರಣಗಳನ್ನ ಧೀರ್ಘ ಕಾಲ ಎಳೆದುಕೊಂಡು ಹೋಗುವುದನ್ನ ಬಿಡಬೇಕು. ಗೆದ್ದವನು ಸೂತ, ಸೋತವನು ಸತ್ತ ಅನ್ನುವ ಹಾಗೆ ಆಗಬಾರದು. ಎಲ್ಲಾ ಸಮಸ್ಯೆಗಳಿಗೂ ಒಂದಲ್ಲ ಒಂದು ರೀತಿ ಸಮಾಜವೇ ಕಾರಣ ಎಂದು ಸಂತೋಷದ ಹೆಗ್ಡೆ ಅಭಿಪ್ರಾಯ ವ್ಯಕ್ತಪಡಿಸಿದರು.

ನನಗೆ ಹಲವಾರು ಪ್ರಶಸ್ತಿಗಳು ಬಂದಿವೆ. ಅದರಲ್ಲಿ ಬಂದಿರುವ ಎಲ್ಲಾ ಹಣಕಾಸನ್ನು ಅನಾಥಾಶ್ರಮ, ಸಂಘ ಸಂಸ್ಥೆಗಳಿಗೆ ಕೊಟ್ಟಿದ್ದೇನೆ ಯಾರಿದಂದಲೂ ಒಂದು ರೂಪಾಯಿ ಪಡೆದಿಲ್ಲ.ಸ್ವಂತ ದುಡಿದ ಹಣದಿಂದ ಒಂದೇ ಒಂದು ಅಪಾರ್ಟ್ಮೆಂಟ್ ನಲ್ಲಿ ಒಂದು ಮನೆ ಖರೀದಿ ಮಾಡಿ ಜೀವನ ಮಾಡುತ್ತಿದ್ದೇನೆ. ಯಾಕೆಂದರೆ ನಾನು ಇನ್ನೊಬ್ಬರಿಗೆ ಹೇಳುವಾಗ ಮೊದಲ ನಾನು ಶುದ್ದವಾಗಿರಬೇಕು ಅನ್ನೋದು ನನ್ನ ನಂಬಿಕೆ ಎಂದು ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು.

Key words: mysore- lokayukta-Retired- Justice -Santosh Hegde –  conversation