ಜನಸ್ನೇಹಿ ಸಭೆ ಮೂಲಕ ಸಾರ್ವಜನಿಕರಲ್ಲಿ ಭರವಸೆ ಮೂಡಿಸಿದ ಕುವೆಂಪು ನಗರ ಪೊಲೀಸರು.

Promotion

ಮೈಸೂರು,ಅಕ್ಟೋಬರ್,9,2021(www.justkannada.in): ಮೈಸೂರಿನ ವಿವೇಕಾನಂದ ವೃತ್ತದ ಬಳಿ ಇರುವ ಶ್ರೀಪಾದಶಿಲೆ ಉದ್ಯಾನದ ಬಳಿ ಶುಕ್ರವಾರ ಸಂಜೆ ಆರು ಗಂಟೆಯ ಸಮಯದಲ್ಲಿ ಪೊಲೀಸರು ಬಂದು ಸೇರ ತೊಡಗಿದರು.

ಉದ್ಯಾನದ ಸುತ್ತಮುತ್ತಲಿನ ನಾಗರಿಕರನ್ನು ಭೇಟಿ ಮಾಡಿ ಕುಂದುಕೊರತೆ ವಿಚಾರಿಸಲು ಕುವೆಂಪು ನಗರ ಪೊಲೀಸ್ ಠಾಣೆಯ ನೂತನ ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಷಣ್ಮುಗವರ್ಮ ತಮ್ಮ ಸಿಬ್ಬಂದಿಗಳೊಡನೆ ಆಗಮಿಸಿ ಆಸುಪಾಸಿನ ನಿವಾಸಿಗಳೊಂದಿಗೆ ಸಮಾಲೋಚನೆ ನಡೆಸಿದರು.

ಉದ್ಯಾನದಲ್ಲಿ ಪ್ರತಿ ನಿತ್ಯ ನಡೆಯುವ ಅನೈತಿಕ ಚಟುವಟಿಕೆಗಳು,ಕಾಲೇಜು ವಿದ್ಯಾರ್ಥಿಗಳ ಅಸಭ್ಯ ವರ್ತನೆ,ಮುಜುಗರ ತರುವ ನಡವಳಿಕೆ,ಸೈಲೆನ್ಸರ್ ಮಾರ್ಪಾಟು ಮಾಡಿ ಗುಡುಗುವ ಬುಲೆಟ್ ವಾಹನದ ಆರ್ಭಟ,ಅಪ್ರಾಪ್ತ ವಯಸ್ಸಿನ ಬಾಲಕರ ಅಪಾಯಕಾರಿ ಬೈಕ್ ಸವಾರಿ,ಉದ್ಯಾನದಲ್ಲಿ ಆವರಿಸುವ ಕತ್ತಲು,ಕೆಟ್ಟುಹೋಗಿರುವ ಸೌರ ವಿದ್ಯುದ್ದೀಪ,ಪಾಲಿಕೆಯ ಅಸಹಕಾರ ಚಳುವಳಿ ಇತ್ಯಾದಿ ಸಮಸ್ಯೆಗಳ ವಿಚಾರವಾಗಿ ನಾಗರಿಕರು ಪೊಲೀಸ್ ಇನ್ಸ್‌ಪೆಕ್ಟರ್ ಅವರಿಗೆ ಮನವರಿಕೆ ಮಾಡಿದರು.

ಜನರ ಮನವಿಯನ್ನು ಗೌರವದಿಂದ ಆಲಿಸಿ ಪ್ರತಿಕ್ರಿಯೆ ನೀಡಿದ ಪೊಲೀಸ್ ಇನ್ಸ್‌ಪೆಕ್ಟರ್ ಕೆ ಷಣ್ಮುಗವರ್ಮ ಅವರು ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.ಜೊತೆಗೆ ನಾಗರಿಕರೊಂದಿಗೆ ಗೌರವಯುತವಾಗಿ ಚರ್ಚಿಸಿದರು.

ಪ್ರತಿನಿತ್ಯ ಆ ಭಾಗದಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಗಳ ಮೊಬೈಲ್ ಸಂಖ್ಯೆಯನ್ನು ಜನರಿಗೆ ನೀಡಿದ ಇನ್ಸ್‌ಪೆಕ್ಟರ್ ಅವರು ಯಾವುದೇ ಸಮಸ್ಯೆ ಉಂಟಾದರೂ ತಕ್ಷಣ ತಮ್ಮ ಪೊಲೀಸರಿಗೆ ಕರೆಮಾಡುವಂತೆ ಜನರಿಗೆ ಸಲಹೆ ನೀಡಿದರು. ಜನರು ಕರೆ ಮಾಡಿದ ತಕ್ಷಣ ಸ್ಥಳಕ್ಕೆ ಬಂದು ಕ್ರಮ ಕೈಗೊಳ್ಳುವ ಭರವಸೆಯನ್ನೂ ಮೂಡಿಸಿದರು. ಸಭೆಯಲ್ಲಿ ಶ್ರೀಪಾದಶಿಲೆ ಉದ್ಯಾನದ ಆಸುಪಾಸಿನ ನಿವಾಸಿಗಳು ಭಾಗವಹಿಸಿದ್ದರು.

ಅದರಲ್ಲೂ ಮುಖ್ಯವಾಗಿ ಸ್ವಾತಂತ್ರ್ಯ ಹೋರಾಟಗಾರ ಡಿ ಎಸ್ ಜಗದೀಶ್,ಬಿಇಎಂಎಲ್ ಸಂಸ್ಥೆಯ ಉದಯ್ ಕುಮಾರ್,ಹಿರಿಯರಾದ ಬೀರೇಗೌಡ, ಶ್ರೀನಿವಾಸ್, ಕಾಳೇಗೌಡ,ಹಾಗೂ ಇತರರು ಪಾಲ್ಗೊಂಡು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಈ ಜನಸ್ನೇಹಿ ಸಭೆಯಲ್ಲಿ ಕುವೆಂಪು ನಗರದ ಪೊಲೀಸ್ ನಿರೀಕ್ಷಕ ಕೆ ಷಣ್ಮುಗವರ್ಮ ಅವರೊಂದಿಗೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಗಳಾದ ಗಂಗಾಧರ್, ಜ್ಯೋತ್ಸ್ನಾರಾಜು, ಮುರಳಿ ಗೌಡ,ಎ ಎಸ್ ಐ ಶೇಖರ್,ಮುಖ್ಯ ಪೇದೆಗಳಾದ ಮಂಜುಳಾ, ಸಿದ್ದರಾಜು,ಯೋಗೇಶ್,ಹಾಗೂ ಪೊಲೀಸರಾದ ನವೀನ್,ಮಹೇಂದರ್, ಹಜರತ್ ಮುಂತಾದವರು ಪಾಲ್ಗೊಂಡಿದ್ದರು.

ಉದ್ಯಾನದ ಬಳಿ ಬಂದು ನಾಗರಿಕರ ಕುಂದುಕೊರತೆಗಳನ್ನು ಆಲಿಸಿ ಅವರಲ್ಲಿ ಭರವಸೆ ಮೂಡಿಸಿದ ಕುವೆಂಪು ನಗರ ಪೊಲೀಸರ ನಡೆಯನ್ನು ವಕೀಲ ಪಿ.ಜೆ.ರಾಘವೇಂದ್ರ ಶ್ಲಾಘಿಸಿದ್ದಾರೆ.

Key words: mysore- Kuvempu nagar-police – public – meeting.