ಪ್ರಚೋದನಾಕಾರಿ ಹೇಳಿಕೆ: ಜೈಲಿಗಟ್ಟುವಂತೆ ಸ್ವಪಕ್ಷೀಯರ ವಿರುದ್ದವೇ ಗುಡುಗಿದ ‘ಹಳ್ಳಿಹಕ್ಕಿ’…

Promotion

ಮೈಸೂರು,ಮಾ,10,2020(www.justkannada.in):  ಸಮಾಜದಲ್ಲಿ ಸಾಮರಸ್ಯ ಕದಡುವಂತಹ  ಪ್ರಚೋದನಾಕಾರಿ ಹೇಳಿಕೆ ನೀಡುವವರ ವಿರುದ್ದ ಅಡಗೂರು ಹೆಚ್.ವಿಶ್ವನಾತ್ ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರಿನಲ್ಲಿಂದು ಪ್ರತಿಕಾಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ಹೆಚ್ ವಿಶ್ವನಾಥ್ ಹೇಳಿದ್ದಿಷ್ಟು…

ಕೆಲದಿನಗಳ ಹಿಂದೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ದೇಶದ ಪ್ರಧಾನಿ ವಿರುದ್ದ ಪ್ರಚೋದನಾಕಾರಿ  ಹೇಳಿಕೆ ನೀಡಿದ್ದಾರೆ. ಆ ಮೂಲಕ ಮುಸ್ಲೀಂರನ್ನ ಎತ್ತಿಕಟ್ಟುವ ಹುನ್ನಾರ ಮಾಡಿದ್ದಾರೆ. ಹಾಗಾಗಿ ಅವರ ವಿರುದ್ದ ಕೇಸ್ ದಾಖಲಿಸಿಕೊಂಡು ಜೈಲಿಗಟ್ಟಬೇಕೆಂದು ಒತ್ತಾಯಿಸಿದರು.

ಇದೇ ವೇಳೆ ಬಿಜೆಪಿ ಮುಖಂಡರಾದ ಬಸನಗೌಡ ಪಾಟೀಲ್ ಯತ್ನಾಳ್, ಕೆ.ಎಸ್ ಈಶ್ವರಪ್ಪ ಅವರು ಸಹ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ.  ಚುನಾವಣಾ ಸಂದರ್ಭದಲ್ಲಿ ಹಾಗೂ ನಂತರ ಮುಸ್ಲೀಂರ ಮತಗಳೇ ನಮಗೆ ಬೇಡ ಎಂಬ ಹೇಳಿಕೆ ಬಗ್ಗೆ ಪತ್ರಕರ್ತರು ಹೆಚ್.ವಿಶ್ವನಾಥ್ ಗಮನ ಸೆಳೆದರು.

ಇದಕ್ಕೆ ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ಸಮಾಜದ ಸ್ವಾಸ್ತ್ಯ ಹಾಳು ಮಾಡುವ ಪ್ರಚೋದನಾಕಾರಿ ಹೇಳಿಕೆಯನ್ನ ಯಾರೇ ನೀಡಲಿ ಅವರ ವಿರುದ್ದ  ಸೂಕ್ತ ಕ್ರಮ ಜರುಗಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಒಟ್ಟಾರೆ ಅಡಗೂರು ಹೆಚ್. ವಿಶ್ವನಾಥ್ ಪ್ರತ್ರಿಕಾ ಗೋಷ್ಠಿಯಲ್ಲಿ ಹೇಳಿದಿಷ್ಟು….

ಸಿದ್ದರಾಮಯ್ಯ, ಹೆಚ್. ಡಿ ದೇವೇಗೌಡ, ಹೆಚ್. ಡಿ ಕುಮಾರಸ್ವಾಮಿ ಸೇರಿದಂತೆ ಎಲ್ಲರೂ ಇತ್ತೀಚೆಗೆ ಸಂವಿಧಾನದ ಬಗ್ಗೆ ಮಾತನಾಡುತ್ತಿದ್ದಾರೆ.  ಸತ್ಯದ ಸಾಕ್ಷಾತ್ಕಾರವನ್ನು ಅವರ ಮಾತುಗಳ ಚಮತ್ಕಾರದಿಂದ, ಮಾಂತ್ರಿಕತೆಯಿಂದ ಮುಚ್ಚುವ ಪ್ರಯತ್ನ ಮಾಡ್ತಿದ್ದಾರೆ.  ಶಾದಿ ಭಾಗ್ಯ ರದ್ದಾದ ಬಗ್ಗೆ ಮಾತನಾಡುತ್ತಾರೆ. ಆದರೆ ಮುಸ್ಲಿಮರ ಅಕ್ಷರ, ಆರೋಗ್ಯ, ಉದ್ಯೋಗ,  ರಾಜಕೀಯ ಭಾಗ್ಯದ ಬಗ್ಗೆ ಏಕೆ ಮಾತನಾಡುವುದಿಲ್ಲ. ಇದು ಅವರ ಬೂಟಾಟಿಕೆಯನ್ನು ತೋರಿಸುತ್ತಿದೆ ಎಂದು ಕಿಡಿಕಾರಿದರು.

ಹಾಗೆಯೇ ದೊರೆಸ್ವಾಮಿ ಬಗ್ಗೆ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್,  ಎಚ್. ಎಸ್ ದೊರೆಸ್ವಾಮಿ ಅವರು ನಾಡಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು. ಆದರೆ ಅವರು ಒಂದು ಪಕ್ಷದ ಪರವಾಗಿರಬಾರದು. ಬಸವನಗೌಡ ಪಾಟೀಲ್ ಯತ್ನಾಳ್ ಕೇಂದ್ರ ಮಂತ್ರಿಗಳಾಗಿದ್ದವರು. ಅವರೂ ಕೂಡ ದೊರೆಸ್ವಾಮಿ ಅವರ ಬಗ್ಗೆ ಕೇವಲವಾಗಿ ಮಾತನಾಡಬಾರದು ಎಂದು ತಿಳಿಸಿದರು.

ಮುಸ್ಲಿಂ ಸಮುದಾಯಕ್ಕೆ ಸಿಎಲ್ಪಿ ನಾಯಕನ ಸ್ಥಾನ ಬಿಟ್ಟು ಕೊಡ್ತಿರಾ..? ಸಿದ್ದರಾಮಯ್ಯಗೆ ಹಳ್ಳಿ ಹಕ್ಕಿ ಟಾಂಗ್.

ಇದೇ ವೇಳೆ ಮಾಜಿ ಸಿಎಂ ಸಿದ್ಧರಾಮಯ್ಯ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ವಿರುದ್ದ ಹರಿಹಾಯ್ದ ಹೆಚ್.ವಿಶ್ವನಾಥ್,  ಮುಸ್ಲಿಂ ಸಮುದಾಯಕ್ಕೆ ಸಿಎಲ್ಪಿ ನಾಯಕನ ಸ್ಥಾನ ಬಿಟ್ಟು ಕೊಡ್ತಿರಾ..?  ಬರೇ ಶಾದಿ ಭಾಗ್ಯದ ಬಗ್ಗೆ ಮಾತನಾಡ್ತಿರಾ? ನಾನು ಜಾರಿಗೆ ತಂದ ಯಶಸ್ವಿನಿ ಯೋಜನೆ ರದ್ದು ಮಾಡಿ ಜನರಿಗೆ ಆನಾರೋಗ್ಯದ ಭಾಗ್ಯ ನೀಡಿದ್ದಿರಿ. ನಾನು ಮಾರಾಟದ ರಾಜಕೀಯ ಮಾಡಿಲ್ಲ ಎಂದು ಸಿದ್ದರಾಮಯ್ಯಗೆ ಟಾಂಗ್ ನೀಡಿದರು.

ಹೆಚ್ ಡಿ ದೇವೇಗೌಡ್ರೆ ಮುಸ್ಲಿಂರಿಗೆ ಯಾಕೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ಕೊಡ್ತಿರಿ. ಅಪ್ಪ ಮಕ್ಕಳ ಅಧಿಕಾರ ದಾಹ ಖಂಡಿಸಿ ನಾನು ರಾಜಿನಾಮೆ ಕೊಟ್ಟೆ. ನನ್ನದು ಹೋರಾಟದ ರಾಜಕಾರಣ. ನೀವೂ ಎಂದಾದರೂ ಹೋರಾಟದ ರಾಜಕಾರಣ ಮಾಡಿದ್ದಿರಾ..? ಎಂದು ಹೆಚ್.ವಿಶ್ವನಾಥ್ ಪ್ರಶ್ನಿಸಿದರು.

ಸಿದ್ದರಾಮಯ್ಯ, ರಮೇಶ್ ಕುಮಾರ್ ಮುಸ್ಲಿಮರನ್ನು ದಡ್ಡರೆಂದು ಭಾವಿಸಿದ್ದಾರೆ.

ಸಿಎಎ ವಿಚಾರ ಹಾಗೂ ಮುಸ್ಲಿಮರನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ. ಸಿದ್ದರಾಮಯ್ಯ, ರಮೇಶ್ ಕುಮಾರ್ ಮುಸ್ಲಿಮರನ್ನು ದಡ್ಡರೆಂದು ಭಾವಿಸಿದ್ದಾರೆ. ಆದರೆ ಕಾಂಗ್ರೆಸ್ ನಾಯಕರ ಅಂತರಾಳವನ್ನು ಮುಸ್ಲಿಮರು ಕೂಡ ಅರ್ಥ ಮಾಡಿಕೊಂಡಿದ್ದಾರೆ ಎಂದು  ಮಾಜಿ ಸಚಿವ ಎಚ್. ವಿಶ್ವನಾಥ್  ಹೇಳಿದರು.

ಅವರ ಮಕ್ಕಳ ಮದುವೆಯನ್ನು ಸರಳವಾಗಿ ಮಾಡಬೇಕಿತ್ತು….

ಶ್ರೀರಾಮುಲು ಹಾಗೂ ಹೆಚ್. ಡಿ ಕುಮಾರ‌ಸ್ವಾಮಿ ಸಾಮಾನ್ಯರಲ್ಲ. ಅವರು ಜವಬ್ದಾರಿಯುತ ಸ್ಥಾನದಲ್ಲಿರುವ ಜನಪ್ರತಿನಿಧಿಗಳು. ಅವರ ಮಕ್ಕಳ ಮದುವೆಯನ್ನು ಸರಳವಾಗಿ ಮಾಡಬೇಕಿತ್ತು. ಶ್ರೀರಾಮುಲು ಬಳ್ಳಾರಿಯಿಂದ ಬೆಂಗಳೂರಿನವರೆಗೆ. ಕುಮಾರ‌ಸ್ವಾಮಿ ರಾಮನಗರದಿಂದ ಚನ್ನಪಟ್ಟಣದವರೆಗೆ ಮದುವೆ ಮಾಡುವ ಅಗತ್ಯವಿರಲಿಲ್ಲ. ನೂರಾರು ಸಾಮೂಹಿಕ ವಿವಾಹ ಮಾಡಿದ್ದ ಶ್ರೀರಾಮುಲು ಮಗಳ ಮದುವೆಯನ್ನು ಅದೇ ರೀತಿ ಮಾಡಬೇಕಿತ್ತು ಎಂದು ಸಲಹೆ ನೀಡಿದರು.

ಕುಮಾರ‌ಸ್ವಾಮಿ ಈ ರಾಜ್ಯಕ್ಕೆ ಸಿಎಂ ಆಗಿದ್ದವರು, ಅವರು ಇತರರಿಗೆ ಮಾದರಿಯಾಗಬೇಕಿತ್ತು. ಅದು ಬಿಟ್ಟು ಅದ್ದೂರಿ ಮದುವೆ ಮಾಡುವ ಮೂಲಕ ಪಕ್ಷಸಂಘಟನೆ ಅಂತಾ ಹೇಳ್ತಿದಾರೆ. ಹಾಗಾದರೆ ಜೆಡಿಎಸ್‌‌ ನವರು ಮಾತ್ರ ಮದುವೆಗೆ ಹೋಗಬೇಕಾ..? ಸರ್ವರಿಗೂ ಸ್ವಾಗತ ಅಂತಾ ಹಾಕಿದ್ರೆ ನಮ್ಮಂತವರು ಹೋಗಬಾರದಾ? ಎಂದು ಹೆಚ್.ವಿಶ್ವನಾಥ್ ಟೀಕಿಸಿದರು.

ಬಡವನೊಬ್ಬ ಆಡಂಬರದ ಮದುವೆ ಮಾಡಿದ್ರೆ ಅದು ಮಾದರಿ. ಅದೇ ರೀತಿ ಶ್ರೀಮಂತರು ಸರಳ ಮದುವೆ ಮಾಡಿದ್ರೆ ಅವರೂ ಮಾದರಿ ಆಗ್ತಾರೆ. ಮಕ್ಕಳ ಮದುವೆಗಳನ್ನು ಸರಳವಾಗಿ ಮಾಡಿರುವ ಸಾಕಷ್ಟು ಜನರಿದ್ದಾರೆ. ಇವರು ಹಾಗೆಯೇ ಮಾಡಬಹುದಿತ್ತು ಎಂದು ಹೆಚ್. ವಿಶ್ವನಾಥ್  ತಿಳಿಸಿದರು.

Key words: mysore-former minister- provocative- statement- Their party-leader