ಮೈಸೂರಿನ ಪಟಾಕಿ ಕಾರ್ಖಾನೆಯಲ್ಲಿ ಅಗ್ನಿ ಅವಘಡ: ಕೆರೆಯ ಜಲಚರ ಜೀವಿಗಳಿಗೆ ಹಾನಿ: ಪ್ರಕರಣದ ಬಗ್ಗೆ ತನಿಖೆಗೆ ಆಗ್ರಹ.

ಮೈಸೂರು,ಏಪ್ರಿಲ್,19,2023(www.justkannada.in): ಮೈಸೂರು ನಗರದ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ಜುಪಿಟರ್  ಪಟಾಕಿ ದಾಸ್ತಾನು ಮಳಿಗೆಗಳಿಗೆ ಆಕಸ್ಮಿಕ ಬೆಂಕಿ ತಗುಲಿ  ಅವಘಡ ಉಂಟಾಗಿ ಲಕ್ಷಾಂತರ ಮೌಲ್ಯದ ಪಟಾಕಿ ದಾಸ್ತಾನು ಹೊತ್ತಿ ಉರಿದ ಘಟನೆ ಇಂದು ನಡೆದಿದೆ.

ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದ ಬೊಮ್ಮೆನಹಳ್ಳಿ ಕೆರೆ ಪಕ್ಕ ದಡದ ಪಟಾಕಿ ಮಳಿಗೆ ಬೆಂಕಿ ಆಹುತಿಗೆ ಗುರಿಯಾಗಿದೆ. ಬಿರು ಬೇಸಿಗೆಯ ಕಾವಿನಿಂದಾಗಿ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದು, ಪಟಾಕಿ ದಾಸ್ತಾನು ಮಳಿಗೆಯಲ್ಲಿ ಕಾಣಿಸಿಕೊಂಡ ಬೆಂಕಿ ಸ್ಪೋಟಗೊಂಡು ಅಕ್ಕಪಕ್ಕದ ನಿವಾಸಿಗಳಲ್ಲಿ  ಭಯಭೀತಿ ಉಂಟುಮಾಡಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಪೋಲಿಸರು ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.

ಘಟನೆಯಿಂದಾಗಿ ಸದ್ಯಕ್ಕೆ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಹೆಬ್ಬಾಳು ಪೋಲಿಸ್  ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಪೋಲಿಸರು ಭೇಟಿ‌ ನೀಡಿ ಬೆಂಕಿ ಅವಘಡ ಕುರಿತು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಪಟಾಕಿ ಮಳಿಗೆಗೆ ಅನುಮತಿ ಬೇಡವೆಂಬ ಮನವಿಗೂ ಸ್ಪಂದನೆ ಇಲ್ಲ: ಪ್ರಕರಣದ ತನಿಖೆಗೆ ಮೈಸೂರು ಕೈಗಾರಿಕೆಗಳ ಸಂಘ ಆಗ್ರಹ.

ಪಟಾಕಿ ಮಳಿಗೆಯ ಅವಘಡದಿಂದಾಗಿ ಕೆರೆಯ ಜಲಚರ ಜೀವಿಗಳಿಗೆ ಹಾನಿಯಾಗಿದೆ .ಈ ಪ್ರದೇಶದಲ್ಲಿ ಪಟಾಕಿ ಮಳಿಗೆಗೆ ಅನುಮತಿ ನೀಡಬಾರದೆಂದು ಜಿಲ್ಲಾಧಿಕಾರಿಗಳು ,ಆರಕ್ಷಕ ಅಧೀಕ್ಷಕರು , ಅಗ್ನಿಶಾಮಕ ಇಲಾಖೆ ,ಗ್ರಾಮ ಪಂಚಾಯತಿ, ನಗರ ಸಭೆಗಳಿಗೆ ಮೈಸೂರು ಕೈಗಾರಿಕೆಗಳ ಸಂಘ 15 ವರ್ಷಗಳಿಂದ ನೀಡುತ್ತಿರುವ ಮನವಿಗೆ ಸ್ಪಂದಿಸದೆ ಅನುಮತಿ ನೀಡಲಾಗಿತ್ತು. ಕೆಐಎಡಿಬಿ , ಕೈಗಾರಿಕಾ ಪ್ರದೇಶ ಆಭಿವೃದ್ಧಿ ಮಂಡಳಿಯು ತಕರಾರು ಅರ್ಜಿ  ಸಲ್ಲಿಸಿತ್ತು. ಕೈಗಾರಿಕೆಗೆ ನಿವೇಶನ ಪಡೆದು ಪಟಾಕಿ ಮಳಿಗೆ  ನಡೆಸುತ್ತಿದ್ದರೂ ಯಾರೂ ಕ್ರಮ ಕೈಗೊಳ್ಳಲು ಮುಂದಾಗಲಿಲ್ಲ. ಈಗ ಈ ಪ್ರಕರಣದ ಬಗ್ಗೆ ತನಿಖೆ ನಡೆಸಲು ಆದೇಶ ಹೊರಡಿಸಬೇಕಾಗಿದೆ ಎಂದು ಮೈಸೂರು ಕೈಗಾರಕೆಗಳ ಸಂಘ ಪ್ರಧಾನ ಕಾರ್ಯದರ್ಶಿ ಸುರೇಶ ಕುಮಾರ್ ಜೈನ್ ಆಗ್ರಹಿಸಿದ್ದಾರೆ.

Key words: Mysore -Fireworks -Factory –Fire- Demand- Inquiry