ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಮೈಸೂರು ಜಿಲ್ಲೆಯಲ್ಲಿ ಓಡಾಟ: ಸಚಿವ ಸೋಮಶೇಖರ್

ಮೈಸೂರು, ಏಪ್ರಿಲ್ 23, 2020 (www.justkannada.in): ಮೈಸೂರು ರೆಡ್ ಝೋನ್ ಇದ್ದು, ಜಿಲ್ಲೆಯಲ್ಲಿ ಸಡಿಲಿಕೆ ಇಲ್ಲ. ಮೆಡಿಕಲ್ ಎಮರ್ಜೆನ್ಸಿಯಂತಹ ತುರ್ತು ಪರಿಸ್ಥಿತಿಗಳಿಗೆ ಮಾತ್ರ ಓಡಾಟಕ್ಕೆ ಅನುಮತಿ ಕೊಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಕೃಷಿ ಚಟುವಟಿಕೆಗೆ ಈಗಾಗಲೇ ಅನುಮತಿ ಕೊಡಲಾಗಿದೆ. ಉಳಿದಂತೆ ಈ ಹಿಂದಿನ ಕ್ರಮವೇ ಮುಂದುವರಿಯುತ್ತದೆ. ಐಟಿ-ಬಿಟಿಗೆ ಅಗತ್ಯವಿರುವಷ್ಟು ಮಾತ್ರ ಅನುಮತಿ ಕೊಡಲಾಗಿದ್ದು, ಪರಿಸ್ಥಿತಿ ನೋಡಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಇನ್ನು ಕಟ್ಟಡ ಕಾಮಗಾರಿಗಳಿಗೆ ಸಂಬಂಧಪಟ್ಟಂತೆ ಕಟ್ಟಡ ಕಾರ್ಮಿಕರು ಮೈಸೂರು ಜಿಲ್ಲೆಯವರಾಗಿದ್ದು, ಇಲ್ಲೇ ಇದ್ದರೆ ಮಾತ್ರ ಕೆಲಸ ಮಾಡಬಹುದು. ಹೊರ ಜಿಲ್ಲೆ ಇಲ್ಲವೇ ರಾಜ್ಯಗಳಿಂದ ಈ ಸಂದರ್ಭದಲ್ಲಿ ಇಲ್ಲಿಗೆ ಬಂದು ಕೆಲಸ ಮಾಡಲು ಅನುಮತಿ ಇಲ್ಲ. ತೀರಾ ತುರ್ತು ಇದ್ದವರು ಅನುಮತಿ ಪಡೆದು ಕೆಲಸ ಮಾಡಿಸಿಕೊಳ್ಳಬಹುದು. ಇನ್ನು ಕಬ್ಬಿಣ ಹಾರ್ಡ್‌ವೇರ್ ಅಂಗಡಿಗಳು ತೆರೆಯುವಂತಿಲ್ಲ. ಪ್ಲಂಬರ್ ಎಲೆಕ್ಟ್ರಿಕ್ ಕೆಲಸಗಳಿಗೆ ಪೊಲೀಸ್ ಅನುಮತಿ ಅವಶ್ಯಕ. ಉಳಿದ ವಿಷಯಗಳಿಗೆ ಮೇ 3ನೇ ತಾರೀಖಿನವರೆಗೆ ಯಾವುದೇ ಕಾರಣಕ್ಕೂ ಅನುಮತಿ ಇಲ್ಲ. ಆಮೇಲೆ ಈ ಬಗ್ಗೆ ಪರಿಶೀಲನೆ ನಡೆಸಿ ಮುಂದೆ ಏನು ಮಾಡಬಹುದು ಎಂದು ತೀರ್ಮಾನ ಮಾಡಲಾಗುವುದು ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದರು.

ಮೈಸೂರಲ್ಲಿ ಇಷ್ಟು ಸೋಂಕು ಹರಡಲು ಜ್ಯೂಬ್ಲಿಯೆಂಟ್ ಹಾಗೂ ಜಮೈತ್ ನವರಿಂದ ಹೆಚ್ಚಾಗಿ ಬಂದಿದೆ. ಆದರೆ, ಇಲ್ಲಿಗೆ ಬಂದಿರುವುದು ಕೇವಲ 3ರಿಂದ 4 ಮಾತ್ರ. ಹೀಗಾಗಿ ಇಲ್ಲಿಯವರೆಗೆ ಸಹಕಾರ ನೀಡಿದ ಮಾನ್ಯ ಜನತೆ ಮುಂದೂ ಸಹಕಾರ ನೀಡಲಿ ಎಂದು ಕೋರಿಕೊಳ್ಳುವೆ ಎಂದು ಸಚಿವರು ತಿಳಿಸಿದರು.

ರೈತರು ತಮ್ಮ ಹಳೇ ಸಾಲವನ್ನು ತೀರಿಸುವ ಸಲುವಾಗಿ ಸುಸ್ತಿ ಮನ್ನಾ ಮಾಡಲಾಗುವುದು. ಇದಕ್ಕೆ ಮಾರ್ಚ್ 31ರ ವರೆಗೆ ಗಡುವು ನೀಡಲಾಗಿತ್ತು. ಈ ಗಡುವನ್ನು ಮತ್ತೆ ಮೂರು ತಿಂಗಳ ಅವಧಿಗೆ ವಿಸ್ತರಿಸಲಾಗುವುದು. ಅವಧಿ ವಿಸ್ತರಣೆಯಿಂದ 14 ಕೋಟಿ ರೂ. ಬಡ್ಡಿ ಹೊರೆ ಬರುತ್ತದೆ. ಅದನ್ನು ನಾವೇ ಭರಿಸುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ ಎಂದು ಸಚಿವರು ತಿಳಿಸಿದರು.

ಇನ್ನು ನಾಗರಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಲಿ, ಯಾವುದೇ ಕಾರಣಕ್ಕೂ ಅನಾವಶ್ಯಕವಾಗಿ ಮನೆಯಿಂದ ಆಚೆ ಬರಕೂಡದು ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದರು.