ಮೈಸೂರು ದಸರಾ ಕವಿಗೋಷ್ಠಿ ಅತ್ಯಂತ ಯಶಸ್ವಿಯಾಗಿ ನಡೆಯಲಿ-ಸಚಿವ ಎಸ್.ಟಿ ಸೋಮಶೇಖರ್ ಶುಭ ಹಾರೈಕೆ…

Promotion

ಮೈಸೂರು,ಅಕ್ಟೋಬರ್,22,2020(www.justkannada.in):  ಮೈಸೂರು ದಸರಾ 2020 ಅಂಗವಾಗಿ ನಡೆಯುವ ಕವಿಗೋಷ್ಠಿಯಲ್ಲಿ ಉಪಸ್ಥಿತರಿರಲು ಸಾಧ್ಯವಾಗುತ್ತಿಲ್ಲ. ಕವಿಗೋಷ್ಠಿಯು ಅತ್ಯಂತ ಯಶಸ್ವಿಯಾಗಿ ನಡೆಯಲಿ, ಕವಿಗಳಿಗೆ ಮುಂದೂ ಸಹ ಮಾನ್ಯತೆ ಸಿಗಲಿ, ಹೊಸ ಹೊಸ ಕವಿಗಳು ಹುಟ್ಟಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಹೇಳಿದ್ದಾರೆ.jk-logo-justkannada-logo

ದಸರಾ ಕವಿಗೋಷ್ಠಿ ಕುರಿತು ಮಾತನಾಡಿ ತಮ್ಮ  ಸಂದೇಶ ತಿಳಿಸಿರುವ ಸಚಿವ  ಎಸ್.ಟಿ. ಸೋಮಶೇಖರ್, ದಸರಾ – 2020ರ ಕವಿಗೋಷ್ಠಿಗೆ ನನ್ನ ಹೃದಯಸ್ಪರ್ಶಿ ನಮನಗಳು. ನಮ್ಮ ದೇಶ ವಿವಿಧತೆಯಲ್ಲಿ ಏಕತೆಯ ಸಂದೇಶವನ್ನು ಸಾರುತ್ತದೆ. ಅದೇ ರೀತಿಯಾಗಿ ನಮ್ಮ ಸಂಸ್ಕೃತಿ ಸಹ ಪ್ರದೇಶದಿಂದ ಪ್ರದೇಶಗಳಿಗೆ ಹೊಸತನ್ನು ಹೊಂದಿದೆ. ಕಲೆ-ಸಂಸ್ಕೃತಿ- ಸಾಹಿತ್ಯ ಹೀಗೆ ಅನೇಕ ಕ್ಷೇತ್ರಗಳು ಜೀವಂತವಾಗಿ ಇಂದಿಗೂ ತನ್ನ ಅಸ್ತಿತ್ವ ಉಳಿದುಕೊಂಡು, ಉಳಿಸಿಕೊಂಡು ಹೋಗಲಾಗುತ್ತಿದೆ ಎಂದರೆ ಅದು ನಮ್ಮ ಪೂರ್ವಜರು ಹಾಕಿಕೊಟ್ಟ ಬುನಾದಿ ಎಂದೇ ಹೇಳಬಹುದಾಗಿದೆ. ಕವಿತೆ ಅಥವಾ ಅದನ್ನು ರಚಿಸುವ ಕವಿಗೆ ರಾಜಪರಂಪರೆಯಿಂದಲೂ ಗೌರವ ಸಲ್ಲಿಸುತ್ತಲೇ ಬರುತ್ತಿರುವ ಸಂಸ್ಕೃತಿ ನಮ್ಮದು.

ರವಿ ಕಾಣದ್ದನ್ನು ಕವಿ ಕಂಡ ಎಂಬ ಮಾತು ನಿಜಕ್ಕೂ ಅತಿಶಯೋಕ್ತಿ ಅಲ್ಲ. ಒಬ್ಬ ಕವಿಗೆ ಅಂತಹ ಶಕ್ತಿಗಳಿವೆ. ಇದೇ ಕಾರಣಕ್ಕಾಗಿಯೇ ರಾಜಪರಂಪರೆಯಲ್ಲಿ ಮಹಾಕವಿ ಕಾಳಿದಾಸನಿಂದ ಹಿಡಿದು, ಪಂಪ, ರನ್ನ, ಬಸವಣ್ಣನವರಂತಹ ಶ್ರೇಷ್ಠ ಕವಿಗಳು ರಾಜಾಶ್ರಯವನ್ನು ಪಡೆದು ಕಲೆಯನ್ನು ಉಳಿಸಿ ಬೆಳೆಸಿದರು. ಈಗ ಪ್ರಜಾಪ್ರಭುತ್ವದಲ್ಲೂ ಪ್ರಜಾಶ್ರಯದಲ್ಲಿ ಅಂಥ ಶ್ರೇಷ್ಠ ಕೆಲಸವನ್ನು ನಾವು ಮಾಡುತ್ತಿರುವುದಕ್ಕೆ ನಿಜಕ್ಕೂ ಹೆಮ್ಮೆಯಾಗುತ್ತದೆ.

ಇನ್ನು ವಿಜಯನಗರದ ಮಹಾ ಸಾಮ್ರಾಜ್ಯದ ಶ್ರೀಕೃಷ್ಣ ದೇವರಾಯನ ಸ್ಥಾನವಂತೂ ಕವಿ, ಸಾಹಿತಿಗಳಿಂದಲೇ ಶೋಭಿಸುತ್ತಿತ್ತು ಎಂಬುದು ಐತಿಹಾಸಿಕ ಸತ್ಯ. ವಿಜಯನಗರದ ಸುಸಂಸ್ಕೃತಿಯನ್ನೇ ನಮ್ಮ ಮೈಸೂರಿನ ಒಡೆಯರುಗಳು ಮುಂದುವರಿಸಿದ್ದಲ್ಲದೆ, ಅನೇಕ ಮಹನೀಯ ಕವಿ-ಸಾಹಿತಿಗಳಿಗೆ ಆಸ್ಥಾನದಲ್ಲಿ ಸ್ಥಾನಮಾನಗಳನ್ನು ನೀಡಿ ಗೌರವಿಸಿದ್ದಾರೆಂದರೆ ಅವರಿಗೆ ಕವಿತ್ವದ ಮೌಲ್ಯದ ಬಗ್ಗೆ ಎಷ್ಟು ಗೌರವ ಇತ್ತು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಇಷ್ಟು ವರ್ಷಗಳ ಕಾಲ ಯಾವುದೇ ಅಡೆತಡೆ ಇಲ್ಲದೆ ನಡೆಯುತ್ತಿದ್ದ ದಸರೆಗೆ ಕೊರೋನಾ ಎಂಬ ಮಹಾಮಾರಿ ಅಲ್ಪಮಟ್ಟಿಗೆ ಮುಳುವಾಗಿದ್ದನ್ನು ನಾವು ನೀವು ಒಪ್ಪಿಕೊಳ್ಳಲೇಬೇಕು. ಒಂದು ಸಂದರ್ಭದಲ್ಲಿ ಕೊರೋನಾ ಆತಂಕದ ಹಿನ್ನೆಲೆಯಲ್ಲಿ ಕವಿಗೋಷ್ಠಿಯನ್ನು ನಡೆಸಲೇಬಾರದು ಎಂದು ತೀರ್ಮಾನಿಸಲಾಗಿತ್ತು. ಆದರೆ, ಸದಾ ಕನ್ನಡಕ್ಕಾಗಿಯೇ ದುಡಿಯುವ ಹಾಗೂ ತುಡಿಯುವ ಕನ್ನಡ ಸಾಹಿತ್ಯ ಪರಿಷತ್ತು ಅದರಲ್ಲೂ ಮೈಸೂರಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಈ ಹೊಣೆಯನ್ನು ತನ್ನ ಹೆಗಲಿಗೇರಿಸಿಕೊಂಡಿದ್ದನ್ನು ನಾನು ಈ ಸಂದರ್ಭದಲ್ಲಿ ನೆನೆಯಲೇಬೇಕು. ಈ ವಿಚಾರದಲ್ಲಿ ಡಾ. ವೈ.ಡಿ. ರಾಜಣ್ಣನವರ ಅವರನ್ನು ಆತ್ಮಪೂರ್ವಕವಾಗಿ ಸರ್ಕಾರದ ಪರವಾಗಿ ಅಭಿನಂದಿಸುವುದಾಗಿ ಸಚಿವ ಎಸ್.ಟಿ ಸೋಮಶೇಖರ್ ಹೇಳಿದರು.

ಕವಿತೆ ಒಂದು ಕನ್ನಡಿ ಇದ್ದಂತೆ, ಇಲ್ಲಿ ವ್ಯಕ್ತವಾಗುವ ಅನೇಕ ಸಾಲುಗಳನ್ನು ನಾವು ಒಳಮನಸ್ಸಿನಿಂದ ಸೂಕ್ಷ್ಮವಾಗಿ ಗಮನಿಸಿದರೆ ತಿದ್ದಿಕೊಳ್ಳುವಂತಹ ಅನೇಕ ಸಂದೇಶಗಳು ಕಾಣಸಿಗುತ್ತವೆ. ಕವಿಗಳ ಸರ್ವೋದಯ ಸಮಾನತೆಗಳ ಜೀವವಿಕಾಸಗಳಂತಹ ಆಶಯಗಳು ಅತಿ ಮುಖ್ಯ ಹಾಗೂ ಮೌಲ್ಯಯುತವಾದವುಗಳು. ಒಂದು ನಾಡು ಹೊಂದಿರುವ ಕವಿ – ಸಾಹಿತಿಗಳ ಆಧಾರದಿಂದ ಅದರ ಶ್ರೇಷ್ಠತೆಯನ್ನು ಅಳೆಯಲಾಗುತ್ತದೆ. ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿ ಬಂದಿರುವುದು ಇದರಿಂದಲೇ ಸಾಬೀತಾಗುತ್ತದೆ.mysore-dasara-kavigosti-successful-minister-st-somashekhar

ಪಂಪ,  ಬಸವಣ್ಣ ಕುಮಾರವ್ಯಾಸ, ಕುವೆಂಪು ಮೊದಲಾಗಿ, ಈ ನಾಡು ನುಡಿಯ ಬಾವುಟವನ್ನು ಮುಗಿಲೆತ್ತರಕ್ಕೆ ಹಾರಿಸಿದ ಅನೇಕ ಮಹನೀಯರುಗಳನ್ನು ಈ ಸಂದರ್ಭದಲ್ಲಿ ನಾವು ನೆನೆಯಲೇಬೇಕು. ಜಗತ್ತಿನ ಎಲ್ಲ ಕಡೆ ಸಲ್ಲುವವ, ಗೌರವಕ್ಕೊಳಗಾಗುವವರು ಎಂದರೆ ಅದು ಕವಿ – ಸಾಹಿತಿಗಳು ಮಾತ್ರ.

ಎಲ್ಲ ಕವಿಗಳಿಗೆ ಹಾಗೂ ಕಲಾರಸಿಕ ಸಹೃದಯರಿಗೆ ನಾಡ ಹಬ್ಬ ದಸರೆ ಶುಭಾಶಯಗಳನ್ನು ತಿಳಿಸುತ್ತಾ ಕವಿಗೋಷ್ಠಿಗೆ ಪ್ರೀತಪೂರ್ವಕವಾಗಿ ಸ್ವಾಗತಿಸುತ್ತೇನೆ. ಎಲ್ಲರಿಗೂ ನಾಡದೇವಿ ಚಾಮುಂಡೇಶ್ವರಿ ಸೌಭಾಗ್ಯಗಳ ಕೊಟ್ಟು ಕಾಪಾಡಲಿ ಎಂದು ತಾಯಿಯಲ್ಲಿ ಪ್ರಾರ್ಥಿಸುವುದಾಗಿ ಸಚಿವ ಸೋಮಶೇಖರ್ ತಿಳಿಸಿದ್ದಾರೆ.

ಸಚಿವ ಸಂಪುಟ ಸಭೆ ಇರುವ ಹಿನ್ನೆಲೆಯಲ್ಲಿ ನಾನು ಭಾಗಿಯಾಗಬೇಕಿದ್ದು, ಈ ನಿಮಿತ್ತ ಕವಿಗೋಷ್ಠಿಯಲ್ಲಿ ಉಪಸ್ಥಿತಿಯನ್ನು ವಹಿಸಲು ಸಾಧ್ಯವಾಗುತ್ತಿಲ್ಲ. ಕವಿಗೋಷ್ಠಿಯು ಅತ್ಯಂತ ಯಶಸ್ವಿಯಾಗಿ ನಡೆಯಲಿ, ಕವಿಗಳಿಗೆ ಮುಂದೂ ಸಹ ಮಾನ್ಯತೆ ಸಿಗಲಿ, ಹೊಸ ಹೊಸ ಕವಿಗಳು ಹುಟ್ಟಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದು ಸಚಿವ ಸೋಮಶೇಖರ್ ಹೇಳಿದರು.

Key words: mysore dasara –kavigosti- successful-Minister -ST Somashekhar