ಕಾಳಸಂತೆಯಲ್ಲಿ ಸೇಲ್ ಆಗ್ತಿದೆಯಾ ಮೈಸೂರು ದಸರ ಗೋಲ್ಡ್ ಕಾರ್ಡ್….!

 

ಮೈಸೂರು, ಅ.06, 2019 : (www.justkannada.in news) : ವಿಶ್ವವಿಖ್ಯಾತ ಮೈಸೂರು ದಸರ ಮಹೋತ್ಸವದ ಜಂಬೂಸವಾರಿ ವೀಕ್ಷಣೆಯ ಗೋಲ್ಡ್ ಕಾರ್ಡ್ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಈಗಾಗಲೇ ದಸರ ಜಂಬೂಸವಾರಿ ವೀಕ್ಷಣೆಗೆ ಪ್ರವಾಸಿಗರು ನಗರದ ಹಲವಾರು ಹೋಟೆಲ್ ಗಳಲ್ಲಿ ಕೋಣೆ ಕಾಯ್ದಿರಿಸಿದ್ದಾರೆ. ಇನ್ನು ಅನೇಕರು ಈಗ ರೂಮ್ ಬುಕ್ ಮಾಡಲು ಹರಸಾಹಸ ಪಡುತ್ತಿದ್ದಾರೆ. ಈ ನಡುವೆ ನಗರದ ಕೆಲ ಹೋಟೆಲ್ ಹಾಗೂ ಟ್ರಾವೆಲ್ಸ್ ಸಂಸ್ಥೆಯವರೆಂದು ಹೇಳಿಕೊಂಡು ದಸರ ಗೋಲ್ಡ್ ಕಾರ್ಡ್ ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಜಾಲದ ಬಗ್ಗೆ ಆರೋಪಗಳು ಕೇಳಿ ಬಂದಿದೆ. ಸರಕಾರವೇ ಅಧಿಕೃತವಾಗಿ ನಿಗಧಿ ಪಡಿಸಿರುವ 4000 ರೂ. ಬೆಲೆಯ ಗೋಲ್ಡ್ ಕಾರ್ಡ್ ಗಳನ್ನು 10 ರಿಂದ 12 ಸಾವಿರ ರೂ.ಗಳಿಗೆ ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ದೂರು ಕೇಳಿ ಬಂದಿದೆ.

ಜಂಬೂಸವಾರಿ ವೀಕ್ಷಣೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಬಗ್ಗೆ ಮಾಹಿತಿ ಹೊಂದಿರುವ ವ್ಯಕ್ತಿಗಳೇ ಗೋಲ್ಡ್ ಕಾರ್ಡ್ ಗಳನ್ನು ಮುಂಗಡವಾಗಿ ಖರೀದಿಸಿ ಈಗ ಬ್ಲಾಕ್ ನಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂಬುದು ಟಿಕೆಟ್ ವಂಚಿತರ ಆರೋಪ. ಇದಕ್ಕೆ ಪೂರಕವಾಗಿ ಗೋಲ್ಡ್ ಕಾರ್ಡ್ ಮಾರಾಟದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದನ್ನು ಸ್ಮರಿಸಬಹುದು. ದಿನಗಟ್ಟಲೇ ಅಲೆದರು ಗೋಲ್ಡ್ ಕಾರ್ಡ್ ಲಭಿಸದೆ ಜನತೆ ಹಿಡಿಶಾಪ ಹಾಕಿದ್ದನ್ನು ಮಾಧ್ಯಮಗಳು ಪ್ರವಾರ ಮಾಡಿದ್ದವು.

ಕಳೆದ ಮೂರುದಿನಗಳ ಹಿಂದೆಯಷ್ಟೆ ದಸರ ಮಹೋತ್ಸವದ ಪಾಸ್ ಗಳು ಚೆನ್ನೈನಲ್ಲಿ ಮುದ್ರಣಗೊಂಡು ಮೈಸೂರು ತಲುಪಿದೆ. ಬಳಿಕವಷ್ಟೆ ಶಾಸಕರು, ಸಂಸದರು ಹಾಗೂ ನಗರ ಪಾಲಿಕೆ ಸದಸ್ಯರು ಸೇರಿದಂತೆ ವಿಐಪಿಗಳಿಗೆ ವಿತರಿಸಲು ಜಿಲ್ಲಾಡಳಿತ ಮುಂದಾಗಿದೆ. ಆದರೆ ಈ ನಡುವೆ ಗೋಲ್ಡ್ ಕಾರ್ಡ್ ಮಾರಾಟ ಗೊಂದಲ ಸೃಷ್ಠಿಸಿತು.

ಖಾಸಗಿ ಸಂಸ್ಥೆಯೊಂದಕ್ಕೆ ‘ ದಸರ ಗೋಲ್ಡ್ ಕಾರ್ಡ್ ‘ ಮುದ್ರಿಸಿ ಮಾರಾಟ ಮಾಡುವ ಜವಾಬ್ದಾರಿಯನ್ನು ಸರಕಾರ ವಹಿಸಿತ್ತು. ಇದಕ್ಕಾಗಿ ಆ ಸಂಸ್ಥೆಗೆ ಸರಕಾರ ಲಕ್ಷಾಂತರ ರೂ.ಗಳನ್ನು ಪಾವತಿಸಿದೆ ಎನ್ನಲಾಗಿದೆ.

ವಿಪರ್ಯಾಸವೆಂದರೆ ‘ ದಸರ ಗೋಲ್ಡ್ ಕಾರ್ಡ್ ‘ ಎಲ್ಲಿ ಮಾರಾಟಗೊಳ್ಳುತ್ತಿದೆ ಎಂಬುದೇ ಯಾರಿಗೂ ತಿಳಿಯದ ಸಂಗತಿ. ಇದಕ್ಕಾಗಿ ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಹಲವೆಡೆ ಜನ ಅಲೆದರು ಪ್ರಯೋಜನವಾಗಲಿಲ್ಲ. ಜತೆಗೆ ಆನ್ ಲೈನ್ ಮೂಲಕ ಗೋಲ್ಡ್ ಕಾರ್ಡ್ ಖರೀದಿಸಲು ಯತ್ನಿಸಿದವರದ್ದು ಇದೇ ಕಥೆ. ಖಾಸಗಿ ಸಂಸ್ಥೆ ವೆಬ್ ಸೈಟ್ ಗೆ ಲಾಗಿನ್ ಗಾಗಿ ಕಾದು ಕುಳಿತದ್ದೆ ಬಂತು ಟಿಕೆಟ್ ಮಾತ್ರ ಲಭಿಸಲಿಲ್ಲ. ಗಂಟೆಗಳ ಸತತ ಪ್ರಯತ್ನ ನಡೆಸಿದ ಬಳಿಕ ‘ ಸೋಲ್ಡ್ ಔಟ್ ‘ ಎಂದು ಕಂಪ್ಯೂಟರ್ ಪರದೆ ಮೇಲೆ ಮೂಡುತ್ತಿದೆ ಎಂದು ಗೋಲ್ಡ್ ಕಾರ್ಡ್ ಪಡೆಯಲು ವಿಫಲ ಯತ್ನ ನಡೆಸಿದವರ ಆರೋಪ.

ಪೊಲೀಸ್ ಆಯುಕ್ತರ ಸ್ಪಷ್ಟನೆ :

ದಸರ ಗೋಲ್ಡ್ ಕಾರ್ಡ್ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಬಗ್ಗೆ ಈತನಕ ನಮಗೆ ಯಾವುದೇ ದೂರು ಬಂದಿಲ್ಲ. ಒಂದು ವೇಳೆ ಸಂಬಂಧಪಟ್ಟವರು ಸಾಕ್ಷಿ ಸಮೇತ ದೂರು ನೀಡಿದಲ್ಲಿ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತರಾದ ಕೆ.ಟಿ.ಬಾಲಕೃಷ್ಣ ಅವರು ಜಸ್ಟ್ ಕನ್ನಡ ಡಾಟ್ ಇನ್ ಗೆ ಸ್ಪಷ್ಟನೆ ನೀಡಿದರು.

key wordsc: mysore-dasara-gold-card-black-sale-police