ಮೈಸೂರಿನಲ್ಲಿ ಕೇಂದ್ರ ಸರ್ಕಾರದ ಟೆಲಿ – ಕಾನೂನು ಯೋಜನೆಯ ಉಚಿತ ಕಾನೂನು ಸಲಹಾ ಮತ್ತು ಸಹಾಯ ಕೇಂದ್ರ ಪ್ರಾರಂಭ.

ಮೈಸೂರು,ಅಕ್ಟೋಬರ್, 3,2021(www.justkannada.in): ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷ ಕೆ.ಎಂ. ನಿಶಾಂತ್  ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಟೆಲಿ- ಕಾನೂನು ಯೋಜನೆಯ ಉಚಿತ ಕಾನೂನು ಸಲಹಾ ಮತ್ತು ಸಹಾಯ ಕೇಂದ್ರವನ್ನು ಪ್ರಾರಂಭಿಸಲಾಯಿತು.

ಮಹಾತ್ಮ ಗಾಂಧಿಯವರ ಜನ್ಮದಿನದ ಪ್ರಯುಕ್ತ ಕೇಂದ್ರ ಕಾನೂನು ಮತ್ತು ನ್ಯಾಯ ಮಂತ್ರಾಲಯ ಪ್ರಾರಂಭಿಸಿರುವ ‘ಏಕ್ ಪಹಲ್’ ಅಭಿಯಾನದ ಭಾಗವಾಗಿ ನಗರದ ರಾಮಾನುಜಾ ರಸ್ತೆಯಲ್ಲಿರುವ ಕೆ.ಎಂ. ನಿಶಾಂತ್ ಅವರ ಜನ ಸೇವಾ ಕೇಂದ್ರದಲ್ಲಿ ಕಾನೂನು ಸಲಹೆಯಿಂದ ವಂಚಿತರಾಗಿರುವ ಹತ್ತಾರು ಜನರನ್ನು ಟೆಲಿ – ಕಾನೂನು ಯೋಜನೆಯಲ್ಲಿ ನೋಂದಣಿ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ನಂತರ ಮಾತನಾಡಿದ ಕೆ.ಎಂ. ನಿಶಾಂತ್, ಪ್ರತಿಯೊಬ್ಬನ ಕಣ್ಣೀರನ್ನು ಒರೆಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು’ ಎನ್ನುವುದು ಮಹಾತ್ಮ ಗಾಂಧಿಯವರ ಕಾಳಜಿಯಾಗಿತ್ತು. ಈ ಸಂದೇಶವು ಟೆಲಿ – ಕಾನೂನು ಯೋಜನೆಯ ಮೂಲಕ ಪ್ರತಿಧ್ವನಿಸುತ್ತಿದೆ. ಕಾನೂನು ಸಲಹೆಯಿಂದ ವಂಚಿತವಾದ ಸಮುದಾಯವನ್ನು ಮುಖ್ಯವಾಹಿನಿಗೆ ತಂದು ಅವರಿಗೆ ಕಾನೂನು ನೆರವು ನೀಡುವ ವೇದಿಕೆಯೇ ಟೆಲಿ – ಕಾನೂನು. ಆಸ್ತಿ ವಿವಾದಗಳು, ಅನ್ಯಾಯದ ವಿರುದ್ಧ ಹೋರಾಟ, ಕೌಟುಂಬಿಕ ಕಲಹಗಳು, ಹಣಕಾಸಿನ ವಿವಾದಗಳು, ಕಾರ್ಯವಿಧಾನದ ಅಡೆತಡೆಗಳು ಹಾಗು ಎಲ್ಲ ರೀತಿಯ ಕಾನೂನಾತ್ಮಕ ಮಾಹಿತಿ ಮತ್ತು ಸಹಕಾರವನ್ನು ಟೆಲಿ – ಕಾನೂನಿನ ಮೂಲಕ ಪಡೆಯಬಹುದಾಗಿದೆ. ಅಗತ್ಯ ದಾಖಲೆಗಳೊಂದಿಗೆ ನಮ್ಮ ಜನ ಸೇವಾ ಕೇಂದ್ರಕ್ಕೆ ಬಂದು ಟಿಲಿ – ಕಾನೂನಿಗೆ ನೋಂದಣಿಯಾದವರಿಗೆ ಒಂದೇ ದಿನದ ಒಳಗಾಗಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (SALSA) ನಿಯೋಜಿಸಿರುವ ವಕೀಲರ ಸಮಿತಿಯು ವೀಡಿಯೊ ಅಥವಾ ಆಡಿಯೋ ಕಾನ್ಫರೆನ್ಸ್ ಮೂಲಕ ಕಾನೂನು ನೆರವು ನೀಡುತ್ತಾರೆ.

ಈಗಾಗಲೆ ಎಲ್ಲಾ ರಾಜ್ಯಗಳಲ್ಲೂ ಈ ಯೋಜನೆ ಜಾರಿಯಲ್ಲಿದ್ದು ಫಲಾನುಭವಿಗಳಿಗೆ ಪೂರ್ವ-ವ್ಯಾಜ್ಯ ಸಲಹೆ ಮತ್ತು ಸಮಾಲೋಚನೆಯನ್ನು ಪರಿಣಾಮಕಾರಿಯಾಗಿ ಒದಗಿಸುತ್ತಿದೆ. ಅನ್ಯಾಯ, ದಬ್ಬಾಳಿಕೆ, ದೌರ್ಜನ್ಯವನ್ನು ಎದರಿಸುತ್ತಿರುವ ದ್ವನಿರಹಿತ ಸಮಾಜಕ್ಕೆ ದ್ವನಿಗೂಡಿಸಲು ಟಿಲಿ – ಕಾನೂನು ಕಾರ್ಯಕ್ರಮದ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಮತ್ತು ನರೇಂದ್ರ ಮೋದಿ ಅವರ ಸಬ್ ಕಾ ಸಾತ್, ಸಬ್ ಕಾ ವಿಕಾಸ್, ಸಬ್ ಕಾ ನ್ಯಾಯ್ ಎನ್ನುವ ಗುರಿಯನ್ನು ಮುಟ್ಟಲು ಇದು ಅನಿವಾರ್ಯವೂ ಆಗಿದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಮಧುಸೂಧನ್, ನಾಗೇಂದ್ರ ಭಟ್, ಗುಂಡಣ್ಣ, ಜಗದೀಶ್, ಸರ್ವಮಂಗಳ, ಅಮೃತೇಶ್, ಪ್ರಜ್ವಲ್ ಹಾಗು ಹತ್ತಾರು ಫಲಾನುಭವಿಗಳು ಉಪಸ್ಥಿತರಿದ್ದರು.

Key words: Mysore -Central Government -Tele – Legal –Project- Free Legal Consultancy – Help Center-BJP