ಸರಕಾರಿ ಶಾಲಾ ಮಕ್ಕಳಿಗಾಗಿ ಮೈಸೂರು ಬಳಿ ಎತ್ತಿನಗಾಡಿ ಏರಿದ ಕ್ಷೇತ್ರ ಶಿಕ್ಷಣಾಧಿಕಾರಿ..!

Promotion

ಮೈಸೂರು, ಜು.05, 2021 : (www.justkannada.in news) : ಕರೋನಾ ಸಂಕಷ್ಠ ಕಾಲದಲ್ಲಿ ಶಾಲಾ ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಬಗ್ಗೆ ಜಾಗೃತಿ ಹಾಗೂ ದಾಖಲಾತಿ ಆಂದೋಲನದ ಯಶಸ್ಸಿಗೆ ಇಲ್ಲೊಬ್ರು ಕ್ಷೇತ್ರ ಶಿಕ್ಷಣಾಧಿಕಾರಿ ವಿನೂತನ ಪ್ರಚರಾಂದೋಲನದ ಮೂಲಕ ಗಮನ ಸೆಳೆದಿದ್ದಾರೆ.jk
ಸರಕಾರಿ ಶಾಲೆಯನ್ನು ತಳಿರು, ತೋರಣಗಳಿಂದ ಸಿಂಗರಿಸಿ, ಅಲಂಕೃತ ಎತ್ತಿನಗಾಡಿಯಲ್ಲಿ ಊರೆಲ್ಲಾ ಸಂಚರಿಸಿ ಶಿಕ್ಷಣದ ಜಾಗೃತಿ ಮೂಡಿಸುವ ವಿನೂತನ ಪ್ರಚಾರಾಂದೋಲನ ಮೈಸೂರು ಸಮೀಪದ ನಂಜನಗೂಡು ತಾಲ್ಲೂಕಿನ ಸುತ್ತುರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿತ್ತು.
ತಾಲೊಕು ಕ್ಷೇತ್ರ ಶಿಕ್ಷಣಾಧಿಕಾರಿ (BEO) ಸಿ.ಎನ್.ರಾಜು ಅವರೇ ಈ ಪ್ರಚರಾಂದೋಲನದ ರೂವಾರಿ. ಈ ಬಗ್ಗೆ ಜಸ್ಟ್ ಕನ್ನಡದ ಜತೆ ಮಾತನಾಡಿದ ಬಿಇಒ ರಾಜು ಅವರು ಹೇಳಿದಿಷ್ಟು..
ಕರೋನಾದಿಂದ ಲಾಕ್ ಡೌನ್ ಘೋಷಣೆ ಬಳಿಕ ಬಹುತೇಕ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅದರಲ್ಲೂ ಗ್ರಾಮೀಣ ಭಾಗದ ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲೇ ಶಿಕ್ಷಣದಿಂದ ದೂರ ಉಳಿಯುವಂತಾಗಿದೆ. ಈ ಅಂಶ ಮನಗಂಡು, ಮತ್ತೆ ಮಕ್ಕಳಲ್ಲಿ ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿಸುವ ಸಲುವಾಗಿ, ಅವರನ್ನು ಓದಿನೆಡೆಗೆ ಆಕರ್ಷಿಸುವ ಉದ್ದೇಶದಿಂದ ಈ ವಿನೂತನ ಪ್ರಚಾರಾಂದೋಲನ ನಡೆಸಲಾಯಿತು.
ಶಾಲೆಯ ಶಿಕ್ಷಕ ವೃಂದ ಹಾಗೂ ಗ್ರಾಮಸ್ಥರ ಸಹಕಾರದಿಂದ ಮನೆ,ಮನೆಗೆ ತೆರಳಿ ವಿದ್ಯಾರ್ಥಿಗಳಿಗೆ ಪಾಠ, ಪ್ರವಚನದ ಮಾಹಿತಿ ಒದಗಿಸಲಾಯಿತು. ಜತೆಗೆ ‘ ಕಲಿಕಾ ಸಂಗಮ’ ದಡಿ ವಿದ್ಯಾರ್ಥಿಗಳಿಗೆ ಅಭ್ಯಾಸ ಪುಸ್ತಕ ಹಾಗೂ ಅಭ್ಯಾಸ ಹಾಳೆಗಳನ್ನು ವಿತರಿಸಲಾಯಿತು.
ಕರೋನಾ, ಲಾಕ್ ಡೌನ್ ಸಲುವಾಗಿ ಶಾಲೆ ಹಾಗೂ ಶಾಲಾ ವಾತಾವರಣದಿಂದ ದೂರವೇ ಉಳಿದಿರುವ ಸರಕಾರಿ ಶಾಲೆ ಮಕ್ಕಳನ್ನು ಓದಿನೆಡೆಗೆ ಗಮನ ಹರಿಸುವಂತೆ ಉತ್ತೇಜನ ನೀಡುವುದು ಇದರ ಮುಖ್ಯ ಗುರಿ. ಜತೆಗೆ ಶಾಲೆ ಆರಂಭದ ಬಳಿಕ ಸರಕಾರಿ ಶಾಲೆಗೆ ಗ್ರಾಮದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗಲಿ ಎಂಬುದು ಉದ್ದೇಶ.
ಮಕ್ಕಳಿಗೆ ಇನ್ನು ಶಾಲೆ ಆರಂಭಗೊಳ್ಳದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಪಡಿತರವನ್ನು ಸಹ ಆಯಾ ವಿದ್ಯಾರ್ಥಿಗಳ ಮನೆ ಬಾಗಿಲಿಗೆ ತಲುಪಿಸಲಾಯಿತು.
ಈ ಆಹಾರ ಸಾಮಾಗ್ರಿಗಳನ್ನು ಅಲಂಕೃತ ಎತ್ತಿಗಾಡಿಯಲ್ಲಿ ತುಂಬಿಕೊಂಡು ಬಿಇಒ ರಾಜು ಅವರೇ ಖುದ್ದು ಗಾಡಿಯನ್ನು ಓಡಿಸಿಕೊಂಡು ಮಕ್ಕಳ ಮನೆಗೆ ತಲುಪಿಸಿದ್ದು ವಿಶೇಷ. ಇದು ಗ್ರಾಮಸ್ಥರ ಮೆಚ್ಚುಗೆಗೂ ಪಾತ್ರವಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಮಧ್ಯಾಹ್ನ ಉಪಹಾರ ಯೋಜನೆ ಯ ಶಿಕ್ಷಣಾಧಿಕಾರಿಗಳಾದ ಲಿಂಗರಾಜಯ್ಯ, ಸಹನಿರ್ದೇಶ ಕ ಮಲ್ಲಿಕಾರ್ಜುನ ಮುಖ್ಯ ಶಿಕ್ಷಕಿ ಭಾರ್ಗವಿ. ಎಸ್ ಡಿ ಎಮ್ ಸಿ ಅಧ್ಯಕ್ಷರು. ಸಿ ಆರ್ ಪಿ ಮಹೇಶ್. ಸಹಶಿಕ್ಷಕರು ಗ್ರಾಮಸ್ಥರು ಹಾಜರಿದ್ದರು.

key words : mysore-BEO-education-bullock.cart-nanjangudu-school-admission