ಮುಂದುವರೆದ ಮೈಸೂರು-ಬೆಂಗಳೂರು ಹೈವೇ ಕ್ರೆಡಿಟ್ ವಾರ್:  ಸಂಸದ ಪ್ರತಾಪ್ ಸಿಂಹಗೆ  ಹೆಚ್.ಸಿ ಮಹದೇವಪ್ಪ ತಿರುಗೇಟು.

Promotion

ಮೈಸೂರು,ಮಾರ್ಚ್,10,2023(www.justkannada.in): ಮೈಸೂರು- ಬೆಂಗಳೂರು ದಶಪಥ ಹೆದ್ದಾರಿ ಕ್ರೆಡಿಟ್ ವಾರ್ ಮುಂದುವರೆದಿದ್ದು  ಸಂಸದ ಪ್ರತಾಪ್ ಸಿಂಹಗೆ ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ನಿಯೋಗದಿಂದ ಮೈಸೂರು-ಬೆಂಗಳೂರು ಹೆದ್ದಾರಿ ವೀಕ್ಷಣೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ಸಿ ಮಹದೇವಪ್ಪ,  2013 ರಲ್ಲಿ ಅಧಿಕಾರಕ್ಕೆ ಬಂದಾಗ ನನಗೆ ಲೋಕೋಪಯೋಗಿ ಸಚಿವ ಸ್ಥಾನ ಕೊಟ್ಟಿತ್ತು. ಆಗ ಜಿಲ್ಲೆಯಿಂದ ಜಿಲ್ಲೆಗೆ, ಜಿಲ್ಲೆಯಿಂದ ತಾಲ್ಲೂಕಿಗೆ, ತಾಲ್ಲೂಕಿನಿಂದ ಹೋಬಳಿಗೆ, ಹೋಬಳಿಯಿಂದ ಹಳ್ಳಿಗಳಿಗೆ ರಸ್ತೆ ಸಂಪರ್ಕ ಕಲ್ಪಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಯಿತು. ನಾನು ಸಚಿವನಾಗಿದ್ದಾಗ 4480 ಕಿಮೀ ರಾಷ್ಟ್ರೀಯ ಹೆದ್ದಾರಿ ಇತ್ತು. 2013 ರತನಕ ರಾಜ್ಯ  ಹೆದ್ದಾರಿ 75 ಆಗಿತ್ತು. ಕೆಆರ್ಡಿಸಿಎಲ್ ವತಿಯಿಂದ ನಾಲ್ಕು ಪಥದ ರಸ್ತೆಯಾಗಿ ಮಾಡಿದ್ದವು. 2014 ರಲ್ಲಿ ದಶಪಥ ರಸ್ತೆಯಾಗಿ ಮಾಡಬೇಕು ಎಂದು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆ ಮಾಡಲು ಅಂದಿನ ರಾಷ್ಟ್ರೀಯ ಹೆದ್ದಾರಿ ಸಚಿವರಾಗಿದ್ದ ಆಸ್ಕರ್ ಫರ್ನಾಂಡೀಸ್ ಅವರ ಜೊತೆ ಒಂದು ಪ್ರಸ್ತಾವನೆ ಸಲ್ಲಿಸಿದ್ದೇವು. ರಾಜ್ಯದ ಹೆದ್ದಾರಿಗಳನ್ನ ರಾಷ್ಟ್ರೀಯ ಹೆದ್ದಾರಿ ಮಾಡಲು ತಾಂತ್ರಿಕ ವರದಿಗಳನ್ನ ತಯಾರು ಮಾಡಿದೆವು.

1882  ಕಿ.ಮಿ ರಾಜ್ಯ ಹೆದ್ದಾರಿಗಳನ್ನ ರಾಷ್ಟ್ರೀಯ ಹೆದ್ದಾರಿ ಮಾಡಲು ಮಾರ್ಚ್‌ 4. 2014 ರಂದು ಗೆಜೆಟ್ ಪಾಸ್ ಆಗಿತ್ತು. ಅಂದು ನಮ್ಮ ಮೈಸೂರಿನಲ್ಲಿ ಎಚ್ ವಿಶ್ವನಾಥ್ ಸಂಸದರಾಗಿದ್ದರು. ನಾನು ಲೋಕೋಪಯೋಗಿ ಸಚಿವನಾಗಿದ್ದಾಗ ಎಲ್ಲಾ ಸಂಸದರ ಜೊತೆ ಡೆಲ್ಲಿಯಲ್ಲಿ ಸಭೆ ಕರೆದಿದ್ದೆ. ಈ ಮೂಲಕ ರಾಜ್ಯದ ಅಭಿವೃದ್ಧಿಗೆ ಪ್ರಯತ್ನ ಮಾಡಿದ್ದೆ. ಈ ವೇಳೆಗೆ ನಮ್ಮ ಸರ್ಕಾರ ಅಷ್ಟರಲ್ಲಿ ಬದಲಾವಣೆ ಆಯಿತು. ಆಗ ಬೊಗಳೆ ಬಿಡುವವರು ಯಾರೂ ಇರಲಿಲ್ಲ. ಯಾರು ನನ್ನ ಕೋಳಿಯಿಂದಲೇ ಬೆಳಗಾಯಿತು ಎನ್ನುವವರು ಇದರ ಬಗ್ಗೆ ಸ್ವಲ್ಪ ತಿಳಿದುಕೊಳ್ಳಬೇಕು ಎಂದು  ಪರೋಕ್ಷವಾಗಿ ಸಂಸದ ಪ್ರತಾಪ್ ಸಿಂಹ ಕುರಿತು ವ್ಯಂಗ್ಯವಾಡಿದರು.

ನಾವು ಈ ರಸ್ತೆಯ ಅಭಿವೃದ್ಧಿ ಮಾಡಿದ್ದರೂ ನಾವು ಎಲ್ಲಿಯೂ ಪ್ರಚಾರ ಮಾಡಿಕೊಂಡಿಲ್ಲ. ಇವರ ಸಂಸದರ ಕ್ಷೇತ್ರ ಕೇವಲ ಎರಡು ಕಿ.ಮಿ ವ್ಯಾಪಿಗೆ ಬರಲ್ಲ. ಎಲ್ಲವನ್ನ ನಾನೇ ಮಾಡಿದ್ದು ಅಂತ ಹೇಳಿಕೊಳ್ಳುತ್ತಿರುವುದು ಖಂಡನೀಯ ಎಂದು  ಸಂಸದ ಪ್ರತಾಪ್ ಸಿಂಹ ವಿರುದ್ಧ ಮಾಜಿ ಸಚಿವ ಎಚ್ ಸಿ ಮಹಾದೇವಪ್ಪ ವಾಗ್ದಾಳಿ ನಡೆಸಿದರು.

ನೆರೆ ವೇಳೆ ಇವರು ಬಂದಿದ್ರೆ ಎಷ್ಟು ಜನ ಜಾನುವಾರುಗಳ ರಕ್ಷಣೆ ಮಾಡಬಹುದಿತ್ತು. ಈಗ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಗಿಮಿಕ್ ಮಾಡುತ್ತಿದೆ. 118 ಕಿ.ಮಿ ರಸ್ತೆಯಲ್ಲಿ ಇನ್ನೂ 22 ಕಿ.ಮೀ ಕಾಮಗಾರಿ ಪೂರ್ಣಗೊಂಡಿಲ್ಲ. ರಸ್ತೆಯನ್ನ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿದ್ದಾರೆ. ಅಂಡರ್ ಪಾಸ್,ಸರ್ವಿಸ್ ರಸ್ತೆಗಳು ಅವೈಜ್ಞಾನಿಕವಾಗಿವೆ. ಹೀಗಾಗಿ ನರಿ ಬುದ್ದಿ ಬಳಸಬೇಡಿ, ರಾಜಕೀಯ ಭಾಷೆ ಬಳಸಿ. ನೀವು ಮಾತನಾಡುವ ರೀತಿ ಸರಿಯಿಲ್ಲ  ನೀವು ಮಾತನಾಡುವ ದಾಟಿ ಏನು.? ಎಂದು ಸಂಸದ ಪ್ರತಾಪ್ ಸಿಂಹ ವಿರುದ್ದ ಹೆಚ್.ಸಿ ಮಹದೇವಪ್ಪ ಗುಡುಗಿದರು.

ನನ್ನ ಕೆಲಸಕ್ಕೆ ಸ್ವತಃ ವಿಪಕ್ಷದ ನಾಯಕರೇ ಮೆಚ್ಚುಗೆ  ವ್ಯಕ್ತಪಡಿಸಿದ್ದರು..

ನಾನು ಲೋಕೋಪಯೋಗಿ ಸಚಿವನಾಗಿದ್ದಾಗ ರಾಜ್ಯದಲ್ಲಿ ಮಾಡಿದ ಅಭಿವೃದ್ಧಿ ಕೆಲಸಕ್ಕೆ ಸ್ವತಃ ವಿಪಕ್ಷದ ನಾಯಕರೇ ನನ್ನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸ್ವತಃ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಅವರೇ ನನ್ನ ಕೆಲಸ ನೋಡಿ ಸನ್ಮಾನ ಮಾಡಿ ಗೌರವಿಸಿದ್ದರು ಎಂದು ಎಚ್ ಸಿ ಮಹಾದೇವಪ್ಪ ಹೇಳಿದರು.

ರಾಜೀನಾಮೆ ಬೇಡ ಸಾರ್ವಜನಿಕವಾಗಿ ಮಹಾದೇವಪ್ಪ ಅವರಲ್ಲಿ  ಕ್ಷಮೆ ಕೇಳಿ- ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್.

ಬೆಂಗಳೂರು-ಮೈಸೂರು ಹೆದ್ದಾರಿಗೆ ಮಹಾದೇವಪ್ಪ 9 ಪೈಸೆನೂ ಕೊಟ್ಟಿಲ್ಲ ಎಂಬ ಪ್ರತಾಪ್ ಹೇಳಿಕೆ ವಿಚಾರಕ್ಕೆ ತಿರುಗೇಟು ನೀಡಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್,  ಪ್ರತಾಪ್ ಸಿಂಹ ಅವರೇ ಹೆದ್ದಾರಿಯ ಡಿಪಿಆರ್ ಗೆ 6  ಕೋಟಿ ಹಾಗೂ ಹೆದ್ದಾರಿ ಪ್ರಾಧಿಕಾರ ಕಚೇರಿಗೆ 20 ಲಕ್ಷ ಸೇರಿದಂತೆ 13 ಕೋಟಿ ರೂಗಳನ್ನ ಅಂದೇ ಕೊಟ್ಟಿದ್ರು. ಅದರ ಬಗ್ಗೆ ಮಾಹಿತಿ ಇಲ್ಲ ಅಂದ್ರೆ ದಾಖಲೆಗಳನ್ನು ನಿಮ್ಮ ಬಳಿಗೆ ಕಳಿಸಿಕೊಡುತ್ತೇನೆ ಓದು ತಿಳಿದುಕೊಳ್ಳಿ. ನಿಮಗೆ ಮಾನ ಮರ್ಯಾದೆ ಇದ್ರೆ ರಾಜಿನಾಮೆ ಕೊಡ್ತೇನೆ ಅಂದಿದ್ರಲ್ಲ ನಮಗೆ ರಾಜೀನಾಮೆ ಬೇಡ ಸಾರ್ವಜನಿಕವಾಗಿ ಮಹಾದೇವಪ್ಪ ಅವರಲ್ಲಿ ಕ್ಷಮೆ ಕೇಳಿ ಎಂದು ಆಗ್ರಹಿಸಿದರು.

Key words: Mysore-Bangalore- Highway -credit war-HC Mahadevappa-MP Pratap Simha.