ಮೈಸೂರಿನಲ್ಲಿ ಯುವಕರ ಮೇಲೆ ಕಾರು ಹರಿಸಿ ಕೊಲೆಗೆ ಯತ್ನ: ಮೂವರಿಗೆ ಗಂಭೀರ ಗಾಯ: ಆರೋಪಿಯ ಬಂಧನ.

Promotion

ಮೈಸೂರು,ಡಿಸೆಂಬರ್,6,2022(www.justkannada.in): ಕ್ಷುಲ್ಲಕ ಕಾರಣಕ್ಕೆ ಮೂವರು ಯುವಕರ ಮೇಲೆ ತಂದೆ ಮತ್ತು ಪುತ್ರ ಕಾರು ಹರಿಸಿ ಕೊಲೆಗೆ ಯತ್ನಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ನಗರದ ಸರಸ್ವತಿಪುರಂನ ಟಿ.ಕೆ. ಬಡಾವಣೆಯ ಜಂಕ್ಷನ್ ನಲ್ಲಿ ಈ ಘಟನೆ ನಡೆದಿದೆ. ಆರೋಪಿ ದರ್ಶನ್ ಮತ್ತು ಈತನ ತಂದೆ ವಾಸು ಎಂಬುವವರೇ ಈ ಕೃತ್ಯವೆಸಗಿರುವುದು. ಘಟನೆಯಲ್ಲಿ ಪ್ರಜ್ವಲ್, ರಾಹುಲ್, ಆನಂದ್ ಎಂಬ ಮೂವರು ಯುವಕರು ಗಂಭೀರ ಗಾಯಗೊಂಡಿದ್ದು ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳು ಪ್ರಜ್ವಲ್ ಸ್ಥಿತಿ ಚಿಂತಾಜನಕವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ವೇಗವಾಗಿ ಬಂದ ವಾಸು, ಪುತ್ರ ದರ್ಶನ್ ಇದ್ದ ಫಾರ್ಚುನರ್ ಕಾರು ಯುವಕರಿದ್ದ ಕಾರಿಗೆ ಗುದ್ದಲು ಯತ್ನಿಸಿದೆ.  ಈ ವೇಳೆ ಪ್ರಶ್ನೆ ಮಾಡಿದ ಪ್ರಜ್ವಲ್, ರಾಹುಲ್, ಆನಂದ್ ಮೇಲೆ ದರ್ಶನ್  ಹಲ್ಲೆ‌ ಮಾಡಿ ಯುವಕರ ಮೇಲೆ ಕಾರು ಹತ್ತಿಸಿ ಕೊಲೆಗೆ ಯತ್ನಿಸಿದ್ದಾರೆ.

ಈ ಸಂಬಂಧ ಸರಸ್ವತಿಪುರಂ ಠಾಣಾ ಪೊಲೀಸರು ಆರೋಪಿ‌ ದರ್ಶನ್ ವಿರುದ್ಧ 324, 504, 307 ಅಡಿ ಪ್ರಕರಣ ದಾಖಲಿಸಿದ್ದು, ಇನ್ಸ್ ಪೆಕ್ಟರ್ ರವೀಂದ್ರ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ.

ಕಾರು ಹತ್ತಿಸಿದ ಸ್ಥಳಕ್ಕೆ ಆರೋಪಿ ದರ್ಶನ್ ನನ್ನು ಕರೆತಂದು ಸರಸ್ವತಿಪುರಂ ಠಾಣಾ ಪೊಲೀಸರು  ಸ್ಥಳ ಮಹಜರು ನಡೆಸಿದರು.  ಕಾರು ಹತ್ತಿಸಿದ ಸ್ಥಳದಲ್ಲಿ  ಆರೋಪಿ ದರ್ಶನ್ ಮತ್ತು ಸ್ಥಳೀಯರಿಂದ ಪೊಲೀಸರು ಮಾಹಿತಿ ಕಲೆ ಹಾಕಿದರು. ಸ್ಥಳದಲ್ಲಿನ ರಕ್ತದ ಮಾದರಿ ಕೂಡ ಸಂಗ್ರಹ ಮಾಡಿದರು.

Key words:  Mysore- attempt – kill -youth – car -over –accused-arrest