ಎಪಿಎಂಸಿಯಲ್ಲಿ ಅನಧಿಕೃತ ಹಣ ವಸೂಲಿ : ವೇ ಮ್ಯಾನ್ ವಿರುದ್ಧ ಕ್ರಿಮಿನಲ್ ಮೊಕದ್ದಮೆಗೆ ಆಗ್ರಹಿಸಿ ದೂರು.

ಮೈಸೂರು, ಜ.11, 2022 : (www.justkannada.in news ) ಬಂಡೀಪಾಳ್ಯದಲ್ಲಿರುವ ಎಪಿಎಂಸಿ ( ಕೃಷಿ ಉತ್ಪನ್ನ ಮಾರುಕಟ್ಟೆ ) ಇಲ್ಲಿ ಅನಧಿಕೃತವಾಗಿ ಹಣ ವಸೂಲಿ ಮಾಡುತ್ತಿದ್ದ ವೇ ಮ್ಯಾನ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಒತ್ತಾಯಿಸಿ ಕಾರ್ಯದರ್ಶಿಗೆ ದೂರು.
ಈ ಸಂಬಂಧ ಬಹುಜನ ಸಮಾಜ ಪಾರ್ಟಿ (BSP), ಎಪಿಎಂಸಿ ಕಾರ್ಯದರ್ಶಿ ಅವರಿಗೆ ದೂರು ನೀಡಿದ್ದು, ದೂರಿನ ವಿವರ ಹೀಗಿದೆ.
ವೇ ಮ್ಯಾನ್ ( Weigh Man) ವಸಂತ ಎಂಬುವವರು ಅನಧಿಕೃತವಾಗಿ ಎಪಿಎಂಸಿಯಿಂದ ತೆರಳುವ ಲೋಡ್ ಗಾಡಿ ಮತ್ತು ರೈತರಿಂದ ಹಣ ವಸೂಲಿ ಮಾಡುತ್ತಿದ್ದು ಇವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದರೊಂದಿಗೆ ಇವರ ಲೈಸೆನ್ನನ್ನು ರದ್ದುಗೊಳಿಸುವ ಜತೆಗೆ ಪೊಲೀಸರರಿಗೆ ದೂರು ನೀಡುವಂತೆ ಆಗ್ರಹಿಸಲಾಗಿದೆ.
ಮೈಸೂರಿನ ಬಂಡಿಪಾಳ್ಯದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ, ಇಲ್ಲಿನ ತರಕಾರಿ ಮಾರುಕಟ್ಟೆಯ ಭಾಗಕ್ಕಿರುವ “ತಾತ್ಕಾಲಿಕ ರೈತರ ವಿಶ್ರಾಂತಿ ಕೊಠಡಿ” ಈ ಕಟ್ಟಡದ ಸೆಲ್ಲಾರ್ ಭಾಗದಲ್ಲಿ ಹಲವು ತಿಂಗಳುಗಳಿಂದ ರೈತರಿಂದ/ ಖರೀದಿದಾರರಿಂದ ವೇ ಮ್ಯಾನ್ ಗಳು ಅನಧಿಕೃತವಾಗಿ ಹಣ ವಸೂಲಾತಿ ಮಾಡುತ್ತಿರುವ ಬಗ್ಗೆ ನಮಗೆ ಮಾಹಿತಿ ದೊರಕಿರುತ್ತದೆ. ಈಮಾಹಿತಿಯನ್ನು ಕಲೆ ಹಾಕಲು ದಿನಾಂಕ 09/01/22 ಮಧ್ಯಾಹ್ನ ಸುಮಾರು 1:00 ಗಂಟೆಗೆ ಈ ಮೇಲೆ ಹೇಳಿದ ಸೆಲ್ಲಾರ್ ಭಾಗಕ್ಕೆ, ಸ್ನೇಹಿತ ರವೀಂದ್ರರವರು ತೆರಳಿದಾಗ ಲೋಡ್ ಗಾಡಿಗಳಿಗೆ ಇಂತಿಷ್ಟು ಎಂದು ಇವರೇ ಅನಧಿಕೃತವಾಗಿ ನಿಗದಿಪಡಿಸಿದ್ದ ವಿಷಯ ಬೆಳಕಿಗೆ ಬಂದಿತು.
ಸದರಿ ವ್ಯಕ್ತಿ ತಮ್ಮ ಕೃಷಿ ಮಾರುಕಟ್ಟೆಯ ವೇ ಮ್ಯಾನ್ ವಸಂತ ಎಂದು ಈ ವೇಳೆ ತಮ್ಮ checkpost ಬಳಿಯಿದ್ದ ಅಧಿಕಾರಿಯಿಂದಲೇ ತಿಳಿದುಬಂದಿರುತ್ತದೆ.
ಈ ಎಲ್ಲ ಘಟನೆಗಳನ್ನು ಗಮನಿಸಿದರೆ ಸದರಿ ವೇ ಮ್ಯಾನ್ ವಸಂತ ಎಂಬುವವರು ಅನಧಿಕೃತವಾಗಿ ಖರೀದಿದಾರರಿಂದ/ರೈತರಿಂದ ಇಂತಿಷ್ಟು ಎಂದು ಇವರ ಅಕ್ರಮ ಕೂಟದಿಂದ ನಿಗದಿಪಡಿಸಿಕೊಂಡಂತೆ ಹಣ ವಸೂಲಿ ಮಾಡುತ್ತಿದ್ದು, ಇದಕ್ಕೆ ತಮ್ಮ ಕಚೇರಿಯ ಸಿಬ್ಬಂದಿ ವರ್ಗವು ಸಹ ಶಾಮೀಲಾಗಿರುವುದು ಕಂಡುಬಂದಿರುತ್ತದೆ.ಆದ್ದರಿಂದ ಸದರಿ ವೇ ಮ್ಯಾನ್ ವಸಂತರ ಲೈಸನ್ಸ್ ರದ್ದುಪಡಿಸಲು ಕ್ರಮವಹಿಸುವುದರೊಂದಿಗೆ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಈ ರೀತಿಯಾದ ಅಕ್ರಮ ವಸೂಲಾತಿಗೆ ತಮ್ಮ ಕಚೇರಿಯ ಹೆಸರನ್ನು ಬಳಸಿಕೊಂಡಿರುವುದನ್ನು ಮನಗಂಡು ಕರ್ತವ್ಯಲೋಪ ಎಸಗಿರುವ ಇವರ ವಿರುದ್ಧ IPC ಕಲಂ 420, 120B,141 ಅಡಿ ದೂರು ದಾಖಲಿಸುವ ಮೂಲಕ ಅಕ್ರಮದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಕ್ರಮವಹಿಸಿಕೊಡಬೇಕೆಂದು ಕೋರಿಕೊಳ್ಳುತ್ತೇವೆ .
ಎಪಿಎಂಸಿ ಕಾರ್ಯದರ್ಶಿಗೆ ನೀಡಿರುವ ದೂರಿಗೆ ಬಿಎಸ್ಪಿ ಜಿಲ್ಲಾ ಕಾರ್ಯದರ್ಶಿ ಅಶೋಕ್, ಪ್ರಧಾನ ಕಾರ್ಯದರ್ಶಿ ಜೈಶಂಕರ್ ಶ್ಯಾಮ್, ಆದರ್ಶ, ಹರೀಶ್, ಮಂಜುನಾಥ್, ಎಂ. ರವೀಂದ್ರ ಸಹಿ ಮಾಡಿದ್ದಾರೆ.

key words : mysore-APMC-complaint-police-Weigh Man