ಮುಡಾ ಅಧ್ಯಕ್ಷ ಹೆಚ್. ವಿ ರಾಜೀವ್ ವಿರುದ್ಧ ಅಧಿಕಾರ ದುರುಪಯೋಗ ಆರೋಪ: ಎಸ್ಐಟಿ ತನಿಖೆಗೆ ಒತ್ತಾಯ.

ಮೈಸೂರು,ಫೆಬ್ರವರಿ,17,2022(www.justkannada.in): ರಾಜೀವ್ ಒಡೆತನದ ಜ್ಞಾನಗಂಗಾ ಗೃಹ ನಿರ್ಮಾಣ ಸಹಕಾರ ಸಂಘದ 848 ನಿವೇಶನಗಳಿಗೆ ಕಾನೂನು ಬಾಹಿರವಾಗಿ ಒಂದೇ ದಿನ ಖಾತೆ ಮಾಡಿಕೊಡಲಾಗಿದೆ.  ಈ ಮೂಲಕ ಮುಡಾ ಅಧ್ಯಕ್ಷ ಹೆಚ್. ವಿ ರಾಜೀವ್ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರಾಜ್ಯಾಧ್ಯಕ್ಷ ಡಾ ಬಿ.ಶಿವಣ್ಣ ಆರೋಪ ಮಾಡಿದ್ದಾರೆ.

ಈ ಕುರಿತು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಡಾ ಬಿ.ಶಿವಣ್ಣ ಪ್ರಕರಣದ ಎಸ್ಐಟಿ ತನಿಖೆಗೆ ಒತ್ತಾಯಿಸಿದ್ದಾರೆ. ಸಾರ್ವಜನಿಕರು ಖಾತೆಗೆ ಮುಡಾಗೆ ಅರ್ಜಿ ಹಾಕಿದರೆ ತಿಂಗಳುಗಟ್ಟಲೆ ಸಮಯ ತೆಗೆದುಕೊಳ್ಳುತ್ತಾರೆ. ಆದರೆ, ಹೆಚ್ ವಿ ರಾಜೀವ್ ಅವರ ಜ್ಞಾನಗಂಗಾ ಗೃಹ ನಿರ್ಮಾಣ ಸಹಕಾರ ಸಂಘದ ಸುಮಾರು 252 ಎಕರೆ 10 ಗುಂಟೆ ಭೂಮಿಯ 848 ನಿವೇಶನಗಳಿಗೆ ಒಂದೇ ದಿನದಲ್ಲಿ ಖಾತೆ ಮಾಡಿಕೊಟ್ಟಿರುವುದು ಅನುಮಾನಕ್ಕೆ ಕಾರಣವಾಗಿದೆ.

ಸದರಿ ಸಂಘದ ಕಡತವನ್ನು ತಿಂಗಳವರೆಗೂ ಮುಡಾ ಅಧ್ಯಕ್ಷರು ತಮ್ಮ ಸುಪರ್ದಿಯಲ್ಲಿಯೇ ಇಟ್ಟುಕೊಂಡು ಸರ್ಕಾರದ ನಿಯಮ, ಕಾನೂನುಗಳನ್ನು ಗಾಳಿಗೆ ತೂರಿದ್ದಾರೆ. ರಾಜೀವ್ ಅವರು ಮುಡಾ ಅಧ್ಯಕ್ಷರಾದ ಮೇಲೆ ಅಧಿಕಾರ ದುರ್ಬಳಕೆ ಮಾಡಿಕೊಂಡು ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಭ್ರಷ್ಟಾಚಾರ ಮಾಡಲೆಂದೇ ಆಯುಕ್ತರನ್ನು ಎರಡು ಬಾರಿ ವರ್ಗಾವಣೆ ಮಾಡಲಾಗಿದೆ. ಪ್ರಕರಣ ಸಂಬಂಧ ಕೂಡಲೇ ತನಿಖೆ ಮಾಡಿಸಬೇಕು.ಇಲ್ಲವಾದಲ್ಲಿ ಸರ್ಕಾರದ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ  ಶಿವಣ್ಣ ಎಚ್ಚರಿಕೆ ನೀಡಿದರು.

Key words: Muda -President -H. V Rajeev- SIT