ಮೈಸೂರಿನ ಈ ಹುಡುಗಿ ಟಾಪರ್ ಆಗಲು ಪ್ರೇರಣೆ ಏನು ಗೊತ್ತಾ..?

ಮೈಸೂರು,ಮೇ,19,2022(www.justkannada.in):  ಇಂದು ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಗೊಂಡಿದೆ. ಈ ಮಧ್ಯೆ ನೂರಕ್ಕೆ ನೂರರಷ್ಟು ಅಂಕಗಳನ್ನ ಪಡೆದು ಹಲವು ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಅದರಲ್ಲಿ ಇಲ್ಲೊಬ್ಬ ಮೈಸೂರಿನ ವಿದ್ಯಾರ್ಥಿನಿಯೂ ಸಹ 625ಕ್ಕೆ 625 ಅಂಕಗಳನ್ನ ಪಡೆದು ಎಲ್ಲರನ್ನ ಹುಬ್ಬೇರಿಸುವಂತೆ ಮಾಡಿದ್ದಾರೆ.

ಹೌದು ಮೈಸೂರಿನ ಅದರ್ಶ ಸರ್ಕಾರಿ ಆದರ್ಶ ಶಾಲೆಯ ವಿದ್ಯಾರ್ಥಿನಿ ಏಕ್ತಾ ಎಂ.ಜಿ 625ಕ್ಕೆ 625 ಅಂಕಗಳನ್ನ ಗಳಿಸಿ ತನ್ನ ಪೋಷಕರು ಮತ್ತು ಶಾಲೆಗೆ ಕೀರ್ತಿಯನ್ನ ತಂದಿದ್ದಾರೆ. ಅಷ್ಟಕ್ಕೂ ಈ ಸಾಧನೆ ಮಾಡಲು ಈ ವಿದ್ಯಾರ್ಥಿನಿಗೆ ಪ್ರೇರಣೆಯಾದ ಅಂಶಗಳನ್ನ ಗಮನಿಸಿದರೆ ಅಚ್ಚರಿ ಮೂಡಿಸುತ್ತದೆ.
ಏಕ್ತಾ ಎಂಜಿ ಮೈಸೂರಿನ ಗಣಪತಿ ಎಂಸಿ ಹಾಗೂ ಎಂಎಸ್ ಗಂಗಮ್ಮ ದಂಪತಿಯ ಹಿರಿಯ ಮಗಳಾಗಿದ್ದು ಇವರು ಮೂಲತಃ ಕೊಡಗು ಜಿಲ್ಲೆಯವರು. ಆದರೆ ತಂದೆ ಗಣಪತಿ ಮಗಳ ವಿದ್ಯಾಭ್ಯಾಸಕ್ಕಾಗಿ ಸಾಂಸ್ಕೃತಿಕ ನಗರಿ ಮೈಸೂರಿಗೆ ಬಂದು ಸಿದ್ಧಾರ್ಥ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ‌.

ಮಗಳ ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ಬಂದ ಈಕೆಯ ತಂದೆತಾಯಿಗೆ ಯಾವುದೇ ಸೂಕ್ತ ಉದ್ಯೋಗವಿರಲಿಲ್ಲ. ಹೀಗಾಗಿ ಮಗಳನ್ನು ಮೈಸೂರಿನ ಜಾಕಿ ಕ್ವಾಟ್ರಸ್‌ ನಲ್ಲಿರುವ ಸರ್ಕಾರಿ ಆದರ್ಶ ಶಾಲೆಗೆ ದಾಖಲಿಸಿದರು.  ಶಾಲೆಗೆ ಸೇರಿದ ವಿದ್ಯಾರ್ಥಿನಿ ಏಕ್ತಾ  ಶಿಕ್ಷಕರ ಅಚ್ಚು ಮೆಚ್ಚಿನ ವಿದ್ಯಾರ್ಥಿನಿಯಾಗಿ ‌ ಶಾಲೆಯ ಶಿಕ್ಷಕರ ನಿರೀಕ್ಷೆಯನ್ನು ಹುಸಿ ಮಾಡಲಿಲ್ಲ. 2021 – 2022ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಗಳಿಸಿದ್ದಾಳೆ‌.

ಸಾಧನೆ ಮಾಡಲು ಪ್ರೇರಣೆಯಾಯ್ತು ಶಾಸಕರ ಮಾತು ಮತ್ತು  ತಂದೆ ತಾಯಿಯ ಸ್ಪೂರ್ತಿ..

ಇನ್ನು ವಿದ್ಯಾರ್ಥಿನಿ ಏಕ್ತಾಗೆ ಈ ಸಾಧನೆ ಮಾಡಲು  ಪ್ರೇರಣೆಯಾಗಿದ್ದು ಶಾಸಕ ಎಸ್.ಎ ರಾಮದಾಸ್ ಅವರು ನೀಡಿದ್ದ ಭರವಸೆ ಮತ್ತು ತಂದೆ ತಾಯಿಯ ಸ್ಪೂರ್ತಿ. ಹೌದು,
ಏಕ್ತಾ ಈ ಅಪರೂಪದ ಸಾಧನೆಗೆ ಸ್ಪೂರ್ತಿ ತಂದೆ ಗಣಪತಿ ಹಾಗೂ ತಾಯಿ ಗಂಗಮ್ಮ ಮತ್ತು ಶಾಲೆಯ ಎಲ್ಲಾ ಶಿಕ್ಷಕರು. ಏಕ್ತಾಳ ಪ್ರತಿಭೆಯನ್ನು ಗುರುತಿಸಿದ ಶಿಕ್ಷಕರು ಆಕೆಗೆ ಎಲ್ಲಾ ರೀತಿಯ ಅನುಕೂಲವನ್ನು ಮಾಡಿಕೊಟ್ಟರು.  ಜೊತೆಗೆ ಪೋಷಕರು ಸಹಾ ಮಗಳ ವಿದ್ಯಾಭ್ಯಾಸಕ್ಕಾಗಿ ಎಲ್ಲಾ ತ್ಯಾಗವನ್ನು ಮಾಡಿದ್ದು, ಆಕೆಯ ವಿದ್ಯಾಭ್ಯಾಸಕ್ಕಾಗಿ ತಮ್ಮ ಮೂಲಃ ಊರು ಬಿಟ್ಟು ಮೈಸೂರಿಗೆ ಬಂದರು. ಸೂಕ್ತ ಕೆಲಸ ಆದಾಯವಿಲ್ಲದಿದ್ದರೂ ಮಗಳಿಗೆ ಯಾವತ್ತು ಯಾವುದರ ಕೊರತೆಯಾಗದಂತೆ ನೋಡಿಕೊಂಡರು. ಆಕೆ ಬಯಸಿದೆಲ್ಲವನ್ನೂ ಸಿಗುವಂತೆ ನೋಡಿಕೊಂಡರು. ತನ್ನ ತಂದೆ ತಾಯಿಯ ತ್ಯಾಗ ಪರಿಶ್ರಮ ಏಕ್ತಾಳ ಈ ಸಾಧಸ್ಪೂರ್ತಿಯಾಯಿತು.

ಇನ್ನು ಏಕ್ತಾ ಈ ಸಾಧನೆ ಮಾಡಲು ಕಾರಣ ಕೆ. ಆರ್ ಕ್ಷೇತ್ರದ ಬಿಜೆಪಿ ಶಾಸಕ ಎಸ್ ಎ ರಾಮದಾಸ್. ಹೌದು ಒಮ್ಮೆ ಶಾಲೆಗೆ  ಭೇಟಿ ನೀಡಿದ್ದ ಶಾಸಕ ಎಸ್. ಎ ರಾಮದಾಸ್, ಸರ್ಕಾರಿ ಆದರ್ಶ ಶಾಲೆಯ ಯಾವುದೇ ವಿದ್ಯಾರ್ಥಿ ಎಸ್‌ಎಸ್‌ಎಲ್ ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಗಳಿಸಿದರೆ ಅವರು ಬಾಡಿಗೆ ಮನೆಯಲ್ಲಿದ್ದರೆ ಅವರಿಗೆ ಸ್ವಂತ ಮನೆ  ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದರು.

ನನಗಾಗಿ  ಇಷ್ಟು ಕಷ್ಟಪಡುತ್ತಿರುವ ತಂದೆ ತಾಯಿಗಾಗಿ ನಾನು ಏನಾದರೂ ಮಾಡಬೇಕು. ನಾನು ಉತ್ತಮ ಸಾಧನೆ ಮಾಡಿದರೆ ಬಾಡಿಗೆ ಮನೆಯಲ್ಲಿರುವ ತಂದೆ ತಾಯಿಗೆ ಸ್ವಂತ ಸೂರು ಸಿಗುತ್ತದೆ ಎನ್ನುವುದನ್ನ  ಮನಸ್ಸಿನಲ್ಲಿಟ್ಟುಕೊಂಡ ವಿದ್ಯಾರ್ಥಿನಿ ಏಕ್ತಾ ಛಲ ಬಿಡದೆ ಈ ಸಾಧನೆ ಮಾಡಿದ್ದಾಳೆ ಎಂದರೇ ತಪ್ಪಾಗಲಾರದು.

ಇನ್ನೊಂದು ವಿಶೇಷ ಅಂಶವೇನೆಂದರೇ ಈಕೆ ಯಾವುದೇ ಟ್ಯೂಷನ್‌ ಗೂ ಸೇರದೆ ಕೇವಲ ಶಾಲೆಯಲ್ಲಿ ಶಿಕ್ಷಕರು ಮಾಡಿದ ಪಾಠದಿಂದಲೇ ಈ ಸಾಧನೆ ಮಾಡಿರುವುದು ನಿಜಕ್ಕೂ ಸ್ಪೂರ್ತಿದಾಯಕವಾದದ್ದು. ಈ ಮೂಲಕ ಸಾಧನೆ ಮಾಡಬೇಕೆಂಬ ಧೃಡ ನಿಶ್ಚಯವಿದ್ದರೆ ಬಡತನ, ಸರ್ಕಾರಿ ಶಾಲೆ, ಬೇರೆ ಯಾವುದು ಅಡ್ಡಿಯಾಗುವುದಿಲ್ಲ ಎಂಬುದನ್ನ ವಿದ್ಯಾರ್ಥಿನಿ ಏಕ್ತಾ ತೋರಿಸಿಕೊಟ್ಟಿದ್ದಾಳೆ.

Key words: motivated –mysore-girl – become-SSLC- Topper