ಅತ್ಯಂತ ದುಬಾರಿ ನಾಯಿ, ರೂ.20 ಕೋಟಿಗೆ ಖರೀದಿಸಿದ ಬೆಂಗಳೂರಿಗ..

ಬೆಂಗಳೂರು, ಜನವರಿ,5, 2022 (www.justkannada.in): ಇಡೀ ವಿಶ್ವದಲ್ಲೇ ಬೆಂಗಳೂರು ಮಹಾನಗರ ಅತ್ಯಂತ ದುಬಾರಿ ನಾಯಿಗಳಿರುವ ನಗರವಂತೆ! ಇದು ನಿಮಗೆ ತಿಳಿದಿತ್ತೇ?!

ಕಡಬೊಮ್ ಕೆನ್ನೆಲ್ಸ್ ಎಂಬ ಹೆಸರಿನ ಸಂಸ್ಥೆಯೊಂದರ ಮಾಲೀಕರು ಹಾಗೂ ಭಾರತೀಯ ನಾಯಿ ತಳಿಗಳ ಸಂಘದ ಸತೀಶ್ ಅವರು ಅತ್ಯಂತ ದುಬಾರಿ ನಾಯಿಗಳನ್ನು ಖರೀದಿಸುವಲ್ಲಿ ನಿಪುಣರು. ಇವರು ಇತ್ತೀಚೆಗೆ ಖರೀದಿಸಿರುವ ನಾಯಿಯ ಬೆಲೆ ಬರೋಬ್ಬರಿ ರೂ.೨೦ ಕೋಟಿಗಳಂತೆ.  ಈ ನಾಯಿ ಕಾಕೇಸಿಯನ್ ಷೆಪರ್ಡ್ ಜಾತಿಗೆ ಸೇರಿದ್ದು, ಬಹುಪಾಲು ರಷ್ಯಾ, ಟರ್ಕಿ, ಅಮೇನಿಯಾ, ಸಕಾಸ್ಸಿಯ ಹಾಗೂ ಜಿಯೋರ್ಜಿಯದಂತಹ ದೇಶಗಳಲ್ಲಿ ಮಾತ್ರ ಲಭಿಸುತ್ತದೆ. ಆದರೆ ಭಾರತದಲ್ಲಿ ಈ ಜಾತಿಯ ನಾಯಿ ಬಹಳ ಅಪರೂಪ.

ಈ ಜಾತಿಯ ನಾಯಿಗಳು, ಬಹಳ ಧೈರ್ಯ, ವಿಶ್ವಾಸ, ಭಯರಹಿತ ಹಾಗೂ ಅತ್ಯಂತ ಬುದ್ಧಿವಂತ ನಾಯಿಗಳಂತೆ. ಇವು ನೋಡಲು ಬಹಳ ದೊಡ್ಡ ಗಾತ್ರವನ್ನು ಹೊಂದಿರುತ್ತವೆ ಮತ್ತು ೧೦-೧೨ ವರ್ಷ ಜೀವಿಸುತ್ತವಂತೆ.

ಅಮೇರಿಕನ್ ಕೆನ್ನೆಲ್ ಕ್ಲಬ್‌ ನ ಪ್ರಕಾರ, ಈ ಕಾಕೇಸಿಯನ್ ಷೆಪರ್ಡ್ಸ್ ಜಾತಿಯ ನಾಯಿಗಳನ್ನು ಭೂಮಿ ಒತ್ತುವರಿಯನ್ನು ತಡೆಗಟ್ಟಲು, ಹಸು ಹಾಗೂ ಇತರೆ ಸಾಕುಪ್ರಾಣಿಗಳಂತಹ ಜಾನುವಾರುಗಳನ್ನು ನರಿ, ಚಿರತೆಗಳಂತಹ ಇತರೆ ಪ್ರಾಣಿಗಳಿಂದ ಕಾಪಾಡಿಕೊಳ್ಳಲು ಬಳಸುತ್ತಾರಂತೆ.

ಈ ಹಿಂದೆ ಸತೀಶ್ ಅವರು ‘ಕೋರಿಯನ್ ದೋಸ ಮಾಸ್ಟಿಫ್ಸ್’ ಎಂಬ ಮತ್ತೊಂದು ಅಪರೂಪದ ತಳಿಯ ನಾಯಿಯನ್ನು ರೂ.೧ ಕೋಟಿ ಕೊಟ್ಟು ಖರೀದಿಸಿದ್ದರಂತೆ. ಅದೇ ರೀತಿ ಅಲಾಶ್ಕನ್ ಮಾಲಾಮುಟೆ ರೂ.೮ ಕೋಟಿ, ಟಿಬೇಟನ್ ಮಾಸ್ಟಿಫ್ ರೂ.೧೦ ಕೋಟಿ ಕೊಟ್ಟು ಖರೀದಿಸಿದ್ದರಂತೆ. ಈ ರೂ.೨೦ ಕೋಟಿ ಬೆಲೆಯ ‘ಕಡಬೊಮ್ ಹೈದರ್’ ಈಗ ಸುಮಾರು ೧.೫ ವರ್ಷ ವಯಸ್ಸಿನದಾಗಿದ್ದು, ಇದನ್ನು ಹೈದ್ರಾಬಾದ್‌ನಲ್ಲಿರುವ ನಾಯಿಗಳ ಮಾರಾಟ ಮಾಡುವವರಿಂದ ಖರೀದಿಸಲಾಯಿತಂತೆ.

ಇತ್ತೀಚೆಗೆ ಕಡಬೊಮ್ ಹೈದರ್ ತಿರುವನಂತಪುರದಲ್ಲಿ ನಡೆದಂತಹ ಕೆನ್ನೆಲ್ ಕ್ಲಬ್‌ ನ ಕಾರ್ಯಕ್ರಮ ಹಾಗೂ ಕ್ರೌನ್ ಕ್ಲಾಸ್ಸಿಕ್ ಡಾಗ್ ಶೋನಲ್ಲಿ ಭಾಗವಹಿಸಿ, ಅತ್ಯುತ್ತಮ ತಳಿ ವರ್ಗದಡಿ ೩೨ ಪದಕಗಳನ್ನು ಗೆದ್ದಿದೆಯಂತೆ!

“ಈ ನನಗೆ ಹೈದರ್ ಇಷ್ಟೊಂದು ಪದಕಗಳು ಹಾಗೂ ಟ್ರೋಫಿಗಳನ್ನು ಗೆದ್ದಿರುವುದನ್ನು ನೋಡಿ ಆಶ್ಚರ್ಯವಾಯಿತು. ಕೇವಲ ಏಳು ದಿನಗಳಲ್ಲಿ ಈ ನಾಯಿ ೩೨ ಪದಕಗಳನ್ನು ಗೆದ್ದಿದೆ. ಈ ನಾಯಿ ನೋಡಲು ಬೃಹತ್ ಗಾತ್ರವನ್ನು ಹೊಂದಿದೆ, ಆದರೆ ಬಹಳ ಸ್ನೇಹಪರ ಜೀವಿಯಾಗಿದೆ. ಪ್ರಸ್ತುತ ಇದು ನನ್ನ ಹವಾನಿಯಂತ್ರಿತ ಮನೆಯಲ್ಲಿ ನನ್ನ ಜೊತೆಯಲ್ಲೇ ಇದೆ,” ಎಂದು ಸತೀಶ್ ತಿಳಿಸಿದರು.

“ಈ ನಾಯಿಯನ್ನು ನವೆಂಬರ್ ತಿಂಗಳಲ್ಲಿ ಬೆಂಗಳೂರಿಗರಿಗೆ ಪರಿಚಯಿಸಲು ಬಯಸಿದ್ದೆ. ಆದರೆ ಆ ಸಮಯದಲ್ಲಿ ಈ ನಾಯಿಯ ಮೈಮೇಲಿನ ಕೂದಲು ಉದುರುತಿತ್ತು. ಹಾಗಾಗಿ, ನಾನು ಸ್ವಲ್ಪ ಮುನ್ನೆಚ್ಚರಿಕೆ ವಹಿಸಿದೆ. ಈಗ ಫೆಬ್ರವರಿ ತಿಂಗಳಲ್ಲಿ ಒಂದು ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಿ, ಅಲ್ಲಿ ಈ ನಾಯಿಯನ್ನು ಪ್ರದರ್ಶಿಸಬೇಕೆಂದು ಆಲೋಚಿಸಿದ್ದೇನೆ,” ಎಂದು ಸತೀಶ್ ವಿವರಿಸಿದರು.

ಪ್ರಸ್ತುತ, ಸತೀಶ್ ಅವರು ಇದೇ ಜಾತಿಯ ಎರಡು ಮರಿಗಳನ್ನು ರೂ.೫ ಕೋಟಿ ಕೊಟ್ಟು ಖರೀದಿಸಿದ್ದಾರಂತೆ. “ನಾನು ಈ ನಾಯಿಗಳನ್ನು ಮಾರುವುದಿಲ್ಲ, ನಾನೇ ಇಟ್ಟುಕೊಳ್ಳುತ್ತೇನೆ. ಇವುಗಳನ್ನು ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳಬೇಕಾಗುತ್ತದೆ ಹಾಗೂ ಇದರ ಉಟೋಪಚಾರಗಳಿಗೆ ಆರೈಕೆ ಬೇಕಾಗುತ್ತದೆ. ನನ್ನ ಬಳಿ ಅದಕ್ಕೆಂದೇ ಜನರಿದ್ದಾರೆ. ಜೊತೆಗೆ ಆಗಾಗ ಇದಕ್ಕೆ ಬ್ರಷಿಂಗ್ ಮಾಡಬೇಕಾಗುತ್ತದೆ ಹಾಗೂ ಆಗಾಗ ಅದರ ಕಿವಿಗಳನ್ನು ಸ್ವಚ್ಛಗೊಳಿಸುತ್ತಿರಬೇಕು ಮತ್ತು ಉಗುರಗಳನ್ನು ಕತ್ತರಿಸುತ್ತಿರಬೇಕಾಗುತ್ತದೆ,” ಎಂದರು.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words:  most- expensive –dog-bought -Rs.20 Crore- Bengaluru..