ಶಾಸಕರು ಮತ್ತು ಸಂಸದರು ಸ್ವಪ್ರತಿಷ್ಠೆ, ಧರ್ಮ ರಾಜಕಾರಣ ಬಿಟ್ಟು ಅಭಿವೃದ್ಧಿ ರಾಜಕಾರಣ ಮಾಡಲಿ-ಕೆ.ವಿ.ಮಲ್ಲೇಶ್ ಟಾಂಗ್.

ಮೈಸೂರು,ನವೆಂಬರ್,16,2022(www.justkannada.in): ಮೈಸೂರಿನಲ್ಲಿ ಗುಂಬಜ್ ಮಾದರಿಯ ಬಸ್ ನಿಲ್ದಾಣ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರಿಬ್ಬರ ನಡುವಿನ ಅಸಮಾಧಾನ ಕುರಿತು ಪಾಲಿಕೆ ಮಾಜಿ ಸದಸ್ಯ ಹಾಗೂ ಅನಿಕೇತನ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ವಿ.ಮಲ್ಲೇಶ್ ಟಾಂಗ್ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಕೆ.ವಿ ಮಲ್ಲೇಶ್,  ಸ್ವಪಕ್ಷೀಯರಾದ ಶಾಸಕರು ಹಾಗೂ ಸಂಸದರು ಸ್ವಪ್ರತಿಷ್ಠೆ, ಧರ್ಮ ರಾಜಕಾರಣ ಬಿಟ್ಟು ಅಭಿವೃದ್ಧಿ ರಾಜಕಾರಣ ಮಾಡಲಿ. ಬಸ್‌ ತಂಗುದಾಣವನ್ನು ಬೇಕೆಂದಾಗ ಕಟ್ಟಲು, ಬೇಡ ಎಂದಾಗ ಒಡೆಯಲು ಇದು ಅವರ ಖಾಸಗಿ ಸ್ವತ್ತಲ್ಲ, ಕಟ್ಟಲು, ಒಡೆಯಲು ಹಣ ವ್ಯಯವಾಗುವುದು ಸಾರ್ವಜನಿಕರದ್ದು ಎಂಬ ಅರಿವು ಇಲ್ಲದಂತೆ ವರ್ತಿಸುತ್ತಿದಾರೆ. ಪ್ಲಾನ್‌ ಎಲ್ಲವನ್ನೂ ಸಿದ್ಧಪಡಿಸಿಕೊಂಡು ಕಟ್ಟಿರುವ ಗುಂಬಜ್‌ ಮಾದರಿ ಬಸ್‌ ತಂಗುದಾಣವನ್ನು ಏಕಾಏಕಿ ಈಗ ಒಡೆಯುತ್ತೇವೆ ಎಂದು ಗಡುವು ನೀಡಿರುವ ಸಂಸದರು ಒಂದೆಡೆಯಾದರೆ ಅದು ತಪ್ಪಿದ್ದರೆ ತೆರವಿಗೆ ಸಿದ್ಧ ಎಂದು ಶಾಸಕರು ಹೇಳುವ ಮೂಲಕ ಕಟ್ಟೋದಕ್ಕೆ ಒಬ್ಬರು, ಕೆಡವೋದಕ್ಕೆ ಮತ್ತೊಬ್ಬರು ಎಂದು ಸಾರ್ವಜನಿಕರ ಆಸ್ತಿಯನ್ನು ತಮ್ಮ ಮತ ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ಕ್ಷೇತ್ರದ ಮತದಾರರಿಗೆ ಮಾಡುತ್ತಿರುವ ವಂಚನೆಯಾಗಿದೆ ಎಂದು ಕಿಡಿಕಾರಿದರು.

ಕೆ.ಆರ್.ಕ್ಷೇತ್ರ ಸೇರಿದಂತೆ ನಗರದ ಪ್ರಮುಖ ಬಸ್ ತಂಗುದಾಣಗಳಲ್ಲಿ ಸಂಸದರ ಹಾಗೂ ಶಾಸಕರ ದೊಡ್ಡ ದೊಡ್ಡ ಭಾವಚಿತ್ರ ಇರುವ ವಿನ್ಯಾಸ ಮಾಡಲಾಗಿದೆ. ಸಾರ್ವಜನಿಕರ ಹಣದಲ್ಲಿ ಇರುವ ಪ್ರಚಾರ ತೆಗೆದುಕೊಳ್ಳುವುದು ಎಷ್ಟು ಸರಿ? ತಮ್ಮ ಸ್ವಂತ ಹಣದಲ್ಲಿ ಬಸ್ ತಂಗುದಾಣ ಕಟ್ಟಿಸಿದ ಎಷ್ಟೋ ಮಹನೀಯರು, ಸಂಘ ಸಂಸ್ಥೆಗಳು ತಮ್ಮ ಹೆಸರನ್ನೂ ಹಾಕಿಸಲು ಸಂಕೋಚ ಪಡುತ್ತಾರೆ. ಆದರೆ, ಒಂದು ರೂಪಾಯಿಯನ್ನೂ ಬಸ್ ತಂಗುದಾಣಕ್ಕೆ ಕಾಣಿಕೆ ನೀಡದೇ ಇರುವ ಇವರು ಬಸ್ ನಿಲ್ದಾಣದ ತುಂಬ ತಮ್ಮ ಹಾಗೂ ಪಕ್ಷದ ನಾಯಕರ ದೊಡ್ಡ ದೊಡ್ಡ ಭಾವಚಿತ್ರ ಹಾಕಿ ಪ್ರಚಾರ ಪಡೆಯುತ್ತಾರೆ ಎಂದರೆ, ಇವರಿಗೆ ಯಾವ ನೈತಿಕತೆ ಇದೆ ಎಂದು ಕೆ.ವಿ ಮಲ್ಲೇಶ್ ವಾಗ್ದಾಳಿ ನಡೆಸಿದರು.

ಜನಪ್ರತಿನಿಧಿಗಳ ಕೆಲಸ ಸಾರ್ವಜನಿಕ ಸೇವೆ ಎಂಬುದನ್ನು ಮರೆತಿರುವ ಇವರು ಪ್ರತಿಷ್ಠೆ, ಧರ್ಮದ ಅಫೀಮನ್ನು ಯುವ ಸಮೂಹದ ತಲೆಗೇರಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ.  ಕೆ.ಆರ್.ಕ್ಷೇತದಲ್ಲಿನ ಕಸ ವಿಲೇವಾರಿ ಘಟಕದಿಂದ ಸುತ್ತಲಿನ ನಿವಾಸಿಗಳಿಗೆ ಆರೋಗ್ಯ ಸಮಸ್ಯೆ ಎದುರಾಗುತ್ತಿದೆ ಎಂದು ಮಾಜಿ ಆಗಿದ್ದ ಇದೇ ಶಾಸಕರು ಟೆಂಟ್‌ಹಾಕಿ ಹಗಲು ರಾತ್ರಿ ಪ್ರತಿಭಟನೆ ನಡೆಸಿದ್ದರು. ಶಾಸಕರಾಗಿ ಗೆದ್ದ ಬಳಿಕ ತಮ್ಮದೇ ಸರ್ಕಾರ ಕೇಂದ್ರ ಹಾಗೂ ರಾಜ್ಯದಲ್ಲಿ ಇರುವಾಗ ಏನು ಮಾಡುತ್ತಿದ್ದಾರೆ. ಇನ್ನೆಷ್ಟು ವರ್ಷ ಬೇಕು ಇವರಿಗೆ? ಇನ್ನಾದರೂ ಮಾತು ನಿಲ್ಲಿಸಿ ಕೆಲಸ ಮಾಡಿ ಎಂದು ಕೆ.ವಿ ಮಲ್ಲೇಶ್ ಗುಡುಗಿದರು.

Key words:  MLAs -MPs -religion –politics-mysore-KV Mallesh