ಹಲವರನ್ನು ಮುಗಿಸಿಯೇ ಮೇಲಕ್ಕೆ ಬಂದ ನಿಮ್ಮದು ಯಾವ ಸೀಮೆಯ ಅಹಿಂದ ?- ಸಿದ್ಧರಾಮಯ್ಯ ವಿರುದ‍್ಧ ಸಚಿವ ಶ್ರೀರಾಮುಲು ಗುಡುಗು.

ಬೆಂಗಳೂರು,ಆಗಸ್ಟ್,30,2022(www.justkannada.in):  ಯಾರೋ ಕಟ್ಟಿದ ಹುತ್ತಕ್ಕೆ ಕರಿ ನಾಗನಂತೆ ಸೇರಿಕೊಂಡ ನೀವು ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ಕೆ.ಹೆಚ್ .ಮುನಿಯಪ್ಪ, ಅಲ್ಪಸಂಖ್ಯಾತ ಸಮುದಾಯದ ಜಾಫರ್ ಷರೀಪ್, ಸೇರಿದಂತೆ ಹಲವರನ್ನು ಮುಗಿಸಿಯೇ ಮೇಲಕ್ಕೆ ಬಂದ ನಿಮ್ಮದು ಯಾವ ಸೀಮೆಯ ಅಹಿಂದ ? ಬಿಡಿಸಿ ಹೇಳುತ್ತೀರಾ? ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಸಚಿವ ಶ್ರೀರಾಮುಲು ಗುಡುಗಿದ್ದಾರೆ.

ಸರಣಿ ಟ್ವೀಟ್ ಮಾಡಿ ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಕಿಡಿಕಾರಿರುವ ಸಚಿವ ಶ್ರೀರಾಮುಲು, ಅಹಿಂದ ನಾಯಕರನ್ನು ಮುಗಿಸಿರುವ ನಿಮ್ಮ ಮುಂದಿನ ಗುರಿ ಒಕ್ಕಲಿಗರಾ? ಅದರಲ್ಲೂ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಇರಬಹುದೇ? ಎಲ್ಲಿ ನನಗೆ ಸ್ಪರ್ಧೆಯೊಡ್ಡಬಹುದು ಎಂಬ ಆತಂಕದಿಂದ ಅವರನ್ನೂ ಮೂಲೆಗುಂಪು ಮಾಡುವ ನಿಮ್ಮ ಯತ್ನ ಮುಗಿದಿಯೇ ಇಲ್ಲವೇ ಮುಂದುವರೆಯುವುದೋ?

ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು. ದಾಸಶ್ರೇಷ್ಠ ಶ್ರೀ ಪುರಂದರದಾಸರು ಮಾಜಿ ಸಿ.ಎಂ. ಸಿದ್ದರಾಮಯ್ಯನಂತವರನ್ನು ನೋಡಿಯೇ ಈ ಪದವನ್ನು ಬರೆದಿದ್ದರೆ ಅಚ್ಚರಿಯಿಲ್ಲ. ಏಕೆಂದರೆ ನೀವು ಜೀವನದಲ್ಲಿ ಇನ್ನೊಬ್ಬರನ್ನು ಮುಗಿಸಿಯೇ ಮೇಲಕ್ಕೆ ಬಂದ ಮಹಾಪುರುಷ ತಾವಲ್ಲವೇ.

ಸುಳ್ಳೇ ನಮ್ಮ ಮನೆದೇವರು ಎಂಬುದನ್ನು ನಿಮ್ಮನ್ನು ನೋಡಿ ಕಲಿಯಬೇಕು. ಏಕೆಂದರೆ ನೀವು ಹೇಳುವುದು ಒಂದು, ಮಾಡುವುದು ಇನ್ನೊಂದು ಎಂಬುದು ‌ಎಲ್ಲರಿಗೂ ಗೊತ್ತಿರುವ ವಿಷಯ.! ಇಂತಹ ಕಲೆ ನಿಮಗಲ್ಲದೆ ಬೇರೆಯವರಿಗೆ ಬರಲು ಹೇಗೆ ಸಾಧ್ಯ? ಸುಳ್ಳಿನ ರಾಮಯ್ಯನವರೇ? ಎಂದು ಸಚಿವ ಶ್ರೀರಾಮುಲು ಕುಟುಕಿದ್ದಾರೆ.

ದೇವರಾಜ್ ಅರಸ್ ನಂತರ ನಾನೇ ಅತ್ಯಂತ ಯಶಸ್ವಿ ಮುಖ್ಯಮಂತ್ರಿ ಎಂದು ಹಿಂಬಾಲಕರಿಂದ ಜೈಕಾರ ಹಾಕಿಸಿಕೊಳ್ಳುವ ಬುರಡೆರಾಮಯ್ಯವರೇ, 5 ವರ್ಷದ ಅವಧಿಯಲ್ಲಿ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತ ಸಮುದಾಯಕ್ಕೆ ನಿಮ್ಮಷ್ಟು ಚೂರಿ ಹಾಕಿದ ಸಿ.ಎಂ. ಮತ್ತೊಬ್ಬರಿಲ್ಲ ಎಂಬುದನ್ನು ಬಿಡಿಸಿ ಹೇಳಬೇಕೇ?

ನೀವು ಆಡಳಿತದಲ್ಲಿ ಇದ್ದಾಗ ಈ ಸಮಸ್ಯೆಯನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದರೆ ಇಂದು ನಮ್ಮ ಸರ್ಕಾರದ ಬಗ್ಗೆ ಮಾತನಾಡುವ ಪ್ರಮೇಯವೇ ಬರುತ್ತಿರಲಿಲ್ಲ. ಜನರ ಕಣ್ಣಿಗೆ ಮಂಕುಬೂದಿ ಎರಚುವ ಕಲೆ ನಿಮಗಲ್ಲದೆ ಬೇರೆಯವರಗೆ ಹೇಗೆ ಬರಲು‌ ಸಾಧ್ಯ?

ನಿಮ್ಮ ಅಧಿಕಾರದ ಅವಧಿಯಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮೂಲಕ 160 ಕೋಟಿ ಖರ್ಚು ಮಾಡಿ ನಡೆಸಿದ್ದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯ ವರದಿ ಪೂರ್ಣಗೊಂಡಿದ್ದರೂ ಅದನ್ನು ಬಹಿರಂಗಗೊಳಿಸದೆ ಕಸದ ಬುಟ್ಟಿಗೆ ಹಾಕಿದ್ದು ಯಾವ ವಚನಭ್ರಷ್ಟತೆ? ಉತ್ತರ ಕೊಡುತ್ತೀರಾ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದ್ದಾರೆ.

ವರದಿ ಬಿಡುಗಡೆ ಮಾಡದಂತೆ ನಿಮ್ಮ ಸಂಪುಟದ ಸಹೋದ್ಯೋಗಿಗಳೇ ಒತ್ತಡ ಹಾಕಿ ಕಾಂತರಾಜು ಅವರ ವರದಿಯನ್ನು ಶೈತ್ಯಗಾರಕ್ಕೆ ಹಾಕಿದ್ದು ವಚನಭ್ರಷ್ಟತೆ ಅಲ್ಲದೆ ಮತ್ತೇನು? ಇದನ್ನು ಮಾಧ್ಯಮಗಳಲ್ಲಿ ವ್ಯವಸ್ಥಿತ ಸೋರಿಕೆ ಮಾಡಿ, ಕೊನೆಗೆ ನಮಗೆಯೇ ತಿರುಗಬಾಣವಾದೀತು ಎಂದು ಮುಚ್ಚಿ ಹಾಕಿದ ಪ್ರಖರ ಪಂಡಿತರು ನೀವಲ್ಲವೇ? ಎಂದು ಸಿದ್ಧರಾಮಯ್ಯಗೆ ಚಾಟಿ ಬೀಸಿದ್ದಾರೆ.

ಈಗಲೂ ನನ್ನ ಮಾತಿಗೆ ‌ನಾನು ಬದ್ದವಾಗಿದ್ದೇನೆ. ನನ್ನ ಸಮುದಾಯಕ್ಕೆ ಮೀಸಲಾತಿ ಪ್ರಮಾಣವನ್ನು ಶೇ. 3% ರಿಂದ 7.5%ಗೆ ಹೆಚ್ಚಿಸಲು ಸರ್ಕಾರದ ಮೇಲೆ ಎಲ್ಲಾ ರೀತಿಯ ಪ್ರಯತ್ನ ನಡೆಸಿದ್ದೇನೆ‌. ಅಧಿಕಾರಕ್ಕೀಂತ ಸಮುದಾಯದ ಹಿತ ಮುಖ್ಯ ಎಂಬುದು ನನಗೂ ಗೊತ್ತಿದೆ.

ಪರಿಶಿಷ್ಟ ಪಂಗಡದ ಜನಾಂಗದವರಿಗೆ ಮೀಸಲಾತಿ ಪ್ರಮಾಣವನ್ನು 3% ರಿಂದ 7.5% ಹೆಚ್ಚಿಸುವ ಸಂಬಂಧ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯನ್ನು ಜಾರಿಗೊಳಿಸುಂತೆ ನಮ್ಮ ಜನಪ್ರಿಯ ಮುಖ್ಯಮಂತ್ರಿಗಳಾದ ಬೊಮ್ಮಾಯಿ ಅವರಿಗೆ ಮನವಿ ಮಾಡಿಕೊಳ್ಳಲಾಗಿದೆ.ಅವರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ‌.

ಮೀಸಲಾತಿ ಸಂಬಂಧ ನಾಗಮೋಹನ್ ದಾಸ್ ವರದಿ ನೀಡಿದ್ದಾರೆ. ಸುಭಾಷ್ ಆಡಿಯ ನೇತೃತ್ವದ ತ್ರಿಸದಸ್ಯ ಸಮಿತಿ ನೀಡಿರುವ ವರದಿ ಪರಿಶೀಲನಾ ಹಂತದಲ್ಲಿದೆ. ಅದಷ್ಟು ಶೀಘ್ರ ನಮ್ಮ ಸಮುದಾಯಕ್ಕೆ ಸಿಹಿ ಸುದ್ದಿಯನ್ನು ನಮ್ಮ ಸರ್ಕಾರವೇ ಕೊಡಲಿದೆ. ಈ ಬಗ್ಗೆ ಯಾರಿಗೂ ಸಂಶಯವೇ ಬೇಡ. ಮೀಸಲಾತಿ ಸಂಬಂಧ ನಾನು ಹೇಳಿರುವ ಮಾತಿನಿಂದ ಒಂದು ಇಂಚು ಹಿಂದೆ ಸರಿಯಲ್ಲ. ನಾನು ಅದಕ್ಕೆ ಬದ್ಧನಾಗಿದ್ದೇನೆ. ಇದು ಕಾನೂನಿನ ವಿಷಯವಾಗಿದ್ದು, ಸ್ವತಃ ವಕೀಲರಾಗಿರುವ ನಿಮಗೆ ಅರ್ಥವಾಗದಿರುವುದಕ್ಕೆ ನನಗೆ ವಿಷಾದವಿದೆ.!

ಚುನಾವಣೆ ಸಮೀಪಿಸುತ್ತಿರುವಾಗ ಇದನ್ನು ರಾಜಕೀಯ ಅಸ್ತ್ರ ಮಾಡಿಕೊಳ್ಳುತ್ತಿರುವುದು ನಿಮ್ಮ ರಾಜಕೀಯ ದಿವಾಳಿತನಕ್ಕೆ ಹಿಡಿದ ಕೈಗನ್ನಡಿ. ಕಡೆ ಪಕ್ಷ 5 ವರ್ಷ ಮುಖ್ಯಮಂತ್ರಿ ಆಗಿದ್ದಾಗ ನಮ್ಮ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡುವ ಬಗ್ಗೆ ಒಂದು ಸಣ್ಣ ಆಲೋಚನೆ ನಿಮ್ಮ ತಲೆಯಲ್ಲಿ ಹೊಳೆದಿತ್ತೇ? ಎಂದು ಶ್ರೀರಾಮುಲು  ಟೀಕಿಸಿದ್ದಾರೆ.

Key words: Minister- Sriramulu -against –Former CM-Siddaramaiah.