ನಂಜನಗೂಡಿನ ಜ್ಯೂಬ್ಲೆಂಟ್ ಕಾರ್ಖಾನೆಗೆ ಸಚಿವ ಸೋಮಶೇಖರ್ ಭೇಟಿ, ಪರಿಶೀಲನೆ

Promotion

ಮೈಸೂರು, ಏಪ್ರಿಲ್ 11, 2020 (www.justkannada.in): ಜಿಲ್ಲೆಯಲ್ಲಿ ಕೊರೋನಾ ವೈರಸ್‌ ಹೆಚ್ಚಳಗೊಳ್ಳಲು ಕಾರಣವಾಗಿರುವ ನಂಜನಗೂಡಿನ ಜ್ಯೂಬ್ಲೆಂಟ್ ಜನರಿಕ್ ಮೆಡಿಸಿನ್ ಪ್ಲಾಂಟ್ ಗೆ ಸ್ವತಃ ಮಾನ್ಯ ಸಹಕಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ನಂಜನಗೂಡು ಶಾಸಕರಾದ ಬಿ. ಹರ್ಷವರ್ಧನ್, ಜಿಲ್ಲಾಧಿಕಾರಿಗಳು ಹಾಗೂ ಅಧಿಕಾರಿಗಳು ತೆಗೆದುಕೊಳ್ಳಲಾದ ಕ್ರಮಗಳ ಬಗ್ಗೆ ವಿವರಿಸಿದರು.

ಸುಮಾರು 20 ಮಂದಿ ಸೆಕ್ಯುರಿಟಿ ಅವರನ್ನು ಕಾರ್ಖಾನೆ ಒಳಗೇ ಕ್ವಾರೆಂಟೇನ್ ಮಾಡಿರುವ ಬಗ್ಗೆಯೂ ಮಾಹಿತಿ ಪಡೆದುಕೊಂಡರು. ಇವರು ಸೆಕೆಂಡರಿ ಕಾಂಟ್ಯಾಕ್ಟ್ ಆಗಿದ್ದು, ಆದರೂ ಆರೋಗ್ಯದ ದೃಷ್ಟಿಯಿಂದ ಕ್ರಮ ಕೈಗೊಂಡಿದ್ದಾಗಿ ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಸಚಿವರಿಗೆ ತಿಳಿಸಿದರು.

ಜಿಲ್ಲೆ ಹಾಗೂ ತಾಲೂಕು ಕೊರೋನಾ ಮುಕ್ತಗೊಳ್ಳಲು ಬೇಕಾದ ಅನುಕೂಲಗಳನ್ನು ಸರ್ಕಾರದ ವತಿಯಿಂದ ಮಾಡಿಸಿಕೊಡುತ್ತೇನೆ. ಯಾವ ಸಮಯದಲ್ಲಿ ಬೇಕಾದರೂ ನನ್ನ ಸಹಕಾರ ಸಿಗಲಿದೆ ಎಂದು ಸಚಿವರು ತಿಳಿಸಿದರು.

ಜ್ಯೂಬ್ಲೆಂಟ್ ಕಾರ್ಖಾನೆ ಭೇಟಿ ಬಳಿಕ ಹೋಂ ಕ್ವಾರೆಂಟೇನ್ ಪ್ರದೇಶಗಳಲ್ಲಿ ಪ್ರದಕ್ಷಿಣೆ ಹಾಕಿದ ಸಚಿವರು, ಸಾರ್ವಜನಿಕರಿಗೆ ಕೈಗೊಳ್ಳಲಾದ ಕ್ರಮಗಳ ಬಗ್ಗೆ ವಿವರ ಪಡೆದರು. ಹೋಂ ಕ್ವಾರೆಂಟೇನ್ ಗೆ ಒಳಗಾಗಿರುವ

ದೇವಿರಮ್ಮನಹಳ್ಳಿ ಬಡಾವಣೆಗೆ ಭೇಟಿ ನೀಡಿದ ಸಚಿವರು, ಯೋಗಕ್ಷೇಮ ವಿಚಾರಿಸಿದರು. ಬಳಿಕ ಅಧಿಕಾರಿಗಳ ಜೊತೆ ಚರ್ಚಿಸಿದ ಸಚಿವರು, ವಾಟ್ಸಾಪ್ ಗ್ರೂಪ್ ಗಳನ್ನು ರಚಿಸಿ ಜನರಿಗೆ ಜಾಗೃತಿ ಮೂಡಿಸುವುದರ ಜೊತೆಗೆ ಭಯ ಹೋಗಲಾಡಿಸುವುದು, ಈ ಪ್ರದೇಶಗಳಲ್ಲಿ ಫಾಗಿಂಗ್ ವ್ಯವಸ್ಥೆ ಮಾಡಬೇಕು. ಎಲ್ಲರ ಮನೆಗಳಿಗೆ ಜಾಗೃತಿ ಬಿತ್ತಿಪತ್ರಗಳನ್ನು ಅಂಟಿಸುವ ಕ್ರಮವಾಗಲಿ ಹಾಗೂ ಸ್ಯಾನಿಟೈಸರ್ ಗಳ ವಿತರಣೆಗೆ ಕ್ರಮ ವಹಿಸುವುದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಐಸೋಲೇಶನ್ ಛತ್ರಕ್ಕೆ ಸಚಿವರ ಭೇಟಿ:

ಬಿಕ್ಷುಕರು, ಅನಾಥರು, ನಿರಾಶ್ರಿತರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿರುವ ಲಿಂಗಣ್ಣನವರ ಛತ್ರಕ್ಕೆ ಭೇಟಿ ನೀಡಿದ ಸಚಿವರು, ಆರೋಗ್ಯ ವಿಚಾರಿಸಿದರು. ಅಲ್ಲದೆ, ಇಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಪುರುಷರು ಹಾಗೂ ಮಹಿಳೆಯರನ್ನು ಪ್ರತ್ಯೇಕವಾಗಿಡಲಾಗಿದೆ. ಶಾಸಕರು, ಜಿಲ್ಲಾಧಿಕಾರಿಗಳು, ಎಸ್ಪಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಶ್ರಮಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಚಿವರು ತಿಳಿಸಿದರು.

ಸಂಪೂರ್ಣ ಗುಣಮುಖವಾಗುವವರೆಗೆ
ಜ್ಯೂಬ್ಲಿಯೆಂಟ್ ಕಾರ್ಖಾನೆಯನ್ನು ತೆರೆಯಲು ಅನುಮತಿ ಕೊಡುವುದಿಲ್ಲ. ಬಳಿಕ ಅವರೆಲ್ಲರಿಗೂ ಪರೀಕ್ಷೆ ನಡೆಸಿದ ಮೇಲೆಯೇ ಮುಂದಿನ ನಿರ್ಧಾರ ಎಂದು ಸಚಿವರು ತಿಳಿಸಿದರು.

ನಂಜನಗೂಡು ನಂಜುಂಡೇಶ್ವರನಲ್ಲಿ ಪ್ರಾರ್ಥನೆ:

ನಂಜನಗೂಡು ನಂಜುಂಡೇಶ್ವರ ದೇವರ ದರ್ಶನ ಪಡೆದ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು, ನಾಡಿನ ಜನತೆಯನ್ನು ಶೀಘ್ರವಾಗಿ ಕೊರೋನಾ ಎಂಬ ನಂಜಿನಿಂದ ಪಾರು ಮಾಡು ಎಂದು ನಂಜುಂಡೇಶ್ವರನಲ್ಲಿ ಪ್ರಾರ್ಥಿಸಿದರು.