ಶಿವಮೊಗ್ಗ ಗಲಾಟೆ ತನಿಖೆ ನಡೆಯುವಾಗಲೇ ಸಚಿವರು ಕ್ಲೀನ್​ಚಿಟ್ ನೀಡುತ್ತಿದ್ದಾರೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ.

Promotion

ಬೆಂಗಳೂರು,ಅಕ್ಟೋಬರ್,4,2023(www.justkannada.in):  ಶಿವಮೊಗ್ಗದ ರಾಗಿಗುಡ್ಡದಲ್ಲಿ  ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲುತೂರಾಟ, ಗಲಾಟೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುವ ವೇಳೆಯೇ ಸಚಿವರು ಕ್ಲೀನ್​ ಚಿಟ್ ಕೊಡುತ್ತಿದ್ದಾರೆ ಎಂದು  ಸಚಿವ ರಾಮಲಿಂಗರೆಡ್ಡಿ ವಿರುದ್ಧ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಿಡಿ ಕಾರಿದರು.

ವೇಷ ಬದಲಾಯಿಸಿ ಬಿಜೆಪಿ ಕಾರ್ಯಕರ್ತರೇ ಕಿಡಿಗೇಡಿತನ ಕೃತ್ಯ ಮಾಡುತ್ತಾರೆ ಎಂದು ಹೇಳಿಕೆ ನೀಡಿದ್ಧ ಸಚಿವ ರಾಮಲಿಂಗರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ,  ಬಿಜೆಪಿಯವರೇ ಬೇರೆ ಬಟ್ಟೆ ತೊಟ್ಟು ಗಲಾಟೆ ಮಾಡುತ್ತಾರೆ ಎಂದರೆ ಹೇಗೆ? ಇದೊಂದು ಸಣ್ಣ ಘಟನೆಯಾದರೆ ಯಾಕೆ ಲಾಠಿ ಚಾರ್ಜ್ ಆಯ್ತು? ಗಲಭೆ ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳಬೇಕು. ಎಂದು ಆಗ್ರಹಿಸಿದರು.

ಅತಿಯಾದ ತುಷ್ಟೀಕರಣವೇ ಶಿವಮೊಗ್ಗದ ಗಲಾಟೆಗೆ ಕಾರಣ. ಶಿವಮೊಗ್ಗ ಗಲಾಟೆಯಲ್ಲಿ ಓಲೈಕೆ ರಾಜಕಾರಣ ಪ್ರಭಾವ ಬೀರಿದೆ. ತಪ್ಪಿತಸ್ಥರು ಯಾರೇ ಇರಲಿ, ಅವರನ್ನು ಕೂಡಲೇ ಬಂಧಿಸಿ ಶಿಕ್ಷೆ ಕೊಡಿಸಬೇಕು. ಗೃಹ ಸಚಿವ ಡಾ.ಜಿ. ಪರಮೇಶ್ವರ್​ ಇದು ಸಣ್ಣ ಘಟನೆ ಅಂತಿದ್ದಾರೆ. ಕಾಂಗ್ರೆಸ್​ನವರಿಗೆ ಇನ್ನೆಷ್ಟು ದೊಡ್ಡ ಘಟನೆ ನಡೆಯಬೇಕಿತ್ತು? ರಾಜ್ಯದಲ್ಲಿ ಹಿಂದೂಗಳ ರಕ್ಷಣೆ ಮಾಡುವುದು ಯಾರು ಎಂಬ ಪ್ರಶ್ನೆ ಮೂಡಿದೆ . ಪೊಲೀಸ್ ಇಲಾಖೆ  ಯಾಕೆ ಸುಮ್ಮನಾಗಿದೆ ಎಂದು  ಪರಮೇಶ್ವರ್ ಉತ್ತರಿಸಲಿ ಎಂದು ಹರಿಹಾಯ್ದರು.

Key words:  minister – clean chit – Shimoga -riot -investigation -Former CM- Basavaraja Bommai.