ಸಚಿವ ಜಗದೀಶ್ ಶೆಟ್ಟರ್ ರಿಂದ ಸಂವಾದ ಸಭೆ: ಬೆಳಗಾವಿಯಲ್ಲಿ 570 ಕೋಟಿ ರೂ. ಹೂಡಿಕೆಗೆ ಆಸಕ್ತಿ ತೋರಿದ ಕೈಗಾರಿಕೋದ್ಯಮಿಗಳು..

Promotion

ಬೆಳಗಾವಿ,ಸೆ, 11,2019(www.justkannada.in): ಬೆಳಗಾವಿಯಲ್ಲಿ 570 ಕೋಟಿ ರೂ ಹೂಡಿಕೆ ಮಾಡಲು ಕೈಗಾರಿಕೋದ್ಯಮಿಗಳು ಆಸಕ್ತಿ ತೋರಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.

ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ ಭಾಗದ ಕೈಗಾರಿಕೋದ್ಯಮಿಗಳು ಬೆಳಗಾವಿಯಲ್ಲಿ ಬಂಡವಾಳ ಹೂಡಿಕೆ ಮಾಡುವ ಸಂಬಂಧ ಇಂದು ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ಅವರ ಅಧ್ಯಕ್ಷತೆಯಲ್ಲಿ ಬೆಳಗಾವಿಯ ಫೇರ್‌ಫೀಲ್ಡ್‌ ಮ್ಯಾರಿಯಟ್‌ ಹೋಟೆಲ್‌ನಲ್ಲಿ ಸಂವಾದ ಕಾರ್ಯಕ್ರಮವನ್ನು ನಡೆಸಿದರು.

ಪ್ರಧಾನ ಕಾರ್ಯದರ್ಶಿ  ಗೌರವ ಗುಪ್ತ ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲಾ  ಕೈಗಾರಿಕೋದ್ಯಮಿಗಳು ಹಾಗೂ ಬಂಡವಾಳ ಹೂಡಿಕೆದಾರರನ್ನು ಸ್ವಾಗತಿಸಿ, ರಾಜ್ಯದಲ್ಲಿ ಕೈಗಾರಿಕೋದ್ಯಮಕ್ಕೆ ಇರುವ ವಿಫುಲ ಅವಕಾಶಗಳು ಹಾಗೂ ಹೂಡಿಕೆಗೆ ನೆಚ್ಚಿನ ತಾಣವಾಣವಾಗಿದೆ ಎಂದು ವಿವರಿಸಿದರು.

ವಿವಿಧ ವಲಯಗಳಲ್ಲಿ ಹೂಡಿಕೆದಾರರನ್ನು ಆಕರ್ಷಿಸುವ ಸಂಬಂಧ ರಾಜ್ಯದಲ್ಲಿ ಹಲವು ಸುಧಾರಿತ ಬದಲಾವಣೆ ತಂದಿರುವುದನ್ನು ಉಲ್ಲೇಖಿಸಿದರು.

ಆಟೋ ಕಾಂಪೋನೆಂಟ್ಸ್ ಹಾಗೂ ಎಲೆಕ್ಟ್ರಿಕ್ ವೆಹಿಕಲ್,  ಪ್ರೆಸಿಷನ್ ಇಂಜಿನಿಯರಿಂಗ್, ಮಷೀನ್ ಟೂಲ್ಸ್, ಟೆಕ್ಸ್‌‌ಟೈಲ್ಸ್ ಇತರೆ ವಲಯಗಳಲ್ಲಿ ರಾಜ್ಯದ ಸಾಧನೆ ಹಾಗೂ ಸಾಮರ್ಥ್ಯ ವನ್ನು ವಿವರಿಸಿದರು. ಬೆಳಗಾವಿ ಜಿಲ್ಲೆಯ ಇತರೆ ವಲಯಗಳಲ್ಲಿ ಇರುವ ವಿಫುಲ ಅವಕಾಶಗಳನ್ನು ಸಹ ಇದೇ ವೇಳೆ ವಿವರಿಸಿದರು.

ಕರ್ನಾಟಕದ ಕೈಗಾರಿಕೋದ್ಯಮಕ್ಕೆ ಉತ್ತಮ ಸೌಕರ್ಯ, ಪ್ರೋತ್ಸಾಹ, ರಿಯಾಯಿತಿ ಇತರೆ  ಸೌಲಭ್ಯಗಳನ್ನೊಳಗೊಂಡ ಹೊಸ ಕೈಗಾರಿಕಾ ನೀತಿಯನ್ನು ಜಾರಿಗೊಳಿಸಿ ಕರ್ನಾಟಕವನ್ನು ಗ್ಲೋಬಲ್ ಮ್ಯಾನುಫ್ಯಾಕ್ಚರಿಂಗ್ ಹಬ್ ಆಗಿ ಪರಿವರ್ತಿಸುವ ಧ್ಯೇಯ ಹೊಂದಿರುವುದಾಗಿ ತಿಳಿದರು.

ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಶ್ರೀ ಜಗದೀಶ್ ಶೆಟ್ಟರ್ ರವರು ಉದ್ದಮಿಗಳು ಹಾಗೂ ಹೂಡಿಕೆದಾರರನ್ನು ಉದ್ದೇಶಿಸಿ ಮಾತನಾಡಿ, ರಾಜ್ಯದ ನೂತನ ಕೈಗಾರಿಕಾ ನೀತಿಯನ್ನು ಶೀಘ್ರವೇ ಜಾರಿಗೆ ತರಲಾಗುತ್ತಿರುವುದಾಗಿ ತಿಳಿಸಿದರು. ಕೈಗಾರಿಕಾ ಸಂಸ್ಥೆಗಳಿಗೆ ಭೂಮಿ ದರ ನಿಗದಿ ಸಂಬಂಧ ನೂತನ ನೀತಿಯಲ್ಲಿ ಮಾನದಂಡವನ್ನು ಅಳವಡಿಸಲಾಗುತ್ತಿದೆ ಹಾಗೂ  ಕೈಗಾರಿಕೆ ಬೆಳವಣಿಗೆಯಲ್ಲಿ ಪರಿಣಾಮಕಾರಿಯಾದ ಏಕಗವಾಕ್ಷಿ ಪದ್ಧತಿ ತರುವತ್ತ ಪ್ರಾಮುಖ್ಯತೆ ನೀಡಲಾಗಿದೆ ಎಂದು ತಿಳಿಸಿದರು.

ಇದೇ ವೇಳೆ , ಇಂಡೊ ಕೌಂಟ್ ಇಂಡಸ್ಟ್ರೀಸ್ ಲಿಮಿಟೆಡ್ ಮುಂಬೈ, ಗೋದಾವರಿ ಬಯೋರೀಫೈನರೀಸ್ ಲಿಮಿಟೆಡ್ ಮುಂಬೈ, ಜೀನ ಸ್ಪೆಷಲ್ ಸ್ಟೀಲ್ ವರ್ಕ್ಸ್‌ ಪ್ರೈವೆಟ್ ಲಿಮಿಟೆಡ್ ಬೆಳಗಾವಿ, ಕ್ವಾಲಿಟಿ ಅನಿಮಲ್ ಫೀಡ್ಸ್ ಪ್ರೈವೆಟ್ ಲಿಮಿಟೆಡ್ ಬೆಳಗಾವಿ, ವಿಜಯ್ ಶಂತ್ರಿಅಗ್ರೋ ಟೆಕ್ ಎಕ್ಸ್‌ ಪೋರ್ಟ್ಸ್‌ ಬೆಳಗಾವಿ, ಅಶೋಕ್ ಐರನ್ ವಕ್ಸ್ ಪ್ರೈವೆಟ್ ಲಿಮಿಟೆಡ್ ಬೆಳಗಾವಿ, ಶ್ರೀ ಆನಂದ್ ಲೈಫ್ ಸೈನ್ಸಸ್ ಲಿಮಿಟೆಡ್ ಬೆಳಗಾವಿ ಇವರುಗಳೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಿ, 570 ಕೋಟಿ ರೂ.ಗಳ ಹೂಡಿಕೆಗೆ ಒಪ್ಪಂದ ಮಾಡಿಕೊಳ್ಳಲಾಯಿತು.

ಸಭೆಯಲ್ಲಿ ಭಾಗವಹಿಸಿದ ಕೈಗಾರಿಕಾ ಸಂಘ ಸಂಸ್ಥೆಗಳು…

ಇಚಲ್‌ಕರಂಜಿ ಇಂಜಿನಿಯರಿಂಗ್ ಅಸೋಸಿಯೇಷನ್,  ಉತ್ಕರ್ಷ ಉದ್ಯೋಜಕ ಸಂಘ ಸಂಸ್ಥೆ, ಕೊಲ್ಲಾಪುರ ಇಂಜಿನಿಯರಿಂಗ್ ಅಸೋಸಿಯೇಷನ್, ಶಿರೊಳಿ ತಯಾರಿಕಾ ಸಂಘ ಸಂಸ್ಥೆ, ಕಾಗಲ್-ಹಟ್ಕಳಂಗಳೆ ತಯಾರಿಕಾ ಘಟಕ, ಗೋಕುಲ್ ಶಿಂಗಾವ್ ತಯಾರಿಕಾ ಸಂಘ ಹಾಗೂ ಲಕ್ಷ್ಮಿ ಕೈಗಾರಿಕಾ ತಯಾರಿಕಾ ಸಂಘ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಹೂಡಿಕೆದಾರರು ಬೆಳಗಾವಿ ಜಿಲ್ಲೆಯಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿಸಿ ತಮ್ಮ ಮನವಿ ಪತ್ರಗಳನ್ನು ಸಲ್ಲಿಸಿದರು.

ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಗೌರವ್ ಗುಪ್ತರವರು, ಕೈಗಾರಿಕಾಭಿವೃದ್ಧಿ ಇಲಾಖೆಯ ಆಯುಕ್ತರಾದ ಶ್ರೀಮತಿ ಗುಂಜನ್ ಕೃಷ್ಣರವರು  ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Key words: Meeting – Minister- Jagadish Shettar- 570 crore – Belgavi- Industrialists -interested -investing ..