ಮೆಟ್ರೋ ನಿಲ್ದಾಣದಿಂದ ಕೆಳಗೆ ಜಿಗಿದ ಪ್ರಯಾಣಿಕ: ಗಂಭೀರ ಗಾಯ

Promotion

ಬೆಂಗಳೂರು: ಮೇ-15:(www.justkannada.in) ಪ್ರಯಾಣಿಕನೊಬ್ಬ ಮೆಟ್ರೋ ನಿಲ್ದಾಣದಿಂದ ಕೆಳಗೆ ಜಿಗಿದು ಗಂಭೀರವಾಗಿ ಗಾಯಗೊಂಡಿರುವ ಘಟನೆ ತುಮಕೂರು ರಸ್ತೆಯ ದಾಸರಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ.

ಕೇರಳ ಮೂಲದ ಸಂದೀಪ್‌ (26) ಗಾಯಾಳು. 25 ಅಡಿ ಎತ್ತರ ಇರುವ ಕನ್‌ಕರ್ಸ್‌ ಲೆವಲ್‌ನಿಂದ ಕೆಳಗೆ ಜಿಗಿದಿದ್ದಾನೆ. ಪರಿಣಾಮ ಆತನ ಕಾಲು, ತಲೆ ಮತ್ತು ಕೈ ಸೇರಿದಂತೆ ದೇಹದ ವಿವಿಧೆಡೆ ಗಂಭೀರ ಗಾಯಗಳಾಗಿವೆ.

ಮಾದಕವಸ್ತು ಮತ್ತು ಮದ್ಯಪಾನಕ್ಕೆ ದಾಸನಾಗಿದ್ದ ಸಂದೀಪ್‌ ಕೇರಳದಿಂದ ಒಂದುವರೆ ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದ. ಸ್ಥಳೀಯವಾಗಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ದಾಸರಹಳ್ಳಿಯಲ್ಲಿ ಪಾಲಕರ ಜೊತೆ ವಾಸವಿದ್ದ. ಮಂಗಳವಾರ ಮೆಜೆಸ್ಟಿಕ್‌ಗೆ ತೆರಳಿದ್ದ ಸಂದೀಪ್‌, ಅಮಲಿನಲ್ಲಿ ಮಧ್ಯಾಹ್ನ 3.30ರ ಸುಮಾರಿಗೆ ದಾಸರಹಳ್ಳಿ ನಿಲ್ದಾಣಕ್ಕೆ ಬಂದಿದ್ದಾನೆ. ರೈಲಿನಿಂದ ಹೊರ ಬಂದು ರೆಸ್ಟ್‌ರೂಮ್‌ಗೆ ಹೋಗಿ, ಜೋರಾಗಿ ಕೂಗಾಡಿ ಕಿರಿಕಿರಿ ಮಾಡಿದ್ದಾನೆ. ಅಲ್ಲದೇ, ಅಲ್ಲಿದ್ದ ಓರ್ವ ಪ್ರಯಾಣಿಕನ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ. ಹೀಗಾಗಿ, ಆತನನ್ನು ಭದ್ರತಾ ಸಿಬ್ಬಂದಿ ಪ್ರಶ್ನೆ ಮಾಡಿದ್ದರು. ಈ ವೇಳೆ ಹೌಸ್‌ಕೀಪಿಂಗ್‌ ಕೊಠಡಿ ಮೂಲಕ ಕೂಗಾಡಿಕೊಂಡೇ ಹೊರ ಬಂದ ಸಂದೀಪ್‌, ಏಕಾಏಕಿ ಕೆಳಗೆ ಜಿಗಿದಿದ್ದಾನೆ.

ಗಂಭೀರವಾಗಿ ಗಾಯಗೊಂಡಿರುವ ಸಂದೀಪ್ ನನ್ನು ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೆಟ್ರೋ ನಿಲ್ದಾಣದಿಂದ ಕೆಳಗೆ ಜಿಗಿದ ಪ್ರಯಾಣಿಕ: ಗಂಭೀರ ಗಾಯ
Man jumps, creates havoc at Metro Station

Passenger at Dasarahalli station complained against inebriated man