ಲಾರ್ಡ್ ಮೆಕಾಲೆ ಶಿಕ್ಷಣ ವ್ಯವಸ್ಥೆಗೆ ವಿದಾಯದ ಕ್ಷಣ ಸನ್ನಿಹಿತ- ಶಿಕ್ಷಣ ಸಚಿವ ಸುರೇಶ್ ಕುಮಾರ್…

ಬೆಂಗಳೂರು,ಆಗಸ್ಟ್,25,2020(www.justkannada.in):  ಲಾರ್ಡ್ ಮೆಕಾಲೆ ತಳಹದಿಯ ಶಿಕ್ಷಣ ವ್ಯವಸ್ಥೆಗೆ ಇಂದು ನಾವು ವಿದಾಯ ಹೇಳುವ ಕ್ಷಣ ಸನ್ನಿಹಿತವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ. lord-macaulays-education-system-imminent-education-minister-suresh-kumar

ಬೆಂಗಳೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ನಡೆದ ಹೊಸ ಶಿಕ್ಷಣ ನೀತಿಯ ಕುರಿತಾದ ಸಂವಾದದಲ್ಲಿ ಮಾತನಾಡಿದ  ಸಚಿವ ಸುರೇಶ್ ಕುಮಾರ್, ರಾಷ್ಟ್ರೀಯ ಶಿಕ್ಷಣ ನೀತಿಯು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕವಾದ ಬದಲಾವಣೆಗೆ ನಾಂದಿ ಹಾಡಿದ್ದು, ಈ ನೀತಿ ಪ್ರೇರಿತವಾದ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಗಳ ಜ್ಞಾನಾರ್ಜನೆ, ತರ್ಕಬದ್ಧ ಆಲೋಚನೆ ಮತ್ತು ಸಾಮಾಜಿಕವಾದ ನೈಪುಣ್ಯತೆಯನ್ನು ಪ್ರೇರೇಪಿಸುವಲ್ಲಿ ಹೊಸ ದಿಕ್ಕನ್ನು ಸೃಷ್ಟಿಸಲಿದೆ ಎಂದರು.

ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಪಠ್ಯಕ್ರಮ ಹಾಗೂ ಬೋಧನಾ ಕ್ರಮಗಳ ಕುರಿತಂತೆ ನೂತನ ಶಿಕ್ಷಣ ನೀತಿಯು ಪ್ರತಿಪಾದಿಸುವ ಅಂಶಗಳನ್ನು ಪ್ರಸ್ತಾಪಿಸಿದ ಸಚಿವ ಸುರೇಶ್ ಕುಮಾರ್, ಶಿಕ್ಷಣ ನೀತಿಯನ್ನು ಕರ್ನಾಟಕ ರಾಜ್ಯದ ಸಾಂಸ್ಕೃತಿಕ ಅವಶ್ಯಕತೆಗಳಿಗೆ ಅನುಗುಣವಾಗಿ ಅಳವಡಿಸಿಕೊಳ್ಳುವ ಪ್ರಯತ್ನಕ್ಕೆ ಈಗಾಗಲೇ ಚಾಲನೆ ನೀಡಲಾಗಿದ್ದು, ಇಡೀ ರಾಷ್ಟ್ರದಲ್ಲಿ ಹೊಸ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸುವ ಮೊದಲ ರಾಜ್ಯಗಳಲ್ಲಿ ಕರ್ನಾಟಕವು ಒಂದಾಗಲಿದೆ ಎಂದರು.

ಈ ಕುರಿತಂತೆ ರಾಜ್ಯಕ್ಕೆ ಸಂಬಂಧಿಸಿದಂತೆ ಕರಡು ನೀತಿಯನ್ನು ಈಗಾಗಲೇ ರೂಪಿಸಲಾಗಿದ್ದು, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆಗಳು ಜಂಟಿಯಾಗಿ ಹೊಸ ನೀತಿಯ ಅನುಷ್ಠಾನಕ್ಕೆ ಮುಂದಾಗಲಿವೆ ಎಂದು ಸುರೇಶ್ ಕುಮಾರ್ ಹೇಳಿದರು.

ಕೇಂದ್ರದ ಹೊಸ ಶಿಕ್ಷಣ ನೀತಿಯ ಹಲವು ಸಕಾರಾತ್ಮಕ ಅಂಶಗಳ ಬಗ್ಗೆ ಪ್ರಸ್ತಾಪಿಸಿದ ಅವರು, ಕ್ರೀಡಾ ಸಂಯೋಜಿತ ಶಿಕ್ಷಣ, ಕಥಾ ನಿರೂಪಣಾ ಕಲಿಕೆಯಂತಹ ವಿಶಿಷ್ಟ ಕಲಿಕಾ ಉಪಕ್ರಮಗಳಂತಹ ಅನುಭವ ಜನ್ಯವಾದ ಕಲಿಕೆಯನ್ನು ಪ್ರತಿಪಾದಿಸುವ ನೂತನ ಶಿಕ್ಷಣ ನೀತಿಗೆ ಸಂವಾದಿಯಾಗಿ ಕರ್ನಾಟಕ ಸರ್ಕಾರವು ಈಗಾಗಲೇ ಈ ನಿಟ್ಟಿನಲ್ಲಿ ಕೆಲವು ಪ್ರಯೋಗಗಳನ್ನು ಈಗಾಗಲೇ ಮಾಡಿದ್ದು, ನಮ್ಮಲ್ಲಿ ಅನುಷ್ಠಾನಗೊಂಡಿವೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.

ಇಂತಹ ಉಪಕ್ರಮಗಳನ್ನು ಹೊಸ ಶಿಕ್ಷಣ ನೀತಿಯಲ್ಲಿ ಅಳವಡಿಸಿರುವುದು ಈಗಾಗಲೇ ನಮ್ಮಲ್ಲಿ ಅನುಷ್ಠಾನಗೊಂಡಿರುವ ಉಪಕ್ರಮಗಳಾದ್ದರಿಂದ ಈ ಹೊಸ ನೀತಿಯ ಜಾರಿಯಲ್ಲಿ ನಮಗೆ ಒಂದು ದಿಕ್ಸೂಚಿ ದೊರೆತಂತಾಗಿದೆ ಎಂದರು. ಸಮಗ್ರ ಕಲಿಕೆಗೆ ನೂತನ ಶಿಕ್ಷಣ ನೀತಿ ಇಂಬು ನೀಡಲಿದ್ದು, ವಿದ್ಯಾರ್ಥಿಯ ಆಸಕ್ತಿದಾಯಕ ವಿಷಯಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳಲು ನೆರವಾಗಲಿದೆ ಎಂದು ಸುರೇಶ್ ಕುಮಾರ್ ಹೇಳಿದರು.

ಶಾಲಾ ಶಿಕ್ಷಣದ ಕಲಿಕೆಯ ಅಂತ್ಯದ ವೇಳೆಗೆ ವಿದ್ಯಾರ್ಥಿಗೆ ಒಂದು ಕೌಶಲ್ಯ ದೊರೆತು ಅವನನ್ನು ಗಟ್ಟಿಗೊಳಿಸಲಿದೆ. ವಿದ್ಯಾರ್ಥಿಗಳನ್ನು ಸ್ವಯಂಪ್ರೇರಣೆಯ ಕಲಿಕಾರ್ಥಿಯನ್ನಾಗಿಸಲು ಈ ನೀತಿಯ ಅಂಶಗಳು ಸಹಾಯ ಮಾಡಲಿವೆ. ಅವಶ್ಯಕತೆಯಿರುವುದನ್ನು ಕಲಿಯಲು ಮತ್ತು ಆರನೇ ತರಗತಿಯಿಂದಲೇ ವೃತ್ತಿಪರವಾದ ಶಿಕ್ಷಣ ನೀಡಿ ಅವರನ್ನು ಸ್ವಾವಲಂಬಿಯನ್ನಾಗಿ ರೂಪಿಸಲು ಹೊಸ ನೀತಿ ಸಹಕರಿಸಲಿದೆ ಎಂದು ಸಚಿವರು ಹೇಳಿದರು.lord-macaulays-education-system-imminent-education-minister-suresh-kumar

ಸಂವಾದದಲ್ಲಿ ರಾಷ್ಟ್ರೀಯ ಕಾನೂನು ಶಾಲೆಯ ಮಾಜಿ ಮುಖ್ಯಸ್ಥರಾದ ಪ್ರೊ. ವೆಂಕಟರಾವ್, ಪುಣೆಯ ಡಿಫೆನ್ಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಟೆಕ್ನಾಲಜಿ ಸಂಸ್ಥೆಯ ಮಾಜಿ ಮುಖ್ಯಸ್ಥರಾದ ಪ್ರೊ. ಪಟ್ನಾಯಕ್, ಚೆನ್ನೈನ ಅಣ್ಣಾ ವಿವಿ ಕುಲಪತಿ ಪ್ರೊ. ಸೂರಪ್ಪ, ಬೆಂಗಳೂರು ವಿವಿ ಕುಲಪತಿ, ಪ್ರೊ. ವೇಣುಗೋಪಾಲ್, ಮಾಜಿ ಕುಲಪತಿ ಪ್ರೊ. ತಿಮ್ಮೇಗೌಡ ಮತ್ತಿತರರು ಭಾಗವಹಿಸಿದ್ದರು.

Key words: Lord Macaulay’s -education -system – imminent-Education Minister -Suresh Kumar