ವಿಧಾನ ಪರಿಷತ್ ಚುನಾವಣೆ: ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ರಿಂದ ನಾಮಪತ್ರ ಸಲ್ಲಿಕೆ.

Promotion

ಮೈಸೂರು,ನವೆಂಬರ್,23,2021(www.justkannada.in):  ಮೈಸೂರು-ಚಾಮರಾಜನಗರ ವಿಧಾನ ಪರಿಷತ್ ಕ್ಷೇತ್ರದಿಂದ ಆಯ್ಕೆ ಬಯಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ಮೈಸೂರು ಜಿಲ್ಲಾಧಿಕಾರಿ ಡಾ ಬಗಾದಿ ಗೌತಮ್ ಗೆ ವಾಟಾಳ್ ನಾಗರಾಜ್ ನಾಮಪತ್ರ ಸಲ್ಲಿಸಿದರು. ವಿಭಿನ್ನ ಹೋರಾಟಗಳ ಮೂಲಕ ಗಮನ ಸೆಳೆಯುತ್ತಾ ಬಂದಿರುವ ವಾಟಾಳ್ ನಾಗರಾಜ್. ಇದೀಗ ಮೈಸೂರು-ಚಾಮರಾಜನಗರ ವಿಧಾನ ಪರಿಷತ್ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ವಾಟಾಳ್ ನಾಗರಾಜ್, ನಾನು ಪಕ್ಷಾಂತರಿಯಲ್ಲ. ನಾನು ಪಕ್ಷಾಂತರಿಯಾಗಿದ್ದರೆ ಉನ್ನತ ಹುದ್ದೆಗಳನ್ನು ಅಲಂಕರಿಸಬಹುದಾಗಿತ್ತು. ನನ್ನದೇ ಆದ ತತ್ವ ಸಿದ್ದಾಂತಗಳ ಮೇಲೆ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ನಾನು ರಿಯಲ್ ಎಸ್ಟೇಟ್ ಮಾಡಿಲ್ಲ, ಲೂಟಿ ಮಾಡಿಲ್ಲ, ಕಂಟ್ರಾಕ್ಟರ್ ಕೆಲಸ ಮಾಡಿಲ್ಲ. ಗ್ರಾಮ ಪಂಚಾಯತಿ ಸದಸ್ಯರಿಗೆ ನ್ಯಾಯ ದೊರಕಿಸಿಕೊಡಬೇಕೆಂಬ ಮಹದಾಸೆಯಿಂದ ಸ್ಪರ್ಧೆಗೆ ಮುಂದಾಗಿದ್ದೇನೆ ಎಂದು ನುಡಿದರು.

ವಿಧಾನ ಪರಿಷತ್ ಎಂದರೆ ಚಿಂತಕರ ಚಾವಡಿಯಿದ್ದಂತೆ. ಆದರೆ ಈಗಿನ ಚುನಾವಣೆಯನ್ನು ಗಮನಿಸಿದರೆ ಬೇಸರವಾಗುತ್ತದೆ. ಪ್ರಮುಖ ರಾಜಕೀಯ ಪಕ್ಷಗಳು ಚುನಾವಣೆ ವ್ಯವಸ್ಥೆಯನ್ನು ಹಾಳು ಮಾಡಿವೆ. ರಾಜಕೀಯ ಪಕ್ಷಗಳು ಇಡೀ ರಾಜ್ಯದಲ್ಲಿ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವುದನ್ನು ಗಮನಿಸಿದರೆ ಇದು ಗೋಚರವಾಗುತ್ತಿದೆ. ಇದು ಕಡ್ಲೆಪುರಿ ವ್ಯಾಪಾರವಲ್ಲ, ಮಸಾಲಾ ದೋಸೆ ತಿಂದಂತಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಬೆಂಕಿ ಬೀಳಬಾರದು. ಗ್ರಾಮ ಪಂಚಾಯತಿ ಸದಸ್ಯರು ಆಸೆ ಆಮಿಷಗಳಿಗೆ ಬಲಿಯಾಗಬೇಡಿ. ನನಗೆ ಒಂದು ಮತ ನೀಡಿ ಬೆಂಬಲಿಸಿ. ಒಂದೇ ಮತ ಹಾಕಬೇಡಿ‌. ಇಬ್ಬರು ಗೆಲ್ಲಬೇಕಿದೆ, ಒಂದು, ಎರಡು, ಮೂರು, ನಾಲ್ಕನೇ ಪ್ರಾಶಸ್ತ್ಯದ ಮತಗಳಿಗೂ ಮಹತ್ವವಿದೆ. ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ನಾನು ಪ್ರಾಮಾಣಿಕನಾಗಿದ್ದೇನೆ, ಪ್ರಾಮಾಣಿಕ ಜವಾಬ್ದಾರಿಯಿಂದಲೇ ಸ್ಪರ್ಧೆಗಿಳಿದಿದ್ದೇನೆ. ಕಳೆದ ಬಾರಿಯ ಚುನಾವಣೆಯಲ್ಲಿ ಸೋತಿದ್ದರೂ ವಿಚಲಿತನಾಗಿಲ್ಲ. ಈ ಬಾರಿ ನನಗೆ ಗೆಲ್ಲುವ ವಿಶ್ವಾಸವಿದೆ. ಗೆಲ್ಲುವ ಭರವಸೆಯಿಂದಲೇ ಕಣಕ್ಕಿಳಿದಿದ್ದೇನೆ ಎಂದು  ವಾಟಾಳ್ ನಾಗರಾಜ್  ವಿಶ್ವಾಸ ವ್ಯಕ್ತಪಡಿಸಿದರು.

Key words: legislative Council- election-Submission – nomination –mysore- Vatal Nagaraj