ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ತೀರ್ಮಾನ ಕೈ ಬಿಡಿ- ಸಿಎಂ ಬಿಎಸ್ ವೈಗೆ ಪತ್ರ ಬರೆದು ಆಗ್ರಹಿಸಿದ ಮಾಜಿ ಸಿಎಂ ಸಿದ್ಧರಾಮಯ್ಯ…

Promotion

ಬೆಂಗಳೂರು,ಜೂ,17,2020(www.justkannada.in): ರಾಜ್ಯಸರ್ಕಾರ ಭೂ ಸುಧಾರಣಾ ಕಾಯಿದೆಗೆ ತಿದ್ದುಪಡಿ  ಮಾಡಲು ಮುಂದಾಗಿದ್ದು ಈ ತೀರ್ಮಾನ ಕೈ  ಬಿಡಿ ಎಂದು ಆಗ್ರಹಿಸಿ ಸಿಎಂ ಬಿಎಸ್ ಯಡಿಯೂರಪ್ಪಗೆ ಮಾಜಿ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

ಈ ಕುರಿತು ಪತ್ರ ಬರೆದಿರುವ ಮಾಜಿ ಸಿಎಂ ಸಿದ್ಧರಾಮಯ್ಯ, ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುವ  ಹೆಸರಿನಲ್ಲಿ ಕಾಯ್ದೆಯ ಆತ್ಮವನ್ನೇ ಕೊಲ್ಲಲು ಹೊರಟಿರುವ ತೀರ್ಮಾನವನ್ನು ತಕ್ಷಣವೇ ಕೈ ಬಿಡಬೇಕು. ಜೊತೆಗೆ  ಎ.ಪಿ.ಎಂ.ಸಿ. ಕಾಯ್ದೆಗೆ ತಿದ್ದುಪಡಿ ತರಲು ಹೊರಡಿಸಿರುವ ಸುಗ್ರೀವಾಜ್ಞೆಯನ್ನು ಈ ಕ್ಷಣದಿಂದ ರದ್ದುಪಡಿಸಬೇಕು. ಮತ್ತು ಕೇಂದ್ರ ಸರ್ಕಾರ  ಈ ಎರಡು ಕಾಯ್ದೆಗಳನ್ನು ಕೇಂದ್ರವು ಕೈಬಿಡಬೇಕು. ತೀರ್ಮಾನ ಕೈ ಬಿಡದಿದ್ದರೆ ಜನರ ಚಳವಳಿಗೆ ಚಾಲನೆ ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕ ಭೂ ಸುಧಾರಣೆ ಕಾಯ್ದೆಗೆ ಅತ್ಯಂತ ದೊಡ್ಡ ಇತಿಹಾಸವಿದೆ.ಸ್ವಾತಂತ್ರ್ಯ ಹೋರಾಟದಲ್ಲಿ ಭೂ ಸುಧಾರಣೆಯು ಸಹ ಮುಖ್ಯ ಅಜೆಂಡಾವಾಗಿತ್ತು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು 1935 ರ ಆಸುಪಾಸಿನಲ್ಲಿ ಭೂಮಿಯು ರಾಷ್ಟ್ರೀಕರಣವಾಗಬೇಕೆಂದು ಹೇಳಿದ್ದರು. ಅಸಂಖ್ಯಾತ ಜನ ಭೂ ಸುಧಾರಣೆಗಾಗಿ ಪ್ರಾಣ ತೆತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯ ಕಾಗೋಡಿನ ಗೇಣಿ ಪದ್ಧತಿ ವಿರುದ್ಧದ ಹೋರಾಟವು 1961 ರ ಭೂ ಸುಧಾರಣಾ ಕಾಯ್ದೆಗೆ ದಾರಿ ಮಾಡಿಕೊಟ್ಟಿತ್ತು. ಆನಂತರ ದೇವರಾಜು ಅರಸು ರವರು 1974ರಲ್ಲಿ ತಂದ ತಿದ್ದುಪಡಿಗಳಿಂದಾಗಿ ರಾಜ್ಯದ ಕೃಷಿಕರು ನೆಮ್ಮದಿ ಕಾಣುವಂತಾಯಿತು. ಒಬ್ಬರಿಗೆ ಒಂದು ವೃತ್ತಿ ಎಂಬ ಸಮಾಜವಾದಿ ತತ್ವದಡಿಯಲ್ಲಿ ಕರ್ನಾಟಕ ಭೂ ಸುಧಾರಣೆ ಕಾಯ್ದೆ ಸೆಕ್ಷನ್ 79ಎ,ಬಿ,ಸಿ, ಮತ್ತು 80 ಹಾಗೂ 63 ನ್ನು  ರೂಪಿಸಿ ಜಾರಿಗೊಳಿಸಿದರು. ಈ ತಿದ್ದುಪಡಿಯು ಆ ಕಾಯ್ದೆಯ ಆತ್ಮರೂಪಿಯೆಂದೆನ್ನಿಸಿಕೊಂಡಿತು. ಕರ್ನಾಟಕದಂತಹ ರಾಜ್ಯಗಳು ದೇಶದ ಆರ್ಥಿಕತೆಯಲ್ಲಿ ಮಹತ್ವದ ಪಾತ್ರವಹಿಸಿದ್ದರೆ ಅದರ ಹಿಂದೆ ಭೂ ಸುಧಾರಣೆಯ ಅಡಿಪಾಯವಿದೆ. ನಮ್ಮಲ್ಲಿ  ಭೂ ಸುಧಾರಣೆ ಕೃಷಿ ಮತ್ತು ಕೈಗಾರಿಕೆಗಳೆರಡು ಸಮತೋಲಿತ ಅಭಿವೃದ್ಧಿ ಸಾಧಿಸಿವೆ ಎಂದರೆ ಅದರ ಹಿಂದೆ ಭೂಮಿಯ ಹಂಚಿಕೆ ಕಾರಣವಾಗಿದೆ. ಸಾಮಾಜಿಕ ಮೂಲಭೂತ ಸೌಕರ್ಯವಾದ ಭೂಮಿಯ ಲಭ್ಯತೆಯ ಆಧಾರದ ಮೇಲೆಯೇ ರಾಜ್ಯದ ರೈತರ ಖರೀದಿ ಸಾಮಥ್ರ್ಯ ಹೆಚ್ಚಿ ಆರ್ಥಿಕತೆಗೆ ವೇಗ ಬರಲು ಸಾಧ್ಯವಾಗಿದೆ. ಜನ ಭೂಮಿ ಮಾರುವುದರಿಂದ ತಕ್ಷಣಕ್ಕೆ  ಆರ್ಥಿಕತೆಗೆ ಚೈತನ್ಯ ಬರಬಹುದಾದರೂ ಭವಿಷ್ಯದಲ್ಲಿ ಜನರ ಕೈಯ್ಯಲ್ಲಿದ್ದ ಹಣ ಖರ್ಚಾಗಿ ಖರೀದಿ ಸಾಮರ್ಥ್ಯ ಕುಸಿದು ರಾಜ್ಯದ ಆರ್ಥಿಕತೆ ಪಾತಾಳದತ್ತ ಸಾಗುತ್ತದೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಪತ್ರದಲ್ಲಿ ವಿವರಿಸಿದ್ದಾರೆ.

ಹಾಗೆಯೇ ದೇಶದಲ್ಲಿ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಪ್ರತಿಭಟನೆಗಳನ್ನು ನಿರ್ಬಂಧಿಸಲಾಗಿದೆ. ಇದನ್ನೇ ಅಸ್ತ್ರವಾಗಿ ಬಳಸಿಕೊಂಡು ಜನವಿರೋಧ ಕಾಯ್ದೆಗಳನ್ನು ಜಾರಿಗೆ ತರುವ ದುಷ್ಟತನವನ್ನು ಕೇಂದ್ರ, ರಾಜ್ಯ ಸರ್ಕಾರಗಳೆರಡು ಮಾಡುತ್ತಿವೆ. ಸರ್ಕಾರಗಳು ಕೊರೋನ ಸಮಸ್ಯೆಯನ್ನು ಬಗೆಹರಿಸುವ ಬದಲು ಇಂಥ ಘಾತುಕ ಕೃತ್ಯ ಮಾಡಲು ಹೊರಟರೆ ನಿಮ್ಮನ್ನು ರಕ್ಷಕರೆನ್ನಲಾದೀತೆ? ಕೇಂದ್ರ ರಾಜ್ಯ ಸರ್ಕಾರಗಳು ಜನರ ಸಂಕಷ್ಟವನ್ನು ದುರುಪಯೋಗ ಮಾಡಿಕೊಂಡು ಬೆನ್ನಲ್ಲಿ ಇರಿಯ ಹೊರಟಿರುವ ಕೃತ್ಯವನ್ನು ನಿಲ್ಲಿಸಿ ಈಗ ಹೊರಡಿಸಿರುವ ಸುಗ್ರೀವಾಜ್ಞೆಗಳನ್ನು ರದ್ದು ಪಡಿಸದಿದ್ದರೆ ,ಸರ್ಕಾರಗಳ ವಿರುದ್ಧ ಜನರ ಚಳುವಳಿಯನ್ನು ಪ್ರಾರಂಭಿಸಬೇಕಾದ ಅನಿವಾರ್ಯತೆ ಸೃಷಿಯಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಸಿದ್ದರಾಮಯ್ಯ ವಾರ್ನಿಂಗ್ ಕೊಟ್ಟಿದ್ದಾರೆ.

Key words: Land Reform Act -Amendment -Former CM -Siddaramaiah – letter -CM BS yeddyurappa