“ಕುಶಲ ಕೋಶ” ಮೊಬೈಲ್‌ ಅಪ್ಲಿಕೇಷನ್ ಲೋಕಾರ್ಪಣೆ: ಕುಶಲಕರ್ಮಿಗಳಿಗೆ ಸುಲಭದಲ್ಲಿ ಸಿಗಲಿದೆ ಉದ್ಯೋಗಾವಕಾಶ.

ಬೆಂಗಳೂರು ಜೂನ್. 21,2021(www.justkannada.in):  ಜನಸಾಮಾನ್ಯರು ತುರ್ತು ಅಗತ್ಯ ಸೇವೆಗಳನ್ನು ಪಡೆಯಲು ಹಾಗೂ ಕುಶಲಕರ್ಮಿಗಳಿಗೆ ಉತ್ತಮ ಉದ್ಯೋಗಾವಕಾಶ ಒದಗಿಸಲು ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ‘ಕುಶಲ ಕೋಶ’ ಮೊಬೈಲ್ ಅಪ್ಲೀಕೇಶನ್ ಅನ್ನು ತಯಾರಿಸಿದ್ದು, ಯುವ ಸಬಲೀಕರಣ ಮತ್ತು ಕ್ರೀಡೆ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಾ. ನಾರಾಯಣಗೌಡ ಇಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ  ಲೋಕಾರ್ಪಣೆ ಮಾಡಿದರು.jk

ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ‘ಕುಶಲ ಕೋಶ’ ಮೊಬೈಲ್ ಆಪ್ ಲೋಕಾರ್ಪಣೆ ಮಾಡಿ ಮಾತನಾಡಿದ ಸಚಿವ ನಾರಾಯಣ ಗೌಡ, ಜನಸಾಮಾನ್ಯರಿಗೆ ಬಹಳ ಅನುಕೂಲವಾಗುವಂತಹ ಅಪ್ಲಿಕೇಶನ್ ಇದಾಗಿದೆ. ಜನರು ತಮಗೆ ಅಗತ್ಯವಿರುವ ಕಾರ್ಯಕ್ಕೆ ಸುಲಭದಲ್ಲಿ ಕೌಶಲ್ಯಯುತ ವ್ಯಕ್ತಿಗಳನ್ನು ಪತ್ತೆ ಹಚ್ಚಬಹುದು. ಜೊತೆಗೆ ಬೇರೆ ಬೇರೆ ಉದ್ಯೋಗದಲ್ಲಿ ಕೌಶಲ್ಯ ಹೊಂದಿರುವವರು ತಮ್ಮ ವಿವರವನ್ನು ಅಪ್ಲಿಕೇಶನ್‍ನಲ್ಲಿ ನೊಂದಾಯಿಸಿ, ಉದ್ಯೋಗವನ್ನೂ ಪಡೆದುಕೊಳ್ಳಬಹುದು. ‘ಕುಶಲಕೋಶ ಎಂಬ ಈ ಅಪ್ಲಿಕೇಶನ್‍ನ ಸದುಪಯೋಗವನ್ನು ಎಲ್ಲರು ಪಡೆದುಕೊಳ್ಳಬೇಕು ಎಂದು ಸಚಿವ ಡಾ. ನಾರಾಯಣಗೌಡ ಹೇಳಿದರು.

“ಕುಶಲ ಕೋಶ” ಈ ದ್ವಿಭಾಷಾ ಮೊಬೈಲ್‌ ಅಪ್ಲಿಕೇಷನ್ ಅನ್ನು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯು ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ (ಕೆಎಸ್‌ಆರ್‌ಎಸ್‌ಎಸಿ) ಹಾಗೂ ಆಯುಷ್ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಆಪ್ ಅನ್ನು ಅಭಿವೃದ್ಧಿ ಪಡಿಸಲಾಗಿದೆ.

ಯೋಗ ಶಿಕ್ಷಕರಿಗಾಗಿ ಆನ್‌ಲೈನ್‌ ಅಪ್ಲಿಕೇಷನ್‌ ಅನ್ನು ತಯಾರಿಸಲಾಗಿದೆ. ಇದರಿಂದ ನಾಗರೀಕರು ತಮ್ಮ ಹತ್ತಿರದ ಯೋಗ ಶಿಕ್ಷಕರು ಯಾರು ಎಂಬ ಬಗ್ಗೆ ಮಾಹಿತಿಯನ್ನು ಪಡೆಯಬಹುದಾಗಿದೆ. ಗೂಗಲ್‌ ಪ್ಲೇಸ್ಟೋರ್‌ ನಿಂದ ಕುಶಲಕೋಶ ಮೊಬೈಲ್ ಆಪ್ ಅನ್ನು ಡೌನ್‌ಲೋಡ್‌ ಮಾಡಿ, ಆನ್‌ಲೈನ್‌ ಮೂಲಕ ಯೋಗ ಶಿಕ್ಷಕರಿಂದ ಯೋಗಾಭ್ಯಾಸ ಮಾಡಬಹುದಾಗಿದೆ. ಈ ಮೊಬೈಲ್‌ ಆಪ್‌ ನ ಮೂಲಕ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಯೋಗ ಶಿಕ್ಷಕರು ತಮ್ಮ ವಿವರಗಳನ್ನು ಅಪ್‌ಲೋಡ್‌ ಮಾಡಿ, ಹೆಚ್ಚಿನ ಜನರಿಗೆ ತಮ್ಮ ಕಲಿಕೆಯನ್ನು ವಿಸ್ತರಣೆ ಮಾಡಲು ಈ ಅಪ್ಲಿಕೇಷನ್‌ ಅನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ಯೋಗ ಶಿಕ್ಷಕರು ಈ ಅಪ್ಲಿಕೇಶನ್ ನಲ್ಲಿ ನೊಂದಣಿ ಮಾಡಿರುವ ವಿಳಾಸವನ್ನು ನಕ್ಷೆಯೊಂದಿಗೆ ಇದು ತೋರಿಸಲಿದೆ. ಈ ಅಪ್ಲಿಕೇಶನ್‌ನಲ್ಲಿ ಕರ್ನಾಟಕ ನಕ್ಷೆಯ ಮೇಲೆ ಕ್ಲಿಕ್‌ ಮಾಡಿದಾಕ್ಷಣ  ನಿಮ್ಮ ಸುತ್ತಮುತ್ತಲಿನಲ್ಲಿ ಇರುವ 5 ಯೋಗ ಬೋಧಕರ ವಿಳಾಸವನ್ನು ಪತ್ತೆ ಹಚ್ಚುತ್ತದೆ.

ಕೇವಲ ಯೋಗ ಶಿಕ್ಷಕರಿಗೆ ಸಹಾಯವಾಗುವುದು ಮಾತ್ರವಲ್ಲ,  ಎಲೆಕ್ಟ್ರಿಷಿಯನ್‌, ಪ್ಲಂಬರ್‌, ಜಿಮ್‌ ತರಬೇತುದಾರರು, ಪೇಂಟರ್‌, ಡ್ರೈ ಕ್ಲೀನರ್‌, ಕಾರ್ಪೆಂಟರ್‌  ಸೇರಿದಂತೆ ಇತರೆ ವರ್ಗಗಳ ನುರಿತ ವ್ಯಕ್ತಿಗಳನ್ನು  ಪತ್ತೆಹಚ್ಚಲು ಸಹಾಯವಾಗುವಂತೆಯೂ ಈ ಅಪ್ಲಿಕೇಶನ್ ಅನ್ನು  ವಿನ್ಯಾಸಗೊಳಿಸಲಾಗಿದೆ.  ಹೀಗಾಗಿ ಕೌಶಲ್ಯ ಹೊಂದಿರುವ ಸಿಬ್ಬಂದಿ ಈ ಅಪ್ಲಿಕೇಶನ್‌ನಲ್ಲಿ ತಮ್ಮ  ವಿಳಾಸ ಹಾಗೂ ವಿವರಗಳನ್ನು ನೋಂದಣಿ ಮಾಡಿಕೊಳ್ಳಬಹುದು. ಅಲ್ಲದೆ ವಿಳಾಸ ಮತ್ತು ಸಂಪರ್ಕ ವಿವರಗಳ ಹೊರತಾಗಿ, ಯೂಟ್ಯೂಬ್‌ ಲಿಂಕ್‌, ವಾಟ್ಸಾಪ್‌ ಸಂಖ್ಯೆ, ಫೇಸ್‌ಬುಕ್‌ ಪುಟವನ್ನು ಸಹ ನೋಂದಾಯಿಸಬಹುದು.

Key words: kushala kosha-Mobile Application –Launch-Artisans – employment.