ಕೆಎಸ್‌ ಆರ್‌ ಪಿಯಿಂದ ರಾಜ್ಯದ ಮಹಿಳೆಯರನ್ನು ಧೈರ್ಯಶಾಲಿಗಳು ಹಾಗೂ ಬಲಿಷ್ಠರನ್ನಾಗಿಸುವ ಉಪಕ್ರಮ.

Promotion

ಬೆಂಗಳೂರು, ಆಗಸ್ಟ್ 12, 2021 (justkannada.in): ರಾಜ್ಯದ ಮಹಿಳೆಯರನ್ನು ಸಶಕ್ತರನ್ನಾಗಿಸಲು ಕರ್ನಾಟಕ ರಾಜ್ಯ ಮೀಸಲು ಪಡೆ (ಕೆಎಸ್‌ಆರ್‌ಪಿ) ಇಲಾಖೆಯು ಮಕ್ಕಳು ಹಾಗೂ ಮಹಿಳೆಯರಿಗೆ ಸ್ವಯಂ-ರಕ್ಷಣಾ ಕೋರ್ಸ್ ಗಳನ್ನು ಬೋಧಿಸುವ ಮಹತ್ತರವಾದ ಉಪಕ್ರಮವನ್ನು ಕೈಗೊಂಡಿದೆ. ಈ ಕೋರ್ಸ್ ಈಗಾಗಲೇ ಬೆಂಗಳೂರು ನಗರದಲ್ಲಿ ಮೂರು ಸ್ಥಳಗಳೂ ಸೇರಿದಂತೆ ರಾಜ್ಯದಾದ್ಯಂತ ಆರಂಭವಾಗಿದೆ. ಮಹಿಳಾ ಪೊಲೀಸ್ ಪೇದೆಗಳು ಸಾಮಾನ್ಯ ಕಳ್ಳತನಗಳು ಹಾಗೂ ಲೈಂಗಿಕ ಕಿರುಕುಳ ನೀಡುವವರನ್ನು ಸದೆಬಡೆಯಲು ರಕ್ಷಣಾ ತಂತ್ರಗಳನ್ನು ಕಲಿಸುತ್ತಿದ್ದಾರೆ.

ಕೆಎಸ್‌ ಆರ್‌ಪಿ ಎಡಿಜಿಪಿ ಅಲೋಕ್ ಕುಮಾರ್ ಅವರು ಈ ಉಪಕ್ರಮದ ಬಗ್ಗೆ ಮಾತನಾಡುತ್ತಾ, ಈ ಉಪಕ್ರಮವನ್ನು ಕೋವಿಡ್ ಸಾಂಕ್ರಾಮಿಕ ಆರಂಭವಾಗುವುದಕ್ಕೂ ಮುಂಚಿತವಾಗಿಯೇ ಕೈಗೊಳ್ಳಲಾಗಿತ್ತು. ಕೆಲವು ಮಹಿಳಾ ಪೊಲೀಸ್ ಪೇದೆಗಳಿಗೆ ಕರಾಟೆ ತರಬೇತಿಯನ್ನು ನೀಡಲಾಯಿತು. “ಈ ತಂತ್ರಗಳನ್ನು ಕಲಿತಂತಹ ಮಹಿಳಾ ಸಿಬ್ಬಂದಿಗಳು ಅದನ್ನು ಸತತವಾಗಿ ಅಭ್ಯಾಸ ಮಾಡಲು ಆರಂಭಿಸಿದ್ದಾರೆ. ಈಗ ತಾವು ಕಲಿತ ವಿದ್ಯೆಯನ್ನು ರಾಜ್ಯದಾದ್ಯಂತ ಶಾಲೆ ಹಾಗೂ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದಾರೆ,” ಎಂದರು.

“ಮಕ್ಕಳಿಗೆ ಈ 15 ದಿನಗಳ ಅವಧಿಯ ಸ್ವಯಂರಕ್ಷಣಾ ಕೋರ್ಸ್ ‘ವಿದ್ಯಾರ್ಥಿ ಪೊಲೀಸ್ ಪೇದೆ (ಎಸ್‌ಪಿಸಿ) ಕಾರ್ಯಕ್ರಮ’ದ ಭಾಗವಾಗಿದೆ. ಈ ತರಬೇತಿಯನ್ನು ಆರ್‌ ಡಬ್ಲ್ಯುಎಗಳು ಹಾಗೂ ಗ್ರಾಮಗಳಿಗೂ ವಿಸ್ತರಿಸಲು ಇಚ್ಛಿಸಿದ್ದೇವೆ. ಈ ಮೂಲಕ ಗ್ರಾಮಗಳಲ್ಲಿರುವ ಮಹಿಳೆಯರು ಹಾಗೂ ಮಕ್ಕಳೂ ಸಹ ಸ್ವಯಂ-ರಕ್ಷಣೆಯ ಕಲೆಯನ್ನು ಸಿದ್ಧಿಸಿಕೊಂಡು ಹೆಚ್ಚು ಆತ್ಮವಿಶ್ವಾಸವನ್ನು ಹೊಂದಬಹುದು,” ಎಂದರು.

ಈ ತರಬೇತಿಯನ್ನು ಪಡೆಯುತ್ತಿರುವ ಅಭ್ಯರ್ಥಿಗಳು ಸಾಮಾನ್ಯವಾಗಿ 13-25 ವರ್ಷದವರಾಗಿದ್ದು, ಇತರೆ ವಯೋಮಾನದ ಮಹಿಳೆಯರಿಗೆ ಪ್ರತ್ಯೇಕ ಚಟುವಟಿಕೆ ಆಯೋಜಿಸಲಾಗುವುದು.

ಹಿರಿಯ ಅಧಿಕಾರಿಯೊಬ್ಬರ ಪ್ರಕಾರ ಪ್ರತಿ ಸಂಸ್ಥೆಯಲ್ಲಿ ೨೫ ಮಕ್ಕಳಿರುವ ತಂಡಗಳನ್ನು ರಚಿಸಲಾಗಿದ್ದು, ಪ್ರತಿ ಶಾಲೆ ಹಾಗೂ ಕಾಲೇಜಿನಲ್ಲಿ ಈ ಕಲೆಯನ್ನು ಬೋಧಿಸಲು ಇಬ್ಬರು ತರಬೇತುದಾರರನ್ನು ನೇಮಿಸಲಾಗಿದೆಯಂತೆ. “ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ಕ್ರಮಬದ್ಧವಾಗಿ ತರಗತಿಗಳಿಗೆ ಹಾಜರಾಗುತ್ತಿರುವ ೧೨೦ ಮಕ್ಕಳಿದ್ದಾರೆ. ನಾವು ಈಗಾಗಲೇ ಕೋರಮಂಗಲದಲ್ಲಿ ೩೦ ಮಹಿಳಾ ಪೊಲೀಸ್ ಪೇದೆಗಳನ್ನು ತರಬೇತುಗೊಳಿಸಿದ್ದು, ಮಕ್ಕಳಿಗೆ ಕಲಿಸಲು ಅವರನ್ನು ಸಜ್ಜುಗೊಳಿಸಿದ್ದೇವೆ. ಇನ್ನುಳಿದ ಎರಡು ಕೇಂದ್ರಗಳೆಂದರೆ ಕೂಡ್ಲುದಲ್ಲಿ ೯ ಮಕ್ಕಳಿರುವ ೯ನೇ ಬೆಟಾಲಿಯನ್ ಹಾಗೂ ಆಸ್ಟಿನ್ ಟೌನ್‌ನಲ್ಲಿ, ೧೬ ಮಕ್ಕಳಿಗೆ ತರಬೇತಿ ನೀಡುತ್ತಿರುವ ೧ನೇ ಬೆಟಾಲಿಯನ್.”

“ಕೋವಿಡ್ ಕಾರಣದಿಂದಾಗಿ ಈ ತರಬೇತಿಯನ್ನು ಹೊರಾಂಗಣದಲ್ಲಿ ನೀಡುತ್ತಿದ್ದು, ಸಾಮಾಜಿಕ ಅಂತರವನ್ನು ಕಾಪಾಡಲಾಗುತ್ತಿದೆ. ಈ ಕೋರ್ಸ್ ಪ್ರಸ್ತುತ ಪೊಲೀಸ್ ಸಿಬ್ಬಂದಿಗಳ ಮಕ್ಕಳು ಹಾಗೂ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಕ್ರಮೇಣ ಈ ಕಾರ್ಯಕ್ರಮವನ್ನು ಸಾರ್ವಜನಿಕರಿಗೂ ವಿಸ್ತರಿಸಲಾಗುವುದು,” ಎಂದರು.

ಕೋರಮಂಗಲದಲ್ಲಿ ಮಕ್ಕಳಿಗೆ ಸ್ವಯಂ-ರಕ್ಷಣಾ ತರಬೇತಿಯನ್ನು ಒದಗಿಸುತ್ತಿರುವ ಮುಖ್ಯಪೇದೆ ಪೂರ್ಣಿಮಾ ಅವರು ಹೇಳುವಂತೆ ಆಕೆ ಒಂದು ಕ್ರ್ಯಾಶ್ ಕೋರ್ಸ್ ಪಡೆದುಕೊಂಡಿದ್ದು, ಹಿಂದಿನ ಗೃಹ ಮಂತ್ರಿ ಹಾಗೂ ಈಗಿನ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರ ಮುಂದೆ ಪ್ರದರ್ಶನವನ್ನೂ ನೀಡಿದ್ದಾರಂತೆ. “ಪಂಚ್‌ಗಳು, ಬ್ಲಾಕ್‌ ಗಳು ಹಾಗೂ ಕಿಕ್‌ಗಳಂತಹ ಪ್ರಾಥಮಿಕ ಸ್ವಯಂ-ರಕ್ಷಣಾ ತಂತ್ರಗಳನ್ನು ಕಲಿಸುತ್ತೇವೆ. ಕೋರ್ಸ್ ಮುಂದುವರೆದಂತೆ ಅಭ್ಯರ್ಥಿಗಳು ಸರಗಳ್ಳತನ, ಹಿಂದಿನಿಂದ ಆಕ್ರಮಣ ಹಾಗೂ ಲೈಂಗಿಕ ಅಪರಾಧಗಳಂತಹ ಸನ್ನಿವೇಶಗಳನ್ನು ಹೇಗೆ ಎದುರಿಸಬೇಕೆಂಬ ತಂತ್ರಗಳನ್ನು ಕಲಿಯತ್ತಾರೆ,” ಎಂದು ವಿವರಿಸಿದರು.

ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಪ್ರಿಯಾಂಕ ಅವರು ತಾವು 12 ದಿನಗಳಿಂದ ಈ ತರಬೇತಿಯನ್ನು ಪಡೆಯುತ್ತಿದ್ದು, ತಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿದೆ ಎಂದರು. “ನಾನು ದಾಳಿಕೋರರ ವಿರುದ್ಧ ಇತರರನ್ನು ಅವಲಂಭಿಸದೆ ಸ್ವಯಂ ರಕ್ಷಣೆ ಹೇಗೆ ಪಡೆಯುವುದು ಎಂಬುದನ್ನು ಈಗ ಕಲಿತಿದ್ದೇನೆ. ಹಿಂದೆ ರಾತ್ರಿ ವೇಳೆ ಒಬ್ಬಳೇ ಮನೆಗೆ ಹೋಗುವಾಗ ಹೆದರಿಕೊಳ್ಳುತ್ತಿದ್ದೆ, ಆದರೆ ಈಗ ತರಬೇತಿ ಪೂರ್ಣಗೊಳಿಸಿದ ನಂತರ ನನ್ನಲ್ಲಿ ಆತ್ಮವಿಶ್ವಾಸ ಮೂಡಿದೆ. ನಾನು ಇದನ್ನು ನಿರಂತರವಾಗಿ ಅಭ್ಯಸಿಸುತ್ತೇನೆ,” ಎಂದರು.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: KSRP- initiative – empower – women -state – courageous – strong.