ಕೊಡಗು ಜಿಲ್ಲೆ: ನೆರೆ ಅನಾಹುತ ತಡೆಗೆ ಮುಂಜಾಗ್ರತೆ ವಹಿಸಲು ಸಿಎಂ ಹೆಚ್.ಡಿ ಕುಮಾರಸ್ವಾಮಿ ಸೂಚನೆ…

ಬೆಂಗಳೂರು, ಮೇ 15:,2019(www.justkannada.in): ಕೊಡಗು ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ನೆರೆ ಅನಾಹುತ ತಡೆಗಟ್ಟಲು  ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ  ಹೆಚ್.ಡಿ ಕುಮಾರಸ್ವಾಮಿ ಸೂಚಿಸಿದರು.

ಬರಪರಿಸ್ಥಿತಿ ಕುರಿತು ಇಂದು ನಡೆದ ವೀಡಿಯೋ ಸಂವಾದದ ಸಂದರ್ಭದಲ್ಲಿ  ಕೊಡಗು ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸೂಚಿಸಿದರು.

ಕೊಡಗು ಜಿಲ್ಲೆಯಲ್ಲಿ ಭಾರತೀಯ ಭಾವಿಜ್ಞಾನ  ಸಮೀಕ್ಷಾ ಇಲಾಖೆ (ಜಿ.ಎಸ್.ಐ) ನಡೆಸಿದ ಸಮೀಕ್ಷೆಯಲ್ಲಿ ಭೂ ಕುಸಿತವಾಗುವ ಸ್ಥಳಗಳನ್ನು ಗುರುತಿಸಲಾಗಿದ್ದು,  ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಕೈಗೊಂಡಿದೆ. ಹಾಗೂ ಸತತ ಮೇಲ್ವಿಚಾರಣೆಗೆ ನೋಡಲ್ ಅಧಿಕಾರಿಗಳ ನೇಮಕ ಮಾಡಲಾಗಿದೆ ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದರು.

ಜಿ.ಎಸ್.ಐ ಗುರುತಿಸಿರುವ ಅಪಾಯಕಾರಿ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮವಾಗಿ  ಆಶ್ರಯ ತಾಣಗಳನ್ನು ಪ್ರಾರಂಭಿಸಲು ಈಗಾಗಲೇ ಕ್ರಮಕೈಗೊಳ್ಳಲಾಗಿದೆ. ಜಾನುವಾರುಗಳ ಸುರಕ್ಷತೆಯ ಬಗ್ಗೆಯೂ ಕ್ರಮ ವಹಿಸಲಾಗಿದೆ ಎಂದರು. ಪ್ರವಾಹ ಉಂಟಾದಲ್ಲಿ ತಕ್ಷಣವೇ ಪರಿಹಾರ ಕೆಲಸಗಳನ್ನು ಕೈಗೊಳ್ಳಲು 8 ತಂಡಗಳನ್ನು ರಚಿಸಲಾಗಿದೆ.

ಜೂನ್ ಕೊನೆ ವಾರದಲ್ಲಿ ರಾಷ್ಟ್ರೀಯ ವಿಪತ್ತು ಪರಿಹಾರ ತಂಡವನ್ನು ಕೊಡಗಿಗೆ ನಿಯೋಜಿಸಲು  ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಹಾರಂಗಿ ಜಲಾಶಯದಲ್ಲಿ ಹೂಳೆತ್ತುವ  ಕಾರ್ಯಕ್ಕೆ ಜಲಸಂಪನ್ಮೂಲ ಇಲಾಖೆ ಕ್ರಮಕೈಗೊಳ್ಳುತ್ತಿದ್ದು, ಅಗ್ನಿಶಾಮಕ ಇಲಾಖೆ ಹಾಗೂ ಇತರ ಇಲಾಖೆಗಳಿಗೆ ರಕ್ಷಣಾ ಕಾರ್ಯಕ್ಕೆ ಅಗತ್ಯವಿರುವ ಪರಿಕರಗಳ ಖರೀದಿಗೆ  ಕ್ರಮವಹಿಸಲಾಗಿದೆ ಹಾಗೂ  ನೆರೆ ಸಂತ್ರಸ್ತರಿಗೆ ಗೃಹನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿರುವುದಾಗಿ ಜಿಲ್ಲಾಧಿಕಾರಿಗಳು ಸಭೆಗೆ ತಿಳಿಸಿದರು.

ನಿರ್ಮಾಣವಾಗಿರುವ ಎರಡು ಬಡಾವಣೆಗಳಿಗೆ  ರಸ್ತೆ ಸಂಪರ್ಕ, ಒಳಚರಂಡಿ ಮತ್ತಿತರ ಮೂಲಸೌಕರ್ಯ ಕಲ್ಪಿಸಲು ಪ್ರಸ್ತಾವನೆಗೆ  ಅನುಮೋದನೆ ನೀಡಿದ ಮುಖ್ಯಮಂತ್ರಿಗಳು  ತ್ವರಿತವಾಗಿ ಕೆಲಸ ಪೂರ್ಣಗೊಳಿಸುವಂತೆ ಸೂಚಿಸಿದರು.

Key words: Kodagu- District-CM HD Kumaraswamy -instructs – care – disaster.