ಬ್ಯಾಟಿಂಗ್ ವೇಳೆ ಕನ್ನಡದಲ್ಲಿ ಮಾತನಾಡಿದ ಕೆಎಲ್ ರಾಹುಲ್-ಮನೀಶ್ ಪಾಂಡೆ

Promotion

ಮೌಂಟ್‌ಮೌಂಗಾನುಯಿ, ಫೆಬ್ರವರಿ 11, 2020 (www.justkannada.in): ನ್ಯೂಜಿಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಕನ್ನಡಿಗ ಆಟಗಾರರಾದ ಕೆಎಲ್ ರಾಹುಲ್ ಮತ್ತು ಮನೀಶ್ ಪಾಂಡೇ ಮೈದಾನದಲ್ಲಿ ಕನ್ನಡದಲ್ಲೇ ಮಾತನಾಡಿ ಕನ್ನಡಿಗರ ಮನ ಗೆದ್ದಿದ್ದಾರೆ.

ಹೌದು.. ಮೌಂಟ್‌ಮೌಂಗಾನುಯಿಯ ಬೇ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಕರ್ನಾಟಕ ಮೂಲದ ಆಟಗಾರರಾದ ಮನೀಶ್ ಪಾಂಡೇ ಹಾಗೂ ಶತಕ ವೀರ ಕೆಎಲ್ ರಾಹುಲ್ ಕನ್ನಡದಲ್ಲಿ ಮಾತನಾಡುವ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ. ಶ್ರೇಯಶ್ ಅಯ್ಯರ್ ಔಟಾದ ಬಳಿಕ 5ನೇ ವಿಕೆಟ್ ಗೆ ಜೊತೆಯಾದ ಈ ಜೋಡಿ ಭಾರತಕ್ಕೆ ಶತಕದ ಜೊತೆಯಾಟ ನೀಡಿತು. ಈ ವೇಳೆ ಉಭಯ ಆಟಗಾರರು ಕನ್ನಡದಲ್ಲೇ ಮಾತನಾಡಿಕೊಂಡ ವಿಚಾರ ಸ್ಟಂಪ್ ಮೈಕ್ ನಲ್ಲಿ ದಾಖಲಾಗಿದೆ.

ಮನೀಶ್ ಪಾಂಡೆ ಚೆಂಡನ್ನು ತಳ್ಳಿ ಒಂಟಿ ರನ್‌ಗೆ ಓಡಲು ಮುಂದಾಗುತ್ತಾರೆ. ಈ ವೇಳೆ ನಾನ್ ಸ್ಟ್ರೈಕ್‌ನಲ್ಲಿದ್ದ ಕೆ.ಎಲ್ ರಾಹುಲ್‌ ಮನೀಶ್ ಪಾಂಡೆಗೆ ‘ಬೇಡ ಬೇಡ’ ಎಂದು ಜೋರಾಗಿ ಕೂಗಿ ಹೇಳುತ್ತಾರೆ. ಇದು ಸ್ಟಂಪ್ ಮೈಕ್‌ನಲ್ಲಿ ದಾಖಲಾಗಿದೆ. ಅಲ್ಲದೆ ಪ್ರತೀ ಓವರ್ ನ ಮುಕ್ತಾಯದ ಬಳಿಕವೂ ಉಭಯ ಆಟಗಾರರು ಕನ್ನಡದಲ್ಲೇ ಸಂಭಾಷಣೆ ನಡೆಸಿದ್ದಾರೆ.

ಈ ಹಿಂದೆಯೇ ಕೂಡ ಮನೀಶ್ ಪಾಂಡೆ ಮೈದಾನದಲ್ಲಿ ಕನ್ನಡದಲ್ಲಿ ಮಾತನಾಡಿ ಸುದ್ದಿಯಾಗಿದ್ದರು. ಐಪಿಎಲ್ ಪಂದ್ಯಾವಳಿಯಲ್ಲಿ ಮನೀಶ್ ಪಾಂಡೇ ರಾಬಿನ್ ಉತ್ತಪ್ಪರೊಂದಿಗೆ ಪರಸ್ಪರ ಮಾತುಕತೆ ನಡೆಸಿದ್ದರು. ಈ ವೇಳೆ ವೀಕ್ಷಕ ವಿವರಣೆದಾರರೂ ಕೂಡ ಅದು ಕನ್ನಡ ಭಾಷೆಯಲ್ಲವೇ ಎಂದು ಪ್ರಶ್ನಿಸಿದ್ದಾಗ ಪಾಂಡೇ ಹೌದು ಅದು ಕನ್ನಡ ಎಂದು ಉತ್ತರಿಸಿದ್ದರು.