‘ ರೀಡ್ ಆ್ಯಂಡ್ ಟೇಲರ್ ‘ಕಾರ್ಮಿಕರ ವಜಾ, ಸಚಿವರ ಅಸಮಧಾನ : ಕ್ರಮ ಸಮರ್ಥಿಸಿಕೊಂಡ ದೇವರಕೊಂಡ.

 

ಬೆಂಗಳೂರು, ಮೇ 28, 2020 : (www.justkannada.in news) : ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿರುವ 2 ದಶಕ ಇತಿಹಾಸವುಳ್ಳ ರೀಡ್ ಆ್ಯಂಡ್ ಟೇಲರ್ ಕಾರ್ಖಾನೆಯನ್ನು ಏಕಾಏಕಿ ಮುಚ್ಚಿರುವ ಕ್ರಮ ಸರಿಯಲ್ಲ. ಈಗ ಮತ್ತೊಮ್ಮೆ ಕಾರ್ಮಿಕರು, ಕಾರ್ಮಿಕ ಒಕ್ಕೂಟ, ಜಿಲ್ಲಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರ ನೇತೃತ್ವದಲ್ಲಿ ಸಭೆ ಕರೆದು ಪುನಃ ತೆರೆಯುವ ಬಗ್ಗೆ ಮರುಚಿಂತನೆ ಮಾಡಿ ಎಂದು ಕಾರ್ಮಿಕ ಸಚಿವರಾದ ಶಿವರಾಂ ಕೆ. ಹೆಬ್ಬಾರ ಕಂಪನಿಯ ಲಿಕ್ವಿಡೇಟರ್ ಗೆ ಸೂಚನೆ ನೀಡಿದರು.

ವಿಕಾಸಸೌಧ ಕಚೇರಿಯಲ್ಲಿ ಗುರುವಾರ ಸಭೆ ಕರೆದ ರೀಡ್ ಆ್ಯಂಡ್ ಟೇಲರ್ ಕಂಪನಿಯ ಲಿಕ್ವಿಡೇಟರ್, ಕಾರ್ಮಿಕ ಒಕ್ಕೂಟದವರ ಜೊತೆ ಸಭೆ ನಡೆಸಿದ ಕಾರ್ಮಿಕ ಸಚಿವರಾದ ಶಿವರಾಂ ಕೆ. ಹೆಬ್ಬಾರ ಹಾಗೂ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು, ಕೋವಿಡ್ 19 ಸಂದರ್ಭದಲ್ಲಿ ಕಂಪನಿಯನ್ನು ಮುಚ್ಚಿರುವ ಕ್ರಮದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

1998ರಲ್ಲಿ ಪ್ರಾರಂಭವಾಗಿರುವ ಕಂಪನಿ ಉತ್ತಮವಾಗಿಯೇ ಕಾರ್ಯನಿರ್ವಹಿಸುತ್ತಿತ್ತು. ಈಗ ಕೋವಿಡ್ -19 ಸಂದರ್ಭದಲ್ಲಿ ಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಫೆ.4, 2020ರಂದು ತಾತ್ಕಾಲಿಕವಾಗಿ ಕಾರ್ಯಚಟುವಟಿಕೆ ಸ್ಥಗಿತಗೊಳಿಸುತ್ತೇವೆ. ಲಾಕ್ ಡೌನ್ ಮುಗಿದ ಬಳಿಕ ಪುನಃ ಕೆಲಸ ಪ್ರಾರಂಭಿಸಲಾಗುತ್ತದೆ ಎಂದು ಪತ್ರದಲ್ಲಿ ಕಂಪನಿಯವರು ಉಲ್ಲೇಖಿಸಿದ್ದರು. ಆದರೆ, ಮೇ 14ರಂದು ಏಕಾಏಕಿ ಎಲ್ಲ ಕಾರ್ಮಿಕರನ್ನು ವಜಾಗೊಳಿಸಲಾಗಿದೆ ಎಂದು ಆದೇಶ ನೀಡಿದ್ದು, ಇದು ಕಾರ್ಮಿಕ ನೀತಿಗೆ ವಿರುದ್ಧವಾಗಿದೆ ಎಂದು ಕಾರ್ಮಿಕ ಒಕ್ಕೂಟದ ಪ್ರಮುಖರು ಆರೋಪಿಸಿದರು.

ಅಲ್ಲದೆ, ಲಾಕ್ ಡೌನ್ ಅವಧಿ ಮೇ 17ರಂದು ಮುಗಿಯುತ್ತಿತ್ತು. ಅದು ಮುಗಿಯುವ 3 ದಿನ ಮುಂಚಿತವಾಗಿ ಕಾರ್ಮಿಕರು, ಕಾರ್ಮಿಕ ಒಕ್ಕೂಟ ಸಹಿತ ಯಾರ ಬಳಿಯೂ ಚರ್ಚಿಸದೇ ವಜಾ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ. ಜೊತೆಗೆ ಕಂಪನಿ ಮುಚ್ಚುವುದಕ್ಕಿಂತ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಮಿಕರ ಭದ್ರತೆಯ ಹಿತದೃಷ್ಟಿಯನ್ನೂ ಗಮನದಲ್ಲಿಟ್ಟುಕೊಂಡು ಮುನ್ನಡೆಯಬೇಕು ಎಂದು ಮನವಿ ಮಾಡಿದರು.

key words : reid and taylor- mysore-company-lock.out

ಸಂಬಳ ಕೊಡಲು ಹಣವಿಲ್ಲ

ಕಂಪನಿಯ ಲಿಕ್ವಿಡೇಟರ್ ರವಿಶಂಕರ್ ದೇವರಕೊಂಡ ಪ್ರತಿಕ್ರಿಯೆ ನೀಡಿ, ತಮ್ಮ ಕಂಪನಿ ನಷ್ಟದಲ್ಲಿದೆ. ಅಲ್ಲದೆ, ಕೋವಿಡ್ -19 ಸಂದರ್ಭದಲ್ಲಿ ಉತ್ಪಾದನೆ ಇಲ್ಲದಿದ್ದರೂ ಮಾರ್ಚ್ ತಿಂಗಳ ಸಂಬಳವನ್ನು ಕೊಡಲಾಗಿದೆ. ಪ್ರತಿ ತಿಂಗಳಿಗೆ ಕಂಪನಿಗೆ 4ರಿಂದ 4.5 ಕೋಟಿ ರೂ. ಖರ್ಚು ಬರುತ್ತದೆ. ಉತ್ಪಾದನೆ ಇಲ್ಲದ ಸಂದರ್ಭದಲ್ಲಿ 2ರಿಂದ 2.5 ಕೋಟಿವರೆಗೆ ಖರ್ಚು ಇರುತ್ತದೆ. ಜೊತೆಗೆ ನಮಗೆ ವಿದ್ಯುತ್ ಬಿಲ್ ಕಟ್ಟಲೂ ಸಹಿತ ಹಣವಿಲ್ಲದ ಹಿನ್ನೆಲೆಯಲ್ಲಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ವಿದ್ಯುತ್ ಇಲ್ಲದೆ ಉತ್ಪಾದನೆ ಮಾಡಲು ಸಾಧ್ಯವಿಲ್ಲ. ಇದರ ಜೊತೆಗೆ ಯಾರಾದರೂ ಹೂಡಿಕೆದಾರರು ಮುಂದೆಬಂದರೆ ಕಂಪನಿಯನ್ನು ಪುನಃ ಪ್ರಾರಂಭಿಸಬಹುದು. ಇದಾಗದಿದ್ದರೆ ಸಂಬಳ ಕೊಡಲು ನಮ್ಮ ಬಳಿ ಹಣವಿಲ್ಲ ಎಂದು ಸಮಸ್ಯೆಯನ್ನು ತೋಡಿಕೊಂಡರು.

ಕಾನೂನು ಪಾಲನೆ ಆಗಿಲ್ಲ

ರೀಡ್ ಆ್ಯಂಡ್ ಟೇಲರ್ ಕಂಪನಿಯ ಕಾರ್ಮಿಕರನ್ನು ವಜಾ ಮಾಡಿರುವ ಬಗ್ಗೆ ನನಗೆ ವರದಿ ಬಂದಿತ್ತು, ಅಲ್ಲದೆ, ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಸಚಿವರಾದ ಎಸ್.ಟಿ.ಸೋಮಶೇಖರ್ ಸಹ ನನ್ನ ಗಮನಕ್ಕೆ ತಂದಿದ್ದರು. ಒಟ್ಟಾರೆ ಕಂಪನಿ ಬಗ್ಗೆ ನೋಡುವುದಾದರೆ, ಕಾರ್ಮಿಕರನ್ನು ವಜಾಗೊಳಿಸಿರುವ ಪ್ರಕ್ರಿಯೆಯಲ್ಲಿ ಕಾನೂನು ಪಾಲನೆಯಾಗಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಅಲ್ಲದೆ, ಇಂತಹ ನಿರ್ಧಾರ ತೆಗೆದುಕೊಳ್ಳುವ ಮುಂಚೆ ಕಾರ್ಮಿಕರ ಜೊತೆ ಚರ್ಚೆಯನ್ನೂ ಮಾಡಿಲ್ಲ. ಇಂಥ ಆರೋಪ ಯಾವೊಬ್ಬ ಲಿಕ್ವಿಡೇಟರ್ ಮೇಲೂ ಬರುವುದು ಸರಿಯಲ್ಲ. ಹೀಗಾಗಿ ತುರ್ತಾಗಿ ಮೈಸೂರಿನಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಿ ಎಂದು ಸಚಿವರಾದ ಶಿವರಾಂ ಹೆಬ್ಬಾರ ಸೂಚಿಸಿದರು.

ಕೋವಿಡ್ -19 ಸಂದರ್ಭದಲ್ಲಿ ಯಾವುದೇ ಕಾರ್ಮಿಕರಿಗೆ ಕೆಲಸ ಇಲ್ಲದಿದ್ದರೂ ವೇತನ ನೀಡಬೇಕು. ಅವರು ಸುಭದ್ರವಾಗಿರಬೇಕು ಎಂಬುದು ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರ ಆಶಯವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಆದೇಶವನ್ನೂ ಹೊರಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಂಪನಿಯನ್ನು ಪುನಃ ಪ್ರಾರಂಭಿಸಿ ಎಂದು ಮನವಿ ಮಾಡುತ್ತಿದ್ದೇನೆ. ಜೊತೆಗೆ ಕಾರ್ಮಿಕರ ವಜಾ ಆದೇಶವನ್ನು ಹಿಂಪಡೆಯುವ ಬಗ್ಗೆ ಮರುಚಿಂತನೆ ಮಾಡಿ ಎಂದು ತಿಳಿಸಿದರು.

key words : reid and taylor- mysore-company-lock.out

ಇದಕ್ಕೆ ಪ್ರತಿಕ್ರಿಯೆ ನೀಡಿದ ರವಿಶಂಕರ್ ಅವರು, ಇನ್ನು 10ರಿಂದ 12 ದಿನದಲ್ಲಿ ಮೈಸೂರಿನಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ಕರೆಯಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ವರುಣ ಕ್ಷೇತ್ರದ ಶಾಸಕರಾದ ಯತೀಂದ್ರ ಸಿದ್ದರಾಮಯ್ಯ, ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜ್ ಕುಮಾರ್ ಕತ್ರಿ, ಕಾರ್ಮಿಕ ಇಲಾಖೆ ಆಯುಕ್ತರಾದ ಶಾಂತಾರಾಮ್, ರೀಡ್ ಆ್ಯಂಡ್ ಟೇಲರ್ ಕಾನೂನು ಸಲಹೆಗಾರರಾದ ಮುರಳೀಧರ ಪೇಶ್ವಾ, ಸಿಐಟಿಯು ಸಂಘದ ರಾಜ್ಯ ಕಾರ್ಯದರ್ಶಿ ಕೆ.ಎನ್.ಉಮೇಶ್, ಸಿಐಟಿಯು ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಇತರರು ಇದ್ದರು.

key words : key words : reid and taylor- mysore-company-lock.out