100 ಕೋಟಿ ರೂ. ವೆಚ್ಚದಲ್ಲಿ KSOU ನೂತನ ಕಟ್ಟಡ ನಿರ್ಮಾಣಕ್ಕೆ ಆಕ್ಷೇಪ : ಕುಲಪತಿ/ಕುಲಸಚಿವರಿಗೆ ಲಾಯರ್ ನೋಟಿಸ್.

 

ಮೈಸೂರು, ಮೇ 29, 2020 : ( www.justkannada.in news ) ವಿದ್ಯಾರ್ಥಿಗಳ ದಾಖಲಾತಿಯ ಕೊರತೆಯ ನಡುವೆಯೂ ಅನಾವಶ್ಯಕವಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಕೋಟ್ಯಾಂತರ ರೂ. ವೆಚ್ಚದಲ್ಲಿ ಹೊಸದಾಗಿ ಕಟ್ಟಡಗಳನ್ನು ನಿರ್ಮಾಣ ಮಾಡಲು ಮುಂದಾಗಿರುವುದು ಈಗ ವಿವಾದಕ್ಕೆ ಗ್ರಾಸವಾಗಿದೆ.

ಈಗಾಗಲೇ ಹಲವಾರು ವಿವಾದಗಳ ಕಾರಣ ಕರ್ನಾಟಕ ರಾಜ್ಯ ಮುಕ್ತ ವಿವಿ ಸಂಕಷ್ಟ ಎದುರಿಸುತ್ತಿದೆ. ಪರಿಣಾಮ ವಿದ್ಯಾರ್ಥಿಗಳ ದಾಖಲಾತಿಯಲ್ಲೂ ಗಣನೀಯ ಕುಸಿತ ಉಂಟಾಗಿದೆ. ಈ ಹಂತದಲ್ಲಿ ಮತ್ತೆ ಹೊಸ ವಿವಾದ ಮೈಮೇಲೆ ಎಳೆದುಕೊಳ್ಳಲು ಮುಕ್ತ ವಿವಿ ಮುಂದಾಗಿರುವುದು ವಿಪರ್ಯಾಸ.

ಲಾಯರ್ ನೋಟಿಸ್ :

karnataka-open-university-100.crore-new-project-opposed-mysore

ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಹಾಗೂ ಕುಲಸಚಿವ ಪ್ರೊ.ಬಿ.ಲಿಂಗರಾಜ್ ಗಾಂಧಿ ಅವರಿಗೆ ಮೈಸೂರಿನ ವಕೀಲ ಪಿ.ತೇಜಸ್ವಿ ಎಂಬುವವರು ನೋಟಿಸ್ ನೀಡಿದ್ದಾರೆ. ಕಕ್ಷಿದಾರರಾಗಿರುವ ಮೈಸೂರಿನ ವಕೀಲ ಎಸ್.ಸುಂದರೇಶ್ ಹೇಳಿಕೆ ಆಧಾರಿಸಿ ಮೇ 20 ರಂದು ಆರು ಪುಟಗಳ ಸುದೀರ್ಘ ವಿವರಗಳನ್ನು ಒಳಗೊಂಡ ನೋಟಿಸ್ ಜಾರಿ ಮಾಡಲಾಗಿದೆ.

ವಕೀಲರು ನೀಡಿರುವ ನೋಟಿಸ್ ನಲ್ಲಿ, ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ಇತ್ತೀಚೆಗೆ ನಡೆದ ಬಿಒಎಂ ಸಭೆಯಲ್ಲಿ ಕ್ರಮ ಸಂಖ್ಯೆ 15 ರ ವಿಷಯ 160.15 ರಲ್ಲಿ ವಿವಿಧ ಜಿಲ್ಲಾ ಪ್ರಾದೇಶಿಕ ಕೇಂದ್ರಗಳಲ್ಲಿ ಅಧ್ಯಯನ ಕೇಂದ್ರಗಳನ್ನು ನಿರ್ಮಿಸಲು ಚರ್ಚಿಸಲಾಗಿದೆ. ಜತೆಗೆ ಆರ್ಕಿಟೆಕ್ಟ್ , ಪ್ಲಾನಿಂಗ್ ಮುಂತಾದ ಕ್ಷೇತ್ರಗಳ ತಜ್ಞರನ್ನು ನೇಮಕ ಮಾಡಿಕೊಳ್ಳುವ ಬಗೆಗೂ ಉಲ್ಲೇಖಿಸಲಾಗಿದೆ. ಇದೊಂದು ಅನಗತ್ಯವಾದ ಹಾಗೂ ದುಂದು ವೆಚ್ಚಕ್ಕೆ ಎಡೆ ಮಾಡಿಕೊಡುವ ಯೋಜನೆಯಾಗಿದೆ ಎಂದು ನೋಟಿಸ್ ನಲ್ಲಿ ವಿವರಿಸಲಾಗಿದೆ.

ಜತೆಗೆ ಈಗಾಗಲೇ ಮುಕ್ತ ವಿವಿ ಮಾನ್ಯತೆಯ ಸಮಸ್ಯೆ ಎದುರಿಸುತ್ತಿದ್ದು, ಕೋರ್ಟ್ ನಲ್ಲಿ ಪ್ರಕರಣಗಳು ಬಾಕಿ ಉಳಿದಿದೆ. ಇದರಿಂದ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುವಂತಾಗಿದೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುರಾಗಿ ಸಮಸ್ಯೆ ಇತ್ಯರ್ಥ ಪಡಿಸುವುದರ ಬದಲು ನೀವು ಹೊಸ ವಿವಾದ ಸೃಷ್ಠಿಸಲು ಮುಂದಾಗಿದ್ದೀರಾ ಎಂದು ಪ್ರಶ್ನಿಸಲಾಗಿದೆ.

ಮುಕ್ತ ವಿವಿ ಸಮಸ್ಯೆ ಕಾರಣ 5 ವರ್ಷಗಳ ಕಾಲ ವಿದ್ಯಾರ್ಥಿಗಳ ದಾಖಲಾತಿಯೇ ಇರಲಿಲ್ಲ. ಈಗ ವಿದ್ಯಾರ್ಥಿಗಳ ಪ್ರವೇಶಕ್ಕೆ ಯುಜಿಸಿ ಅನುಮತಿ ನೀಡಿದ ಬಳಿಕ ವಿದ್ಯಾರ್ಥಿಗಳು ಅಲ್ಪ ಪ್ರಮಾಣದಲ್ಲಿ ಪ್ರವೇಶ ಪಡೆಯುತ್ತಿದ್ದಾರೆ. ಈ ವಿದ್ಯಾರ್ಥಿಗಳ ಅವಶ್ಯಕತೆಗೆ ಪೂರಕವಾಗಿ ಈಗಾಗಲೇ ಮೂಲಸೌಕರ್ಯ ನಿರ್ಮಿಸಲಾಗಿದೆ. ಆದರೂ ಹೊಸದಾಗಿ ಕಟ್ಟಡಗಳನ್ನು ನಿರ್ಮಿಸಲು ಮುಂದಾಗಿರುವುದು ಏಕೆ..? ಎಂದು ಪ್ರಶ್ನಿಸಿದ್ದಾರೆ.

ಕುಲಾಧಿಪತಿಗಳು ಆಗಿದ್ದ ರಾಜ್ಯಪಾಲರು 2015 ರಲ್ಲಿ ಮುಕ್ತ ವಿವಿಗೆ ಸೂಚನೆ ನೀಡಿ, ನಿವೃತ್ತ ನ್ಯಾಯಮೂರ್ತಿ ಭಕ್ತವತ್ಸಲ ಅವರು ನೀಡಿರುವ ಸಲಹೆಗಳ ಅನ್ವಯ ಕಾರ್ಯ ನಿರ್ವಹಿಸುವಂತೆ ಸೂಚಿಸಿರುವುದನ್ನು ನೋಟಿಸ್ ಮೂಲಕ ಗಮನ ಸೆಳೆಯಲಾಗಿದೆ.
ಈ ನೋಟಿಸ್ ಕಡೆಗಣಿಸಿ, ಬಿಒಎಂ ಸಭೆಯ ಕ್ರಮ ಸಂಖ್ಯೆ 15 ರ ವಿಷಯ 160.15 ಅನ್ನು ಜಾರಿಗೆ ಮುಂದಾದಲ್ಲಿ ಹೈಕೋರ್ಟ್ ಮೆಟ್ಟಿಲೇರುವುದಾಗಿ ತಿಳಿಸಿದ್ದು, ಮುಂದಿನ ಪರಿಣಾಮಕ್ಕೆ ಮುಕ್ತ ವಿವಿಯ ಕುಲಪತಿ ಹಾಗೂ ಕುಲಸಚಿವರೇ ಬಾಧ್ಯಸ್ಥರಾಗುತ್ತಾರೆ ಎಂದು ವಕೀಲರು ತಿಳಿಸಿದ್ದಾರೆ.

ಪ್ರವೇಶಾತಿ ಕುಸಿದಿದೆ. :

ಮೈಸೂರಿನಲ್ಲಿಂದು ಪತ್ರಿಕಾಗೋಷ್ಠಿ ನಡೆಸಿದ ಮುಕ್ತ ವಿವಿಯ ಸಿಂಡಿಕೇಟ್ ನ ಮಾಜಿ ಸದಸ್ಯ ಕೆ.ಎಸ್. ಶಿವರಾಂ ಮಾತನಾಡಿ, ಸದ್ಯ ಮುಕ್ತ ವಿವಿಯಲ್ಲಿ ಕೇವಲ 12 ಸಾವಿರ ವಿದ್ಯಾರ್ಥಿಗಳು ಮಾತ್ರ ವ್ಯಾಸಂಗ ಮಾಡುತ್ತಿದ್ದಾರೆ. ಜತೆಗೆ ಮುಕ್ತ ವಿವಿ ಸಾಕಷ್ಟು ಹಗರಣಗಳಿಂದ ಸಂಕಷ್ಟದಲ್ಲಿದೆ. ಇಂತಹ ಸಂದರ್ಭದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಹೊಸದಾಗಿ ಕಟ್ಟಡಗಳನ್ನು ನಿರ್ಮಾಣ ಮಾಡುವ ಅವಶ್ಯಕತೆ ಇದೆಯಾ..? ಎಂದು ಪ್ರಶ್ನಿಸಿದ್ದಾರೆ.

karnataka-open-university-100.crore-new-project-opposed-mysore

ಜತೆಗೆ ಈ ಕಟ್ಟಡ ನಿರ್ಮಾಣದಿಂದ ವಿವಿಗೆ ಆರ್ಥಿಕ ಹೊರೆ ಹೆಚ್ಚಾಗುತ್ತದೆ. ಆದ್ದರಿಂದ ಇದು ಅನಗತ್ಯವಾದ ನಿರ್ಧಾರ ಎಂದು ಅಸಮಧಾನ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಈಗಾಗಲೇ ಸುತ್ತೋಲೆ ಹೊರಡಿಸಿ, ಯಾವುದೇ ಹೊಸ ಯೋಜನೆ ಪ್ರಾರಂಭಿಸದಂತೆ ಆದೇಶಿಸಿದೆ. ಇಂತಹ ಸಂದರ್ಭದಲ್ಲಿ ಕಟ್ಟಡ ನಿರ್ಮಾಣದ ಅವಶ್ಯಕತೆಯಿಲ್ಲ. ಈ ವಿಚಾರವಾಗಿ ರಾಜ್ಯದ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರಿಗೂ ಪತ್ರ ಬರೆಯಲಾಗುವುದು ಎಂದು ಶಿವರಾಂ ತಿಳಿಸಿದರು.

ooooo

key words : karnataka-open-university-100.crore-new-project-opposed-mysore