ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ನಂತರ ಕರ್ನಾಟಕ ದೇಶದಲ್ಲೇ ನಂ.1 ರಾಜ್ಯವಾಗಲಿದೆ- ಡಿಸಿಎಂ ಅಶ್ವಥ್ ನಾರಾಯಣ್

Promotion

ಬೆಂಗಳೂರು,ಡಿಸೆಂಬರ್, 12,2020(www.justkannada.in): ಐಟಿ-ಬಿಟಿ, ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕವು, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾದ ನಂತರ ಕೆಲವೇ ವರ್ಷಗಳಲ್ಲಿ ಕೃಷಿ, ಕೈಗಾರಿಕೆ, ಸೇವೆ ಮತ್ತು ಆರೋಗ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ನಂ.1 ರಾಜ್ಯವಾಗಿ ಹೊರಹೊಮ್ಮಲಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.logo-justkannada-mysore

ಬೆಂಗಳೂರಿನಲ್ಲಿ ಶನಿವಾರ ಸಿಎಂಆರ್‌ ವಿಶ್ವವಿದ್ಯಾಲಯದ ಘಟಿಕೋತ್ಸವವದಲ್ಲಿ ವರ್ಚುಯಲ್‌ ವೇದಿಕೆ ಮೂಲಕ ಮುಖ್ಯ ಭಾಷಣ ಮಾಡಿದ  ಡಿಸಿಎಂ ಅಶ್ವಥ್ ನಾರಾಯಣ್, ಅತ್ಯಂತ ದೂರದೃಷ್ಟಿಯಿಂದ ರೂಪಿಸಲ್ಪಟ್ಟಿರುವ ಶಿಕ್ಷಣ ನೀತಿಯು ಭಾರತಕ್ಕೆ ಹೊಸ ದಿಕ್ಕು ತೋರಲಿದೆ. ಮುಖ್ಯವಾಗಿ ಕರ್ನಾಟಕಕ್ಕೆ ಅತಿಹೆಚ್ಚು ಲಾಭ ತಂದುಕೊಡಲಿದೆ. ನೀತಿಯ ಕರಡು ಸಮಿತಿಯಲ್ಲಿ ಕನ್ನಡಿಗರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು  ಎಂದರು.

ಸದ್ಯಕ್ಕೆ ಕರ್ನಾಟಕವು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್‌, ಸಂಶೋಧನೆ ಸೇರಿದಂತೆ ಇನ್ನೂ ಹಲವಾರು ಕ್ಷೇತ್ರಗಳಲ್ಲಿ ದೇಶದಲ್ಲಿಯೇ ಅತ್ಯುತ್ತಮ ಸಾಧನೆ ಮಾಡಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾದ ನಂತರ ಸಾಂಪ್ರದಾಯಿಕ ಹಾಗೂ ಅಕಾಡೆಮಿಕ್‌ ಆಧಾರಿತ ಶಿಕ್ಷಣದ ಸ್ವರೂಪವು ಆಮೂಲಾಗ್ರವಾಗಿ ಬದಲಾಗಲಿದೆ. ಆ ಮೂಲಕ ಮುಂದಿನ ದಿನಗಳಲ್ಲಿ ಕೈಗಾರಿಕೆ, ಕೃಷಿ, ತೋಟಗಾರಿಕೆ, ನೀರಾವರಿ, ಆರೋಗ್ಯ ಸೇವೆ, ಸಾರಿಗೆ ಸೇರಿದಂತೆ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಕರ್ನಾಟಕ ಅಚ್ಚರಿಯ ರೀತಿಯಲ್ಲಿ ಅಭಿವೃದ್ಧಿ ಹೊಂದಲಿದೆ ಎಂದು ಉಪ ಮುಖ್ಯಮಂತ್ರಿ  ಅಶ್ವಥ್ ನಾರಾಯಣ್ ಹೇಳಿದರು.

ದೇಶವು ಎದುರಿಸುತ್ತಿರುವ ಸಾಮಾಜಿಕ, ಆರ್ಥಿಕ ಸಮಸ್ಯೆಗಳಿಗೆ ಸುಲಭ ಪರಿಹಾರೋಪಾಯಗಳು ಸಿಗುವುದೇ ಶಿಕ್ಷಣದಲ್ಲಿ ಮಾತ್ರ. ನನ್ನ ಪ್ರಕಾರ ಶಿಕ್ಷಣದಿಂದಲೇ ಸರ್ವ ಸಮಸ್ಯೆಗಳಿಗೂ ಪರಿಹಾರವಿದೆ. ಸಮಾಜದ ಎಲ್ಲ ಹಂತಗಳಿಗೂ ಶಿಕ್ಷಣವನ್ನು ಪರಿಣಾಮಕಾರಿಯಾಗಿ ಕೊಂಡೊಯ್ದರೆ ಎಲ್ಲ ಕ್ಷೇತ್ರಗಳಲ್ಲೂ ಗುರುತರ ಬದಲಾವಣೆ ಕಂಡು ಬರುತ್ತದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ನುಡಿದರು.

ಕಾರ್ಯಪಡೆ ಶಿಫಾರಸುಗಳು ಕೈ ಸೇರಿವೆ:

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡುವ ಮೊದಲ ರಾಜ್ಯ ಕರ್ನಾಟಕವೇ ಆಗಬೇಕು ಎಂಬ ಉದ್ದೇಶದಿಂದ ನೀತಿಯ ಕರಡು ಪ್ರತಿ ಕೈಸೇರಿದ ಕೂಡಲೇ ಕಾರ್ಯಪಡೆಯನ್ನು ರಚಿಸಿ ನೀತಿಯ ಜಾರಿಗೆ ಅಗತ್ಯವಿರುವ ಮಾರ್ಗಸೂಚಿಯನ್ನು ನೀಡುವಂತೆ ಕೋರಲಾಗಿತ್ತು. ಅದರಂತೆ, ಕಾರ್ಯಪಡೆ ಈಗಾಗಲೇ ವರದಿ ನೀಡಿದೆ. ಸದ್ಯಕ್ಕೆ ಸರಕಾರವು ಈ ಶಿಫಾರಸುಗಳನ್ನು ಪರಿಶೀಲನೆ ಮಾಡುತ್ತಿದ್ದು, ಶಿಕ್ಷಣ ನೀತಿಯನ್ನು ಅನುಷ್ಠಾನ ಮಾಡಲು ಬೇಕಿರುವ ಆಡಳಿತಾತ್ಮಕ, ಕಾನೂನಾತ್ಮಕ ಸಿದ್ಧತೆಗಳನ್ನು ಮಾಡಿಕೊಳ್ಳುವ ಕೆಲಸದಲ್ಲಿ ನಿರತವಾಗಿದೆ ಎಂದರು.

2021ರಿಂದಲೇ ಹಂತ ಹಂತವಾಗಿ ನೀತಿಯನ್ನು ಜಾರಿ ಮಾಡಲಾಗುತ್ತಿದೆ. ಬೋಧನೆ, ಸಂಶೋಧನೆಗೆ ಹೆಚ್ಚು ಒತ್ತು ನೀಡಬಲ್ಲ, ಕೇವಲ ಜ್ಞಾನದಿಂದಲೇ ರಾಜ್ಯವನ್ನು ಮೇಲೆತ್ತಬಲ್ಲ ದೊಡ್ಡ ಪ್ರಯತ್ನಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ ಎಂದು ಡಿಸಿಎಂ ಹೇಳಿದರು.

ಘಟಿಕೋತ್ಸವದಲ್ಲಿ ನ್ಯಾಯಮೂರ್ತಿ ಅಬ್ದುಲ್‌ ನಜೀರ್‌, ಸಿಎಂಆರ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ರಾಜ್ಯಸಭೆ ಸದಸ್ಯ ಕೆ.ಸಿ.ರಾಮಮೂರ್ತಿ, ಸಿಎಂಆರ್‌ ವಿವಿಯ ಕುಲಪತಿ ಡಾ.ಸಬಿತಾ ರಾಮಮೂರ್ತಿ ಮುಂತಾದವರು ಪಾಲ್ಗೊಂಡು ಮಾತನಾಡಿದರು.

Key words: Karnataka – No. 1 state – country – implementation – National Education Policy- DCM Ashwath Narayan