ಜನವರಿ 30 ರ ಒಳಗೆ ರಾಜ್ಯದ ದೇವಸ್ಥಾನಗಳ ಆಡಿಟ್‌ ರಿಪೋರ್ಟ್‌ ಸಲ್ಲಿಸಿ: ಸಚಿವೆ ಶಶಿಕಲಾ ಜೊಲ್ಲೆ ತಾಕೀತು

 

ಬೆಂಗಳೂರು, ನವೆಂಬರ್‌ 16, 2021 : (www.justkannada.in news ) ರಾಜ್ಯದ ಮುಜರಾಯಿ ಇಲಾಖೆಯ ಹಲವಾರು ದೇವಸ್ಥಾನಗಳಲ್ಲಿ ಹಲವಾರು ವರ್ಷಗಳಿಂದ ಲೆಕ್ಕಪತ್ರ ತಪಾಸಣೆ ನಡೆದಿಲ್ಲ. ಇದು ದೇವಸ್ಥಾನದ ಆಡಳಿತದ ವಿಷಯದಲ್ಲಿ ಜನರಲ್ಲಿ ಸಂಶಯ ಮೂಡಿಸುತ್ತದೆ. ಈ ನಿಟ್ಟಿನಲ್ಲಿ ಜನವರಿ 30, 2022 ರ ಒಳಗಾಗಿ ಲೆಕ್ಕಪತ್ರ ತಪಾಸಣೆ ವರದಿಯನ್ನು ಸಲ್ಲಿಸದ ದೇವಸ್ಥಾನದ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಜರಾಯಿ, ಹಜ್‌ ಹಾಗೂ ವಕ್ಫ್‌ ಸಚಿವೆ ಶಶಿಕಲಾ ಜೊಲ್ಲೆ ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ವಿಕಾಸಸೌಧಲ್ಲಿ ನಡೆದ ಎ ಮತ್ತು ಬಿ ವರ್ಗದ ದೇವಾಲಯಗಳ ಕಾರ್ಯನಿರ್ವಾಹಕ ಅಧಿಕಾರಿಗೊಳೊಂದಿಗಿನ ಸಭೆಯಲ್ಲಿ ರಾಜ್ಯದ ಮುಜರಾಯಿ ದೇವಸ್ಥಾನಗಳ ಅಭಿವೃದ್ದಿ ಕಾರ್ಯ ಎದುರಿಸುತ್ತಿರುವ ಸಮಸ್ಯೆಗಳ ವಿಸ್ತ್ರತ ವರದಿಯನ್ನು ಪಡೆದುಕೊಂಡರು.

ಆಡಿಟ್‌ ರಿಪೋರ್ಟ್‌ ಸಲ್ಲಿಸಲು ಗಡುವು:

ಜನವರಿ 30,2022 ರ ಒಳಗಾಗಿ ಮಜರಾಯಿ ದೇವಸ್ಥಾನಗಳು ಬಾಕಿ ಇರುವ ಎಲ್ಲಾ ವರ್ಷಗಳ ಲೆಕ್ಕಪತ್ರ ತಪಾಸಣೆಯ ವರದಿಯನ್ನು ಸಲ್ಲಸಬೇಕು. ರಾಜ್ಯದಲ್ಲಿ 207 ಎ ದರ್ಜೆ, 139 ಬಿ ದರ್ಜೆ ದೇವಸ್ಥಾನಗಳಿವೆ. ಆದಾಯ ಕಡಿಮೆ ಇರುವ 34217 ಸಿ ದರ್ಜೆಯ ದೇವಸ್ಥಾನಗಳಿವೆ. ಇವುಗಳಲ್ಲಿ ಚಾಮುಂಡೇಶ್ವರಿ ದೇವಸ್ಥಾನ, ಯಡಿಯೂರು ಸಿದ್ದಲಿಂಗೇಶ್ವರ ದೇವಸ್ಥಾನ, ಘಾಟಿ ಸುಬ್ರಮಣ್ಯ ಮತ್ತು ಬೆಂಗಳೂರಿನ ಬನಶಂಕರಿ ದೇವಸ್ಥಾನಗಳಲ್ಲಿ ಮಾತ್ರ ಪ್ರತಿವರ್ಷ ಲೆಕ್ಕತಪಾಸಣಾ ವರದಿಯನ್ನು ನೀಡಲಾಗಿದೆ.

ಇನ್ನುಳಿದ ದೇವಸ್ಥಾನಗಳಲ್ಲಿ ಹಲವು ದೇವಸ್ಥಾನಗಳ ಲೆಕ್ಕಪತ್ರ ತಪಾಸಣೆಯ ಸುಮಾರು ೨ ದಶಕಗಳಿಂದ ಬಾಕಿ ಇದೆ. ಈ ರೀತಿ ಲೆಕ್ಕಪತ್ರ ವರದಿಯನ್ನು ನೀಡದೇ ಇರುವುದು ದೇವಸ್ಥಾನ ಆಡಳಿತ ಮಂಡಳಿ ಹಾಗೂ ಆಡಳಿತದ ಬಗ್ಗೆ ಸಂಶಯ ಹುಟ್ಟು ಹಾಕುತ್ತದೆ. ಇನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ದೇವಸ್ಥಾನಗಳು ತಮ್ಮ ಲೆಕ್ಕಪತ್ರ ತಪಾಸಣಾ ವರದಿಯನ್ನು ಸಲ್ಲಿಸುವುದು ಕಡ್ಡಾಯ. ಮುಂದಿನ ಜನವರಿ 30 ರ ಒಳಗಾಗಿ ಲೆಕ್ಕಪತ್ರ ತಪಾಸಣಾ ವರದಿಯನ್ನು ಸಲ್ಲಿಸದೇ ಇದ್ದಲ್ಲಿ ಆಯಾ ದೇವಸ್ಥಾನಗಳ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು

corona-restriction-public-access-srikantheshwara-temple-nanjangud

ಐಟಿಎಂಎಸ್‌ ಕಾರ್ಯ ಚುರುಕುಗೊಳಿಸಲು ಸೂಚನೆ:
ರಾಜ್ಯದ ಸಮಗ್ರ ದೇವಸ್ಥಾನಗಳ ಇಂಟಿಗ್ರೇಟೆಡ್‌ ವೆಬ್‌ಸೈಟ್‌ ಕಾರ್ಯ ತೀವ್ರಗತಿಯಲ್ಲಿ ನಡೆಯುತ್ತಿದೆ. ದೇವಸ್ಥಾನಗಳ ಇತಿಹಾಸ, ಐತಿಹ್ಯ ಹಾಗೂ ದೇವಸ್ಥಾನದ ಮಹತ್ವ ವನ್ನು ವೆಬ್‌ಸೈಟ್‌ ನಲ್ಲಿ ಅಳವಡಿಸಲು ಮಾಹಿತಿಯನ್ನ ಕ್ರೋಢೀಕರಿಸಲು ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

ಮುಜರಾಯಿ ದೇವಸ್ಥಾನಗಳ ಮೇಲೆ ಸರಕಾರದ ನಾಮಫಲಕ ಕಡ್ಡಾಯ:
ರಾಜ್ಯದ ಹಲವಾರು ಮುಜರಾಯಿ ದೇವಸ್ಥಾನಗಳ ಮೇಲೆ ಕರ್ನಾಟಕ ಸರಕಾರದ ನಾಮಫಲಕ ಇಲ್ಲ. ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನಗಳ ಮೇಲೆ ಮುಜರಾಯಿ ಇಲಾಖೆಯ ನಾಮಫಲಕಗಳನ್ನು ಅಳವಡಿಸುವುದು ಕಡ್ಡಾಯ ವಾಗಿದೆ. ಈ ನಿಟ್ಟಿನಲ್ಲಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಆಡಳಿತಾಧಿಕಾರಿಗಳು ತಪ್ಪದೇ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

mysore-chamundi-hill-hundi-money-collection

ಧಾರ್ಮಿಕ ಕೇಂದ್ರಗಳಲ್ಲಿ ಸ್ವಚ್ಚತೆಗೆ ಆದ್ಯತೆ:
ರಾಜ್ಯದ ಧಾರ್ಮಿಕ ಕೇಂದ್ರಗಳನ್ನು ಮತ್ತಷ್ಟು ಪ್ರವಾಸಿ ಸ್ನೇಹೀ ಮಾಢುವ ನಿಟ್ಟಿನಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ದಿಗೊಳಿಸುವತ್ತ ಹೆಚ್ಚಿನ ಗಮನ ನೀಡಬೇಕು. ಮುಖ್ಯವಾಗಿ ದೇವಸ್ಥಾನ ಹಾಗೂ ಧಾರ್ಮಿಕ ಕೇಂದ್ರಗಳಲ್ಲಿ ಸ್ವಚ್ಚತೆ ಕಾಪಾಡುವುದು ಆದ್ಯತೆ ಆಗಬೇಕು. ರಾಜ್ಯದ 25 ಪ್ರಮುಖ ದೇವಸ್ಥಾನಗಳಲ್ಲಿ ತ್ಯಾಜ್ಯ ವಿಲೇವಾರಿ, ಮೂಲಭೂತ ಸೌಕರ್ಯಗಳ ಅಭಿವೃದ್ದಿ ಹೀಗೆ ಹಲವಾರು ವಿಷಯಗಳ ಬಗ್ಗೆ ಡಿಪಿಆರ್‌ ರಚಿಸಲು ಏಜೆನ್ಸಿಯನ್ನು ನೇಮಕ ಮಾಡಲಾಗಿದೆ. ಈ ಏಜೆನ್ಸಿ ಡಿಸೆಂಬರ್‌ ತಿಂಗಳಲ್ಲಿ 4 ದೇವಸ್ಥಾನಗಳ ಡಿಪಿಆರ್‌ ಸಲ್ಲಿಸಬೇಕು ಎಂದು ಸಚಿವೆ ಶಶಿಕಲಾ ಜೊಲ್ಲೆ ಸೂಚನೆ ನೀಡಿದರು.

ಕಲ್ಯಾಣೀ ಪುನರುಜ್ಜೀವನಕ್ಕೆ ನರೇಗಾ ಮತ್ತು ಸ್ವಯಂ ಸೇವಾ ಸಂಘಟನೆಗಳ ಬಳಕೆಗೆ ಸೂಚನೆ:
ರಾಜ್ಯದ ಒಟ್ಟಾರೆ ಕಲ್ಯಾಣಿಗಳಲ್ಲಿ ಸ್ವಚ್ಚವಾಗಿರುವ ಹಾಗೂ ಸ್ವಚ್ಚತೆ ಕಾಪಾಡದೇ ಇರುವ ಕಲ್ಯಾಣೀಗಳ ಪಟ್ಟಿಯನ್ನು ನೀಡುವಂತೆ ಆಯುಕ್ತರಿಗೆ ಸೂಚನೆ ನೀಡಿದರು. ಸ್ವಚ್ಚತೆಯನ್ನು ಕಾಪಾಡದೇ ಇರುವ ಕಲ್ಯಾಣೀಗಳ ಪುನರುಜ್ಜೀವನಕ್ಕೆ ಪಂಚಾಯತ್‌ ಇಲಾಖೆ ಸಹಯೋಗದಲ್ಲಿ ನರೆಗಾ ಮತ್ತು ಸ್ವಯಂ ಸೇವಾ ಸಂಘಟನೆಗಳನ್ನು ಬಳಸಿಕೊಳ್ಳುವಂತೆ ಸೂಚನೆ ನೀಡಿದರು.

ದೇವಸ್ಥಾನಗಳ ಜಾಗ ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವರು, ದೇವಸ್ಥಾನಗಳ ಜಾಗ ಸಮೀಕ್ಷೆಗೆ ವಿಶೇಷ ಅಭಿಯಾನ ನಡೆಸಲು ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸುವಂತೆ ಸೂಚನೆ ನೀಡಿದರು. ಒಟ್ಟಾರೆಯಾಗಿ ರಾಜ್ಯದ ದೇವಸ್ಥಾನಗಳನ್ನ ಇನ್ನಷ್ಟು ಅಭಿವೃದ್ದಿಗೊಳಿಸುವ ಮತ್ತು ಪಾರದರ್ಶಕ ಆಡಳಿತ ಮಾಡುವ ನಿಟ್ಟಿನಲ್ಲಿ ಕಾರ್ಯತತ್ಪರರಾಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಮುಜರಾಯಿ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌, ಆಯುಕ್ತೆ ರೋಹಿಣಿ ಸಿಂಧೂರಿ ರಾಜ್ಯ ಧಾರ್ಮಿಕ ಪರಿಷತ್‌ ಸದಸ್ಯರು ಮತ್ತು ರಾಜ್ಯದ ಎ ಮತ್ತು ಬಿ ದರ್ಜೆಯ ದೇವಸ್ಥಾನಗಳ ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು

key words : Karnataka-Bangalore-shashikala-jolle-minister-bjp-rohini-sindhoori-temples -report